ನವದೆಹಲಿ:ಭಾರತ ಸಹಿತ 4 ದೇಶಗಳ ಕೂಟ ಕ್ವಾಡ್ ಮತ್ತು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ಶೃಂಗಸಭೆಗಳ ಮಹತ್ವದ ಜಾಗತಿಕ ವಿದ್ಯಮಾನಗಳಿಗೆ ರಂಗ ಸಜ್ಜುಗೊಂಡಿದೆ. ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯಲಿರುವ ಕ್ವಾಡ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ವಿಜರ್ಲೆಂಡ್​ನ ದಾವೋಸ್ ನಗರದಲ್ಲಿ ನಡೆಯುವ ಡಬ್ಲ್ಯುಇಎಫ್ ಸಭೆಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಭಾರತ ನಿಯೋಗ ತೆರಳಿದೆ. ವಿವಿಧ ಜಾಗತಿಕ ಆರ್ಥಿಕ-ರಾಜಕೀಯ ವಿಚಾರಗಳ ಸಮಾಲೋಚನೆ ಜೊತೆಯಲ್ಲಿ ಎರಡೂ ಶೃಂಗಗಳಲ್ಲಿ ರಷ್ಯಾ-ಯೂಕ್ರೇನ್ ಸಮರ ಸಾಮಾನ್ಯವಾಗಿ ಚರ್ಚೆಯಾಗಲಿದೆ.
ಟೋಕಿಯೋದಲ್ಲಿ ಸೋಮವಾರ ಮತ್ತು ಮಂಗಳವಾರ ನಡೆಯಲಿರುವ ಕ್ವಾಡ್ ಶೃಂಗಸಭೆ ಜಾಗತಿಕ ವಿಚಾರಗಳನ್ನು ರ್ಚಚಿಸಲು ಉತ್ತಮ ಅವಕಾಶವಾಗಿದೆ. ನಾಲ್ಕೂ ಸದಸ್ಯ ದೇಶಗಳ ಉಪಕ್ರಮಗಳಲ್ಲಿ ಆಗಿರುವ ಪ್ರಗತಿ ಮತ್ತು ಇಂಡೋ-ಪೆಸಿಫಿಕ್ ವಲಯದ ಪರಸ್ಪರ ಹಿತಾಸಕ್ತಿಯ ಜಾಗತಿಕ ವಿಚಾರಗಳಲ್ಲಿನ ಬೆಳವಣಿಗೆಗಳ ಅವಲೋಕನಕ್ಕೂ ಶೃಂಗಸಭೆ ನೆರವಾಗಲಿದೆ ಎಂದು ಟೋಕಿಯೋಗೆ ತೆರಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತ-ಜಪಾನ್ ವಿಶೇಷ ವ್ಯೂಹಾತ್ಮಕ ಹಾಗೂ ಜಾಗತಿಕ ಪಾಲುದಾರಿಕೆ ಪ್ರಕ್ರಿಯೆ ಬಲಪಡಿಸುವ ಚರ್ಚೆ ಹಾಗೂ ಅಮೆರಿಕ ಮತ್ತು ಆಸ್ಟ್ರೇಲಿಯಾದ ನಾಯಕರ ಜತೆಗೆ ದ್ವಿಪಕ್ಷೀಯ ಸಭೆಗಳು ನಡೆಯಲಿವೆ ಎಂದಿದ್ದಾರೆ. ಇದು ಕ್ವಾಡ್ ಕೂಟದ ಎರಡನೇ ಮುಖಾಮುಖಿ ಶೃಂಗ ಸಭೆಯಾಗಿದೆ. ನೂತನವಾಗಿ ಆಯ್ಕೆಯಾಗಿರುವ ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಬನೀಸ್, ಆತಿಥ್ಯ ವಹಿಸಿರುವ ಜಪಾನ್ ಪ್ರಧಾನಿ ಫುಮಿಯೋ ಕಿಷಿದಾ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾಗವಹಿಸಲಿದ್ದಾರೆ. ಈ ಹಿಂದಿನ ಕ್ವಾಡ್ ಸಭೆ ಕಳೆದ ಸೆಪ್ಟೆಂಬರ್​ನಲ್ಲಿ ಅಮೆರಿಕ ವಾಷಿಂಗ್ಟನ್​ನಲ್ಲಿ ನಡೆದಿತ್ತು. ಅದಕ್ಕೂ ಹಿಂದೆ ಕರೊನಾ ಕಾರಣ ವರ್ಚುವಲ್ ಆಗಿ ಶೃಂಗ ನಡೆದಿತ್ತು.
ಜಪಾನ್​ನಲ್ಲಿ ಭೂಕಂಪನ:ಜಪಾನ್ ಫುಕುಶಿಮಾದಲ್ಲಿ ಭಾನುವಾರ ಭೂಕಂಪನ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆ ದಾಖಲಾಗಿದೆ. ಸುನಾಮಿಯ ಭೀತಿ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.
40 ಗಂಟೆಯಲ್ಲಿ 23 ಸಭೆ:ಮೂರು ದಿನಗಳ ಜಪಾನ್ ಪ್ರವಾಸದ ವೇಳೆ ಪ್ರಧಾನಿ ಮೋದಿ ಒಂದು ದಿನ ರಾತ್ರಿ ಟೋಕಿಯೋದಲ್ಲಿ ಕಳೆಯಲಿದ್ದು ಇನ್ನೆರಡು ರಾತ್ರಿ ವಿಮಾನದಲ್ಲಿ ಕಳೆಯಲಿದ್ದಾರೆ. ಜಪಾನ್ ವಾಸ್ತವ್ಯದ 40 ಗಂಟೆ ಅವಧಿಯಲ್ಲಿ ಮೋದಿ 23 ಸಭೆ-ಸಂವಾದಗಳಲ್ಲಿ ಭಾಗವಹಿಸಲಿದ್ದಾರೆ. ವ್ಯಾಪಾರೋದ್ಯಮ, ರಾಜತಾಂತ್ರಿಕ ಮತ್ತು ಭಾರತೀಯ ಸಮುದಾಯದವರ ಜತೆಗೂ ಅವರು ಮಾತುಕತೆ ನಡೆಸುವರು.
ಕ್ವಾಡ್:ಹಿಂದು ಮಹಾಸಾಗರ-ಶಾಂತ ಸಾಗರ ವಲಯದಲ್ಲಿ ಪರಸ್ಪರರ ಜಾಗತಿಕ ಹಿತಾಸಕ್ತಿ ರಕ್ಷಣೆಗಾಗಿ ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾಗಳು ರಚಿಸಿಕೊಂಡಿರುವ ಚತುಷ್ಪಕ್ಷೀಯ ಭದ್ರತಾ ಸಂವಾದ (ಕ್ಯೂಎಸ್​ಡಿ) ವೇದಿಕೆ ಕ್ವಾಡ್ ಎನ್ನಲಾಗುತ್ತಿದೆ. ಮುಕ್ತ, ಸಮೃದ್ಧ, ಒಳಗೊಳ್ಳುವಿಕೆಯ ಇಂಡೋ-ಪೆಸಿಫಿಕ್ ವಲಯಕ್ಕಾಗಿ ಒಟ್ಟಾಗಿ ಕೆಲಸ ಮಾಡುವುದು ಈ ಕೂಟದ ಪ್ರಮುಖ ಧ್ಯೇಯ. 2007ರಲ್ಲಿ ಜಪಾನ್​ನ ಅಂದಿನ ಪ್ರಧಾನಿ ಶಿನೊ ಅಬೆ ಅವರ ಆಸಕ್ತಿಯಿಂದ ಕ್ವಾಡ್ ರೂಪುಗೊಂಡಿತ್ತು. ಅದು 2008ರವರೆಗೆ ಮುಂದುವರಿದು ಸ್ಥಗಿತಗೊಂಡಿತ್ತು. 2017ರಲ್ಲಿ ಪುನರುಜ್ಜೀವನಗೊಂಡಿದೆ.
ಕ್ವಾಡ್, ಭಾರತ ಬಾಂಧವ್ಯ ಗಟ್ಟಿ ಎಂದ ಅಂಥೋನಿ:ಸ್ಕಾಟ್ ಮಾರಿಸನ್ ನೇತೃತ್ವದ ಕನ್ಸರ್ವೆಟಿವ್ ಪಕ್ಷವನ್ನು ಸೋಲಿಸಿದ್ದ ಲೇಬರ್ ಪಕ್ಷದ ನಾಯಕ ಅಂಥೋನಿ ಅಲ್ಬನೀಸ್ (59) ಆಸ್ಟ್ರೇಲಿಯಾದ ಹೊಸ ಪ್ರಧಾನಿಯಾಗಿ ಆಯ್ಕೆ ಆಗಿದ್ದಾರೆ. ದೇಶದ 31ನೇ ಪ್ರಧಾನಿಯಾಗ ಲಿರುವ ಅವರು, ಕ್ವಾಡ್, ಭಾರತದೊಂದಿಗಿನ ಬಾಂಧವ್ಯಕ್ಕೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ. 121 ವರ್ಷದ ಇತಿಹಾಸದಲ್ಲೇ ಆಂಗ್ಲೋ ಅಲ್ಲದ ಸೆಲ್ಟಿಕ್ ಹೆಸರು ಹೊಂದಿರುವ ವ್ಯಕ್ತಿ ದೇಶದ ಪ್ರಧಾನಿಯಾಗುತ್ತಿದ್ದಾರೆ.
ದಾವೋಸ್​ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ಶೃಂಗಸಭೆಯಲ್ಲಿ ಭಾರತದ ಸಚಿವರು ಹಾಗೂ ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ. ರಷ್ಯಾ-ಯೂಕ್ರೇನ್ ಯುದ್ಧ ಮತ್ತು ಜಾಗತಿಕ ತಾಪಮಾನ ಬದಲಾವಣೆ, ಶಿಕ್ಷಣ, ತಂತ್ರಜ್ಞಾನ ಮತ್ತು ಇಂಧನ ನಿರ್ವಹಣೆ ಕುರಿತು ಶೃಂಗಸಭೆ ಪ್ರಮುಖವಾಗಿ ರ್ಚಚಿಸುವ ನಿರೀಕ್ಷೆಯಿದೆ. 2030ರ ವೇಳೆಗೆ ನೂರು ಕೋಟಿ ಜನರಿಗೆ ಉತ್ತಮ ಶಿಕ್ಷಣ, ಕೌಶಲ ಮತ್ತು ಉದ್ಯೋಗ ಒದಗಿಸುವ ಮರುಕೌಶಲ ಕ್ರಾಂತಿ ಹಾಗೂ ಜಗತ್ತನ್ನು ಬಾಧಿಸುವ ಇತರ ಹಲವು ವಿಚಾರಗಳನ್ನು ಕೂಡ ಇಲ್ಲಿ ರ್ಚಚಿಸಲಾಗುತ್ತದೆ.
ಎರಡುವರೆ ವರ್ಷದ ಅಂತರದ ನಂತರ ಡಬ್ಲ್ಯುಇಎಫ್ ಶೃಂಗ ಸಭೆಗೆ ದಾವೋಸ್ ಸಜ್ಜಾಗಿದೆ. ಭಾನುವಾರ ಸಂಜೆ ಸ್ವಾಗತ ಸಮಾರಂಭದೊಂದಿಗೆ ಆರಂಭವಾಗಿರುವ ಶೃಂಗಸಭೆ ಗುರುವಾರ (ಮೇ 26) ವರೆಗೆ ನಡೆಯಲಿದೆ. ಇದೊಂದು ವಾರ್ಷಿಕ ಕಾರ್ಯಕ್ರಮವಾಗಿದ್ದು ಕರೊನಾ ಕಾರಣ ಎರಡು ವರ್ಷ ನಡೆದಿರಲಿಲ್ಲ.
ಭಾಗವಹಿಸುವ ಪ್ರಮುಖರು:ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್​ಸ್ಕಿ, ಐರೋಪ್ಯ ಆಯೋಗದ ಅಧ್ಯಕ್ಷ ಉರ್ಸಲಾ ವಾನ್ ಡೆರ್ ಲೆಯೆನ್ ಮತ್ತು ಜರ್ಮನಿ ಚಾನ್ಸಲರ್ ಒಲೊಫ್ ಷೋಲ್ಜ್ ಮೊದಲಾದವರು ಶೃಂಗ ಸಭೆಯಲ್ಲಿ ಭಾಗವಹಿಸುವ ಕೆಲವು ಪ್ರಮುಖ ವಿಶ್ವ ನಾಯಕರು. ಒಟ್ಟಾರೆಯಾಗಿ ಸುಮಾರು 50 ದೇಶಗಳ ಮುಖ್ಯಸ್ಥರ ಸಹಿತ 2,500ಕ್ಕೂ ಹೆಚ್ಚು ನಾಯಕರು ಹಾಗೂ ತಜ್ಞರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಭಾರತದ ನಿಯೋಗ:ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಮನಸುಖ್ ಮಾಂಡವೀಯ ಮತ್ತು ಹರದೀಪ್ ಸಿಂಗ್ ಪುರಿ ದಾವೋಸ್ ಶೃಂಗದಲ್ಲಿ ಭಾರತವನ್ನು ಪ್ರತಿನಿಧಿಸುವ ನಿಯೋಗದ ಪ್ರಮುಖರಾಗಿದ್ದಾರೆ. ಮುಖ್ಯಮಂತ್ರಿಗಳಾದ ಎಸ್. ಆರ್. ಬೊಮ್ಮಾಯಿ (ಕರ್ನಾಟಕ) ಹಾಗೂ ವೈ.ಎಸ್. ಜಗನ್ ಮೋಹನ ರೆಡ್ಡಿ (ಆಂಧ್ರ ಪ್ರದೇಶ), ಹಲವು ರಾಜ್ಯಗಳ ಸಚಿವರಾದ ಆದಿತ್ಯ ಠಾಕ್ರೆ (ಮಹಾರಾಷ್ಟ್ರ), ಕೆ.ಟಿ. ರಾಮರಾವ್ (ತೆಲಂಗಾಣ) ನಿಯೋಗದಲ್ಲಿ ಇದ್ದಾರೆ.
ಸರ್ಕಾರೇತರ ಸಂಸ್ಥೆ:ಡಬ್ಲ್ಯುಇಎಫ್ ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾಗಿದೆ. ಜರ್ಮನಿಯ ಇಂಜಿನಿಯರ್ ಹಾಗೂ ಅರ್ಥಶಾಸ್ತ್ರಜ್ಞ ಕ್ಲೌಸ್ ಶ್ವಾಬ್ 1971 ಜನವರಿ 24ರಂದು ಇದನ್ನು ಸ್ಥಾಪಿಸಿದ್ದರು. ಸ್ವಿಜರ್ಲೆಂಡ್​ನ ಜಿನೀವಾದ ಕೊಲೊಗ್ನಿಯಲ್ಲಿ ಇದರ ಕೇಂದ್ರ ಕಚೇರಿಯಿದೆ.
ಜನವರಿ ಬದಲು ಮೇನಲ್ಲಿ ಸಭೆ:ಸಾಮಾನ್ಯವಾಗಿ ಪ್ರತಿವರ್ಷ ಜನವರಿಯಲ್ಲಿ ದಾವೋಸ್​ನಲ್ಲಿ ಡಬ್ಲ್ಯುಇಎಫ್ ಶೃಂಗಸಭೆ ನಡೆಯುತ್ತದೆ. ಆದರೆ, ಈ ಮೇ ತಿಂಗಳಲ್ಲಿ ಆಯೋಜಿಸಲಾಗಿದೆ. ‘ಹಿಸ್ಟರಿ ಅಟ್ ಟರ್ನಿಂಗ್ ಪಾಯಿಂಟ್’ (ಬದಲಾವಣೆಯ ಹೊಸ್ತಿಲಲ್ಲಿ ಇತಿಹಾಸ) -ಇದನ್ನು 2022 ವಾರ್ಷಿಕ ಸಭೆಯ ಧ್ಯೇಯವಾಕ್ಯವಾಗಿ ಡಬ್ಲ್ಯುಇಎಫ್ ಅಳವಡಿಸಿದೆ. ‘ಜಗತ್ತಿನ ಪರಿಸ್ಥಿತಿಯನ್ನು ಸುಧಾರಿಸಲಿಕ್ಕಾಗಿ ಬದ್ಧರಾಗಿರುವವರು ಶೃಂಗಸಭೆ ಯಲ್ಲಿ ಭಾಗವಹಿಸಲಿದ್ದಾರೆ’ ಎಂದು ವೇದಿಕೆ ತಿಳಿಸಿದೆ. 2020ರಲ್ಲಿ ಭೌತಿಕವಾಗಿ ನಡೆಯದೆ ವರ್ಚುವಲ್ ಸ್ವರೂಪದಲ್ಲಿ ನಡೆದಿತ್ತು. 2021ರಲ್ಲಿ ಕೋವಿಡ್ ಸಾಂಕ್ರಾಮಿಕತೆ ಯಿಂದಾಗಿ ಮುಂದೂಡಲಾಗಿತ್ತು.
ಬೆಂಗಳೂರು:ದಾವೋಸ್​ನ ಮುಖ್ಯ ಅಧಿವೇಶನದಲ್ಲಿ ಮೇ 23 ಮತ್ತು 24ರಂದು ತಲಾ ಒಂದು ಅವಧಿಯಲ್ಲಿ ಮಾತನಾಡಲಿದ್ದೇನೆ. ಪರಿಸರ ಮತ್ತು ಆರ್ಥಿಕತೆ ಕುರಿತು ವಿಷಯ ಮಂಡಿಸಲಿದ್ದು, ನಂತರ ಕರ್ನಾಟಕದ ಪೆವಿಲಿಯನ್​ನಲ್ಲಿ ವಿಶ್ವದ ಪ್ರಸಿದ್ಧ ಉದ್ಯಮಪತಿಗಳು, ಬಹುರಾಷ್ಟ್ರೀಯ ಕಂಪನಿಗಳು, ತಜ್ಞರ ಸೇರಿ 18 ಸಂಸ್ಥೆಗಳು ಮತ್ತು ಪ್ರಮುಖರ ಜತೆ ರ್ಚಚಿಸಲಾಗುವುದು. ಕರ್ನಾಟಕದಲ್ಲಿ ಬಂಡವಾಳ ಹೂಡಲು ಹಾಗೂ ಕೈಗಾರಿಕೆಗಳನ್ನು ಸ್ಥಾಪಿಸಲು ಆಹ್ವಾನಿಸುವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕಳೆದ ತ್ರೖೆಮಾಸಿಕದಲ್ಲಿ ದೇಶಕ್ಕೆ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ (ಎಫ್​ಡಿಐ) ಹರಿದು ಬಂದಿದ್ದು, ಈ ಬಂಡವಾಳ ಪಡೆದ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದರು. ದಾವೋಸ್​ಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟಾರೆ ಎಫ್​ಡಿಐನಲ್ಲಿ ಶೇಕಡ 38ರಷ್ಟು ರಾಜ್ಯದಲ್ಲಿ ಹೂಡಿಕೆಯಾಗಿದೆ. ಇದೇ ನವೆಂಬರ್​ನಲ್ಲಿ ನಡೆಯುವ ‘ಇನ್ವೆಸ್ಟ್ ಕರ್ನಾಟಕ- ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ’ಕ್ಕೆ ಉತ್ತೇಜನ ನೀಡಿದೆ ಎಂದರು. ಬಂಡವಾಳ ಹೂಡಿಕೆ, ಕೈಗಾರಿಕೆ ನೆಲೆಗೊಳಿಸುವ ಪ್ರಸ್ತಾವನೆಗಳಿಗೆ ಒಪ್ಪಂದ ಮಾಡಿಕೊಳ್ಳುವ ಜತೆಗೆ ಅನುಷ್ಠಾನಕ್ಕೂ ಒತ್ತು ನೀಡಲಾಗುವುದು. ಈಗಾಗಲೇ ಒಪ್ಪಂದವೇರ್ಪಟ್ಟ ಹಲವು ಕೈಗಾರಿಕೆಗಳ ಸ್ಥಾಪನೆಗೆ ಕ್ರಮವಹಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + six =
Remember me
