ಮುಂದಿನ ವರ್ಷ ಜಾಗತಿಕವಾಗಿ ಆರ್ಥಿಕ ಬೆಳವಣಿಗೆ ಮತ್ತಷ್ಟು ನಿಧಾನವಾಗಲಿದೆ. ಆರ್ಥಿಕ ಹಿಂಜರಿಕೆ ಉಂಟಾಗುವ ಸಾಧ್ಯತೆ ಇದೆ. ಆದರೆ, ಏಷ್ಯಾದ ಎರಡು ಪ್ರಮುಖ ರಾಷ್ಟ್ರಗಳಿಗೆ ಜಗತ್ತಿನ ಈ ಆರ್ಥಿಕ ಹಿಂಜರಿತವನ್ನು ಕಡಿಮೆ ಮಾಡುವ ಶಕ್ತಿ ಇದೆ. ಈ ಎರಡು ರಾಷ್ಟ್ರಗಳಲ್ಲಿ ಭಾರತವೂ ಒಂದು…
ಇದು ಸ್ವತಃ ಭಾರತ ಸರ್ಕಾರ ಅಥವಾ ಭಾರತೀಯರು ಮಾಡಿಕೊಂಡ ಹೊಗಳಿಕೆಯೇನಲ್ಲ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಆರ್ಗನೈಜೇಶನ್ ಫಾರ್ ಇಕನಾಮಿಕ್ ಕೋಆಪರೇಷನ್ ಆಂಡ್ ಡೆವಲಪ್​ವೆುಟ್- ಒಇಸಿಡಿ) ನೀಡಿರುವ ಮುನ್ಸೂಚನೆ ಇದು. ಪ್ಯಾರಿಸ್​ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಸಂಸ್ಥೆಯು ಪ್ರಜಾಪ್ರಭುತ್ವ ಮತ್ತು ಮಾರುಕಟ್ಟೆ ಆರ್ಥಿಕತೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವ 38 ದೇಶಗಳನ್ನು ಸದಸ್ಯರನ್ನಾಗಿ ಒಳಗೊಂಡ ಪ್ರತಿಷ್ಠಿತ ಸಂಘಟನೆ.
ಏಷ್ಯಾದ ಪ್ರಮುಖ ರಾಷ್ಟ್ರಗಳಾದ ಭಾರತ ಮತ್ತು ಚೀನಾ ಈಗ ಬೃಹತ್ ಆರ್ಥಿಕ ಶಕ್ತಿಗಳಾಗಿವೆ. ಚೀನಾವು ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದ್ದರೆ, ಭಾರತದ ಸ್ಥಾನ ಐದನೆಯದ್ದಾಗಿದೆ. ಅಲ್ಲದೆ, ಭಾರತದ ಆರ್ಥಿಕ ಪ್ರಗತಿ ಈ ವರ್ಷ ಮತ್ತು ಮುಂದಿನ ವರ್ಷ ಉತ್ತಮವಾಗಿರಲಿದೆ. ಈ ಹಿನ್ನೆಲೆಯಲ್ಲಿ ಇವೆರಡು ರಾಷ್ಟ್ರಗಳು ಜಗತ್ತಿನ ಆರ್ಥಿಕ ಹಿಂಜರಿಕೆ ತಡೆಯಲು ಸಾಕಷ್ಟು ಕೊಡುಗೆ ನೀಡಬಹುದಾಗಿದೆ ಎಂದು ರ್ತಸಲಾಗಿದೆ.
ಜಗತ್ತಿನ ಜಿಡಿಪಿ (ಒಟ್ಟು ದೇಶಿಯ ಉತ್ಪನ್ನ) ಈ ವರ್ಷ ಶೇ.3.1ರಷ್ಟು ಮತ್ತು 2023ರಲ್ಲಿ ಶೇ. 2.2 ರಷ್ಟು ಮಾತ್ರ ವೃದ್ಧಿಸಬಹುದು. ಮುಂದಿನ ವರ್ಷದ ಬೆಳವಣಿಗೆಯು ಪ್ರಮುಖ ಏಷ್ಯನ್ ರಾಷ್ಟ್ರಗಳ ಆರ್ಥಿಕತೆಗಳ ಮೇಲೆ ಬಲವಾಗಿ ಅವಲಂಬಿತವಾಗಿದೆ. ಭಾರತವು ಸೌದಿ ಅರೇಬಿಯಾ ನಂತರ ವಿಶ್ವದ ಎರಡನೇ ಅತಿ ಹೆಚ್ಚು ಆರ್ಥಿಕ ಬೆಳವಣಿಗೆ ದರವನ್ನು ಹೊಂದಲಿದ್ದು, ಭಾರತ 2022ರಲ್ಲಿ ಶೇ. 6.6 ಹಾಗೂ 2023ರಲ್ಲಿ ಶೇ. 5.7ರಷ್ಟು ವೃದ್ಧಿ ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ. ಚೀನಾದ ಆರ್ಥಿಕತೆಯು ಈ ವರ್ಷ ಶೇ. 3.3 ರಷ್ಟು ಬೆಳವಣಿಗೆಯಾಗಲಿದ್ದು, 2023ರಲ್ಲಿ ಶೇ. 4.6 ಬೆಳವಣಿಗೆ ನಿರೀಕ್ಷಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಅಮೆರಿಕ 2022 ರಲ್ಲಿ ಕೇವಲ ಶೇ. 1.8 ಮತ್ತು 2023ರಲ್ಲಿ ಶೇ. 0.5ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. ಬಾಹ್ಯ ರಫ್ತು ಮತ್ತು ದೇಶೀಯ ಆಂತರಿಕ ಬೇಡಿಕೆಯ ಬೆಳವಣಿಗೆ ತಕ್ಕಮಟ್ಟಿಗೆ ಇರುವುದರಿಂದ 2023-24 ರಲ್ಲಿ ಭಾರತದ ಜಿಡಿಪಿ ಚೀನಾ ಮತ್ತು ಸೌದಿ ಅರೇಬಿಯಾ ಸೇರಿದಂತೆ ಇತರ ಜಿ20 ಸದಸ್ಯ ರಾಷ್ಟ್ರಗಳ ಆರ್ಥಿಕತೆಗಳಿಗಿಂತ ಹೆಚ್ಚು ಬೆಳೆಯಬಹುದಾಗಿದೆ ಎಂದು ಒಇಸಿಡಿ ಹೇಳಿದೆ.
ಯೂರೋವನ್ನು ಬಳಸುವ 19 ಐರೋಪ್ಯ ದೇಶಗಳಲ್ಲಿನ ಆರ್ಥಿಕ ಬೆಳವಣಿಗೆಯು 2022ರಲ್ಲಿ ಶೇ. 3.3 ರಿಂದ 2023ರಲ್ಲಿ ಶೇ. 0.5ಕ್ಕೆ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಯುರೋಪ್ ಮತ್ತು ಅಮೆರಿಕದ ಆರ್ಥಿಕತೆಗಳು ಬೆಳೆಯುತ್ತಿರುವುದು ಇಂಧನ ಸಬ್ಸಿಡಿ, ಹಣದುಬ್ಬರ ಕಡಿತ ಕಾಯ್ದೆ ಮತ್ತು ಹೂಡಿಕೆಯನ್ನು ಉತ್ತೇಜಿಸುವ ನೀತಿಗಳಿಂದಾಗಿ ಎಂದು ಒಇಸಿಡಿ ಮಹಾ ಕಾರ್ಯದರ್ಶಿ ಮ್ಯಾಥಿಯಾಸ್ ಕಾರ್ಮನ್ ಹೇಳಿದ್ದಾರೆ. ಯೂಕ್ರೇನ್- ರಷ್ಯಾ ಯುದ್ಧದ ಅಂತ್ಯವು ಜಾಗತಿಕ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದೂ ಅವರು ಹೇಳಿದ್ದಾರೆ. ಮುಂದುವರಿದ ರಾಷ್ಟ್ರಗಳಲ್ಲಿ ಈ ವರ್ಷ ಹಣದುಬ್ಬರ ಶೇ. 9ಕ್ಕಿಂತ ಹೆಚ್ಚಾಗಿರುತ್ತದೆ ಹಾಗೂ 2023ರಲ್ಲಿ ಶೇ. 6.6 ಆಗಲಿದೆ. ಹೀಗಾಗಿ, ಪ್ರಮುಖ ಕೇಂದ್ರೀಯ ಬ್ಯಾಂಕ್​ಗಳು ಹಣದುಬ್ಬರವನ್ನು ಶೇ. 2ಕ್ಕೆ ಸೀಮಿತಗೊಳಿಸಲು ಪ್ರಯತ್ನಿಸುತ್ತಿದ್ದು, ಬೆಲೆ ಏರಿಕೆ ನಿಯಂತ್ರಿಸಲು ಬಡ್ಡಿದರಗಳನ್ನು ಹೆಚ್ಚಿಸುತ್ತಿವೆ. ಆದರೆ, ಈ ಕ್ರಮವು ಗೃಹ, ವ್ಯಾಪಾರ ಮತ್ತು ಸರ್ಕಾರದ ಸಾಲ ಸೇವಾ ವೆಚ್ಚವನ್ನು ಹೆಚ್ಚಿಸುವ ಮೂಲಕ ಆರ್ಥಿಕತೆಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎಂದು ಒಇಸಿಡಿ ಹೇಳಿದೆ.
ಐಎಂಎಫ್ ವರದಿಯೂ ಕಳವಳಕಾರಿ
ಮುಂದಿನ ವರ್ಷ ಜಾಗತಿಕವಾಗಿ ಆರ್ಥಿಕ ಹಿಂಜರಿತ ತಲೆದೋರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡ ಎಚ್ಚರಿಕೆ ನೀಡಿದೆ. 2022ರಲ್ಲಿ ವಿಶ್ವ ಆರ್ಥಿಕತೆ ಶೇ. 3.2 ಮತ್ತು 2023ರಲ್ಲಿ ಶೇ. 2.7 ಬೆಳವಣಿಗೆ ಕಾಣಬಹುದಾಗಿದೆ. ಇಂಧನ ಬೆಲೆಗಳು ಮತ್ತಷ್ಟು ಏರಿದರೆ ಅಥವಾ ಇದರ ಪೂರೈಕೆಗೆ ಅಡ್ಡಿಯಾದರೆ ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತ ದುರ್ಬಲವಾಗಲಿದೆ. ಹಣದುಬ್ಬರ, ಬೆಲೆ ಏರಿಕೆ, ಯೂಕ್ರೇನ್- ರಷ್ಯಾ ಯುದ್ಧ ಮತ್ತು ದೀರ್ಘಕಾಲದ ಕೋವಿಡ್ ಸಾಂಕ್ರಾಮಿಕ ಇವೆಲ್ಲ ಸಂಗತಿಗಳು ಆರ್ಥಿಕ ಪರಿಸ್ಥಿತಿ ಸಂಕಷ್ಟದತ್ತ ಸಾಗಲು ಕಾರಣವಾಗಿವೆ. ಜಾಗತಿಕ ಹಣದುಬ್ಬರವು 2021ರಲ್ಲಿ ಶೇಕಡಾ 4.7 ರಿಂದ 2022 ರಲ್ಲಿ ಶೇಕಡಾ 8.8 ಕ್ಕೆ ಏರುತ್ತದೆ. 2023ರಲ್ಲಿ ಶೇಕಡಾ 6.5 ಕ್ಕೆ ಮತ್ತು 2024 ರ ವೇಳೆಗೆ ಶೇಕಡಾ 4.1 ಕ್ಕೆ ಇಳಿಯಬಹುದಾಗಿದೆ ಎಂದು ಐಎಂಎಫ್ ಅಂದಾಜಿಸಿದೆ.
ಭಾರತದ ಬಗ್ಗೆ ಒಇಸಿಡಿ ಹೇಳಿದ್ದು…
ಅನಿಯಮಿತ ಮಳೆಯಿಂದಾಗಿ ಆರ್ಥಿಕ ಬೆಳವಣಿಗೆ ಬೇಸಿಗೆಯಲ್ಲಿ ವೇಗ ಕಳೆದುಕೊಂಡಿದೆ. ಇದು ಬಿತ್ತನೆ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದ್ದು, ಕೊಳ್ಳುವ ಶಕ್ತಿ ಕುಸಿದಿದೆ. ಆಹಾರ ಮತ್ತು ಇಂಧನದ ಬೆಲೆಗಳ ಏರಿಕೆಯಿಂದಾಗಿ ಗ್ರಾಹಕರು ಖರ್ಚುಗಳ ಬಗ್ಗೆ ಜಾಗರೂಕರಾಗಿದ್ದಾರೆ. ರಫ್ತು ಬೆಳವಣಿಗೆಯು, ವಿಶೇಷವಾಗಿ ಸೇವೆಗಳಲ್ಲಿ ಉತ್ತಮವಾಗಿದೆ. ಮಾಸಿಕ ಇಂಧನ ಮತ್ತು ಆಹಾರ ಆಮದು ಬಿಲ್ ಏರುತ್ತಲೇ ಇದೆ. ಅಲ್ಲದೆ, ಜುಲೈ-ಸೆಪ್ಟೆಂಬರ್ ತ್ರೖೆಮಾಸಿಕದಲ್ಲಿ ಚಾಲ್ತಿ ಖಾತೆ ಕೊರತೆಯು ಜಿಡಿಪಿಯ 2.9ಕ್ಕೆ ವಿಸ್ತರಿಸಿದೆ. ಹಣದುಬ್ಬರ ಶೇ. 6ಕ್ಕಿಂತ ಹೆಚ್ಚಾಗಿದ್ದು, ಆಹಾರದ ಬೆಲೆಗಳಲ್ಲಿ ಹೆಚ್ಚಳ ಉಂಟಾಗಿದೆ. ನಿರುದ್ಯೋಗದ ಪರಿಸ್ಥಿತಿಯು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ವಿುಕರ ಮಾರುಕಟ್ಟೆ ಸುಧಾರಿಸುತ್ತಿರುವುದನ್ನು ಸೂಚಿಸುತ್ತದೆ.
ರಷ್ಯಾದಿಂದ ಭಾರತದ ತೈಲ ಆಮದು ಪಾಲು 2021-22ರಲ್ಲಿ ಇದ್ದ ಶೇ. 2ರಿಂದ 2022ರ ಏಪ್ರಿಲ್-ಆಗಸ್ಟ್​ನಲ್ಲಿ ಶೇ. 16ಕ್ಕೆ ಏರಿದ್ದು, ಮತ್ತಷ್ಟು ಬೆಳೆಯುವ ನಿರೀಕ್ಷೆಯಿದೆ. ಬಂಡವಾಳ ಹರಿವಿನ ಹಿಮ್ಮುಖ ಚಲನೆಯು ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ. ಬಡವರಿಗೆ ಉಚಿತವಾಗಿ ಆಹಾರ ಒದಗಿಸುವ ಕಾರ್ಯಕ್ರಮವು ವಿಶ್ವದಲ್ಲಿ ಅತಿದೊಡ್ಡದಾಗಿದ್ದು, ಇದನ್ನು ಹಲವಾರು ಬಾರಿ ವಿಸ್ತರಿಸಲಾಗಿದೆ. 2021-22ರಲ್ಲಿ ಇದಕ್ಕಾಗಿ ಜಿಡಿಪಿಯ ಶೇ. 2.6ರಷ್ಟನ್ನು ವ್ಯಯಿಸಲಾಗಿದೆ. ಜಾಗತಿಕ ಆರ್ಥಿಕ ಕುಸಿತದ ಪರಿಣಾಮದಿಂದ ಭಾರತ ತಪ್ಪಿಸಿಕೊಳ್ಳಲಾಗದು. 2022-23ರಲ್ಲಿ ಶೇ. 6.6 ತಲುಪಿದ ನಂತರ, 2024-25 ರಲ್ಲಿ ಸುಮಾರು ಶೇ. 7ಕ್ಕೆ ಹಿಂತಿರುಗುವ ಮೊದಲು, ಜಿಡಿಪಿ ಬೆಳವಣಿಗೆ ನಿಧಾನವಾಗಲಿದೆ. ಹಣದುಬ್ಬರವು 2023ರ ಆರಂಭದವರೆಗೆ ಶೇ. 6ಕ್ಕಿಂತ ಹೆಚ್ಚಾಗಿರುತ್ತದೆ. ನಂತರ ಬಡ್ಡಿ ದರಗಳು ಕಡಿಮೆಯಾಗುತ್ತವೆ. ಮುಂದುವರಿದ ದೇಶಗಳಲ್ಲಿನ ಆರ್ಥಿಕ ಮಂದಗತಿ ಮತ್ತು ಭೌಗೋಳಿಕ ರಾಜಕೀಯ ಒತ್ತಡಗಳಿಂದಾಗಿ ರಫ್ತು ಅಲ್ಪ ಕುಸಿತ ಕಾಣಲಿದೆ ಎಂದು ಒಇಸಿಡಿ ವಿವರಿಸಿದೆ.
ದುಂದುವೆಚ್ಚ ಬೇಡ; ಬೆಜೋಸ್ ಸಲಹೆ
ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಕೂಡ ಆರ್ಥಿಕ ಹಿಂಜರಿತದ ಬಗೆಗೆ ಎಚ್ಚರಿಕೆ ನೀಡಿದ್ದಾರೆ. ‘ನಿಮ್ಮ ಹಣವನ್ನು ಎಚ್ಚರಿಕೆಯಿಂದ ಬಳಸಿ. ಹೊಸ ಕಾರು, ಟಿವಿ, ಫ್ರಿಜ್ ಖರೀದಿಸಬೇಡಿ. ಈಗ ಆರ್ಥಿಕತೆ ಸರಿ ಇಲ್ಲ. ಹಲವಾರು ಕಂಪನಿಗಳು ಜನರನ್ನು ಕೆಲಸದಿಂದ ವಜಾ ಮಾಡುತ್ತಿವೆ. ಇದು ಇನ್ನೂ ಹೆಚ್ಚಲೂಬಹುದು. ಇದು ಆರ್ಥಿಕ ಹಿಂಜರಿತದ ಸಂಕೇತ. ದುಂದುವೆಚ್ಚ ಬೇಡ’ ಎಂದು ಅವರು ಸಲಹೆ ನೀಡಿದ್ದಾರೆ.
ಅಂಬಾನಿ ಆಶಾವಾದ
ಪ್ರಸ್ತುತ 3 ಟ್ರಿಲಿಯನ್ ಡಾಲರ್ (245 ಲಕ್ಷ ಕೋಟಿ ರೂಪಾಯಿ) ಆರ್ಥಿಕತೆ ಹೊಂದಿರುವ ಭಾರತ 2047ರ ವೇಳೆಗೆ 40 ಟ್ರಿಲಿಯನ್ ಡಾಲರ್ (3267 ಲಕ್ಷ ಕೋಟಿ ರೂಪಾಯಿ) ಆರ್ಥಿಕತೆಯಾಗಲಿದೆ. ಇದು ವಿಶ್ವದ ಟಾಪ್ 3 ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಆಶಾವಾದ ವ್ಯಕ್ತಪಡಿಸಿದ್ದಾರೆ. ಮುಂಬರುವ ದಶಕಗಳಲ್ಲಿ ಶುದ್ಧ ಇಂಧನ ಕ್ರಾಂತಿ, ಜೈವಿಕ ಇಂಧನ ಕ್ರಾಂತಿ ಮತ್ತು ಡಿಜಿಟಲ್ ಕ್ರಾಂತಿ ಸಂಭವಿಸಲಿವೆ ಎಂದು ಅವರು ಹೇಳಿದ್ದಾರೆ.
ಅದಾನಿ ಅಂದಾಜು
2030ರ ವೇಳೆಗೆ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ, 2050ರ ವೇಳೆಗೆ ಎರಡನೇ ಅತಿದೊಡ್ಡ ಆರ್ಥಿಕತೆ ಆಗಲಿದೆ ಎಂದು ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅಂದಾಜಿಸಿದ್ದಾರೆ. ಭಾರತವು ಮೊದಲ ಟ್ರಿಲಿಯನ್ ಡಾಲರ್ (81.67 ಲಕ್ಷ ಕೋಟಿ ರೂಪಾಯಿ) ಜಿಡಿಪಿ ಪಡೆಯಲು 58 ವರ್ಷಗಳನ್ನು ತೆಗೆದುಕೊಂಡಿತು. ಮುಂದಿನ ಟ್ರಿಲಿಯನ್ ಪಡೆಯಲು 12 ವರ್ಷಗಳು ಮತ್ತು 3ನೇ ಟ್ರಿಲಿಯನ್​ಗೆ ಕೇವಲ 5 ವರ್ಷ ಬೇಕಾಯಿತು. ಮುಂದಿನ ದಶಕದಲ್ಲಿ ಭಾರತವು ಪ್ರತಿ 12-18 ತಿಂಗಳಿಗೊಮ್ಮೆ ತನ್ನ ಜಿಡಿಪಿಗೆ ಟ್ರಿಲಿಯನ್ ಡಾಲರ್​ಗಳನ್ನು ಸೇರಿಸಲು ಪ್ರಾರಂಭಿಸುತ್ತದೆ. ಈ ಮೂಲಕ 2050ರ ವೇಳೆಗೆ ಭಾರತವು 30 ಟ್ರಿಲಿಯನ್ ಡಾಲರ್ (2450 ಲಕ್ಷ ಕೋಟಿ ರೂಪಾಯಿ) ಆರ್ಥಿಕತೆಯಾಗಲಿದೆ ಎಂದು ಅದಾನಿ ಹೇಳಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven − six =
Remember me
