ನವದೆಹಲಿ:ಮಹಾಮಾರಿ ಕರೊನಾ ವಿರುದ್ಧದ ನಿರ್ಣಾಯಕ ಹಂತದ ಸಮರಕ್ಕೆ ಭಾರತ ಸನ್ನದ್ಧವಾಗಿದೆ. ಕಳೆದ ಕೆಲವು ತಿಂಗಳ ಪ್ರಯೋಗ, ಪ್ರಯತ್ನದ ಫಲವಾಗಿ ಕೋವಿಡ್ ಲಸಿಕೆ ಜನ ಬಳಕೆಗೆ ಸಂಪೂರ್ಣವಾಗಿ ಸಿದ್ಧವಾಗಿದ್ದು ಜ.16ಕ್ಕೆ ಲಸಿಕಾ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಮೊದಲ ಹಂತದಲ್ಲಿ 3 ಕೋಟಿ ಕೋವಿಡ್ ವಾರಿಯರ್ಸ್​ಗೆ ಲಸಿಕೆ ಉಚಿತವಾಗಿ ದೊರೆಯಲಿದ್ದು, ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳನ್ನು ಈ ಹಂತದಲ್ಲಿ ಹೊರಗಿಟ್ಟಿರುವುದು ಅಚ್ಚರಿ ಮೂಡಿಸಿದೆ. ಹಾಗೆಯೇ ಇತರ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಅತಿ ಕಡಿಮೆ ದರವನ್ನು ಲಸಿಕೆಗೆ ನಿಗದಿ ಪಡಿಸಿರುವುದು ಕ್ರಾಂತಿಕಾರಕ ಕ್ರಮ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಸೋಮವಾರ ಲಸಿಕೆ ವಿಚಾರವಾಗಿ ಸಿಎಂಗಳ ಜತೆ ಸಮಾಲೋಚನೆ ನಡೆಸಿದ ಪ್ರಧಾನಿ ಒಟ್ಟಾರೆ ಅಭಿಯಾನದ ಚಿತ್ರಣ ನೀಡಿದರು. ಕೋವಿಡ್ ಸಂಕಷ್ಟದ ಸಮಯದಲ್ಲಿ ಎಲ್ಲ ಸೂಕ್ಷ್ಮ ಪರಿಸ್ಥಿತಿ ಗಮನದಲ್ಲಿರಿಸಿಕೊಂಡು ತ್ವರಿತ ನಿರ್ಧಾರಗಳನ್ನು ತೆಗೆದುಕೊಂಡಿದ್ದೆವು. ಪ್ರತಿಯೊಂದು ಹಂತದಲ್ಲೂ ನಾವೆಲ್ಲರೂ ಸೇರಿ ಮಾಡಿದ ಕೆಲಸ ಸಂತೃಪ್ತಿ ತಂದಿದೆ. ನಮ್ಮ ಕೆಲಸ ಜನರಲ್ಲೂ ವಿಶ್ವಾಸ ತುಂಬಿದ್ದು, ಆರ್ಥಿಕ ಚಟುವಟಿಕೆ ಮತ್ತೆ ಗರಿಗೆದರಿವೆ. ಕರೊನಾ ವಿರುದ್ಧದ ಸಮರದಲ್ಲಿ ಕೇಂದ್ರ, ರಾಜ್ಯಗಳು ಒಟ್ಟಾಗಿ ಹೋರಾಟ ನಡೆಸಿವೆ. ಇದು ಫೆಡರಲಿಸಮ್ೆ ಅತ್ಯುತ್ತಮ ಉದಾಹರಣೆ ಎಂದರು.
ಸಕ್ರಿಯ ಪ್ರಕರಣ 2.25 ಲಕ್ಷಕ್ಕೆ ಕುಸಿತವಾಗಿದೆ. ಇದು ದೇಶದ ಒಟ್ಟು 1.04 ಕೋಟಿ ಪ್ರಕರಣದ ಶೇಕಡ 2.13 ಪಾಲಿನಷ್ಟಿದೆ. ಈವರೆಗೆ 1.5 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಡೇಟಾ ತೋರಿಸುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ನಿತ್ಯ ಕೇಸ್​ಗಳ ಸಂಖ್ಯೆ 98,000 ತಲುಪಿತ್ತು. ಈಗ ಅದು ಅಂದಾಜು 16,000ಕ್ಕೆ ಇಳಿಕೆಯಾಗಿದೆ. ಆದಾಗ್ಯೂ, ಜಗತ್ತಿನ ಒಟ್ಟು ಕೇಸ್​ಗಳ ಸಂಖ್ಯೆ ತೆಗೆದುಕೊಂಡರೆ ಅಮೆರಿಕದ ನಂತರದ ಸ್ಥಾನದಲ್ಲಿ ಭಾರತವಿದೆ.
ಕೋವಿಶೀಲ್ಡ್ ಲಸಿಕೆಯ 1.1 ಕೋಟಿ ಡೋಸ್ ಖರೀದಿಗೆ ಸೋಮವಾರ ಸೇರಂ ಸಂಸ್ಥೆಗೆ ಕೇಂದ್ರ ಸರ್ಕಾರ ಬೇಡಿಕೆ ಸಲ್ಲಿಸಿದೆ. ಪ್ರತೀ ಡೋಸ್ ಲಸಿಕೆಯ ಬೆಲೆ 200 ರೂಪಾಯಿ ಇದ್ದು, ಜಿಎಸ್​ಟಿ ಸೇರಿದಾಗ 210 ರೂಪಾಯಿ ಆಗುತ್ತಿದೆ. ಸೋಮವಾರ ಸಂಜೆಯೇ ಲಸಿಕೆಯನ್ನು ರವಾನಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸಾರ್ವಜನಿಕ ಉದ್ಯಮವಾದ ಎಚ್​ಎಲ್​ಎಲ್ ಲೈಫ್​ಕೇರ್, ಕೇಂದ್ರ ಆರೋಗ್ಯ ಸಚಿವಾಲಯದ ಪರವಾಗಿ ಸರಬರಾಜು ಆದೇಶವನ್ನು ಸಲ್ಲಿಸಿವೆ.
ಬೆಂಗಳೂರು:ಕರ್ನಾಟಕದಲ್ಲಿ ಆರೋಗ್ಯ ಕಾರ್ಯಕರ್ತರೂ ಸೇರಿ 16 ಲಕ್ಷ ಮುಂಚೂಣಿಯ ಕರೊನಾ ಯೋಧರಿಗೆ ಜ. 16ರಂದು ಮೊದಲ ಹಂತದಲ್ಲಿ ಕರೊನಾ ಲಸಿಕೆ ಹಾಕಲಾಗುವುದೆಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಪ್ರಧಾನಿ ಮೋದಿಯೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡ ಬಳಿಕ ಅವರು ಮಾತನಾಡಿದರು. ರಾಜ್ಯದಲ್ಲಿ ಲಸಿಕೆ ವಿತರಣೆಗಾಗಿ 235 ಕೇಂದ್ರಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. 16ರಂದು ಮೊದಲ ಡೋಸ್ ನೀಡಿದ 28 ದಿನಗಳ ಬಳಿಕ ಎರಡನೇ ಡೋಸ್ ನೀಡಲಾಗುವುದು. ಸದ್ಯದಲ್ಲೇ ಮೊದಲ ಕಂತಿನ ಲಸಿಕೆ ಡೋಸ್​ಗಳು ರಾಜ್ಯಕ್ಕೆ ತಲುಪಲಿದೆ ಎಂದು ಹೇಳಿದರು.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಎರಡು ಡೋಸ್ ಲಸಿಕೆ ಪಡೆದ 45 ದಿನಗಳ ಬಳಿಕ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲಿದೆ. ಅಲ್ಲಿಯವರೆಗೆ ಎಚ್ಚರಿಕೆಯಿಂದಿರಲು ಪ್ರಧಾನಿ ಸಲಹೆ ನೀಡಿದ್ದಾರೆಂದರು. ರಾಜ್ಯದ 16,44,747 ಕರೊನಾ ಯೋಧರಿಗೆ ಎರಡೂ ಲಸಿಕೆಗಳನ್ನು ಉಚಿತವಾಗಿ ನೀಡಲಾಗುವುದು. ಹೆಚ್ಚುವರಿಯಾಗಿ ಎರಡು ವಾಕ್-ಇನ್ ಫ್ರೀಜರ್​ಗಳನ್ನು ಕೇಂದ್ರ ರಾಜ್ಯಕ್ಕೆ ನೀಡಲಿದೆೆ ಎಂದು ತಿಳಿಸಿದರು.
ಮೊದಲ ಹಂತಕ್ಕೆ ಗುರುತಿಸಿದವರ ಪೈಕಿ 6.30 ಲಕ್ಷ ಜನರು ತಮ್ಮ ಹೆಸರು ನೋಂದಾಯಿಸಿದ್ದು, ಉಳಿದವರಿಗೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಸಾಕಷ್ಟು ಕ್ಲಿನಿಕಲ್ ಟ್ರಯಲ್ ಆದ ಎರಡೂ ಲಸಿಕೆಗಳು ಸುರಕ್ಷಿತ, ಯಾರೂ ಆತಂಕಪಡಬೇಕಾದ ಅಗತ್ಯವಿಲ್ಲ. ಜನ-ಸಾಮಾನ್ಯರ ಹಂತಕ್ಕೆ ಲಸಿಕೆ ವಿತರಣೆ ಯಾವಾಗ ಎಂದು ಈಗಲೇ ಹೇಳಲಾಗದು. ಸದ್ಯಕ್ಕಂತೂ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲವೆಂದು ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 16 =
Remember me
