ಸೇನೆ ಸೇರಬೇಕೆಂಬ ಬಾಲ್ಯದ ಕನಸು ಬೆನ್ನತ್ತಿ
ಹೈದರಾಬಾದ್ ಮೂಲದ ಕರ್ನಲ್ ಬಿಕ್ಕಮಲ್ಲಾ ಸಂತೋಷ್ ಬಾಬು ಅವರಿಗೆ ಭಾರತೀಯ ಸೇನೆ ಸೇರಬೇಕೆಂಬುದು ಬಾಲ್ಯದ ಕನಸಾಗಿತ್ತು. ಹೀಗಾಗಿ ಆಂಧ್ರಪ್ರದೇಶದ ವಿಜಿಯಾನಗರಂ ಜಿಲ್ಲೆಯಲ್ಲಿ ರಕ್ಷಣಾ ಸಚಿವಾಲಯದ ಸೈನಿಕ ಶಾಲೆಯಡಿ 12ನೇ ತರಗತಿವರೆಗೆ ಶಿಕ್ಷಣ ಪೂರೈಸಿದ್ದರು. ಬಳಿಕ ಪುಣೆಯ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್​ಡಿಎ) ಮತ್ತು ಡೆಹ್ರಾಡೂನ್​ನ ಭಾರತೀಯ ಮಿಲಿಟರಿ ಅಕಾಡೆಮಿ (ಐಎಂಎ) ಯಲ್ಲಿ ಶಿಕ್ಷಣ ಪೂರೈಸಿದರು. ತೆಲಂಗಾಣದ ಸೂರ್ಯಪೇಟೆ ನಿವಾಸಿಯಾಗಿದ್ದ ಅವರು 2004ರಲ್ಲಿ 16ನೇ ಬಿಹಾರ ರೆಜಿಮೆಂಟ್​ಗೆ ನಿಯೋಜಿಸಲ್ಪಟ್ಟು, ಮೊದಲಿಗೆ ಜಮ್ಮುಗೆ ನೇಮಕಗೊಂಡರು. ಅಂದಿನಿಂದ ವಿವಿಧ ಪ್ರದೇಶಗಳ ಗಡಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರ ತಂದೆ ಬಿ. ಉಪೇಂದರ್ ತಾವು ಸೇನೆಗೆ ಸೇರಬೇಕೆಂಬ ಗುರಿ ಇಟ್ಟುಕೊಂಡಿದ್ದರಂತೆ. ಆದರೆ ಅದು ಸಾಧ್ಯವಾಗದ ಹಿನ್ನೆಲೆ ಮಗನನ್ನು ಸೇನೆಗೆ ಸೇರಿಸಿ ದೇಶಸೇವೆಗೆ ಕಳುಹಿಸಿದ್ದರು. ಮಗ ಹುತಾತ್ಮನಾದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಅವನು ನಮ್ಮನ್ನು ಈ ರೀತಿ ತೊರೆಯುತ್ತಾನೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಆದರೆ ಆತ ದೇಶಕ್ಕಾಗಿ ಪ್ರಾಣವನ್ನು ತ್ಯಜಿಸಿದ್ದು ಹೆಮ್ಮೆಯ ವಿಚಾರ’ ಎಂದಿದ್ದಾರೆ. ಫೆಬ್ರವರಿಯಲ್ಲಿ ಕರ್ನಲ್ ಆಗಿ ಬಡ್ತಿ ಪಡೆದಿದ್ದ ಸಂತೋಷ್​ರನ್ನು ಅವರ ತಂದೆ ಹಾಡಿಹೊಗಳಿದ್ದರು. ಸಂತೋಷ್​ರ ಪತ್ನಿ ಸಂತೋಶಿ, ಒಂಬತ್ತು ವರ್ಷದ ಮಗಳು ಅಭಿಜ್ಞಾ ಮತ್ತು ನಾಲ್ಕು ವರ್ಷದ ಮಗ ಅನಿರುಧ್ ದೆಹಲಿಯಲ್ಲಿ ವಾಸಿಸುತ್ತಾರೆ.
ಮಗನ ಜತೆ ಕಡೇ ಮಾತು:ಕರ್ನಲ್ ಸಂತೋಷ್ ಬಾಬು ಅವರ ತಂದೆ ಬಿ.ಉಪೇಂದ್ರ ಮತ್ತು ತಾಯಿ ಮಂಜುಳಾ ಮಗನ ಜತೆ ಭಾನುವಾರವಷ್ಟೆ ದೂರವಾಣಿಯಲ್ಲಿ ಮಾತನಾಡಿದ್ದರು. ಒಂದು ದಿನ ಬಳಿಕ ಅವನೇ ಇಲ್ಲವೆಂದು ಈ ಹಿರಿಯ ದಂಪತಿ ಕಣ್ಣೀರು ಹಾಕಿದರು. ಒಬ್ಬನೇ ಮಗನನ್ನು ಇಳಿವಯಸ್ಸಿನಲ್ಲಿ ಕಳೆದುಕೊಂಡಿದ್ದು ದೊಡ್ಡ ಆಘಾತ ನೀಡಿದೆ. ಇದೇ ವೇಳೆಗೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಎಂಬ ಹೆಮ್ಮೆಯೂ ಇದೆ ಎಂದು ಮಂಜುಳಾ ಹೇಳಿದ್ದಾರೆ. ಕರೆ ಮಾಡಿದ್ದಾಗ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಇರುವ ಕಾರಣ ಎಚ್ಚರಿಕೆಯಿಂದ ಇರುವಂತೆ ಮಗನಿಗೆ ಸೂಚಿಸಿದ್ದರಂತೆ. ‘ಮಾಧ್ಯಮಗಳಲ್ಲಿ ಬರುತ್ತಿರುವಂತೆ ಇಲ್ಲಿನ ಪರಿಸ್ಥಿತಿ ಅಷ್ಟೊಂದು ಬಿಗಡಾಯಿಸಿಲ್ಲ, ಚಿಂತೆ ಬೇಡ’ ಎಂದು ಸಂತೋಷ್ ಪಾಲಕರಿಗೆ ಧೈರ್ಯ ಹೇಳಿದ್ದರು. ತಂಗಿ ಹಾಗೂ ಆಕೆಯ ಪತಿಗೆ ವಿವಾಹ ವಾರ್ಷಿಕೋತ್ಸವ ಶುಭಾಶಯ ತಿಳಿಸುವಂತೆಯೂ ಹೇಳಿದ್ದರು. ಸಂತೋಷ್ ಬಾಬುಗೆ ಹೈದರಾಬಾದ್​ಗೆ ವರ್ಗವಾಗಿತ್ತು. ಇದರಿಂದ ಕುಟುಂಬದವರು ಸಂತಸಗೊಂಡಿದ್ದರು. ಆದರೆ, ಕರೊನಾ ಕಾರಣ ಸಂತೋಷ್ ಹೈದರಾಬಾದ್​ಗೆ ಬರುವುದು ತಡವಾಗಿತ್ತು.
ತಿಂಗಳ ಹಿಂದೆಯಷ್ಟೇ ಗಡಿಗೆ ಪೋಸ್ಟಿಂಗ್ಛತ್ತೀಸಗಢ್ ಮೂಲದ ಗಣೇಶ್ ರಾಮ್ ಅವರನ್ನು 1 ತಿಂಗಳ ಹಿಂದೆಯಷ್ಟೇ ಭಾರತ- ಚೀನಾ ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಬಡಕುಟುಂಬದಲ್ಲಿ ಜನಿಸಿದ್ದ ಇವರು 12ನೇ ತರಗತಿವರೆಗೆ ವಿದ್ಯಾಭ್ಯಾಸ ಪೂರೈಸಿ ಸೇನೆಗೆ ಸೇರಿದ್ದರು. ಅವರ ತಂದೆ-ತಾಯಿಗೆ ಒಬ್ಬನೆ ಮಗ.
8 ತಿಂಗಳ ಹಿಂದೆ ಮದುವೆಯಾಗಿತ್ತುಮಧ್ಯಪ್ರದೇಶದ ರೆವಾ ಮೂಲದ 21 ವರ್ಷದ ದೀಪಕ್ ಸಿಂಗ್​ಗೆ 8 ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಹೀಗಾಗಿ ಅವರ ಇಡೀ ಕುಟುಂಬಕ್ಕೀಗ ಬರಸಿಡಿಲು ಬಡಿದಂತಾಗಿದೆ. ದೀಪಕ್ ಪಾರ್ಥಿವಶರೀರವನ್ನು ಅವರ ಸ್ವಗ್ರಾಮ ಫರೆಹಾದ್​ಗೆ ಗುರುವಾರ ಕೊಂಡೊಯ್ಯಲಾಗುತ್ತದೆ.
ವೀರಮರಣವನ್ನಪ್ಪಿದ ಯೋಧರು
ಮಗುವಿನ ಮುಖವನ್ನೂ ನೋಡಲಿಲ್ಲಜಾರ್ಖಂಡ್ ಮೂಲದ 26 ವರ್ಷದ ಕುಂದನ್ ಕುಮಾರ್ ಓಝಾ ಕೇವಲ 17 ದಿನಗಳ ಹಿಂದೆಯಷ್ಟೆ ತಂದೆಯಾಗಿದ್ದರು. ಕರ್ತವ್ಯದಲ್ಲಿ ಇದ್ದಿದ್ದರಿಂದ ಅವರು ಮಗುವಿನ ಮುಖವನ್ನೂ ನೋಡಿರಲಿಲ್ಲ. ಮೂರು ವರ್ಷದ ಹಿಂದೆಯಷ್ಟೆ ಕುಂದನ್​ರ ಮದುವೆಯಾಗಿತ್ತು. 2011ರಲ್ಲಿ ಕುಂದನ್ ಬಿಹಾರ ರೆಜಿಮೆಂಟ್​ಗೆ ಆಯ್ಕೆಯಾಗಿದ್ದರು.
ಹೊಸ ಮನೆ ನೋಡಲೇ ಇಲ್ಲ
ತಮಿಳುನಾಡಿನ ರಾಮನಾಥಪುರ ಜಿಲ್ಲೆಯ ಕಡುಕ್ಕಲೂರು ಗ್ರಾಮದ ಯೋಧ ಕೆ.ಪಳನಿ 22 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗಷ್ಟೇ ಅವರು ಸ್ವಗ್ರಾಮದ ಸಮೀಪದಿಂದ 65 ಕಿ.ಮೀ. ದೂರದಲ್ಲಿರುವ ರಾಮಂತಪುರದ ಪಟ್ಟಣದ ಬಳಿ ಹೊಸ ಮನೆ ಕಟ್ಟಿಸಿದ್ದರು. 15 ದಿನಗಳ ಹಿಂದೆ ಗೃಹಪ್ರವೇಶ ನಡೆದಿತ್ತಾದರೂ ಭಾರತ-ಚೀನಾ ಬಿಕ್ಕಟ್ಟಿನ ಹಿನ್ನೆಲೆ ಅವರಿಗೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಿರಲಿಲ್ಲ. ಮುಂದಿನ ವರ್ಷ ಅವರು ನಿವೃತ್ತಿಯಾಗಲಿದ್ದರು. ಬಳಿಕ ಕುಟುಂಬದ ಜತೆ ಹೊಸ ಮನೆಯಲ್ಲಿ ಜೀವನ ಸಾಗಿಸುವ ಆಕಾಂಕ್ಷೆ ಹೊಂದಿದ್ದರು. ಆದರೆ ವಿಧಿಯಾಟಕ್ಕೆ ಬಲಿಯಾಗಿ ತಾವೇ ಕಟ್ಟಿಸಿದ್ದ ಹೊಸ ಮನೆಯನ್ನು ಕಣ್ತುಂಬ ನೋಡದೆಯೇ ಕಣ್ಮುಚ್ಚಿದರು. ಪಳನಿಯವರ ಕಿರಿಯ ಸಹೋದರ ಸಹ ಸೈನ್ಯದಲ್ಲಿದ್ದು, ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ತಂಗಿ ಮದುವೆಗೆ ಹೋಗಬೇಕಿತ್ತು!
ಪಶ್ಚಿಮ ಬಂಗಾಳದ 23 ವರ್ಷದ ರಾಜೇಶ್ ಓರಾಂಗ್ ಕುಟುಂಬಕ್ಕೆ ಏಕೈಕ ಆಧಾರಸ್ತಂಭವಾಗಿದ್ದರು. ಊರಿಗೆ ಹೋಗಲು ಕಳೆದ ತಿಂಗಳೇ ಅವರಿಗೆ ರಜೆ ಮಂಜೂರಾಗಿತ್ತು. ಆದರೆ ಲಾಕ್​ಡೌನ್​ನಿಂದಾಗಿ ಪ್ರಯಾಣಿಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ ಅವರು ಶೀಘ್ರದಲ್ಲೇ ತಂಗಿಯ ಮದುವೆ ಮಾಡುವ ಸಿದ್ಧತೆಯಲ್ಲಿದ್ದರು. ಅಣ್ಣ ಬರುತ್ತಾನೆಂದು ಕಾಯುತ್ತಿದ್ದ ತಂಗಿ ಹಾಗೂ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ವೃದ್ಧ ತಂದೆಗೆ ಸಿಕ್ಕಿದ್ದು ಮಾತ್ರ ಮಗ ಹುತಾತ್ಮನಾದ ಸುದ್ದಿ.
‘ನಾನು ಬದುಕಿದ್ದೀನಿ’, ಪತ್ನಿಗೆ ಕರೆ ಮಾಡಿದ ಯೋಧಚೀನಾ-ಭಾರತ ಯೋಧರ ಘರ್ಷಣೆಯಲ್ಲಿ ಬಿಹಾರದ ಸುನೀಲ್ ಸುಖದೇವ್ ರಾಯ್ ಎಂಬುವವರು ಹುತಾತ್ಮರಾಗಿದ್ದಾರೆ ಎಂದು ಸೇನೆ ಕಡೆಯಿಂದ ಅವರ ಕುಟುಂಬಕ್ಕೆ ಮಂಗಳವಾರ ಸಂಜೆ ಮಾಹಿತಿ ನೀಡಲಾಗಿತ್ತು. ಸುದ್ದಿ ತಿಳಿದು ಅವರ ಪತ್ನಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮದ ಜನರು ಸಹ ಯೋಧನ ಮನೆ ಮುಂದೆ ಜಮಾಯಿಸಿ ದುಃಖದ ಮಡುವಿನಲ್ಲಿದ್ದರು. ಆದರೆ ಬುಧವಾರ ಬೆಳಗ್ಗೆ ಸುನೀಲ್ ಪತ್ನಿಗೆ ಫೋನ್ ಕರೆಯೊಂದು ಬಂದಿದ್ದು, ಇದರಿಂದಾಗಿ ಅಲ್ಲಿನ ವಾತಾವರಣ ಕ್ಷಣದಲ್ಲೇ ಬದಲಾಗಿ ಹೋಯಿತು. ಸ್ವತಃ ಸುನೀಲ್ ತಮ್ಮ ಪತ್ನಿಗೆ ಕರೆ ಮಾಡಿ ‘ನಾನು ಬದುಕಿದ್ದೀನಿ, ಸುರಕ್ಷಿತವಾಗಿದ್ದೀನಿ’ ಎಂದು ತಿಳಿಸಿದರು. ಬಳಿಕ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 19 =
Remember me
