ಭಾರಿ ಸಾಲದ ಹೊರೆಯಲ್ಲಿ ಮುಳುಗಿರುವ, ವಿದೇಶಿ ವಿನಿಮಯದ ಕೊರತೆಯಿಂದ ಬಳಲಿರುವ ಶ್ರೀಲಂಕಾದ ಆಂತರಿಕ ಪರಿಸ್ಥಿತಿ ಈಗ ಅಯೋಮಯವಾಗಿದೆ. ಜೀವನಾವಶ್ಯಕ ವಸ್ತುಗಳು ಸಿಗುತ್ತಿಲ್ಲ. ಪೆಟ್ರೋಲ್, ಡೀಸೆಲ್, ಅಕ್ಕಿ, ಬೇಳೆ, ಹಾಲು… ಎಲ್ಲದರ ದರಗಳು ಗಗನಮುಖಿಯಾಗಿವೆ. ಇಂಥ ಸಂಕಷ್ಟದ ಹೊತ್ತಲ್ಲಿಯೂ ಶ್ರೀಲಂಕಾದ ಪಾಲಿಗೆ ಭರವಸೆ ಮೂಡಿಸುವ ಕೆಲವು ಬೆಳವಣಿಗೆಗಳು ಸಂಭವಿಸಿವೆ.
ಕೊಲಂಬೊದಲ್ಲಿ ಎಂಆರ್​ಸಿಸಿ: ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಸಾಗರಯಾನ ರಕ್ಷಣಾ ಸಮನ್ವಯ ಕೇಂದ್ರವನ್ನು (ಎಂಆರ್​ಸಿಸಿ) ಸ್ಥಾಪಿಸಲು ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಶ್ರೀಲಂಕಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹಂಬನ್​ತೋಟಾ ಬಂದರು ಪ್ರದೇಶದಲ್ಲಿ ಎಂಆರ್​ಸಿಸಿ ಉಪಕೇಂದ್ರ ಸ್ಥಾಪನೆಯಾಗಲಿದೆ. ಹಿಂದೂ ಮಹಾ ಸಾಗರದ ಮಾಲ್ಡೀವ್ಸ್ ನಲ್ಲಿ ರೇಡಾರ್ ವ್ಯವಸ್ಥೆಯನ್ನು ಅಳವಡಿಸಿದ ಬೆನ್ನಲ್ಲೇ, ಶ್ರೀಲಂಕಾದಲ್ಲಿ ಎಂಆರ್​ಸಿಸಿ ಆರಂಭಿಸುವ ಮೂಲಕ ಭಾರತವು ಈ ಪ್ರದೇಶದಲ್ಲಿ ತನ್ನ ಪ್ರಾಬಲ್ಯ ಮರುಸ್ಥಾಪಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಅಲ್ಲದೆ, ಶ್ರೀಲಂಕಾದ ಜಾಫ್ನಾ ದ್ವೀಪದಲ್ಲಿ ಭಾರತ ಮೂರು ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿದೆ. ಇದಕ್ಕೂ ಮುನ್ನ, ಎರಡು ವಿದ್ಯುತ್ ಯೋಜನೆಗಳನ್ನು ಭಾರತ ಇಲ್ಲಿ ಆರಂಭಿಸಿದೆ.
ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಶ್ರೀಲಂಕಾ ವಿದೇಶಾಂಗ ಸಚಿವ ಜಿ.ಎಲ್.ಪೈರಿಸ್ ನಡುವೆ ನಡೆದ ಸಭೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಸಂದರ್ಭದಲ್ಲಿ ಇನ್ನೂ ಕೆಲವು ಮಹತ್ವದ ಒಪ್ಪಂದಗಳು ಏರ್ಪಟ್ಟಿವೆ. ಶ್ರೀಲಂಕಾದಲ್ಲಿ ‘ಆಧಾರ್’ ಸ್ವರೂಪದ ವಿಶಿಷ್ಟ ಗುರುತಿನ ಕಾರ್ಯಕ್ರಮವನ್ನು ಆರಂಭಿಸಲು ಭಾರತ ನೆರವು ನೀಡಲಿದೆ. ಭಾರತವು ಶ್ರೀಲಂಕಾ ನೌಕಾಪಡೆಗೆ ಕರಾವಳಿ ಕಣ್ಗಾವಲು ಉದ್ದೇಶದ ಮೂರು ಡಾರ್ನಿಯರ್ ವಿಮಾನಗಳನ್ನು ನೀಡಲಿದೆ. ಶ್ರೀಲಂಕಾದ ಟ್ರಂಕಾಮಲೈ ಬಂದರಿಗಾಗಿ ಗೋವಾ ಶಿಪ್​ಯಾರ್ಡ್ ಲಿಮಿಟೆಡ್ ತೇಲುವ ಡಾಕ್ ನಿರ್ವಿುಸಿಕೊಡಲಿದೆ. ಚೀನಾ ಗುತ್ತಿಗೆ ಪಡೆದಿರುವ ಹಂಬನ್​ತೋಟಾ ಬಂದರು ಹೊರತುಪಡಿಸಿ ಬೇರೆ ಬಂದರುಗಳಿಗೆ ಈ ಡಾಕ್ ಅನ್ನು ತುರ್ತು ಸಂದರ್ಭಗಳಲ್ಲಿ ಬಳಸಬಹುದಾಗಿದೆ.
ಮಹತ್ವದ ಕ್ರಮ:ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರಗಳಲ್ಲಿ ಚೀನಾ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡುವ ಮೂಲಕ, ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿತ್ತು. ಶ್ರೀಲಂಕಾದ ಹಂಬನ್​ತೋಟಾ ಬಂದರು ಅಭಿವೃದ್ಧಿಪಡಿಸಿ, ಅದನ್ನು ಗುತ್ತಿಗೆ ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾಗಿತ್ತು. ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಪ್ರಾಬಲ್ಯಕ್ಕೆ ಕೊಟ್ಟ ಹೊಡೆತ ಎಂದೇ ಪರಿಗಣಿಸಲಾಗಿತ್ತು. ಆದರೀಗ, ಭಾರತವು ಶ್ರೀಲಂಕಾ ಮತ್ತು ಮಾಲ್ಡೀವ್ಸ್​ನಲ್ಲಿ ಸಮುದ್ರಯಾನಕ್ಕೆ ಅಗತ್ಯವಾದ ವ್ಯವಸ್ಥೆಗಳ ಸ್ಥಾಪನೆಗೆ ಮುಂದಾಗುವ ಮೂಲಕ ಚೀನಾಗೆ ಸೆಡ್ಡು ಹೊಡೆದಿದೆ.
ಸಾಲದ ಸಂಕೋಲೆ:ಭಾರತ ಮತ್ತು ಶ್ರೀಲಂಕಾ ನಡುವೆ ಸಾಂಸ್ಕೃತಿಕ, ವ್ಯಾಪಾರ-ವಾಣಿಜ್ಯ ಸಂಬಂಧಗಳು ಮೊದಲಿನಿಂದಲೂ ಉತ್ತಮವಾಗಿಯೇ ಇವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಚೀನಾದ ತಂತ್ರಗಾರಿಕೆಯಿಂದ ಲಂಕಾ ಭಾರತದ ಸ್ನೇಹದಿಂದ ದೂರ ಸರಿಯುತ್ತಿದೆ ಎಂಬುದು ವಾಸ್ತವ. ಶ್ರೀಲಂಕಾದಲ್ಲಿ ಚೀನಾ ಈಗಾಗಲೇ 24 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳ ಗುತ್ತಿಗೆ ಪಡೆದಿದೆ. ವಿಶೇಷವೆಂದರೆ ಅಷ್ಟೂ ಯೋಜನೆಗಳಿಗೆ ಸ್ವತಃ ಚೀನಾ ತನ್ನ ಬ್ಯಾಂಕ್​ಗಳಿಂದ ಸಾಲ ನೀಡಿದೆ.
ತಮಿಳು ನಾಗರಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಮತ್ತು ನಾಗರಿಕರ ಹಕ್ಕುಗಳನ್ನು ಖಾತ್ರಿಪಡಿಸಬೇಕು ಎಂದು ಶ್ರೀಲಂಕಾದ ಪ್ರಮುಖ ತಮಿಳು ಪಕ್ಷ ಟಿಎನ್​ಎ ಆಗ್ರಹಿಸಿದೆ. ತಮಿಳರು ಎದುರಿಸುತ್ತಿರುವ ಸವಾಲುಗಳ ಪರಿಹಾರಕ್ಕಾಗಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ತಮಿಳ್ ನ್ಯಾಷನಲ್ ಅಲಾಯನ್ಸ್ (ಟಿಎನ್​ಎ) ಪಕ್ಷದ ನಿಯೋಗದೊಂದಿಗೆ ಸಭೆ ನಡೆಸಿ, ರ್ಚಚಿಸಿದರು. ಸಂವಿಧಾನದ 13ನೇ ತಿದ್ದುಪಡಿ ಪ್ರಕ್ರಿಯೆಯನ್ನು ಬೇಗನೆ ಪೂರ್ಣಗೊಳಿಸಬೇಕು, ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಬೇಕು, ತಮಿಳರ ಸಮಸ್ಯೆಗಳನ್ನು ಬಗೆಹರಿಸ ಬೇಕು, ಅವರ ಹಿತ ಕಾಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಟಿಎನ್​ಎ ನಾಯಕರು ಈ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಭಾರತ ಪ್ರತಿಕ್ರಿಯೆ:ತಮಿಳರ ಸಮಸ್ಯೆ ಕುರಿತಾದ ಮಾತುಕತೆ ದೀರ್ಘಾವಧಿಯಿಂದ ನನೆಗುದಿಗೆ ಬಿದ್ದಿತ್ತು. ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಟಿಎನ್​ಎ ನಿಯೋಗದೊಂದಿಗೆ ಮಾತುಕತೆ ನಡೆಸಿರುವುದು ಸ್ವಾಗತಾರ್ಹ ಎಂದು ಭಾರತ ಹೇಳಿದೆ. ಶ್ರೀಲಂಕಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಟಿಎನ್​ಎ ನಿಯೋಗ, ರಾಜಪಕ್ಸ ಅವರೊಂದಿಗೆ ನಡೆದ ಚರ್ಚೆಯ ವಿವರಗಳನ್ನು ಹಂಚಿಕೊಂಡಿದೆ.
ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಶ್ರೀಲಂಕಾದ ಸಂಕಷ್ಟ ಗಳು ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ದೇಶದಾದ್ಯಂತ ವಿದ್ಯುತ್ ಪೂರೈಕೆಯನ್ನು 7-10 ಗಂಟೆಗಳ ಕಾಲ ಸ್ಥಗಿತಗೊಳಿಸುವ ಕ್ರಮವನ್ನು ಮತ್ತಷ್ಟು ದಿನಗಳ ಕಾಲ ವಿಸ್ತರಿಸಲಾಗಿದೆ. ಇದರಿಂದಾಗಿ ಜನಸಾಮಾನ್ಯರು ರಾತ್ರಿಯ ಹೊತ್ತಲ್ಲಿ ಕತ್ತಲಲ್ಲೇ ಕಳೆಯಬೇಕಾಗಿದೆ. ಜಲಜನಕ ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ಇಂಧನ ಲಭ್ಯವಾಗುತ್ತಿಲ್ಲ. ಹಾಗಾಗಿ, ಸದ್ಯದ ಪರಿಸ್ಥಿತಿಯಲ್ಲಿ ಈ ಅನಿವಾರ್ಯ ನಿರ್ಣಯಕ್ಕೆ ಬರಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಕಳೆದ ಒಂದು ತಿಂಗಳಿಂದ ಶ್ರೀಲಂಕಾದಲ್ಲಿ ದಿನಕ್ಕೆ 7 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇಂಧನದ ಕೊರತೆಯೂ ಕಾಡುತ್ತಿದ್ದು, ಪೆಟ್ರೋಲ್, ಡೀಸೆಲ್ ಪಂಪ್​ಗಳಲ್ಲಿ ಜನರ ಸರತಿಸಾಲಿನಲ್ಲಿ ನಿಂತಿದ್ದಾರೆ. ಅಹಿತಕರ ಘಟನೆಗಳನ್ನು ತಡೆಯಲು ಕೆಲವೆಡೆ ಪೆಟ್ರೋಲ್ ಪಂಪ್​ಗಳಲ್ಲಿ ಸೇನಾ ತುಕಡಿಯನ್ನು ನಿಯೋಜಿಸಲಾಗಿದೆ. ಅಗತ್ಯ ವಸ್ತುಗಳ ಬೆಲೆಯೂ ಏರಿರುವ ಪರಿಣಾಮ, ಶ್ರೀಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದೇಶಿ ವಿನಿಮಯದ ತೀವ್ರ ಕೊರತೆಯೇ ಈ ಸಮಸ್ಯೆಗಳಿಗೆ ಕಾರಣವಾಗಿದ್ದು, ‘ಶೀಘ್ರದಲ್ಲೇ ಪರಿಸ್ಥಿತಿ ಸುಧಾರಿಸಲಿದೆ’ ಎಂದು ಸರ್ಕಾರ ಆಶ್ವಾಸನೆ ನೀಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
