ಇಂಗ್ಲೆಂಡ್​ನ ರಾಯಲ್ ಏರ್​ಫೋರ್ಸ್​ಗೆ ಬೆಂಬಲಾರ್ಥವಾಗಿ 1932ರ ಅಕ್ಟೋಬರ್ 8ರಂದು ಭಾರತೀಯ ವಾಯುಪಡೆಯನ್ನು ಸ್ಥಾಪಿಸಲಾಯಿತು. ಒಂಬತ್ತು ದಶಕಗಳ ಇತಿಹಾಸ ಹೊಂದಿರುವ ಭಾರತೀಯ ವಾಯುಪಡೆಯು ತನ್ನ ಹೋರಾಟ ಸಾಮರ್ಥ್ಯದ ಮೂಲಕ, ಅಮೆರಿಕ ಹಾಗೂ ರಷ್ಯಾದ ನಂತರ ಜಗತ್ತಿನ ಮೂರನೇ ಶಕ್ತಿಶಾಲಿ ವಾಯುಪಡೆ ಎಂಬ ಗೌರವಕ್ಕೆ ಈ ವರ್ಷ ಪಾತ್ರವಾಗಿದೆ. ವರ್ಲ್ಡ್ ಡೈರೆಕ್ಟರಿ ಆಫ್ ಮಾಡರ್ನ್ ಮಿಲಿಟರಿ ಏರ್​ಕ್ರಾಫ್ಟ್ ಇತ್ತೀಚೆಗಷ್ಟೇ ಪ್ರಕಟಿಸಿದ ಜಾಗತಿಕ ವಾಯು ಶಕ್ತಿ ರ‍್ಯಾಂಕಿಂಗ್ ಪ್ರಕಾರವೇ ಈ ಮನ್ನಣೆ ದೊರೆತಿದೆ. ತನಗಿಂತಲೂ ಅಧಿಕ ಸಂಖ್ಯೆಯ ಯುದ್ಧ ವಿಮಾನಗಳನ್ನು ಹೊಂದಿರುವ ಚೀನಾವನ್ನು ಈ ರ್ಯಾಂಕಿಂಗ್​ನಲ್ಲಿ ಭಾರತ ಹಿಂದಿಕ್ಕಿರುವುದು ವಿಶೇಷ. ಚೀನಾದ ಬಳಿ ಯುದ್ಧವಿಮಾನ ಹಾಗೂ ಶಸ್ತ್ರಾಸ್ತ್ರಗಳು ಅಧಿಕವಾಗಿದ್ದರೂ ಹೋರಾಟ ಸಾಮರ್ಥ್ಯದಲ್ಲಿ ಭಾರತವೇ ಮುಂದಿದೆ. ವಿಶ್ವ ವಾಯು ಶಕ್ತಿ ಸೂಚ್ಯಂಕದಲ್ಲಿ 242.9 ಅಂಕಗಳೊಂದಿಗೆ ಅಮೆರಿಕ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿರುವ ರಷ್ಯಾಕ್ಕೆ 114.2 ಅಂಕಗಳಿವೆ. ಭಾರತವು 69.4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಚೀನಾ ಪಡೆದಿರುವ ಅಂಕಗಳು 63.8. ಪ್ರಸ್ತುತ 1 ಲಕ್ಷ 70 ಸಾವಿರಕ್ಕೂ ಅಧಿಕ ಸಿಬ್ಬಂದಿ ವಾಯುಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದಾದ್ಯಂತ 60 ವಾಯು ನಿಲ್ದಾಣಗಳನ್ನು ಕೂಡ ಹೊಂದಿದೆ. 1600ಕ್ಕೂ ಅಧಿಕ ಸಕ್ರಿಯ ಯುದ್ಧವಿಮಾನಗಳನ್ನು ಹೊಂದಿದೆ. ಮಿಗ್, ಜಾಗ್ವಾರ್, ಮಿರೇಜ್, ಸುಖೋಯ್, ತೇಜಸ್ ಮುಂತಾದ ಅತ್ಯಾಧುನಿಕ ಯುದ್ಧ ವಿಮಾನಗಳು ಈ ಪಡೆಯ ಬತ್ತಳಿಕೆಯಲ್ಲಿವೆ. 1933ರ ಎಪ್ರಿಲ್ 1ರಂದು ಭಾರತೀಯ ವಾಯುಪಡೆಯು ತನ್ನ ಮೊದಲ ಸ್ಕಾ್ವಡ್ರನ್ ಅನ್ನು ಸ್ಥಾಪಿಸಿತು. ಇದರಲ್ಲಿ 4 ‘ವೆಸ್ಟ್​ಲ್ಯಾಂಡ್ ವಾಪಿತಿ ವೈಪ್ಲೇನ್ಸ್’ ವಿಮಾನಗಳು ಹಾಗೂ ಐವರು ಪೈಲಟ್​ಗಳು ಇದ್ದರು. ಕಮಾಂಡಿಂಗ್ ಆಫೀಸರ್ ಸೆಸಿಲ್ ಬೌಷಿಯರ್ ಅವರು ಇದರ ನೇತೃತ್ವ ವಹಿಸಿದ್ದರು. ಪ್ರಸ್ತುತ 31 ಸ್ಕಾ್ವಡ್ರನ್​ಗಳಿವೆ. ಸಾಮಾನ್ಯವಾಗಿ ಒಂದು ಸ್ಕಾ್ವಡ್ರನ್​ನಲ್ಲಿ 18 ಯುದ್ಧ ವಿಮಾನಗಳಿರುತ್ತವೆ.
ವಾಯುಪಡೆಯ ಪಿತ:ಸುಬ್ರತೊ ಮುಖರ್ಜಿ ಅವರನ್ನು ಭಾರತೀಯ ವಾಯುಪಡೆಯ ಪಿತ ಎಂದು ಪರಿಗಣಿಸಲಾಗುತ್ತದೆ. 1954ರ ಎಪ್ರಿಲ್ 1ರಂದು ಭಾರತೀಯ ವಾಯುಪಡೆ ಪ್ರಥಮ ಮುಖ್ಯಸ್ಥರಾಗಿ (ಏರ್ ಚೀಫ್ ಮಾರ್ಷಲ್) ಮುಖರ್ಜಿ ಅಧಿಕಾರ ವಹಿಸಿಕೊಂಡರು.
ರಫೇಲ್ ಬಲ:ಭಾರತೀಯ ವಾಯುಪಡೆಗೆ ರಫೇಲ್ ಯುದ್ಧ ವಿಮಾನಗಳ ಬಲ ಬಂದಿದೆ. ಫ್ರಾನ್ಸ್ ನಿರ್ವಿುತ ಈ ವಿಮಾನಗಳು ಜಗತ್ತಿನಲ್ಲಿಯೇ ಬಲಾಢ್ಯ ಫೈಟರ್ ಜೆಟ್ ಸಾಲಿನಲ್ಲಿ ನಿಲ್ಲುತ್ತವೆ. ಈಗಾಗಲೇ 36 ರಫೆಲ್ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿವೆ.
ಎಲ್​ಸಿಎಚ್ ಶಕ್ತಿ:ಭಾರತದಲ್ಲಿಯೇ ನಿರ್ವಿುಸಲಾದ ಮೊಟ್ಟಮೊದಲ ಹಗುರ ಯುದ್ಧ ಹೆಲಿಕಾಪ್ಟರನ್ನು (ಎಲ್​ಸಿಎಚ್) ಈಗಷ್ಟೇ ವಾಯುಪಡೆಗೆ ಸೇರ್ಪಡೆ ಮಾಡಿಕೊಳ್ಳ ಲಾಗಿದೆ. 5.8 ಟನ್ ತೂಕದ ಶ್ರೇಣಿಯ ಹೆಲಿಕಾಪ್ಟರ್​ಗಳಲ್ಲಿ ಇಡೀ ಜಗತ್ತಿನಲ್ಲಿಯೇ ಆಕ್ರಮಣದ ಸಾಮರ್ಥ್ಯವುಳ್ಳ ಏಕೈಕ ಹೆಲಿಕಾಪ್ಟರ್ ಇದಾಗಿದೆ. ಶಸ್ತ್ರಾಸ್ತ್ರಗಳ ಸಮೇತವಾಗಿ 5 ಸಾವಿರ ಮೀಟರ್ (16,400 ಅಡಿ) ಎತ್ತರ ಹಾರುವ ಸಾಮರ್ಥ್ಯ ಇದ್ದಕ್ಕಿದೆ. ಸಿಯಾಚಿನ್ ಹಿಮನದಿ, ಸಲ್ಟೊರೊ ಪರ್ವತ ಶ್ರೇಣಿ ಮುಂತಾದ ದುರ್ಗಮ ಪ್ರದೇಶಗಳಲ್ಲಿಯೂ ಆಕ್ರಮಣಕಾರಿ ಕಾರ್ಯಾಚರಣೆ ಸಾಮರ್ಥ್ಯವುಳ್ಳ ಹೆಲಿಕಾಪ್ಟರ್ ಇದಾಗಿದೆ. 20ಎಂಎಂ ಟರ್ರೆಟ್ (ತಿರುಗುವ) ಗನ್, 70 ಎಂಎಂ ರಾಕೆಟ್ ವ್ಯವಸ್ಥೆ, ಆಗಸದಿಂದ ಆಸಗಕ್ಕೆ ಚಿಮ್ಮುವ ಕ್ಷಿಪಣಿ ಒಳಗೊಂಡಿದೆ. ಎತ್ತರದ ಪ್ರದೇಶಗಳಲ್ಲಿ ಹಾಗೂ ಇತರೆಡೆಯೂ ಇದು ವೈರಿಗಳ ಪದಾತಿದಳ, ಟ್ಯಾಂಕ್, ಬಂಕರ್​ಗಳ ವಿರುದ್ಧವಾಗಿ ಭಾರತೀಯ ವಾಯುಪಡೆಗೆ ಹೆಚ್ಚಿನ ಬಲ ಒದಗಿಸುತ್ತದೆ. 160 ಎಲ್​ಸಿಎಚ್​ಗಳ ಅಗತ್ಯವನ್ನು ಐಎಎಫ್ ಪ್ರತಿಪಾದಿಸಿದ್ದು, 3887 ಕೋಟಿ ರೂ ವೆಚ್ಚದಲ್ಲಿ 15 ಎಲ್​ಸಿಎಚ್ ಮೊದಲ ಒಪ್ಪಂದಕ್ಕೆ ಸಂಪುಟ ಅನುಮತಿ ನೀಡಿದೆ. ಸಾರ್ವಜನಿಕ ವಲಯದ ಕಂಪನಿಯಾದ ಹಿಂದುಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ಇದರ ತಯಾರಿಕೆಯಲ್ಲಿ ತೊಡಗಿದ್ದು, ಇದರ ಅರ್ಧದಷ್ಟು ಭಾಗಗಳು ದೇಶಿ ನಿರ್ವಿುತವಾಗಿವೆ.
ಏಷ್ಯಾದ ಅತಿದೊಡ್ಡ ವಾಯುನೆಲೆ:ಇದು ಏಷ್ಯಾದ ಅತಿದೊಡ್ಡ ವಾಯುನೆಲೆಯಾಗಿದೆ. ಇದರ ವಿಸ್ತೀರ್ಣ 55 ಚದರ ಕಿ.ಮೀ. ಹಾಗೂ ಸುತ್ತಳತೆ 14 ಕಿ.ಮೀ. ಪಶ್ಚಿಮ ಕಮಾಂಡ್ ವ್ಯಾಪ್ತಿಯಲ್ಲಿ ಬರುತ್ತದೆ. ಉತ್ತರಪ್ರದೇಶದ ಗಾಜಿಯಾಬಾದ್​ನಲ್ಲಿದೆ.
ದೇಶದಲ್ಲಿಯೇ ಸುಖೋಯ್ ಆಧುನೀಕರಣ:ರಷ್ಯಾ ನಿರ್ವಿುತ ಸುಖೋಯ್ ಯುದ್ಧವಿಮಾನಗಳು ಭಾರತೀಯ ವಾಯುಪಡೆಯ ಬೆನ್ನೆಲುಬಾಗಿ ಹಲವಾರು ದಶಕ ಗಳಿಂದ ಕಾರ್ಯನಿರ್ವಹಿಸಿವೆ. ಈ ಯುದ್ಧವಿಮಾನಗಳನ್ನು ದೇಶಿಯವಾಗಿಯೇ ಆಧುನೀಕರಣಗೊಳಿಸುವ ಮಹತ್ವದ ನಿರ್ಧಾರವನ್ನು ಭಾರತೀಯ ವಾಯುಪಡೆ ಈಗ ಕೈಗೊಂಡಿದೆ. ಮೊದಲ ಹಂತದಲ್ಲಿ 84 ಸುಖೋಯ್ಗಳನ್ನು ಆಧುನೀಕರಣ ಮಾಡಲಾಗುತ್ತಿದ್ದು, ದೇಶದಲ್ಲಿಯೇ ತಯಾರಿಸಲಾದ ಶಸ್ತ್ರಾಸ್ತ್ರಗಳನ್ನು ಇದರಲ್ಲಿ ಅಳವಡಿಸಲಾಗುತ್ತಿದೆ. ರಕ್ಷಣಾ ಸಂಶೋಧನೆ, ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಈಗಾಗಲೇ ಕಾರ್ಯನಿರತ ವಾಗಿದೆ. ಆಧುನೀಕರಣಗೊಂಡ ಸುಖೋಯ್ ಆವೃತ್ತಿಗಳು ಅಮೆರಿಕದ ಮುಂದಿನ ತಲೆಮಾರಿನ ಯುದ್ಧವಿಮಾನಗಳಿಗೆ ಪೈಪೋಟಿ ನೀಡುವಷ್ಟು ಸಮರ್ಥವಾಗಲಿವೆ.
ವಿಮಾನಗಳ ಕೊರತೆ:ಇಡೀ ದೇಶದ ಮೇಲೆ ನಿಗಾ ವಹಿಸಲು ಹಾಗೂ ಗಸ್ತು ತಿರುಗಲು ಸದ್ಯ ಇರುವ ಸ್ಕಾ್ವಡ್ರನ್​ಗಳ ಸಂಖ್ಯೆ ಸಾಕಾಗುವುದಿಲ್ಲ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರೇ ಕೆಲ ದಿನಗಳ ಹಿಂದೆ ಹೇಳಿದ್ದಾರೆ. ಈ ಕೊರತೆ ನೀಗಿಸಬೇಕಾದರೆ ಸ್ಕಾ್ವಡ್ರನ್​ಗಳ ಸಂಖ್ಯೆ 42ಕ್ಕೆ ಹೆಚ್ಚಿಸಬೇಕಿದ್ದು, ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ಕೂಡ ನೀಡಿದೆ. ಈಗಾಗಲೇ ಸ್ವದೇಶದಲ್ಲಿಯೇ ನಿರ್ವಿುಸಲಾಗುತ್ತಿರುವ 83 ‘ತೇಜಸ್ ಎಂಕೆ 1 ಎ ಯುದ್ಧವಿಮಾನಗಳ ಪೂರೈಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದರಲ್ಲಿ ಈ ವರ್ಷದ ಕೊನೆಗೆ 40 ವಿಮಾನಗಳು ಲಭ್ಯವಾಗಲಿವೆ. ಅಗತ್ಯವಿರುವಷ್ಟು ಸಂಖ್ಯೆಯ ಸ್ಕಾ್ವಡ್ರನ್​ಗಳನ್ನು ಹೊಂದಲು ಇನ್ನೊಂದು ದಶಕ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಹಂತಹಂತವಾಗಿ ವಿದಾಯ:ತಿಂಗಳ ಹಿಂದೆ ಮಿಗ್-21 ಬೈಸನ್ ಯುದ್ಧವಿಮಾನಗಳ ಶ್ರೀನಗರದ ಸ್ಕಾ್ವಡ್ರನ್ ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ ಒಟ್ಟು ಸ್ಕಾ್ವಡ್ರನ್​ಗಳ ಸಂಖ್ಯೆ 31ಕ್ಕೆ ಇಳಿದಿದೆ. ಮಿಗ್-21 ಬೈಸನ್ ಯುದ್ಧವಿಮಾನಗಳ 3 ಸ್ಕಾ್ವಡ್ರನ್​ಗಳಿಗೆ 2024ರ ವೇಳೆಗೆ ವಿದಾಯ ಹೇಳಲಾಗುತ್ತಿದೆ. ಇದಾದ ನಂತರ 2025ರಿಂದ 2032ರ ಅವಧಿಯಲ್ಲಿ ವಯಸ್ಸಾಗುತ್ತಿರುವ ಜಾಗ್ವಾರ್ ವಿಮಾನಗಳ 6 ಸ್ಕಾ್ವಡ್ರನ್​ಗಳಿಗೆ ವಿದಾಯ ಹೇಳಲಾಗುತ್ತದೆ. ತದನಂತರ ಮಿರೇಜ್ 2000 ಹಾಗೂ ಮಿಗ್ 29 ಯುದ್ಧವಿಮಾನಗಳ ತಲಾ 3 ಸ್ಕಾ್ವಡ್ರನ್​ಗಳ ಸೇವೆಯನ್ನು ಕೊನೆಗೊಳಿಸಲಾಗುತ್ತದೆ.
ಸ್ವದೇಶಿ ನಿರ್ವಿುತ ತೇಜಸ್:ಸ್ವದೇಶಿ ನಿರ್ವಿುತ ತೇಜಸ್ ಹಗುರ ಯುದ್ಧವಿಮಾನಗಳನ್ನು ಭಾರತೀಯ ವಾಯುಪಡೆಗೆ ಇತ್ತೀಚೆಗೆ ಸೇರ್ಪಡೆ ಮಾಡಲಾಗಿದೆ. ದೇಶಿಯವಾಗಿ ನಿರ್ವಣಗೊಂಡ ಕಾರಣ ಈ ಯುದ್ಧವಿಮಾನದ ದಕ್ಷತೆ ಬಗೆಗೆ ಹಲವು ಸಂಶಯಗಳು ವ್ಯಕ್ತವಾಗಿದ್ದವು. ಆದರೆ, ಹೆಚ್ಚು ಸಾಮರ್ಥ್ಯವುಳ್ಳ, ವಿಶ್ವದರ್ಜೆಯ ಕ್ಷಿಪಣಿಗಳನ್ನು ಒಳಗೊಂಡ ಯುದ್ಧವಿಮಾನ ಇದಾಗಿದೆ ಎಂದು ವಾಯುಪಡೆ ಅಧಿಕಾರಿಗಳೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ತೇಜಸ್​ನ ಸುಧಾರಿತ ಆವೃತ್ತಿಯ ‘ತೇಜಸ್ ಮಾರ್ಕ್ 2’ ವಿಮಾನದ ಉತ್ಪಾದನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ವಾಟ್ಸ್​ಆ್ಯಪ್​ ಬಳಕೆ ಅಪಾಯಕಾರಿಯೇ?; ಇಲ್ಲಿದೆ ಆತಂಕಕಾರಿ ಮಾಹಿತಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − thirteen =
Remember me
