ಪ್ರಸ್ತುತ ಕುವೈತ್‌ನಲ್ಲಿ 12,000 ಜನ ಭಾರತೀಯ ಇಂಜಿನಿಯರ್‌ಗಳು ತಮ್ಮ ಕೆಲಸ ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಿದ್ದಾರೆ. ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್ (ಎನ್‌ಬಿಎ) ನಿಂದ ಗುರುತಿಸಲ್ಪಡದ ಭಾರತೀಯ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ನಡೆಸಿ, ಪದವಿ ಗಳಿಸಿರುವ ಭಾರತೀಯ ಇಂಜಿನಿಯರ್‌ಗಳು ಈಗ ಕುವೈತ್ ಸೊಸೈಟಿ ಆಫ್ ಇಂಜಿನಿಯರ್ಸ್‌ (ಕೆಎಸ್ಇ) ಸಂಸ್ಥೆಯಿಂದ ಕುವೈತ್‌ನಲ್ಲಿ ಕಾರ್ಯ ನಿರ್ವಹಿಸಲು ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ (ಎನ್ಓಸಿ) ಪಡೆದುಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಕುವೈತ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಭಾರತೀಯ ಇಂಜಿನಿಯರ್‌ಗಳ ಪ್ರಕಾರ, ಒಂದು ಸಮಯದಲ್ಲಿ ಹಲವು ಭಾರತೀಯ ಕಾಲೇಜ್‌ಗಳ ಇಂಜಿನಿಯರಿಂಗ್ ಪದವಿಯನ್ನು ಕುವೈತ್ ಒಪ್ಪಿಕೊಳ್ಳುತ್ತಿತ್ತು. ಆಗ ಎನ್‌ಬಿಎ ಮಾನ್ಯತೆ ಹೊಂದಿದ್ದ ಹಲವು ಕಾಲೇಜ್‌ಗಳು ಈಗ ಮಾನ್ಯತೆ ಹೊಂದಿರದ ಕಾರಣ ಈ ಪದವಿಗಳನ್ನು ಕುವೈತ್ ತಿರಸ್ಕರಿಸುತ್ತಿದೆ.
2018ರಲ್ಲಿ ಕೆಎಸ್ಇ ಇಂಜಿನಿಯರಿಂಗ್ ಪದವಿಗಳ ಮರು ಪರಿಶೀಲನೆ ನಡೆಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿತು. ಈ ಇಂಜಿನಿಯರಿಂಗ್ ಪದವಿಗಳ ಮರು ಪರಿಶೀಲನೆಗೆ ಕುವೈತ್ ವಿದೇಶಾಂಗ ಸಚಿವಾಲಯ (ಎಂಒಎಫ್ಎ) ಮರು ಸ್ಟ್ಯಾಂಪಿಂಗ್ ಪ್ರಕ್ರಿಯೆಯನ್ನು 2020ರಲ್ಲಿ ಆರಂಭಿಸಿದ ಬಳಿಕ ಜಾರಿಗೆ ತರಲಾಯಿತು. ಈ ವರ್ಷದಲ್ಲಿ ಮತ್ತೊಂದು ಬಾರಿ ಇಂಜಿನಿಯರಿಂಗ್ ಪದವಿಗಳ ಮರು ಪರಿಶೀಲನೆಯ ವಿಚಾರ ಮಾಹಿತಿ ಹರಿವಿನ ಆಧಾರದ ಮೂಲಕ, ಮೂರನೇ ವ್ಯಕ್ತಿಯಿಂದ ದಾಖಲೆಗಳ ಪರಿಶೀಲನೆ ನಡೆಸುವ ಮೂಲಕ ನಡೆಸಬೇಕು ಎಂದು ನಿರ್ಧರಿಸಲಾಯಿತು. ಈಗ ಕೆಎಸ್ಇ ನಾಲ್ಕು ವರ್ಷಗಳ ಇಂಜಿನಿಯರಿಂಗ್ ಪದವಿಯಲ್ಲಿ ಎನ್‌ಬಿಎ ಮಾನ್ಯತೆಯನ್ನು ಅಪೇಕ್ಷಿಸುತ್ತಿದೆ. ಅವರಿಗೆ ಈಗ ಕಾರ್ಯ ನಿರ್ವಹಿಸಲು ಕೆಎಸ್ಇ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ ನೀಡುವ ಅಗತ್ಯವಿದೆ.
ಭಾರತೀಯ ಶಿಕ್ಷಣ ವ್ಯವಸ್ಥೆ ಜಗತ್ತಿನಾದ್ಯಂತ ಅತ್ಯಂತ ಉನ್ನತ ಮಟ್ಟದ ಇಂಜಿನಿಯರ್‌ಗಳು, ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್‌ಗಳನ್ನು ರೂಪಿಸುವ ಶಿಕ್ಷಣ ವ್ಯವಸ್ಥೆ ಎಂಬುದಾಗಿ ಹೆಸರು ಗಳಿಸಿದೆ. ಆದರೆ ಭಾರತೀಯ ಶಿಕ್ಷಣಕ್ಕೆ ಕುವೈತ್‌ನಲ್ಲಿ ಸೂಕ್ತ ಬೆಲೆ ನೀಡಲಾಗುತ್ತಿಲ್ಲ ಎಂದು ಕುವೈತ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಇಂಜಿನಿಯರ್‌ಗಳು ಅಭಿಪ್ರಾಯ ಪಡುತ್ತಾರೆ. ಕುವೈತ್ ನಂತೆಯೇ ಜಗತ್ತಿನ ಹಲವು ರಾಷ್ಟ್ರಗಳು ಭಾರತದ ಶಿಕ್ಷಣ ವ್ಯವಸ್ಥೆಗೆ ಬೆಲೆ ಕೊಡುತ್ತವೆಯೇ ಹೊರತು, ಭಾರತದ ಶಿಕ್ಷಣ ಸಂಸ್ಥೆಗಳಿಗೆ ಬೆಲೆ ನೀಡುವುದಿಲ್ಲ. ಬಹುತೇಕ ಪಾಶ್ಚಾತ್ಯವಲ್ಲದ ರಾಷ್ಟ್ರಗಳಂತೆಯೇ ಭಾರತದಲ್ಲೂ ಸಹ ನಕಲಿ ಪದವಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗಿಯೇ ಇದೆ. ಇದರ ಪರಿಣಾಮವಾಗಿ ಭಾರತೀಯ ವಿಶ್ವವಿದ್ಯಾಲಯಗಳು ನೀಡಿರುವ ಪ್ರಮಾಣ ಪತ್ರಗಳನ್ನು ಮೂರನೇ ವ್ಯಕ್ತಿಗಳು ಪರಿಶೀಲಿಸುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ.
ಇಂತಹ ಪರಿಸ್ಥಿತಿಗೆ ಕಾರಣಗಳು ಹಲವಾರು ಸಿಗುತ್ತವೆ. ಭಾರತದಲ್ಲಿ ಅಪಾರ ಸಂಖ್ಯೆಯಲ್ಲಿ ಕಳಪೆ ಗುಣಮಟ್ಟ ಹೊಂದಿರುವ ಇಂಜಿನಿಯರಿಂಗ್ ಕಾಲೇಜ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಅದರೊಡನೆ ಇಂದಿನ ಉದ್ಯಮಕ್ಕೆ ಅಗತ್ಯವಿರುವ ಯಾವ ಗುಣಮಟ್ಟವನ್ನೂ ಹೊಂದಿರದ ಉಪನ್ಯಾಸಕರು ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ‌ ಶಿಕ್ಷಕರು ನಡೆಸುವ ಏಕೈಕ ಕಾರ್ಯವೆಂದರೆ ವಿದ್ಯಾರ್ಥಿಗಳಿಗೆ ಪಾಠ ಮಾಡುವುದಷ್ಟೇ ಆಗಿದ್ದರೂ, ಅವರು ಅತ್ಯಂತ ಕಡಿಮೆ ತಯಾರಿ, ಸಂಶೋಧನೆಗಳನ್ನು ನಡೆಸುತ್ತಾರೆ. ಇದು ಅತ್ಯಂತ ಜನಪ್ರಿಯ ಶಿಕ್ಷಣ ಸಂಸ್ಥೆಗಳಲ್ಲೂ ಅತ್ಯಂತ ಸಾಮಾನ್ಯವಾದ ವಿಚಾರವಾಗಿದೆ. ಇಂತಹ ಸಮಸ್ಯೆಯ ನೇರ ಪರಿಣಾಮವಾಗಿ, ಐಐಟಿಗಳೂ ಸಹ ಜಾಗತಿಕ ರಾಂಕಿಂಗ್‌ನಲ್ಲಿ ಕೆಳಮಟ್ಟದಲ್ಲಿವೆ. ಹಲವಾರು ಕಾರಣಗಳಿಗೋಸ್ಕರ ಸಂಶೋಧನೆ ಎನ್ನುವುದು ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ ಅಂಶವಾಗಿದೆ.
ಅವುಗಳಲ್ಲಿ ಮುಖ್ಯ ಅಂಶವೆಂದರೆ, ಸಂಶೋಧನೆಗಳು ನಾವು ಕಲಿತ ವಿಚಾರವನ್ನು ನೇರವಾಗಿ ಪ್ರಯೋಗಿಸಲು ಸಹಕಾರಿಯಾಗುತ್ತವೆ. ಆ ಮೂಲಕ ಶೈಕ್ಷಣಿಕ ಕೋರ್ಸ್‌ಗಳು ಸದಾ ಪ್ರಸ್ತುತವಾಗಿರುವಂತೆ ಮಾಡುತ್ತವೆ. ಆದ್ದರಿಂದ ಶಿಕ್ಷಣ ಮತ್ತು ಸಂಶೋಧನೆಗಳ ಮಧ್ಯ ಅವಿನಾಭಾವ ಸಂಬಂಧವಿದೆ. ಆದರೆ ದುಃಖದ ವಿಚಾರವೆಂದರೆ ಈ ಸಮಸ್ಯೆ ಕೇವಲ ಇಂಜಿನಿಯರಿಂಗ್ ಶಿಕ್ಷಣಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಇದು ಭಾರತದಾದ್ಯಂತ ಎಲ್ಲಾ ಶಿಕ್ಷಣ ವ್ಯವಸ್ಥೆಯಲ್ಲೂ ಹಾಸುಹೊಕ್ಕಾಗಿದೆ. ಈ ಕಾರಣದಿಂದ ಸಾಕಷ್ಟು ಕಳಪೆ ಗುಣಮಟ್ಟದ ಇಂಜಿನಿಯರಿಂಗ್ ಕಾಲೇಜುಗಳು ಗುಣಮಟ್ಟದ ವೃತ್ತಿಪರತೆ ಹೊಂದಲು ಅಸಮರ್ಥರಾದ ಪದವೀಧರರನ್ನು ಸೃಷ್ಟಿಸುತ್ತವೆ. ಈ ಪದವೀಧರರು ಉತ್ಪಾದಕ ಕಾರ್ಯಪಡೆಯನ್ನು ನಿರ್ಮಿಸಲು ಸಾಧ್ಯವೇ ಆಗುವುದಿಲ್ಲ. ದುರದೃಷ್ಟವಶಾತ್, ಸಾಕಷ್ಟು ಹೆಸರಾಂತ ಶಿಕ್ಷಣ ಸಂಸ್ಥೆಗಳೂ ಸಹ ತರಬೇತಿ ಪಡೆದ ಕಾರ್ಮಿಕರನ್ನಷ್ಟೇ ಸೃಷ್ಟಿಸುತ್ತವೆ. ಈ ಕಾರ್ಮಿಕರು ಕಾರ್ಪೋರೆಟ್ ಕಾರ್ಮಿಕರಾಗಿ ಕೆಲಸ ಮಾಡಲಷ್ಟೇ ಸಮರ್ಥರಾಗಿರುತ್ತಾರೆ. ಅವರು ಸಂಶೋಧಕರಾಗಲಿ, ನವೋದ್ಯಮಿಗಳಾಗಲಿ ಆಗಲು ಸಾಧ್ಯವಿಲ್ಲ. ಇದು ಕಾಲೇಜುಗಳ ಗುಣಮಟ್ಟವನ್ನು ಹೊರತುಪಡಿಸಿಯೂ ಆಡುವ ಮಾತಾಗಿದೆ.
ಈ ಕಾರಣಗಳಿಂದಾಗಿ ಇಂತಹ ಉನ್ನತ ಕಾಲೇಜುಗಳಿಂದ ಹೊರಬರುವ ಪದವೀಧರರೂ ಸಹ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಯಾಕೆಂದರೆ ಅವರ ವ್ಯಾಸಂಗದ ಅವಧಿಯಲ್ಲಿ ಅವರಿಗೆ ವಿಮರ್ಶಾತ್ಮಕ ಚಿಂತನೆಯನ್ನಾಗಲಿ, ಉತ್ತಮ ಉಪನ್ಯಾಸಕರಾಗಿ ಮೂಡಿಬರುವ ಗುಣಮಟ್ಟವನ್ನಾಗಲಿ ಬೆಳೆಸಿಕೊಳ್ಳಲು ಬೋಧನೆ ನಡೆಸಿರುವುದಿಲ್ಲ. ಇದು ಈ ಅಂಕಣದಲ್ಲಿ ವಿವರಿಸಿರುವ ಪರಿಸ್ಥಿತಿಯ ನೇರ ಫಲಿತಾಂಶವಾಗಿದೆ. ಅದರೊಡನೆ ಈ ಪದವೀಧರರಿಗೆ ಶಿಕ್ಷಣ ಕ್ಷೇತ್ರ ಆಸಕ್ತಿದಾಯಕ ಎಂದು ಅನಿಸುವುದಿಲ್ಲ. ಯಾಕೆಂದರೆ ಅವರು ಗಳಿಸಿಕೊಂಡ ದೃಷ್ಟಿಕೋನದ ಪ್ರಕಾರ ಶಿಕ್ಷಣ ಕ್ಷೇತ್ರ ಎಂದರೆ ಸಂಶೋಧನೆ ನಡೆಸುವುದಾಗಲಿ, ಅತ್ಯುನ್ನತ ಮಟ್ಟದ ಜ್ಞಾನವನ್ನು ಪ್ರಸಾರ ಮಾಡುವುದಾಗಲಿ ಅಲ್ಲವೇ ಅಲ್ಲ. ಅವರ ಪ್ರಕಾರ ಶಿಕ್ಷಣ ಎಂದರೆ ತರಗತಿಯಲ್ಲಿ ಕುಳಿತು, ಉಪನ್ಯಾಸಕರು ಬೋಧನೆ ಮಾಡಿದ ಮಾಹಿತಿಯನ್ನು ಕಷ್ಟಪಟ್ಟು ಮತ್ತೆ ಮತ್ತೆ ಉರು ಹೊಡೆಯುವ ಕಷ್ಟಕರ ಪ್ರಕ್ರಿಯೆ ಮಾತ್ರವೇ ಆಗಿದೆ. ಸಾಮಾನ್ಯವಾಗಿ ಶಿಕ್ಷಣದ ಗುಣಮಟ್ಟ ಹಲವು ಕಾರಣಗಳಿಂದ ತೊಂದರೆ ಅನುಭವಿಸುತ್ತಿದೆ. ಹಾಗೆಂದು ಅದು ಕೇವಲ ಇಲ್ಲಿ ಪಟ್ಟಿ ಮಾಡಿದ ಕಾರಣಗಳಿಗೆ ಸೀಮಿತವಾಗಿಲ್ಲ.
ಸಂಪೂರ್ಣ ಉನ್ನತ ಶಿಕ್ಷಣ ವ್ಯವಸ್ಥೆಯೇ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಆದರೆ ಇಂಜಿನಿಯರಿಂಗ್ ಶಿಕ್ಷಣದ ವಿಚಾರಕ್ಕೆ ಬಂದರೆ, ಈ ಸಮಸ್ಯೆಗಳು ಅತ್ಯಂತ ಗಂಭೀರ ಸ್ವರೂಪ ತಳೆದಿವೆ. ಅದರೊಡನೆ ಇಂಜಿನಿಯರಿಂಗ್ ಶಿಕ್ಷಣಕ್ಕೆ ಸಂಬಂಧಪಡುವ ಪ್ರತ್ಯೇಕ ವಿಚಾರಗಳೂ ಇವೆ. ಅದರಲ್ಲಿ ಕೆಲವು ವಿಚಾರಗಳೆಂದರೆ, ಯಾವುದೇ ಸಮತೋಲನ ಇಲ್ಲದೆ ಅಭಿವೃದ್ಧಿ ಹೊಂದಿರುವ ಇಂಜಿನಿಯರಿಂಗ್ ಶಿಕ್ಷಣ ಪ್ರಮುಖವಾಗಿದೆ. ಇದರ ಪರಿಣಾಮವಾಗಿ ಇಂಜಿನಿಯರಿಂಗ್ ಶಿಕ್ಷಣದ ಕೆಲವು ವಿಭಾಗಗಳು ಇತರ ವಿಭಾಗಗಳ ಅವಕಾಶಗಳನ್ನು ಕಿತ್ತುಕೊಂಡು ಬೆಳೆಯುತ್ತಿವೆ, ಕಾರ್ಮಿಕ ಮಾರುಕಟ್ಟೆಯಲ್ಲಿ ಹೊಂದಾಣಿಕೆ ಇಲ್ಲದಂತಾಗಿದೆ. ಇವುಗಳನ್ನು ಉದ್ಯಮದ ಹೊಟ್ಟೆಬಾಕತನ ಮತ್ತು ಕೊರತೆಗಳಲ್ಲಿ ಎದ್ದು ಕಾಣಬಹುದು. ಇದರೊಡನೆ ಶಿಕ್ಷಣ ವೆಚ್ಚ ಹಾಗೂ ವೈಯಕ್ತಿಕ ಖರ್ಚುಗಳೂ ಹೆಚ್ಚಳವಾಗಿದ್ದು, ಶೈಕ್ಷಣಿಕ ಸಾಲಗಳೂ ಹೆಚ್ಚಾಗಿವೆ. ಈ ಎಲ್ಲ ಕಾರಣಗಳೂ ಇಂಜಿನಿಯರಿಂಗ್ ಶಿಕ್ಷಣ ಸವಾಲುಗಳಿಂದ ಮುಕ್ತವಾಗಿಲ್ಲ ಎಂದು ಸಾರುತ್ತವೆ.
ಇನ್ನೊಂದು ಕಡೆ, ಕೆಲವು ಅಧ್ಯಯನಗಳನ್ನು ಹೊರತುಪಡಿಸಿ, ಪ್ರಸ್ತುತ ಇಂಜಿನಿಯರಿಂಗ್ ಶಿಕ್ಷಣವನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತಾದ ಆಳವಾದ ವಿಶ್ಲೇಷಣೆಗಳು ಹೆಚ್ಚಾಗಿ ಕಾಣಿಸಿಲ್ಲ. ಅದರೊಡನೆ ಸಾಮಾಜಿಕ – ಆರ್ಥಿಕ ಅಭಿವೃದ್ಧಿಯ ಕವಲುಗಳ ಕುರಿತು ಅಧ್ಯಯನದ ಕೊರತೆಯೂ ಇದೆ. ಅದರಲ್ಲೂ ನೂತನ ಮಧ್ಯಮ ವರ್ಗ ನಿರ್ಮಿಸುತ್ತಿರುವ ಬೇಡಿಕೆ ಅತ್ಯಂತ ಪ್ರಮುಖವಾಗಿದ್ದು, ಅದನ್ನು ಅರ್ಥ ಮಾಡಿಕೊಳ್ಳಲು ಸಮರ್ಪಕ ಮಾರ್ಗ ನಮ್ಮಲ್ಲಿ ಈಗ ಇಲ್ಲವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − eleven =
Remember me
