ನವದೆಹಲಿ:‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಸಿದ್ಧಾಂತದಿಂದ ಪ್ರೇರೇಪಣೆಗೊಂಡು ಎಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಲು ಭಾರತ ಕೆಲಸ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಜಿ-20 ದೇಶಗಳ ಒಕ್ಕೂಟದ ಅಧ್ಯಕ್ಷತೆಯನ್ನು ಭಾರತ ಗುರುವಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ಬಿಕ್ಕಟ್ಟು, ಭಯೋತ್ಪಾದನೆ, ತಾಪಮಾನ ಬದಲಾವಣೆ, ಸಾಂಕ್ರಾಮಿಕತೆ ಮೊದಲಾದವುಗಳು ದೊಡ್ಡ ಸವಾಲಾಗಿದ್ದು ಎಲ್ಲರೂ ಒಗ್ಗಟ್ಟಿನಿಂದ ಅವನ್ನು ಎದುರಿಸಬಹುದು ಎಂದು ಅಭಿಪ್ರಾಯಪಟ್ಟರು. ಜಿ-20ರ ಕಾರ್ಯಸೂಚಿಯು ಒಳಗೊಳ್ಳುವಿಕೆ, ಮಹತ್ವಾಕಾಂಕ್ಷೆ, ಕಾರ್ಯಾಚರಣೆ-ಕೇಂದ್ರಿತ ಹಾಗೂ ನಿರ್ಣಾಯಕವಾಗಿರುತ್ತದೆ ಎಂದು ಹೇಳಿದರು. ಜಿ-20ಯ ಭಾರತದ ನೇತೃತ್ವದ ಪಯಣದ ಯೋಜನೆಯನ್ನು ಅನಾವರಣಗೊಳಿಸಿದ ಪ್ರಧಾನಿ, ಕೂಟದ ಆದ್ಯತೆಗಳನ್ನು ನಿಗದಿಪಡಿಸಲು 20 ಸದಸ್ಯ ದೇಶಗಳು ಮಾತ್ರವಲ್ಲದೆ ದಕ್ಷಿಣಾರ್ಧ ಗೋಳದ ಇತರ ದೇಶಗಳ ಜತೆಗೂ ಸಮಾಲೋಚನೆ ನಡೆಸಲಾಗುತ್ತದೆ ಎಂದರು.
ಭಾರತದ ಜಿ-20 ಅಧ್ಯಕ್ಷತೆಯು ಉಪಶಮನ, ಸೌಹಾರ್ದತೆ ಮತ್ತು ಆಶಾವಾದದ ಅಧ್ಯಕ್ಷತೆ ಆಗುವಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ. ಮಾನವ- ಕೇಂದ್ರಿತ ಜಾಗತೀಕರಣದ ಹೊಸ ಮಾದರಿ ಸೃಷ್ಟಿಗೆ ಒಂದಾಗಿ ಕೆಲಸ ಮಾಡೋಣ ಎಂದು ಮೋದಿ ಕರೆ ನೀಡಿದ್ದಾರೆ. ಭಾರತದ ರಾಜ ತಾಂತ್ರಿಕತೆಯ ಪ್ರಮುಖ ಮೈಲುಗಲ್ಲಿನ ಕುರಿತ ಪ್ರಧಾನಿ ಲೇಖನವನ್ನು ವೆಬ್​ಸೈಟ್​ನಲ್ಲೂ ಪೋಸ್ಟ್ ಮಾಡಲಾಗಿದೆ. ಜಿ-20 ಅಧ್ಯಕ್ಷತೆಯ ಲೋಗೋ ಮತ್ತು ಧ್ಯೇಯವನ್ನು ಪ್ರಧಾನಿ ಮೋದಿ ನವೆಂಬರ್​ನಲ್ಲಿ ಅನಾವರಣಗೊಳಿಸಿದ್ದರು. ಸುಸ್ಥಿರ ಜೀವನ ಶೈಲಿಗಳಿಗೆ ಉತ್ತೇಜನ, ಜಾಗತಿಕ ಆಹಾರ, ರಸಗೊಬ್ಬರ ಮತ್ತು ವೈದ್ಯಕೀಯ ಉತ್ಪನ್ನಗಳ ಸರಬರಾಜನ್ನು ಅರಾಜಕೀಯಗೊಳಿಸುವುದು ಮೊದಲಾದ ವಿಚಾರಗಳಲ್ಲಿ ಕೆಲಸ ನಿರ್ವಹಿಸಲಾಗುತ್ತದೆ ಎಂದು ಸರಣಿ ಟ್ವೀಟ್​ಗಳಲ್ಲಿ ಪ್ರಧಾನಿ ಹೇಳಿದ್ದಾರೆ.
ಧೋರಣೆ ಬದಲಾವಣೆಗೆ ಒತ್ತು
‘ಇಡಿಯಾಗಿ ಮನುಕುಲಕ್ಕೆ ಲಾಭವಾಗಲು ಮನೋಭಾವದಲ್ಲಿ ಮೂಲಭೂತ ಬದಲಾವಣೆ ಮಾಡುವುದು ಅಗತ್ಯ. ಅದಕ್ಕೆ ಇದು ಸಕಾಲ ಎಂಬುದು ನನ್ನ ದೃಢವಾದ ನಂಬಿಕೆ’ ಎಂದೂ ಮೋದಿ ಪ್ರತಿಪಾದಿಸಿದರು. ಏಕತೆಯನ್ನು ಬೋಧಿಸುವ ನಮ್ಮ ಆಧ್ಯಾತ್ಮಿಕ ಪರಂಪರೆಯಿಂದ ಸ್ಪೂರ್ತಿ ಪಡೆದು ಜಾಗತಿಕ ಸವಾಲುಗಳನ್ನು ಪರಿಹರಿಸಲು ಇದು ಸಕಾಲ ಎಂದರು. ಇತಿಹಾಸದುದ್ದಕ್ಕೂ ಮನುಕುಲ ಕೊರತೆಯಲ್ಲಿ ಜೀವಿಸಿದ್ದರಿಂದ ನಮ್ಮ ಪರಿಸರದ ಸನ್ನಿವೇಶಗಳು ನಮ್ಮ ಮನೋಭಾವವನ್ನು ರೂಪಿಸುತ್ತವೆ. ಜನರು ಸೀಮಿತ ಸಂಪನ್ಮೂಲಗಳಿಗಾಗಿ ಹೋರಾಡುತ್ತಾರೆ. ಅವುಗಳನ್ನು ಬೇರೆಯವರಿಗೆ ನಿರಾಕರಿಸುವುದರಲ್ಲೇ ತಮ್ಮ ಅಸ್ತಿತ್ವ ಅಡಗಿದೆ ಎಂದು ಭಾವಿಸುವುದೇ ಇದಕ್ಕೆ ಕಾರಣ ಎಂದಿರುವ ಪ್ರಧಾನಿ, ದುರದೃಷ್ಟವಶಾತ್ ಇಂದಿಗೂ ಅದೇ ಶೂನ್ಯ-ಸಂಪಾದನೆಯ ಮನೋಭಾವದಲ್ಲಿ ನಾವು ಸಿಲುಕಿಕೊಂಡಿದ್ದೇವೆ. ಅದನ್ನು ಬದಲಾಯಿಸುವುದು ಅತ್ಯಗತ್ಯ ಎಂದಿದ್ದಾರೆ. ದೇಶಗಳು ಬೇರೆ ಪ್ರದೇಶಗಳು ಅಥವಾ ಸಂಪನ್ಮೂಲಕ್ಕಾಗಿ ಜಗಳವಾಡುವುದರಲ್ಲಿ ನಾವದನ್ನು ಕಾಣುತ್ತಿದ್ದೇವೆ. ಅಗತ್ಯ ವಸ್ತುಗಳ ಪೂರೈಕೆಗಳ ಶಸ್ತ್ರೀಕರಣದಲ್ಲಿ ಅದು ಕಾಣುತ್ತದೆ. ಬಿಲಿಯಗಟ್ಟಲೆ ಜನರು ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವಾಗ ಲಸಿಕೆಗಳ ಕಳ್ಳದಾಸ್ತಾನು ಮಾಡಿದ್ದನ್ನು ಗಮನಿಸಿದ್ದೇವೆ ಎಂದವರು ವಿವರಿಸಿದರು.
ಸಹಮತಕ್ಕೆ ಯತ್ನ
ವ್ಯಾಪಕ ಸಮಾಲೋಚನೆಗಳ ಮೂಲಕ ಪ್ರಮುಖ ಜಾಗತಿಕ ವಿಷಯಗಳಲ್ಲಿ ಸಹಮತ ಏರ್ಪಡಿಸಲು ಭಾರತ ಪ್ರಯತ್ನಿಸಲಿದೆ ಎಂದು ಜಿ-20 ಅಧ್ಯಕ್ಷತೆ ವಹಿಸಿಕೊಂಡಿರುವ ಸಂದರ್ಭದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಜಿ-20 ಗುಂಪಿನ ಅಧ್ಯಕ್ಷತೆ ವಹಿಸಿಕೊಂಡ ನಂತರದಲ್ಲಿನ ಪ್ರಥಮ ಕಾರ್ಯಕ್ರಮವಾದ ಜಿ-20 ಯುನಿವರ್ಸಿಟಿ ಕನೆಕ್ಟ್ ಉಪಕ್ರಮದಲ್ಲಿ ಮಾತನಾಡಿದ ಜೈಶಂಕರ್, ಧ್ರುವೀಕರಣ ಮತ್ತು ಅಭಿವೃದ್ಧಿ ಹೊಂದಿದ ದೇಶಗಳ ಸಂಘರ್ಷದ ಬಿಸಿಯನ್ನು ಅನುಭವಿಸುತ್ತಿರುವ ಜಗತ್ತಿನ ದಕ್ಷಿಣ ಭಾಗದ ದನಿಯಾಗಿ ಹೊರಹೊಮ್ಮಲು ಭಾರತ ಪ್ರಯತ್ನಿಸಲಿದೆ ಎಂದು ಸಚಿವರು ಹೇಳಿದರು. ಪ್ರಜಾಪ್ರಭುತ್ವದ ತಾಯಿಯಾಗಿ ಭಾರತದ ಜಿ-20 ಅಧ್ಯಕ್ಷತೆಯು ಸಮಾಲೋಚನೆ, ಸಹಯೋಗದ್ದು ಮತ್ತು ನಿರ್ಣಾಯಕವಾಗಿರುತ್ತದೆ ಎಂದು ಸಚಿವ ಎಸ್. ಜೈಶಂಕರ್ ಹೇಳಿದರು.
ಮುಖ್ಯಾಂಶಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
