ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್ ಅವರು ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ನಿಯಮಗಳ ಪ್ರಕಾರ ಈ ಅವಿಶ್ವಾಸ ನಿರ್ಣಯಕ್ಕೆ ಅವಕಾಶ ಕಲ್ಪಿಸಲು 50 ಸಂಸತ್ ಸದಸ್ಯರ ಬೆಂಬಲದ ಅಗತ್ಯವಿರುತ್ತದೆ. ಇಷ್ಟೊಂದು ಸಂಖ್ಯೆಯ ಸಂಸತ್ ಸದಸ್ಯರ ಎಣಿಕೆ ಮಾಡಿದ ನಂತರ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಬುಧವಾರ ಅವಿಶ್ವಾಸ ನಿರ್ಣಯ ಮಂಡನೆಗೆ ಅನುಮತಿ ನೀಡಿದ್ದಾರೆ. ಇಂಡಿಯಾ ಮೈತ್ರಿಕೂಟ ಹಾಗೂ ಭಾರತ ರಾಷ್ಟ್ರ ಸಮಿತಿಯ ಘಟಕ ಪಕ್ಷ ಈ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿವೆ.
ಭಾರತದ ಸಚಿವ ಸಂಪುಟ ಸ್ವರೂಪದ ಸರ್ಕಾರದಲ್ಲಿ ಮಂತ್ರಿ ಮಂಡಲವು ಲೋಕಸಭೆಗೆ ಸಾಮೂಹಿಕವಾಗಿ ಜವಾಬ್ದಾರವಾಗಿರುತ್ತದೆ. ಈ ಮಂತ್ರಿಮಂಡಲವು ಸದನದ ವಿಶ್ವಾಸವನ್ನು ಹೊಂದಿದೆಯೇ ಎಂಬುದನ್ನು ಪರೀಕ್ಷಿಸಲು ಲೋಕಸಭೆಯ ನಿಯಮಗಳಲ್ಲಿ ಅವಿಶ್ವಾಸ ನಿರ್ಣಯದ ಕಾರ್ಯವಿಧಾನವನ್ನು ಅಳವಡಿಸಲಾಗಿದೆ.
ಇಂಡಿಯಾ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದೇಕೆ?: ಮಣಿಪುರದಲ್ಲಿನ ಹಿಂಸಾತ್ಮಕ ಪರಿಸ್ಥಿತಿಯ ಕುರಿತಂತೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕೆಂದು ಮುಂಗಾರು ಅಧಿವೇಶನದ ಆರಂಭದಿಂದಲೂ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಹಲವು ದಿನಗಳ ಪ್ರತಿಭಟನೆಗಳು ಮತ್ತು ಸಭಾತ್ಯಾಗಗಳ ನಂತರ ಪ್ರತಿಪಕ್ಷಗಳು ಬುಧವಾರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಎರಡು ಪ್ರತ್ಯೇಕ ನೋಟಿಸ್​ಗಳನ್ನು ನೀಡಿದವು. ಈ ಮೂಲಕ ಪ್ರಧಾನಿ ಚರ್ಚೆಯಲ್ಲಿ ಪಾಲ್ಗೊಂಡು ಉತ್ತರ ನೀಡುವ ಅನಿವಾರ್ಯತೆ ಸೃಷ್ಟಿಸಲು ಮುಂದಾಗಿವೆ.
ಭಾರತದ ಸಂವಿಧಾನದ ಪ್ರಕಾರ ಪ್ರಧಾನಮಂತ್ರಿ ಮಂತ್ರಿಮಂಡಲದ ಮುಖ್ಯಸ್ಥರಾಗಿರುತ್ತಾರೆ. ಆದ್ದರಿಂದ, ಲೋಕಸಭೆಯಲ್ಲಿ ಸಂಸದರು ಅವಿಶ್ವಾಸ ನಿರ್ಣಯದ ಬಗ್ಗೆ ರ್ಚಚಿಸಿದಾಗ ಪ್ರಧಾನಿಮಂತ್ರಿ ಈ ಚರ್ಚೆಗೆ ಉತ್ತರ ನೀಡಬೇಕಾಗುತ್ತದೆ. ಚರ್ಚೆಯ ಸಮಯದಲ್ಲಿ ವಿರೋಧ ಪಕ್ಷಗಳು ಮಾಡುವ ಆರೋಪಗಳಿಗೆ ಪ್ರಧಾನಿ ಉತ್ತರಿಸುವ ಅಗತ್ಯತೆಯು ಅವಿಶ್ವಾಸ ನಿರ್ಣಯ ಮಂಡಿಸುವ ಈ ಕ್ರಮದಿಂದಾಗಿ ಸೃಷ್ಟಿಯಾಗುತ್ತದೆ.
ಏಳು ಚರ್ಚೆಗಳಲ್ಲಿ ಮೋದಿ ಭಾಗಿ: 2019ರಲ್ಲಿ ಆರಂಭಗೊಂಡ ಪ್ರಸಕ್ತ ಲೋಕಸಭೆಯ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ಒಟ್ಟು ಏಳು ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಂಸತ್ತಿನ ದಾಖಲೆಗಳು ತೋರಿಸುತ್ತವೆ. ಈ ಏಳು ಚರ್ಚೆಗಳ ಪೈಕಿ ಐದು, ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತಾ ನಿರ್ಣಯದ ಮೇಲಿನ ವಾರ್ಷಿಕ ಚರ್ಚೆಯಲ್ಲಿ ಪ್ರತಿಕ್ರಿಯೆ ನೀಡಿದವುಗಳಾಗಿವೆ. ಇನ್ನಿತರ ಎರಡು ಸಂದರ್ಭಗಳೆಂದರೆ, ಫೆಬ್ರವರಿ 2020ರಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಥಾಪನೆಯ ಬಗ್ಗೆ ಸದನಕ್ಕೆ ತಿಳಿಸಲು ಮತ್ತು 2019ರಲ್ಲಿ ಹೊಸದಾಗಿ ಚುನಾಯಿತರಾದ ಸ್ಪೀಕರ್ ಓಂ ಬಿರ್ಲಾ ಅವರನ್ನು ಅಭಿನಂದಿಸಿ ಮಾಡಿದ ಭಾಷಣಗಳಾಗಿವೆ.
ಮಣಿಪುರದ ಕುರಿತು ಪ್ರಧಾನಿಯವರು ಸದನದಲ್ಲಿ ಮಾತನಾಡುವ ಬದಲು ಸಂಸತ್ತಿನ ಹೊರಗೆ ಮಾತನಾಡಲು ನಿರ್ಧರಿಸಿದ್ದಾರೆ ಎಂದು ಪ್ರತಿಪಕ್ಷಗಳು ಟೀಕಿಸಿವೆ. ಆದರೆ, ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಈ ಹಿಂದೆ ಪ್ರಧಾನಿಗಳು ಮತ್ತು ಸಚಿವರು ಕೂಡ ಸಂಸತ್ತಿನ ಹೊರಗೆ ನೀತಿ ಮತ್ತು ಇತರ ಘೊಷಣೆಗಳನ್ನು ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಅಲ್ಲದೆ, ಇಂತಹ ಘೊಷಣೆಗಳನ್ನು ಮಾಡುವುದರಿಂದ ಸಂಸದೀಯ ವಿಶೇಷಾಧಿಕಾರದ ಯಾವುದೇ ಉಲ್ಲಂಘನೆಯಾಗುವುದಿಲ್ಲ ಎಂದು ಲೋಕಸಭೆಯ ಅನೇಕ ಸ್ಪೀಕರ್​ಗಳು ತೀರ್ಪಗಳನ್ನು ಕೂಡ ನೀಡಿದ್ದಾರೆ.
ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಇಂತಿಷ್ಟೇ ಸಮಯ ಎಂದು ನಿಗದಿಯಾಗುವುದಿಲ್ಲ. ಈ ಚರ್ಚೆಯು ಹಲವು ಗಂಟೆಗಳ ಕಾಲ, ಹಲವು ದಿನಗಳವರೆಗೆ ನಡೆಯಬಹುದಾಗಿದೆ. 1992ರಲ್ಲಿ ಪ್ರಧಾನ ಮಂತ್ರಿ ಪಿ.ವಿ. ನರಸಿಂಹ ರಾವ್ ಅವರ ಸರ್ಕಾರವು ತನ್ನ ಮೊದಲ ಅವಿಶ್ವಾಸ ನಿರ್ಣಯವನ್ನು ಎದುರಿಸಿದಾಗ ಆರು ದಿನಗಳ ಕಾಲ ಚರ್ಚೆ ನಡೆದಿತ್ತು. ಅವಿಶ್ವಾಸ ನಿರ್ಣಯ ಕುರಿತಂತೆ ಅತಿಹೆಚ್ಚು ಸಮಯದ ಚರ್ಚೆ ನಡೆದ ದಾಖಲೆ ಇದರದ್ದಾಗಿದೆ. 2018ರಲ್ಲಿನ ಚರ್ಚೆಯು ಅಂದಾಜು 12 ಗಂಟೆಗಳಾಗಿತ್ತು. 2003ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿರುದ್ಧ ಸೋನಿಯಾ ಗಾಂಧಿಯವರು ಮಂಡಿಸಿದ ಅವಿಶ್ವಾಸ ನಿರ್ಣಯದ ಪ್ರಸ್ತಾವನೆಯು ಎರಡು ದಿನಗಳಲ್ಲಿ 21 ಗಂಟೆಗಳನ್ನು ತೆಗೆದುಕೊಂಡಿತ್ತು.
ಪ್ರತಿಪಕ್ಷಗಳು ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಅವಿಶ್ವಾಸ ನಿರ್ಣಯದ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸಿವೆ. 1963ರಲ್ಲಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಸರ್ಕಾರವು ಸ್ಪಷ್ಟ ಬಹುಮತವನ್ನು ಹೊಂದಿದ್ದರೂ ಜೆ.ಬಿ. ಕೃಪಲಾನಿ ಅವರು ಲೋಕಸಭೆಯಲ್ಲಿ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಆಚಾರ್ಯ ಕೃಪಲಾನಿ ಅವರು ತಮ್ಮ ಭಾಷಣದಲ್ಲಿ, ‘ನನ್ನ ಅನೇಕ ಹಳೆಯ ಸ್ನೇಹಿತರೊಂದಿಗೆ ಅಂದಾಜು 30 ವರ್ಷಗಳ ಕಾಲ ನಡೆಸುತ್ತಿರುವ ಸರ್ಕಾರದ ವಿರುದ್ಧ ಈ ನಿರ್ಣಯವನ್ನು ಮಂಡಿಸುವುದು ನನಗೆ ತೀವ್ರ ವಿಷಾದದ ವಿಷಯವಾಗಿದೆ. ಆದರೆ, ಕರ್ತವ್ಯದ ಕರೆ ಮತ್ತು ಆತ್ಮಸಾಕ್ಷಿಯ ಕರೆ ಅತ್ಯಂತ ಮಹತ್ವದ್ದಾಗಿದೆ.
ಇಲ್ಲಿ ಯಾವುದೇ ಭಾವನೆಯ ಪ್ರಶ್ನೆಯೇ ಇಲ್ಲ’ ಎಂದು ಹೇಳಿದ್ದರು. ನೆಹರೂ ಅವರು ತಮ್ಮ ಉತ್ತರದಲ್ಲಿ, ‘ಸರ್ಕಾರಗಳು ಸೋಲುವ ಸಾಧ್ಯತೆ ಇಲ್ಲದಿದ್ದರೂ ಕಾಲಕಾಲಕ್ಕೆ ಪರೀಕ್ಷೆಗೆ ಒಳಗಾಗುವುದು ಒಳ್ಳೆಯದು’ ಎಂದು ಹೇಳಿದ್ದರು. ‘ಅವಿಶ್ವಾಸ ನಿರ್ಣಯವು ಆಡಳಿತಾರೂಢ ಪಕ್ಷವನ್ನು ತೆಗೆದುಹಾಕುವ ಮತ್ತು ಅದರ ಸ್ಥಾನವನ್ನು ಪಡೆಯುವ ಗುರಿಯನ್ನು ಹೊಂದಿರಬೇಕು. ಆದರೆ, ಇಂತಹ ಯಾವುದೇ ನಿರೀಕ್ಷೆ ಅಥವಾ ಭರವಸೆ ಇರಲಿಲ್ಲ ಎಂಬುದು ಪ್ರಸ್ತುತ ನಿದರ್ಶನದಲ್ಲಿ ಸ್ಪಷ್ಟವಾಗಿದೆ. ಆದ್ದರಿಂದ ಈ ಚರ್ಚೆಯು ಹಲವು ವಿಧಗಳಲ್ಲಿ ಆಸಕ್ತಿದಾಯಕವಾಗಿದ್ದರೂ, ಸ್ವಲ್ಪ ಅವಾಸ್ತವದಿಂದ ಕೂಡಿದ್ದರೂ ಲಾಭದಾಯಕವೆಂದು ನಾನು ಭಾವಿಸುತ್ತೇನೆ. ವೈಯಕ್ತಿಕವಾಗಿ, ನಾನು ಈ ನಿರ್ಣಯ ಮತ್ತು ಈ ಚರ್ಚೆಯನ್ನು ಸ್ವಾಗತಿಸುತ್ತೇನೆ. ಈ ರೀತಿಯ ನಿಯತಕಾಲಿಕ ಪರೀಕ್ಷೆಗಳನ್ನು ನಡೆಸಿದರೆ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ’ ಎಂದೂ ನೆಹರು ಆಗ ಹೇಳಿದ್ದರು.
ಸರ್ಕಾರವನ್ನು ಲೋಕಸಭೆಗೆ ಹೊಣೆಗಾರನನ್ನಾಗಿ ಮಾಡುವ ಈ ತತ್ವ ಆಧಾರಿತವಾಗಿಯೇ 1966 ಮತ್ತು 1975ರ ನಡುವೆ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಅವರ ವಿರುದ್ಧ 12 ಅವಿಶ್ವಾಸ ನಿರ್ಣಯಗಳನ್ನು ಪ್ರತಿಪಕ್ಷಗಳು ಮಂಡಿಸಿದ್ದವು ಎಂಬುದು ಗಮನಾರ್ಹ ಸಂಗತಿಯಾಗಿದೆ. ಅವಿಶ್ವಾಸ ನಿರ್ಣಯದ ಮೇಲೆ ನಡೆಯುವ ಚರ್ಚೆಗಳು ಸಾಮಾನ್ಯವಾಗಿ ವ್ಯಾಪಕವಾಗಿರುತ್ತವೆ. ಈ ಚರ್ಚೆಯಲ್ಲಿ ಭಾಗವಹಿಸುವ ಸಂಸದರು ರಾಷ್ಟ್ರೀಯ ಮತ್ತು ರಾಜ್ಯಗಳ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾರೆ. ಉದಾಹರಣೆಗೆ, ತೆಲುಗು ದೇಶಂ ಪಕ್ಷವು ಮಂಡಿಸಿದ್ದ 2018ರ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಆ ಪಕ್ಷದ ಸಂಸದರು ಆಂಧ್ರಪ್ರದೇಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದರು. ಈ ಚರ್ಚೆಯಲ್ಲಿ ಭಾಗವಹಿಸಿದ್ದ ಇತರ ಪಕ್ಷಗಳ ಸಂಸದರು ಕೂಡ ತಾವು ಮುಖ್ಯವೆಂದು ಪರಿಗಣಿಸಿದ ವಿಷಯಗಳನ್ನು ಪ್ರಸ್ತಾಪಿಸಿದರು. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಭಾಷಣವನ್ನು ಮುಗಿಸಿದ ನಂತರ ಪ್ರಧಾನಿ ಮೋದಿ ಅವರನ್ನು ಅಪ್ಪಿಕೊಂಡದ್ದು ಕೂಡ ಚರ್ಚೆಯಾಗಿತ್ತು.
ಭಾರತದ ಸಂಸತ್ತಿನಲ್ಲಿ ಇದುವರೆಗೆ 27 ಅವಿಶ್ವಾಸ ನಿರ್ಣಯಗಳನ್ನು ಮಂಡಿಸಲಾಗಿದೆ. 2018ರಲ್ಲಿ ಮೋದಿ ಸರ್ಕಾರದ ವಿರುದ್ಧ ಮೊದಲ ಬಾರಿಗೆ ಮಂಡಿಸಲಾದ ಅವಿಶ್ವಾಸ ನಿರ್ಣಯವೂ ಇದರಲ್ಲಿ ಸೇರಿದೆ. ಆದರೆ, ಇದುವರೆಗೆ ಯಾವುದೇ ಅವಿಶ್ವಾಸ ನಿರ್ಣಯಗಳಿಗೆ ಯಶಸ್ಸು ದೊರೆತಿಲ್ಲ. ಪ್ರಸ್ತುತ ಸರ್ಕಾರವು ಲೋಕಸಭೆಯಲ್ಲಿ ಹೆಚ್ಚಿನ ಬಹುಮತವನ್ನು ಹೊಂದಿರುವುದರಿಂದ ಈಗ ಮಂಡಿಸಲಾಗಿರುವ ಅವಿಶ್ವಾಸ ನಿರ್ಣಯವು ಸೋಲುವ ಸಾಧ್ಯತೆ ನಿಚ್ಚಳವಾಗಿದೆ. 1979ರಲ್ಲಿ ಪ್ರಧಾನಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿ ಅವರು ಬಹುಪಾಲು ಸಂಸದರ ಬೆಂಬಲವನ್ನು ಹೊಂದಿಲ್ಲ ಎಂದು ಅರಿತುಕೊಂಡು, ಸದನವು ಈ ಅವಿಶ್ವಾಸ ನಿರ್ಣಯದ ಮೇಲೆ ಮತ ಚಲಾಯಿಸುವ ಮುಂಚಿತವಾಗಿಯೇ ರಾಜೀನಾಮೆ ನೀಡಿದ ವಿಶಿಷ್ಟ ಸಂದರ್ಭವೂ ಇತಿಹಾಸದಲ್ಲಿ ದಾಖಲಾಗಿದೆ.
ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಅವಕಾಶ ನೀಡಿದ ನಂತರ, ಚರ್ಚೆಯು ಪ್ರಾರಂಭವಾಗುವ ದಿನಾಂಕವನ್ನು ಸ್ಪೀಕರ್ ನಿಗದಿಪಡಿಸಬೇಕು ಎಂದು ಲೋಕಸಭೆಯ ಕಾರ್ಯವಿಧಾನದ ನಿಯಮಗಳು ಹೇಳುತ್ತವೆ. ಈ ದಿನಾಂಕವು ಸದನದಲ್ಲಿ ಪ್ರಸ್ತಾಪವನ್ನು ಮಂಡನೆಗೆ ಅವಕಾಶ ನೀಡಿದ ದಿನಾಂಕದಿಂದ 10 ದಿನಗಳ ಒಳಗೆ ಇರಬೇಕು. 1987ರಿಂದ ಇಲ್ಲಿಯವರೆಗೆ 6 ಬಾರಿ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ನಾಲ್ಕು ಸಂದರ್ಭಗಳಲ್ಲಿ, ಪ್ರಸ್ತಾಪವನ್ನು ಮಂಡನೆಗೆ ಅಂಗೀಕರಿಸಿದ ದಿನಾಂಕದಿಂದಲೇ ಚರ್ಚೆ ಪ್ರಾರಂಭ ವಾಗಿತ್ತು. 2018ರ ಜುಲೈ 18ರಂದು ಅವಿಶ್ವಾಸ ನಿರ್ಣಯ ಮಂಡಿಸಲು ಅಂಗೀಕಾರ ನೀಡಿದ ನಂತರ, ಜುಲೈ 20ರಂದು ಚರ್ಚೆ ಪ್ರಾರಂಭಿಸಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
