ದೇಶದ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ‘ರಾಕೆಟ್ ಪಡೆ’ (ರಾಕೆಟ್ ಫೋರ್ಸ್ ಅಥವಾ ಕ್ಷಿಪಣಿ ಪಡೆ) ರಚಿಸುವುದು ಅಗತ್ಯ ಎಂದು ಭಾರತದ ಮೂರೂ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಪ್ರತಿಪಾದಿಸಿದ್ದಾರೆ. ಭವಿಷ್ಯದ ಸಮರಗಳನ್ನು ನಿಭಾಯಿಸಲು ಇಂಥದ್ದೊಂದು ಪಡೆ ಅಗತ್ಯ ಎಂಬುದು ಅವರ ಅಭಿಪ್ರಾಯವಾಗಿದೆ. ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಾ ಜಗಳಕ್ಕೆ ಬರುವ ನೆರೆಯ ಪಾಕಿಸ್ತಾನ ಮತ್ತು ಚೀನಾಗಳ ಆಟಾಟೋಪಗಳನ್ನು ಸಮರ್ಥವಾಗಿ ಎದುರಿಸಲು ಈ ರೀತಿಯ ಹೊಸ ಪಡೆ ಮಹತ್ವದ ಪಾತ್ರ ನಿರ್ವಹಿಸಬಹುದು ಎಂದು ನಿರೀಕ್ಷಿಸಲಾಗಿದೆ. ಆಕ್ರಮಣಕಾರಿ ಚೀನಾ ಹಾಗೂ ಉಗ್ರರಿಗೆ ನೆರವು ನೀಡುವ ಪಾಕಿಸ್ತಾನವನ್ನು ಎದುರಿಸಲು ರಾಕೆಟ್ ಪಡೆ ರಚಿಸಲು ಭಾರತ ಚಿಂತಿಸುತ್ತಿದೆ ಎಂದು ರಾವತ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚೀನಾ ಮತ್ತು ಪಾಕಿಸ್ತಾನದ ಆಕ್ರಮಣಗಳನ್ನು ಎದುರಿಸಲು ತಂತ್ರಜ್ಞಾನವನ್ನು ಬಳಸುವುದು ಅಗತ್ಯ ಎಂದಿದದ್ದಾರೆ.
ಏನೇನಿವೆ?:ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿದ್ದ ಚೀನಾ ಸೇನೆಯ ಎರಡನೇ ಆರ್ಟಿಲರಿ ಪಡೆಯನ್ನು 2015ರಲ್ಲಿ ರಾಕೆಟ್ ಪಡೆ ಎಂದು ಮರುನಾಮಕರಣ ಮಾಡಿ ಮೂರು ಸಶಸ್ತ್ರ ಪಡೆಗಳ ಜೊತೆ ಪಿಎಲ್​ಎ ರಾಕೆಟ್ ಫೋರ್ಸ್ ಎಂಬ ಹೊಸ ಮಿಲಿಟರಿ ಪಡೆಯನ್ನೇ ಸೃಷ್ಟಿಸಲಾಗಿದೆ. ಚೀನಾ ಬಳಿ 2,500 ಬ್ಯಾಲಿಸ್ಟಿಕ್ ಕ್ಷಿಪಣಿಗಳಿವೆ. ಅದು ಕ್ರೂಯಿಸ್ ಕ್ಷಿಪಣಿಗಿಂತ ಭಿನ್ನವಾಗಿದ್ದು ದೂರವ್ಯಾಪ್ತಿ ಸಾಮರ್ಥ್ಯ ಹೊಂದಿದೆ. ನ್ಯೂಕ್ಲಿಯರ್ ಕೌಂಟರ್-ಅಟ್ಯಾಕ್ ಮತ್ತು ಸಾಂಪ್ರದಾಯಿಕ ಕ್ಷಿಪಣಿ ದಾಳಿ ಕಾರ್ಯಾಚರಣೆಯ ಎರಡು ಪ್ರಮುಖ ಹೊಣೆಗಳನ್ನು ನಿಭಾಯಿಸುತ್ತದೆ. ಇದು ವೈರಿ ಪಡೆಯ ಶಕ್ತಿಯನ್ನು ಗಣನೀಯವಾಗಿ ಕುಂದಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ, ಇದೇ ರೀತಿಯ ಪೂರ್ಣ ಪ್ರಮಾಣದ ಕ್ಷಿಪಣಿ ಪಡೆಯೊಂದು ಇದ್ದರೆ ಉತ್ತಮ ಎಂಬ ಚಿಂತನೆ ಭಾರತದಲ್ಲಿ ಚಿಗುರೊಡೆದಿದೆ. ಸಿಡಿಎಸ್ ಬಿಪಿನ್ ರಾವತ್ ಆ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದಾರೆ.
ತಜ್ಞರ ಅನಿಸಿಕೆ ಏನು?:ಭವಿಷ್ಯದ ರಣರಂಗ ಬಹುತೇಕವಾಗಿ ಸಂಪರ್ಕರಹಿತವಾಗಿರುತ್ತದೆ. ಮಾನವರಹಿತ ಯುದ್ಧ ತಂತ್ರ, ವಿಶೇಷ ಸ್ಟಾಂಡ್​ಆಫ್ ಅಸ್ತ್ರಗಳು ಮತ್ತು ಸೈಬರ್ ಹಾಗೂ ರಹಸ್ಯ ಕಾರ್ಯಾಚರಣೆಗಳು ಟ್ಯಾಂಕ್ ವರ್ಸಸ್ ಟ್ಯಾಂಕ್ ಕಾದಾಟ ನಡೆಯುತ್ತವೆ ಎಂದು ಹೇಳುತ್ತಾರೆ ಬ್ರಿಗೇಡಿಯರ್ ಬಿಮಲ್ ಮೋಂಗಾ. ‘ಸಿಎಲ್​ಎಡಬ್ಲ್ಯುಎಸ್’ ಪತ್ರಿಕೆಯ ಲೇಖನದಲ್ಲಿ ಅವರು ಈ ಅಭಿಪ್ರಾಯ ದಾಖಲಿಸಿದ್ದಾರೆ. ಎಲ್ಲ ಪ್ರಮುಖ ದೇಶಗಳು ತಮ್ಮ ಬಾಹ್ಯಾಕಾಶ ಆಸ್ತಿಗಳನ್ನು ಕ್ರೋಡೀಕರಿಸಲು, ಸೈಬರ್ ಡೊಮೇಯ್್ನ ಸಾಮರ್ಥ್ಯವನ್ನು ಇನ್ನಷ್ಟು ಚುರುಕುಗೊಳಿಸಲು, ವಿಶೇಷ ಪಡೆಗಳಿಗೆ ಹೊಸ ಸ್ವರೂಪ ನೀಡಲು ಹಾಗೂ ಹೈಬ್ರಿಡ್ ಸಮರ ಕಲೆ ತಂತ್ರಗಳನ್ನು ಆಧುನೀಕರಿಸಲು ನವೀನ ಆಸ್ತಿ ಹಾಗೂ ಸಂಘಟನೆಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ. ಕ್ಷಿಪಣಿ ದಾಸ್ತಾನನ್ನು ಹೆಚ್ಚಿಸುವತ್ತ ಮತ್ತು ಅವುಗಳನ್ನು ಬಳಸುವ ಸಿದ್ಧಾಂತದ ಮರುವ್ಯಾಖ್ಯಾನಕ್ಕೆ ಕೂಡ ಅವುಗಳು ಅಷ್ಟೇ ಮಹತ್ವ ನೀಡುತ್ತಿವೆ ಎಂದು ಮೋಂಗಾ ಹೇಳಿದ್ದಾರೆ.
ಕ್ಷಿಪಣಿಗಳ ಪಾತ್ರ:ಭವಿಷ್ಯದ ಸಮರ ತಂತ್ರವನ್ನು ಅನುಷ್ಠಾನಗೊಳಿಸುವಲ್ಲಿ ಕ್ಷಿಪಣಿಗಳು ಮಾತ್ರವೇ ಸಮರ್ಥವಾದ ಅಸ್ತ್ರವಾಗಿವೆ. ದೂರವ್ಯಾಪ್ತಿಯ, ಮಾರಕ ಕ್ಷಿಪಣಿಗಳನ್ನು ಬಹುಕಾಲದಿಂದ ಅದರ ಆಕ್ರಮಣ ತಡೆ ಸಾಮರ್ಥ್ಯಕ್ಕಾಗಿಯಷ್ಟೇ ಪರಿಗಣಿಸಲಾಗುತ್ತಿದೆ. ಶತ್ರುಗಳ ಮೇಲೆ ಆಕ್ರಮಣ ಮಾಡುವುದಕ್ಕೆ ಅದರ ಉಪಯೋಗವನ್ನು ಹೆಚ್ಚಾಗಿ ಪರಿಗಣಿಸಲಾಗುತ್ತಿಲ್ಲ. ಆ ಧೋರಣೆ ಬದಲಾಯಿಸಿ ಕ್ಷಿಪಣಿಗಳನ್ನೇ ಪ್ರಮುಖ ಅಸ್ತ್ರವಾಗಿ ಬಳಸುವತ್ತ ಚಿಂತನೆ ಹೆಚ್ಚಾಗುತ್ತಿದೆ.
ಮಹತ್ವ ಏನು?:ಸಾಮಾನ್ಯವಾಗಿ ಇದುವರೆಗಿನ ಯುದ್ಧ ಅಥವಾ ಮಿಲಿಟರಿ ಕಾರ್ಯಾಚರಣೆಯೆಂದರೆ ಸೈನಿಕರು ಸಜ್ಜಾಗಿ ವೈರಿ ಪಡೆಗಳ ಮೇಲೆ ಆಕ್ರಮಣ ಮಾಡುವುದು. ಭಾರಿ ಸಂಖ್ಯೆಯಲ್ಲಿ ಪ್ರಾಣ ಹಾನಿ ಉಂಟುಮಾಡುವುದು ಎಂಬ ಕಲ್ಪನೆ ಮೂಡುತ್ತದೆ. ಆದರೆ ಅವೆಲ್ಲ ಹಳೇ ಕಾಲದ ಸಮರ ಧೋರಣೆ ಎಂಬ ಭಾವನೆ ಈಗೀಗ ಬಲವಾಗುತ್ತಿದೆ. ಭೂ ಪಡೆಗಳ ದಂಡನ್ನು ನಿಯೋಜಿಸದೆಯೇ ವೈರಿ ದೇಶದ ವ್ಯೂಹಾತ್ಮಕ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ತ್ವರಿತ ಹಾಗೂ ನಿರ್ಣಾಯಕವಾಗಿ ನಾಶ ಮಾಡುವ ಮೇಲೆ ಮುಂದಿನ ಯುದ್ಧಗಳು ಗಮನ ಕೇಂದ್ರೀಕರಿಸಲಿವೆ.
ಚೀನಾ ವಿರೋಧ:ಭಾರತ ಇಂಟರ್​ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-5 ಪರೀಕ್ಷೆ ನಡೆಸುವುದಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿದೆ. 1988ರ ಅಣ್ವಸ್ತ್ರ ಪರೀಕ್ಷೆಯ ನಂತರ ಭಾರತದ ಕ್ಷಿಪಣಿ ಕಾರ್ಯಕ್ರಮವನ್ನು ಪ್ರಶ್ನಿಸಿ ವಿಶ್ವ ಸಂಸ್ಥೆ ಭದ್ರತಾ ಮಂಡಳಿ (ಯುಎನ್​ಎಸ್​ಸಿ) ಅಂಗೀಕರಿಸಿದ್ದ 1172ನೇ ಗೊತ್ತುವಳಿಯತ್ತ ಚೀನಾ ಗಮನ ಸೆಳೆದಿದೆ. ಅಣ್ವಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯದ ಕ್ಷಿಪಣಿಗಳನ್ನು ಭಾರತ ಅಭಿವೃದ್ಧಿಪಡಿಸು ವುದಾದರೆ 1172ನೇ ಗೊತ್ತುವಳಿ ವಿಧಿಸಿರುವ ನಿಯಮಗಳನ್ನು ಗಮನಿಸುವುದು ಒಳಿತು ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಝಾವೋ ಲಿಜಿಯಾನ್ ಗುರುವಾರ ಹೇಳಿದ್ದಾರೆ. ಚೀನಾದ ಹಲವು ನಗರಗಳೂ ಒಳಗೊಂಡ 5,000 ಕಿ.ಮೀ. ವ್ಯಾಪ್ತಿಯ ಕ್ಷಿಪಣಿಯನ್ನು ಭಾರತ ಪರೀಕ್ಷಿಸಲಿದೆ ಎಂದು ಚೀನಾ ಮಾಧ್ಯಮದಲ್ಲಿ ವ್ಯಾಪಕವಾಗಿ ವರದಿಗಳು ಪ್ರಕಟವಾಗಿವೆ.
ಚೀನಾದಲ್ಲಿ ರಾಕೆಟ್ ಫೋರ್ಸ್:ಚೀನಾ ಈಗಾಗಲೇ ಒಂದು ರಾಕೆಟ್ ಪಡೆ ಹೊಂದಿದೆ. ಈಗ ಅದೇ ರೀತಿಯ ಪಡೆಯನ್ನು ನಿರ್ವಿುಸುವ ಸಾಧ್ಯತೆಯನ್ನು ಭಾರತ ಪರಿಶೀಲಿಸುತ್ತಿದೆ.
ಚೀನಾ ಮೇಲುಗೈ:ಸಮರಾಂಗಣದಲ್ಲಿ ರಾಕೆಟ್, ಅಂದರೆ ಕ್ಷಿಪಣಿ ಬಳಕೆಯಲ್ಲಿ ಅಮೆರಿಕ ಮತ್ತು ರಷ್ಯಾವನ್ನು ಹಿಂದಿಕ್ಕಿ ಚೀನಾ ಮುನ್ನಡೆ ಸಾಧಿಸಿದೆ. ದಕ್ಷತೆಯಿಂದ ಹಾಗೂ ಗುಪ್ತವಾಗಿ ಅದು ತನ್ನ ಕ್ಷಿಪಣಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಕ್ಷಿಪಣಿ ಸಾಮರ್ಥ್ಯದ ತಂತ್ರಗಾರಿಕೆ ಕಲಿಯಲು ಬೃಹತ್ ಶಕ್ತಿಗಳು ಚೀನಾ ಸೇನೆಯ ರಾಕೆಟ್ ಪಡೆಯತ್ತ (ಪಿಎಲ್​ಎಆರ್​ಎಫ್) ನೋಡುತ್ತಿವೆ.
ಸಿದ್ಧತೆ ಅಗತ್ಯ:ನೆರೆ ದೇಶದ ಸಂಭಾವ್ಯ ಆಕ್ರಮಣಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ರಾವತ್, ‘ನೇರವಾಗಿ ಆಕ್ರಮಣ ನಡೆಯುತ್ತದೋ ಅಥವಾ ತಂತ್ರಜ್ಞಾನದ ಬಳಕೆ ಮೂಲಕ ನಡೆಯುತ್ತದೋ ಗೊತ್ತಿಲ್ಲ. ಆದರೆ ಯಾವುದಕ್ಕೂ ನಾವು ಸಿದ್ಧವಾಗಿರಬೇಕು’ ಎಂದರು.
9 ತಿಂಗಳ ಮಗುವನ್ನು ಕೊಂದರು?; ಬಳಿಕ ಕುಟುಂಬದ ನಾಲ್ವರೂ ಆತ್ಮಹತ್ಯೆ ಮಾಡಿಕೊಂಡರು!; ಶವಗಳ ಮಧ್ಯೆ 4 ದಿನ ಕಳೆದಳು ಪುಟ್ಟ ಬಾಲಕಿ..

ಸ್ಟಾರ್ ನಟನ ತೋಟದಲ್ಲಿ ಅಪ್ರಾಪ್ತ ವಯಸ್ಸಿನವಳ ಮೇಲೆ ಅತ್ಯಾಚಾರ; ಪೋಕ್ಸೊ ಕಾಯ್ದೆಯಡಿ ಆರೋಪಿಯ ಬಂಧನ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − six =
Remember me
