1963ರಲ್ಲಿ ತನ್ನ ಮೊದಲ ರಾಕೆಟ್ ಉಡಾಯಿಸಿದಾಗ ಭಾರತವು ವಿಶ್ವದ ಅತ್ಯಂತ ಅತ್ಯಾಧುನಿಕ ತಂತ್ರಜ್ಞಾನ ಅನುಸರಿಸುವ ಬಡ ದೇಶವಾಗಿತ್ತು. ಭೂಮಿಯಿಂದ 124 ಮೈಲುಗಳಷ್ಟು ಎತ್ತರದಲ್ಲಿ ಸಣ್ಣ ಉಪಗ್ರಹ ಸ್ಥಾಪಿಸಲಾಗಿತ್ತು. ಭಾರತವು ಅಮೆರಿಕ ಮತ್ತು ಸೋವಿಯತ್ ಒಕ್ಕೂಟದೊಂದಿಗೆ ಪೈಪೋಟಿ ನಡೆಸುವುದನ್ನು ಊಹಿಸಲೂ ಆಗುತ್ತಿರಲಿಲ್ಲ. ಆದರೆ, ಇಂದಿನ ಬಾಹ್ಯಾಕಾಶ ಓಟದಲ್ಲಿ ಭಾರತವು ಖಚಿತವಾದ ನೆಲೆಯನ್ನು ಕಂಡುಕೊಂಡಿದೆ.
ಭಾರತದ ಟೆಕ್ ಸ್ಟಾರ್ಟ್-ಅಪ್​ಗಳ ಕೇಂದ್ರವಾದ ಹೈದರಾಬಾದ್​ನಿಂದ ದಕ್ಷಿಣಕ್ಕೆ ಒಂದು ತಾಸಿನ ಪ್ರಯಾಣದ ಅಂತರದಲ್ಲಿರುವ ಒಂದು ನಯವಾದ ಮತ್ತು ವಿಶಾಲವಾದ ರಾಕೆಟ್ ಹ್ಯಾಂಗರ್​ನಲ್ಲಿ ಯುವ ಇಂಜಿನಿಯರ್​ಗಳ ಗುಂಪೊಂದು ಸಣ್ಣ, ಪ್ರಾಯೋಗಿಕ ಕ್ರಯೋಜೆನಿಕ್ ಥ್ರಸ್ಟರ್ ಇಂಜಿನ್ ತಯಾರಿಯಲ್ಲಿ ತೊಡಗಿದ್ದರು. ಕಳೆದ ನವೆಂಬರ್​ನಲ್ಲಿ ಭಾರತದ ಮೊದಲ ಖಾಸಗಿ ಉಪಗ್ರಹ ಉಡಾವಣೆಯಲ್ಲಿ ತಮ್ಮದೇ ವಿನ್ಯಾಸದ ರಾಕೆಟ್ ಬಳಸಿರುವ ಕುರಿತ ವಿವರಗಳನ್ನು ಹೆಮ್ಮೆ ಹಾಗೂ ಸಂತಸದಿಂದಲೇ ಹಂಚಿಕೊಂಡರು ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ಇಬ್ಬರು ಸಂಸ್ಥಾಪಕರು. ಈ ಹೊಸ ರಾಕೆಟ್​ಗಳು ಹೆಚ್ಚು ಬೆಲೆಬಾಳುವ ಉಪಗ್ರಹಗಳನ್ನು ಈ ವರ್ಷ ಕಕ್ಷೆಯಲ್ಲಿ ಪ್ರತಿಷ್ಠಾಪಿಸಲು ಸಜ್ಜಾಗಿವೆ.
ಇತ್ತೀಚಿನ ದಿನಗಳಲ್ಲಿ ಏಕಾಏಕಿಯಾಗಿ ಭಾರತವು ಸ್ಥಳೀಯ ಸಂಶೋಧನೆಗೆ ಒತ್ತು ನೀಡುವ ಕನಿಷ್ಠ 140 ನೋಂದಾಯಿತ ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್- ಅಪ್​ಗಳಿಗೆ ನೆಲೆಯಾಗಿದೆ. ಸಾಹಸೋದ್ಯಮ ಬಂಡವಾಳ ಹೂಡಿಕೆದಾರರಿಗೆ ಇದು ಭಾರತದ ಅತ್ಯಂತ ಬೇಡಿಕೆಯ ವಲಯಗಳಲ್ಲಿ ಒಂದಾಗಿ ಪರಿಣಮಿಸಿದೆ. ಕೋವಿಡ್ ಸಾಂಕ್ರಾಮಿಕ ನಂತರದ ದಿನಗಳಲ್ಲಿ ಸ್ಟಾರ್ಟ್-ಅಪ್​ಗಳ ಬೆಳವಣಿಗೆಯು ಸ್ಪೋಟಕವಾಗಿದೆ. ಸ್ಕೈರೂಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾಗಿರುವ 32 ವರ್ಷದ ಪವನ್​ಕುಮಾರ್ ಚಂದನ್ ಅವರು, ಈ ದಶಕದಲ್ಲಿ ಜಾಗತಿಕವಾಗಿ 30 ಸಾವಿರ ಉಪಗ್ರಹಗಳು ಉಡಾವಣೆಯಾಗಬಹುದು ಎಂದು ಅಂದಾಜಿಸುತ್ತಾರೆ.
ವೈಜ್ಞಾನಿಕ ಶಕ್ತಿಯಾಗಿ ಭಾರತದ ಪ್ರಾಮುಖ್ಯತೆಯು ಈಗ ಹೆಚ್ಚಾಗುತ್ತಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಕಳೆದ ತಿಂಗಳು ವಾಷಿಂಗ್ಟನ್​ನಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆತಿಥ್ಯ ವಹಿಸಿದ ಸಂದರ್ಭದಲ್ಲಿ, ಬಾಹ್ಯಾಕಾಶ ಆರ್ಥಿಕತೆಯಲ್ಲಿ ಅಮೆರಿಕ ಮತ್ತು ಭಾರತೀಯ ಖಾಸಗಿ ವಲಯಗಳ ನಡುವೆ ಹೆಚ್ಚಿನ ವಾಣಿಜ್ಯ ಸಹಯೋಗಕ್ಕೆ ಉಭಯ ನಾಯಕರು ಕರೆ ನೀಡಿದ್ದಾರೆ.
ಅಮೆರಿಕ ಹಾಗೂ ಭಾರತ ದೇಶಗಳು ಬಾಹ್ಯಾಕಾಶವನ್ನು ಒಂದು ಪೈಪೋಟಿಯ ಕ್ಷೇತ್ರವಾಗಿ ನೋಡುತ್ತವೆ. ಈ ಕ್ಷೇತ್ರದಲ್ಲಿ ಉಭಯ ದೇಶಗಳಿಗೂ ವಿರೋಧಿಯಾಗಿರುವ ಚೀನಾಕ್ಕೆ ಭಾರತವು ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಬಹುದಾಗಿದೆ ಎಂದೇ ಅಮೆರಿಕ ಪರಿಗಣಿಸುತ್ತದೆ.
ಮೊದಲ ಮೂರು ದಶಕಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಅಮೆರಿಕದ ನಾಸಾದ ಸ್ಥಳೀಯ ಆವೃತ್ತಿಯಂತೆ ಇತ್ತು. ಈ ಸಂಸ್ಥೆಯು ದೇಶಕ್ಕೆ ಹೆಮ್ಮೆ ತಂದಿತು. ಭಾರತದ ಮೊದಲ ಉಪಗ್ರಹದ ಚಿತ್ರವು 1995ರವರೆಗೆ ಭಾರತದ ಎರಡು ರೂಪಾಯಿ ನೋಟನ್ನು ಅಲಂಕರಿಸಿತ್ತು. ನಂತರ ಸ್ವಲ್ಪ ಸಮಯದವರೆಗೆ ಭಾರತವು ತನ್ನ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳತ್ತ ಕಡಿಮೆ ಗಮನ ನೀಡಿತು. ಈ ವೇಳೆಯಲ್ಲಿ ಯುವ ಸಂಶೋಧಕರು ಮಾಹಿತಿ ತಂತ್ರಜ್ಞಾನ ಮತ್ತು ಔಷಧ ಉದ್ಯಮದತ್ತ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದ್ದರು. ಈಗ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಮಾತ್ರವಲ್ಲದೆ, ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ ಮತ್ತು ನಾವೀನ್ಯತೆಯ ಅಭಿವೃದ್ಧಿಶೀಲ ಕೇಂದ್ರವೂ ಆಗಿದೆ.
ಭಾರತದಲ್ಲಿ ಅಂತರಿಕ್ಷ ವ್ಯವಹಾರದ ವೈಖರಿಯೂ ಈಗ ಬದಲಾಗಿದೆ. ದೈತ್ಯಾಕಾರದ ಸರ್ಕಾರಿ ಬಜೆಟ್​ಗಳ ಬದಲಾಗಿ ಖಾಸಗಿ ಉದ್ಯಮಗಳು ವಹಿವಾಟು ನಡೆಸಲು ಮುಂದಾಗಿವೆ. ಬಾಹ್ಯಾಕಾಶ ತಂತ್ರಜ್ಞಾನ ಉದ್ಯಮಗಳು ಸಣ್ಣ ಪ್ರಮಾಣದ, ವಾಣಿಜ್ಯ ಉದ್ದೇಶಗಳನ್ನು ಪೂರೈಸುತ್ತ ಗಮನ ನೀಡುತ್ತಿವೆ. ಉಪಗ್ರಹಗಳ ಛಾಯಾಚಿತ್ರ ವ್ಯವಸ್ಥೆಗಳು ಭಾರತದ ರೈತರು ತಮ್ಮ ಬೆಳೆಗಳನ್ನು ವಿಮೆ ಮಾಡಲು ಅಥವಾ ವಾಣಿಜ್ಯ ಮೀನುಗಾರಿಕೆ ದೋಣಿಗಳು ತಮ್ಮ ಬೇಟೆ ಪತ್ತೆ ಹಚ್ಚಲು ಸಹಾಯ ಮಾಡುತ್ತವೆ. ಉಪಗ್ರಹಗಳು ಫೋನ್ ಸಿಗ್ನಲ್​ಗಳನ್ನು ದೇಶದ ದೂರದ ಮೂಲೆಗಳಿಗೂ ತಲುಪಿಸುತ್ತಿವೆ. ಅಲ್ಲದೆ, ಭಾರತದ ಬೃಹತ್ ನಗರಗಳಿಂದ ದೂರದಲ್ಲಿರುವ ಸೌರ ಫಾಮರ್್​ಗಳನ್ನು ನಿರ್ವಹಿಸಲು ಸಹಾಯ ಮಾಡುತ್ತವೆ.
ಜೂನ್ 2020ರಲ್ಲಿ ನರೇಂದ್ರ ಮೋದಿ ಅವರು ಬಾಹ್ಯಾಕಾಶ ಕ್ಷೇತ್ರಕ್ಕೆ ಉತ್ತೇಜನಗಳನ್ನು ಘೊಷಿಸಿದಾಗಿನಿಂದ, ಈ ವಲಯವು ಎಲ್ಲಾ ರೀತಿಯ ಖಾಸಗಿ ಉದ್ಯಮಗಳಿಗೆ ಮುಕ್ತವಾಗಿ ತೆರೆದುಕೊಂಡಿತು. ಈ ಮೂಲಕ ಭಾರತದ ಅಂತರಿಕ್ಷ ವ್ಯವಹಾರಗಳ ಜಾಲವು ಮೂಲ ಸಂಶೋಧನೆ ಮತ್ತು ಸ್ವದೇಶಿ ಪ್ರತಿಭೆಗಳಿಂದ ಎಲ್ಲೆಡೆ ಹರಡಿಕೊಂಡಿತು. ಕಳೆದ ವರ್ಷ ಬಾಹ್ಯಾಕಾಶ ಸ್ಟಾರ್ಟ್-ಅಪ್​ಗಳು 12 ಕೋಟಿ ಡಾಲರ್ (991 ಕೋಟಿ ರೂಪಾಯಿ) ಹೊಸ ಹೂಡಿಕೆ ಪಡೆದುಕೊಂಡವು. ಇದು ವಾರ್ಷಿಕವಾಗಿ ಎರಡ್ಮೂರು ಪಟ್ಟು ಹೆಚ್ಚಾಗುತ್ತಿದೆ.
ಇಸ್ರೋ ಈಗ ಹೊಸ ಖಾಸಗಿ ಉದ್ಯಮಗಳಿಗೆ ಅವಕಾಶ ನೀಡುತ್ತಿದ್ದು, ಲಾಭ ಹಂಚಿಕೊಳ್ಳುವ ಪರಂಪರೆ ಅನುಸರಿಸುತ್ತಿದೆ. ಶ್ರೀಹರಿಕೋಟಾದ ಕರಾವಳಿ ದ್ವೀಪದಲ್ಲಿರುವ ಇದರ ಬಾಹ್ಯಾಕಾಶ ನಿಲ್ದಾಣವು ಸಮಭಾಜಕದ ಸಮೀಪದಲ್ಲಿದ್ದು, ವಿವಿಧ ಕಕ್ಷೆಯ ಹಂತಗಳಿಗೆ ಉಡಾವಣೆ ಮಾಡಲು ಸೂಕ್ತವಾಗಿದೆ. ಈ ಸರ್ಕಾರಿ ಸಂಸ್ಥೆಯ ‘ವರ್ಕ್​ಹಾರ್ಸ್’ ರಾಕೆಟ್​ಗಳು ಭಾರಿ ತೂಕದ ಉಪಗ್ರಹಗಳನ್ನು ಹೊತ್ತೊಯ್ಯುವಲ್ಲಿ ಜಾಗತಿಕವಾಗಿ ಅತ್ಯಂತ ವಿಶ್ವಾಸಾರ್ಹತೆ ಗಳಿಸಿಕೊಂಡಿವೆ. ಶೇಕಡಾ 95 ಪ್ರತಿಶತದಷ್ಟು ಉಡ್ಡಯನ ಯಶಸ್ಸಿನ ದರದೊಂದಿಗೆ ಈ ರಾಕೆಟ್​ಗಳು ಉಪಗ್ರಹ ವಿಮೆಯ ವೆಚ್ಚವನ್ನು ಅರ್ಧದಷ್ಟು ಕಡಿತಗೊಳ್ಳಲು ಕಾರಣವಾಗಿವೆ. ಈ ಮೂಲಕ ಭಾರತವು ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಉಪಗ್ರಹ ಉಡಾವಣಾ ತಾಣವಾಗಿ ಕಂಗೊಳಿಸುತ್ತಿದೆ.
ಉಪಗ್ರಹ ಉಡಾವಣೆಗಳಿಗೆ ಕಡಿಮೆ ವೆಚ್ಚದ ಆಯ್ಕೆಗಳನ್ನು ದೀರ್ಘಕಾಲದಿಂದ ನೀಡಿದ ಎರಡು ದೇಶಗಳೆಂದರೆ ರಷ್ಯಾ ಮತ್ತು ಚೀನಾ. ಆದರೆ, ಯೂಕ್ರೇನ್​ನಲ್ಲಿನ ಯುದ್ಧದಿಂದಾಗಿ ಈ ವಲಯದಲ್ಲಿ ರಷ್ಯಾದ ಪಾತ್ರ ಕೊನೆಗೊಳ್ಳುತ್ತಿದೆ. ಬ್ರಿಟನ್ನಿನ ಸ್ಟಾರ್ಟ್ ಅಪ್ ಸಂಸ್ಥೆಯಾದ ಒನ್​ವೆಬ್ ತನ್ನ ಉಪಗ್ರಹಗಳನ್ನು ಉಡಾಯಿಸಲು ಈ ಹಿಂದೆ ರಷ್ಯಾವನ್ನು ಅವಲಂಬಿಸಿತ್ತು. ಆದರೆ, ಯೂಕ್ರೇನ್ ಯುದ್ಧ ಆರಂಭದ ನಂತರ ಅದು ಭಾರತದ ಕಡೆಗೆ ಮುಖ ಮಾಡಿದೆ. ಇದಲ್ಲದೆ, ಮಿಲಿಟರಿ ದರ್ಜೆಯ ತಂತ್ರಜ್ಞಾನ ಒಳಗೊಂಡಿರುವ ಉಪಗ್ರಹಗಳನ್ನು ಉಡಾಯಿಸಲು ಚೀನಾದ ಬದಲು ಭಾರತಕ್ಕೆ ಕಳುಹಿಸುವುದನ್ನು ಅಮೆರಿಕ ಸರ್ಕಾರವು ಅನುಮೋದಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಪರಿಸ್ಥಿತಿಯು ಭಾರತಕ್ಕೆ ಅನೂಕಲಕರವಾಗಿದೆ.
ಆರು ಶತಕೋಟಿ ಡಾಲರ್ ಮಾರುಕಟ್ಟೆ:ಬಾಹ್ಯಾಕಾಶಕ್ಕೆ ಉಪಕರಣಗಳನ್ನು ಉಡಾವಣೆ ಮಾಡುವ ಉದ್ಯಮದಲ್ಲಿ ಸಾಕಷ್ಟು ಹಣ ಗಳಿಸಲು ಅವಕಾಶವಿದೆ. ಉಪಗ್ರಹ ಉಡಾವಣೆ ಮಾರುಕಟ್ಟೆಯು ಈ ವರ್ಷ ಅಂದಾಜು 6 ಶತಕೋಟಿ ಡಾಲರ್ (49,569 ಕೋಟಿ ರೂಪಾಯಿ) ಮೌಲ್ಯದ್ದಾಗಿದ್ದು, 2025ರ ವೇಳೆಗೆ ಈ ಮೌಲ್ಯದಲ್ಲಿ 3 ಪಟ್ಟು ಹೆಚ್ಚಾಗಬಹುದಾಗಿದೆ.
ಮೊದಲ ಸ್ಟಾರ್ಟ್ ಅಪ್:ಭಾರತದ ಮೊದಲ ಬಾಹ್ಯಾಕಾಶ ಸ್ಟಾರ್ಟ್​ಅಪ್ ಆಗಿರುವ ಧ್ರುವ ಸ್ಪೇಸ್ ಹೈದರಾಬಾದ್​ನಲ್ಲಿ ತನ್ನ ಕೇಂದ್ರವನ್ನು ಸ್ಥಾಪಿಸಿದೆ. ಈ ಕೇಂದ್ರದಲ್ಲಿ ನಕಲಿ ಉಪಗ್ರಹಗಳು, ಕ್ಲೀನ್ ರೂಮ್ಳು ಎಂದು ಕರೆಯಲ್ಪಡುವ ವಾತಾವರಣದ ನಿಯಂತ್ರಿತ ಲ್ಯಾಬ್​ಗಳು, ಕೃತಕ-ಗುರುತ್ವಾಕರ್ಷಣೆಯ ಪರೀಕ್ಷೆಯ ರಿಗ್ ಮುಂತಾದವುಗಳಿವೆ.
ಭಾರತದಲ್ಲಿ ಅಂತರಿಕ್ಷ ವ್ಯಾಪಾರ ವಹಿವಾಟು ವ್ಯವಸ್ಥೆಯ ಗಾತ್ರವು ದಿಗ್ಭ›ಮೆಗೊಳಿಸುವಂತಿದೆ. ಇಸ್ರೋ ಜತೆಗಿನ ದಶಕಗಳ ವ್ಯವಹಾರವು ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಇತರೆಡೆ ಕ್ಲಸ್ಟರ್​ಗಳಲ್ಲಿ ಅಂದಾಜು 400 ಖಾಸಗಿ ಕಂಪನಿಗಳ ಹುಟ್ಟಿಗೆ ಕಾರಣವಾಗಿದೆ. ಅಂತರಿಕ್ಷ ಉಡಾವಣೆಗೆ ಅಗತ್ಯವಿರುವ ಉಪಕರಣಗಳ ತಯಾರಿಕಗೆ ಇವು ಮೀಸಲಾಗಿವೆ. ಒಂದು ಉಪಗ್ರಹ ಉಡಾವಣೆಯಲ್ಲಿ ನೂರು ಮಂದಿ ಕೈಜೋಡಿಸಬಹುದಾದ ವ್ಯವಸ್ಥೆ ಇದೆ. ಉಪಗ್ರಹದಿಂದ ಪ್ರಸಾರವಾದ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಪರಿಣತಿ ಹೊಂದಿರುವ ಕಂಪನಿಗಳು ಹೆಚ್ಚಿನ ಮೊತ್ತದ ವಹಿವಾಟು ನಡೆಸುತ್ತಿವೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಪಿಕ್ಸಲ್ ಎಂಬ ಕಂಪನಿಯು ಸಾಮಾನ್ಯ ಬಣ್ಣ ದೃಷ್ಟಿಯ ವ್ಯಾಪ್ತಿಯಿಂದ ಹೊರಗಿರುವ ಭೂಮಿಯ ಮೇಲ್ಮೈಯಲ್ಲಿ ಮಾದರಿಗಳನ್ನು ಪತ್ತೆ ಹಚ್ಚಲು ಇಮೇಜಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಪೆಂಟಗನ್ ಒಳಗಿನ ರಹಸ್ಯ ಏಜೆನ್ಸಿಯೊಂದಿಗೆ ಇದು ಒಪ್ಪಂದವನ್ನು ಹೊಂದಿದೆ. ಉಪಗ್ರಹ ವ್ಯಾಪಾರದ ಹೆಚ್ಚಿನ ವಹಿವಾಟು ಗ್ರಾಹಕ ಬ್ರಾಡ್​ಬ್ಯಾಂಡ್ ಮತ್ತು ಟಿವಿ ಸೇವೆಗಳಿಂದಲೂ ದೊರೆಯುತ್ತದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
