ನವದೆಹಲಿ:ಗಡಿ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕುರಿತ ತಗಾದೆಯಿಂದ ಉಲ್ಭಣಿಸಿರುವ ಬಿಕ್ಕಟ್ಟನ್ನು ಶಮನಗೊಳಿಸಲು ಭಾರತ ಮತ್ತು ಚೀನಾ ಸೇನಾ ಕಮಾಂಡರ್ ಮಟ್ಟದ ಮಾತುಕತೆ ಪೂರ್ವ ಲಡಾಖ್​ನಲ್ಲಿ ಶನಿವಾರ ನಡೆದಿದೆ.
ಲಡಾಖ್​ನ ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್​ಎಸಿ) ಐದು ಪಾಯಿಂಟ್​ಗಳಲ್ಲಿ ಉಭಯ ದೇಶಗಳ ಮಧ್ಯೆ ಸಾಂಪ್ರದಾಯಿಕ ಭಿನ್ನಮತವಿದ್ದು, ಇವು ಸಂಘರ್ಷದ ಸ್ಥಳಗಳಾಗಿವೆ. ಈ ಗಡಿ ಭಿನ್ನಮತ ಹೋಗಲಾಡಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಎಲ್​ಎಸಿಯ ಚೀನಾದ ಮಾಲ್ಡೋ ಭಾಗದಲ್ಲಿ ನಡೆದ ಈ ಸಭೆಯಲ್ಲಿ ಭಾರತವನ್ನು 14 ಕೋರ್​ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ನೇತೃತ್ವ ನಿಯೋಗ ಪ್ರತಿನಿಧಿಸಿತು. ಚೀನಾ ಕಡೆಯಿಂದ ಟಿಬೆಟ್ ಮಿಲಿಟರಿ ಜಿಲ್ಲೆಯ ಕಮಾಂಡರ್ ನೇತೃತ್ವದ ತಂಡ ಸಭೆಯಲ್ಲಿ ಭಾಗವಹಿಸಿತ್ತು. ಬೆಳಗ್ಗೆ 8.30ಕ್ಕೆ ನಡೆಯಬೇಕಾಗಿದ್ದ ಈ ಸಭೆ ಮೂರು ತಾಸು ವಿಳಂಬವಾಗಿ ಆರಂಭವಾಯಿತು ಎಂದು ಮೂಲಗಳು ಹೇಳಿವೆ. ಗಡಿಯಲ್ಲಿ ಉಭಯ ಸೇನೆಗಳು ಮುಖಾಮುಖಿಯಾಗಿರುವ ಈ ಸಂದರ್ಭದಲ್ಲಿ ಬಿಕ್ಕಟ್ಟನ್ನು ಹೋಗಲಾಡಿಸುವ ಚರ್ಚೆಯು ಸೇನಾ ಹಂತ ಮತ್ತು ರಾಜತಾಂತ್ರಿಕ ಮಾರ್ಗದಲ್ಲಿ ನಡೆಯುತ್ತಿದೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ರಾಜತಾಂತ್ರಿಕ ಸಭೆ:ಭಾರತದ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪೂರ್ವ ಏಷ್ಯಾ) ನವೀನ್ ಶ್ರೀವಾಸ್ತವ ಮತ್ತು ಚೀನಾ ವಿದೇಶಾಂಗ ಸಚಿವಾಲಯದ ಮಹಾನಿರ್ದೇಶಕ ವು ಜಿಯಾಂಗ್​ಹಾವೊ ವಿಡಿಯೋ ಕಾನ್ಪರೆನ್ಸ್ ಮೂಲಕ ಶುಕ್ರವಾರ ಮಾತುಕತೆ ನಡೆಸಿದ್ದರು. ಉಭಯ ದೇಶಗಳು ಚರ್ಚೆಯ ಮೂಲಕ ಭಿನ್ನಾಭಿಪ್ರಾಯ ಹೋಗಲಾಡಿಸಿಕೊಳ್ಳಬೇಕು. ಈ ಬಿಕ್ಕಟ್ಟು ಜಟಿಲವಾಗುವುದಕ್ಕೆ ಬಿಡಬಾರದು ಎಂಬ ನಿರ್ಣಯ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ:ಆರ್ಥಿಕ ಬಲಾಢ್ಯ ಚೀನಾ ವಿರುದ್ಧ ಸಿಡಿದೆದ್ದ 8 ರಾಷ್ಟ್ರಗಳ ಸಂಸದರು
ಆರೋಪ-ಪ್ರತ್ಯಾರೋಪ:ಪೂರ್ವ ಲಡಾಖ್ ಮತ್ತು ಸಿಕ್ಕಿಂನ ಉತ್ತರ ಭಾಗದ ಗಡಿಯಲ್ಲಿ ಸಹಜ ಗಸ್ತಿಗೆ ಚೀನಾ ಅಡ್ಡಿಪಡಿಸುತ್ತಿದೆ ಎಂಬುದು ಭಾರತದ ಆರೋಪ. ಭಾರತದ ಯೋಧರು ಗಡಿ ಉಲ್ಲಂಘಿಸಿದ್ದರಿಂದಲೇ ಉದ್ವಿಗ್ನ ಪರಿಸ್ಥಿತಿ ಎದುರಾಗಿದೆ ಎಂದು ಚೀನಾ ಸೇನೆ ಪ್ರತ್ಯಾರೋಪ ಮಾಡಿದೆ. ಆದರೆ, ನಿಜವಾಗಿ ತಗಾದೆ ಇರುವುದು ಉಭಯ ದೇಶಗಳು ಗಡಿ ರಸ್ತೆ ಅಭಿವೃದ್ಧಿ ಸಂಬಂಧ. ಅಕ್ಸಾಯ್ ಚಿನ್ (1962ರ ಯುದ್ಧದಲ್ಲಿ ಚೀನಾ ವಶಪಡಿಸಿಕೊಂಡ ಭಾರತದ ಭೂಭಾಗ) ಗುರಿಯಾಗಿಟ್ಟುಕೊಂಡು ಭಾರತ ಗಡಿಯಲ್ಲಿ ರಸ್ತೆ ಅಭಿವೃದ್ಧಿ ಮಾಡುತ್ತಿದೆ ಎಂಬುದು ಚೀನಾದ ಗುಮಾನಿ. ಲಡಾಖ್​ನ ಪ್ಯಾಂಗೊಂಗ್ ತ್ಸೊ ಸರೋವರದ ದಂಡೆಗುಂಟ ದೌಲತ್ ಬೇಗ್ ಓಲ್ಡಿ ಮೂಲಕ ಪಾಕ್ ಆಕ್ರಮಿತ ಕಾಶ್ಮೀರದ ಕಾರಾಕೋರಂ ಪಾಸ್​ಗೆ ಸಂಪರ್ಕ ಕಲ್ಪಿಸುವ ರಸ್ತೆ ಜಾಲದ ಅಭಿವೃದ್ಧಿಯನ್ನು ಚೀನಾ ಮಾಡಿದೆ. ವಾಣಿಜ್ಯ ಚಟುವಟಿಕೆ ಹೆಚ್ಚಿಸುವುದು ಮತ್ತು ಈ ವಿವಾದಿತ ಪ್ರದೇಶದಲ್ಲಿ ತನ್ನ ಹಕ್ಕು ಸ್ಥಾಪನೆ ಮಾಡುವುದು ಚೀನಾದ ಉದ್ದೇಶ. ಎಲ್​ಎಸಿ ಸಮೀಪದಲ್ಲೇ ಯುದ್ಧ ವಿಮಾನಗಳ ನೆಲೆ ಹೊಂದುವ ಉತ್ಕಟತೆಯಿಂದ ವಾಯು ನೆಲೆ ವಿಸ್ತರಣಾ ಕಾರ್ಯವನ್ನು ಚೀನಾ ಮಾಡುತ್ತಿದೆ ಎಂಬುದು ಭಾರತದ ವಾದ. ಉದ್ವಿಗ್ನತೆ ಉಂಟಾಗಿದ್ದು ಹೇಗೆ?
ಲಡಾಖ್​ನ ಪ್ಯಾಂಗೊಂಗ್ ತ್ಸೊ ಸರೋವರದ ಪ್ರದೇಶದಲ್ಲಿ ಮೇ 5ರಂದು ಭಾರತ ಮತ್ತು ಚೀನಾ ಸೇನೆಯ ಸುಮಾರು 250 ಯೋಧರ ಮಧ್ಯೆ ಘರ್ಷಣೆ ನಡೆಯಿತು. ಕೈ ಕೈ ಮಿಲಾಯಿಸಿದ್ದ ಯೋಧರು, ಕಲ್ಲುತೂರಾಟ ನಡೆಸಿದರು. ಇದರಿಂದ ಎರಡೂ ಕಡೆಯಿಂದ ಸುಮಾರು 100 ಯೋಧರು ಗಾಯಗೊಂಡರು. ಈ ಘಟನೆ ನಡೆದ ನಾಲ್ಕು ದಿನಗಳ ತರುವಾಯ ಉತ್ತರ ಸಿಕ್ಕಿಂನ ನಾಕು ಲಾ ಪಾಸ್​ನಲ್ಲೂ ಉಭಯ ಸೇನೆಗಳ ಮಧ್ಯೆ ಘರ್ಷಣೆ ನಡೆಯಿತು. 10ಕ್ಕೂ ಹೆಚ್ಚು ಯೋಧರು ಎರಡೂ ಕಡೆ ಗಾಯಗೊಂಡರು. ಈ ಎರಡೂ ಘಟನೆಗಳ ಬಳಿಕ ಭಾರತ- ಚೀನಾದ ಹಿರಿಯ ಸೇನಾಧಿಕಾರಿಗಳ ಮಧ್ಯೆ 12 ಸುತ್ತು ಮಾತುಕತೆ ನಡೆದಿದೆ. ಆದರೆ, ಪರಿಸ್ಥಿತಿ ತಿಳಿಗೊಳಿಸುವ ನಿರ್ಧಾರಕ್ಕೆ ಬರಲು ಆಗಲಿಲ್ಲ. 2017ರಲ್ಲಿ ಸಿಕ್ಕಿಂನ ಡೋಕ್ಲಾಂ ಪ್ರಸ್ಥಭೂಮಿಯಲ್ಲಿ ರಸ್ತೆ ಅಭಿವೃದ್ಧಿ ಕಾರ್ಯವನ್ನು ಚೀನಾ ಸೇನೆ ಕೈಗೊಂಡಿತು. ಆದರೆ ಈ ಭಾಗ ತನ್ನದೆಂದ ಭೂತಾನ್, ಕಾಮಗಾರಿಗೆ ಅಡ್ಡಿ ಪಡಿಸಿತು. ಚೀನಾ ಹೆಚ್ಚುವರಿ ತುಕಡಿ, ಬೃಹತ್ ಬುಲ್ಡೋಜರ್​ಗಳ ಸಂಗಡ ಸ್ಥಳಕ್ಕೆ ಆಗಮಿಸಿತು. ಆಗ ಭೂತಾನ್ ಭಾರತದ ನೆರವು ಕೋರಿತು. ಭಾರತದ ಸೇನೆ ಚೀನಾ ಕಾಮಗಾರಿಯನ್ನು ತಡೆಯಲು ತ್ರಿರಾಷ್ಟ್ರ ಗಡಿಬಿಂದುವಿನಲ್ಲಿ ಡೋಕ್ಲಾಂನಲ್ಲಿ ಬೀಡುಬಿಟ್ಟಿತು. ಇದರಿಂದ ಜೂನ್ 16ರಿಂದ 73 ದಿನ ಉಭಯ ಸೇನೆಗಳು ಮುಖಾಮುಖಿಯಾಗಿದ್ದವು.
ಚೀನಾ ಕ್ಯಾತೆಗೆ ಕರೊನಾ ಲಿಂಕ್:ಕರೊನಾ ವೈರಸ್ ಮೂಲ, ನಿರ್ವಹಣೆಯಲ್ಲಿ ಡಬ್ಲ್ಯುಎಚ್​ಒ ಎಡವಿದ್ದು ಎಲ್ಲಿ ಎಂಬ ಬಗ್ಗೆ ತನಿಖೆ ನಡೆಯಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್​ಒ) ಮಹಾಸಭೆಯಲ್ಲಿ 125 ರಾಷ್ಟ್ರಗಳು ಮಂಡಿಸಿದ ನಿಲುವಳಿಗೆ ಭಾರತ ಸಹಮತ ವ್ಯಕ್ತಪಡಿಸಿದೆ. ಸೋಂಕಿನ ಮೂಲವಾದ ಚೀನಾ, ಇದನ್ನು ವಿಶ್ವವ್ಯಾಪಿ ಮಾಡಿತು ಎಂಬ ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್ ಇನ್ನಿತರ ರಾಷ್ಟ್ರಗಳ ಅಭಿಪ್ರಾಯಕ್ಕೆ ಭಾರತ ದನಿಗೂಡಿಸಿದೆ. ಈ ಕಾರಣದಿಂದ ಚೀನಾ ಗಡಿಯಲ್ಲಿ ಕ್ಯಾತೆ ತೆಗೆದಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಚೀನಾ ಪತ್ರಿಕೆ ಬೆದರಿಕೆ:ಪೂರ್ವ ಲಡಾಖ್​ನಲ್ಲಿ ಸೇನಾ ಕಮಾಂಡರ್ ಮಟ್ಟದ ಸಭೆ ಸಂದರ್ಭದಲ್ಲೇ ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ‘ದಿ ಗ್ಲೋಬಲ್ ಟೈಮ್್ಸ’ ಭಾರತವನ್ನು ಬೆದರಿಸುವ ಲೇಖನ ಪ್ರಕಟಿಸಿದೆ. ಒಂದಂಗುಲ ಭೂಮಿಯನ್ನೂ ಚೀನಾ ನೀಡುವುದಿಲ್ಲ. ಅತಿಕ್ರಮಿಸಲು ಪ್ರಯತ್ನಿಸಿದರೆ ತಕ್ಕ ಶಾಸ್ತಿ ಎದುರಿಸಬೇಕಾದೀತು ಎಂದು ಹೇಳಿದೆ. ಅಮೆರಿಕವನ್ನು ನಂಬಿಕೊಂಡು ಮೂರ್ಖರಾಗಬೇಡಿ. ಚೀನಾವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬ ಹುನ್ನಾರದಿಂದ ಅಮೆರಿಕ ನೆರೆಹೊರೆಯ ದೇಶಗಳನ್ನು ನಮ್ಮ ವಿರುದ್ಧ ಎತ್ತಿ ಕಟ್ಟುತ್ತಿದೆ ಎಂದು ಬರೆಯಲಾಗಿದೆ.
ಟಾರ್ಗೆಟ್ ಚೀನಾ ಕಾರ್ಟೂನ್ ಅಪ್ಲೋಡ್ ಮಾಡಿದ ಅಮೂಲ್​ ಟ್ವಿಟರ್ ಖಾತೆ ಕೆಲವು ಗಂಟೆಗಳ ಹೊತ್ತು ಬಂದ್​!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + four =
Remember me
