ನವದೆಹಲಿ:ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 30 ವರ್ಷ ಸೇವೆ ಪೂರೈಸಿರುವ ಸಿಬ್ಬಂದಿ ವರ್ಗದಲ್ಲಿ ಅದಕ್ಷ, ಅಸಮರ್ಥ ಹಾಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವವರನ್ನು ಗುರುತಿಸಿ ಗೇಟ್​ಪಾಸ್ ನೀಡುವ ಖಡಕ್ ತೀರ್ವನವನ್ನು ಸರ್ಕಾರ ತೆಗೆದುಕೊಂಡಿದೆ.
30 ವರ್ಷ ಕೆಲಸ ಮಾಡಿದ ಎಲ್ಲ ನೌಕರರ ಸೇವಾ ಹಿನ್ನೆಲೆ ಗಮನಿಸಿ, ಕಾರ್ಯಕ್ಷಮತೆ ತೋರದ ವ್ಯಕ್ತಿಗಳನ್ನು ಅವಧಿಗೆ ಮುನ್ನವೇ ಕಡ್ಡಾಯವಾಗಿ ನಿವೃತ್ತಿಗೊಳಿಸಬೇಕು. ತಕ್ಷಣವೇ ಅವರ ದಾಖಲೆ ಪರಿಶೀಲಿಸಲು ಎಲ್ಲ ಇಲಾಖೆಗಳು ಮುಂದಾಗಬೇಕೆಂದು ಕೇಂದ್ರ ಸಿಬ್ಬಂದಿ ಇಲಾಖೆ ಆದೇಶ ಹೊರಡಿಸಿದೆ. ಆದೇಶದ ಪ್ರತಿಯನ್ನು ಎಲ್ಲ ಇಲಾಖೆಗಳ ಕಾರ್ಯದರ್ಶಿಗಳಿಗೆ ಕಳುಹಿಸಿಕೊಡಲಾಗಿದೆ.
ನೌಕರರ ಕಾರ್ಯಕ್ಷಮತೆಯ ವಿಮರ್ಶೆಯನ್ನು ಫಂಡ ಮೆಂಟಲ್ ರೂಲ್​ನ (ಮೂಲ ಭೂತ ನಿಯಮ) 56 (ಜೆ) ಮತ್ತು 56 (ಐ) ಹಾಗೂ 1972ರ ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮ 48 (1) (ಬಿ) ಸೆಕ್ಷನ್ ಅಡಿಯಲ್ಲಿ ನಡೆಸಲಾಗುತ್ತದೆ. ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಈ ಸೆಕ್ಷನ್​ಗಳಡಿ ನಿರ್ದಿಷ್ಟ ಸರ್ಕಾರಿ ನೌಕರರನ್ನು ಸೇವೆಯಿಂದ ನಿವೃತ್ತಿಗೊಳಿಸುವ ವಿವೇಚನಾಧಿಕಾರವನ್ನು ಸರ್ಕಾರ ಹೊಂದಿದೆ. ಉತ್ಸಾಹಿ, ತಂತ್ರಜ್ಞಾನ ಪ್ರೇರಿತ ಹಾಗೂ ತ್ವರಿತಗತಿಯಲ್ಲಿ ಕೆಲಸ ಪೂರ್ಣಗೊಳಿಸುವ ಯುವಕರನ್ನು ಸರ್ಕಾರಿ ಸೇವೆಗೆ ಬಳಸಿಕೊಳ್ಳುವ ನಿಟ್ಟಿನಲ್ಲೂ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಕೂಡಲೇ ನೌಕರರಿಗೆ ಎಚ್ಚರಿಕೆ ನೀಡಿದ್ದರು. ಉದ್ಯೋಗದಲ್ಲಿ ಸಾಮರ್ಥ್ಯ, ದಕ್ಷತೆ ಪ್ರದರ್ಶಿಸದಿದ್ದಲ್ಲಿ ಮನೆಗೆ ಹೋಗಲು ಸಿದ್ಧರಾಗಿ ಎಂಬ ಸಂದೇಶ ರವಾನಿಸಿದ್ದರು. ಅಲ್ಲದೆ, ಕೇಂದ್ರದ ವಿವಿಧ ಸಚಿವಾಲಯಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರುವ ಮೂಲಕ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವಂತೆ ನೋಡಿಕೊಳ್ಳಲಾಗಿತ್ತು.
ಆದೇಶದಲ್ಲೇನಿದೆ?:ಈಗ ಜಾರಿಯಲ್ಲಿರುವ ನಿಯಮಗಳಿಗೆ ಸ್ಪಷ್ಟತೆ ತರಲು ಹಾಗೂ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಹೊಸ ಆದೇಶ ಪ್ರಕಟಿಸಲಾಗಿದೆ. ಆದೇಶದಲ್ಲಿ ಮೂಲಭೂತ ನಿಯಮ 56 (ಜೆ) ಅನ್ವಯಿಸುವಿಕೆಯ ವಿವರಣೆ ನೀಡಿರುವಂತೆ; ಗ್ರೂಪ್ ಎ ಮತ್ತು ಬಿ ವರ್ಗದ ಅಧಿಕಾರಿಗೆ 50 ವರ್ಷ ದಾಟಿದ್ದರೆ (35 ವರ್ಷಕ್ಕಿಂತ ಮೊದಲು ಸೇವೆಗೆ ಸೇರ್ಪಡೆಯಾಗಿದ್ದರೆ) ಅವರ ಸೇವಾ ದಾಖಲೆಗಳನ್ನು ಹಾಗೂ 55 ವರ್ಷ ಪೂರೈಸಿದ (35 ವರ್ಷದ ನಂತರ ಸೇವೆಗೆ ಸೇರ್ಪಡೆಯಾದವರ) ಅಧಿಕಾರಿಗಳ ಸೇವಾ ದಾಖಲೆಗಳನ್ನು ಪರಿಶೀಲಿಸಬಹುದು. ಮೂಲಭೂತ ನಿಯಮ 56 (ಐ) ಅಡಿಯಲ್ಲಿ, ಗ್ರೂಪ್ ಸಿ ಸೇವೆಯಲ್ಲಿರುವ, ಪಿಂಚಣಿ ನಿಯಮಗಳು ಅನ್ವಯವಾಗದ ಸರ್ಕಾರಿ ನೌಕರನನ್ನು ನಿವೃತ್ತಿಗೊಳಿಸಲು ಸಕ್ಷಮ ಪ್ರಾಧಿಕಾರಕ್ಕೆ ಸಂಪೂರ್ಣ ಅಧಿಕಾರವಿರಲಿದೆ. ನಿರ್ದಿಷ್ಟ ನೌಕರ 30 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದರೆ, ಆತನಿಗೆ/ಆಕೆಗೆ ಮೂರು ತಿಂಗಳ ನೋಟಿಸ್ ನೀಡಿಯೋ ಅಥವಾ ಮೂರು ತಿಂಗಳ ವೇತನ, ಭತ್ಯೆ ನೀಡಿಯೋ ಸೇವೆಯಿಂದ ನಿವೃತ್ತಿಗೊಳಿಸಬೇಕು ಎಂದು ತಿಳಿಸಲಾಗಿದೆ.
ಪಿಂಚಣಿಗೆ ಸಮಸ್ಯೆ ಇಲ್ಲ:1972ರ 48 (1) (ಬಿ) ಅಡಿಯ ಸಿಸಿಎಸ್ (ಪಿಂಚಣಿ) ನಿಯಮಗಳ ವ್ಯಾಪ್ತಿಯಲ್ಲಿ ಬರುವವರು 30 ವರ್ಷಗಳ ಸೇವೆ ಪೂರ್ಣಗೊಳಿಸಿದ ನಂತರ ಸೇವಾ ವಿಮರ್ಶೆಗೆ ಒಳಪಡಲಿದ್ದಾರೆ. ಕೇಂದ್ರ ಅವರನ್ನು ಕಡ್ಡಾಯ ನಿವೃತ್ತಿಗೊಳಿಸಿದರೂ, ನಿವೃತ್ತಿ ನಂತರದ ಪಿಂಚಣಿಗೆ ಅರ್ಹರಾಗಿರುತ್ತಾರೆ. ಸಿಬ್ಬಂದಿ ಸೇವಾ ದಾಖಲೆ ವಿಮಶಿಸಲಿರುವ ಪರಿಶೀಲನಾ ಸಮಿತಿ ರಚಿಸುವ ಬಗ್ಗೆ ಹಾಗೂ ನೌಕರರ ಕಾರ್ಯಕ್ಷಮತೆ ಮೌಲ್ಯಮಾಪನ ಮಾಡಬೇಕಾದ ಸಂದರ್ಭದಲ್ಲಿ ಅನುಸರಿಸಬೇಕಿರುವ ಮಾನದಂಡಗಳನ್ನೂ ಆದೇಶದಲ್ಲಿ ತಿಳಿಸಲಾಗಿದೆ. ಅವರು ಹುದ್ದೆಯಲ್ಲಿ ಮುಂದುವರಿಯಲು ಎಷ್ಟು ಸಮರ್ಥರು ಎಂಬುದನ್ನು ಪರಿಗಣಿಸಿ, ನಿಷ್ಪರಿಣಾಮಕಾರಿ ಹಾಗೂ ವಿಶ್ವಾಸಾರ್ಹತೆಯಿಂದ ಕೆಲಸ ಮಾಡಿಲ್ಲ ಎಂಬುದು ಕಂಡುಬಂದಲ್ಲಿ ಸೇವೆಯಿಂದ ನಿವೃತ್ತಿಗೊಳ್ಳಲಿದ್ದಾರೆ.
ಅಕಾಲಿಕ ನಿವೃತ್ತಿ ಶಿಕ್ಷೆಯಲ್ಲ:ಸರ್ಕಾರಿ ನೌಕರರನ್ನು ಅಕಾಲಿಕವಾಗಿ ನಿವೃತ್ತಿಗೊಳಿಸುವುದು ಅವರಿಗೆ ನೀಡುವ ಶಿಕ್ಷೆ ಅಂತ ಭಾವಿಸಬೇಕಿಲ್ಲ ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. 1965ರ ಕೇಂದ್ರ ನಾಗರಿಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ ಅನುಸಾರ ನೀಡಲಾಗುವ ಕಡ್ಡಾಯ ನಿವೃತ್ತಿ ಶಿಕ್ಷೆಗಿಂತ ಇದು ಭಿನ್ನವಾಗಿದೆ ಎಂದು ತಿಳಿಸಲಾಗಿದೆ. ಸರ್ಕಾರಿ ನೌಕರರು 50/55 ವರ್ಷಗಳನ್ನು ದಾಟಿದ ನಂತರ ಅಥವಾ 30 ವರ್ಷಗಳ ಸೇವೆ ಪೂರ್ಣಗೊಳಿಸಿದ ನಂತರ ಸರ್ಕಾರ ಯಾವುದೇ ಸಮಯದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಅವರನ್ನು ಅಕಾಲಿಕವಾಗಿ ನಿವೃತ್ತಿಗೊಳಿಸಬಹುದು. ನೌಕರರನ್ನು ಸೇವೆಯಲ್ಲಿ ಉಳಿಸಿಕೊಳ್ಳಬೇಕೇ ಅಥವಾ ಅಕಾಲಿಕವಾಗಿ ನಿವೃತ್ತಿಗೊಳಿಸಬೇಕೆ ಎಂದು ಖಚಿತಪಡಿಸಿಕೊಳ್ಳಲು ಕಾಲಕಾಲಕ್ಕೆ ಪರಿಶೀಲನೆ ನಡೆಸುತ್ತಿರಬೇಕು ಎಂದು ಸಿಬ್ಬಂದಿ ಸಚಿವಾಲಯ ಸೂಚನೆ ನೀಡಿದೆ.
ಸಮಿತಿಗಿದೆ ಅಧಿಕಾರ:ಸರ್ಕಾರಿ ನೌಕರನೊಬ್ಬನ ಸಾಮರ್ಥ್ಯ, ದಕ್ಷತೆ ಅಥವಾ ಸಾಮರ್ಥ್ಯದಲ್ಲಿ ಹಠಾತ್ ಕುಸಿತ ಕಂಡುಬಂದಲ್ಲಿ, ಅಂಥವರನ್ನು ಅಕಾಲಿಕ ನಿವೃತ್ತಿಗೆ ಪರಿಶೀಲಿಸುವ ಮುಕ್ತ ಅಧಿಕಾರವೂ ಸಮಿತಿಗೆ ಇರಲಿದೆ ಎಂದು ಹೇಳಲಾಗಿದೆ. ನೌಕರನ ಕಾರ್ಯಕ್ಷಮತೆಯ ವಾರ್ಷಿಕ ಮೌಲ್ಯಮಾಪನ ವರದಿ ಜತೆಗೆ ಸಂಪೂರ್ಣ ಸೇವಾ ದಾಖಲೆಯನ್ನು ಪರಿಶೀಲನೆಯ ಸಮಯದಲ್ಲಿ ಪರಿಗಣಿಸಬೇಕು. ನೌಕರನ ವೈಯಕ್ತಿಕ ಕಡತದಲ್ಲಿ ಅಮೂಲ್ಯವಾದ ಅಂಶಗಳು ಇರಬಹುದು. ಸಿಬ್ಬಂದಿ ವ್ಯವಹರಿಸಿದ ಫೈಲ್​ಗಳು ಅಥವಾ ಸಿದ್ಧಪಡಿಸಿದ, ಸಲ್ಲಿಸಿದ ಯಾವುದೇ ದಾಖಲೆಗಳ ವರದಿಗಳನ್ನು ಪರಿಶೀಲಿಸಿಯೂ ಅವರ ಕಾರ್ಯಕ್ಷಮತೆ ನಿರ್ಣಯಿಸಬಹುದು ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಡಿಜಿಟಲ್​ ಪಾವತಿಗೆ ಬ್ಯಾಂಕ್​ ಶುಲ್ಕ ವಿಧಿಸುವಂತಿಲ್ಲ; ಕಾನೂನಿನಲ್ಲಿಲ್ಲ ಅವಕಾಶ; ಸಿಬಿಡಿಟಿ ನೀಡಿದೆ ಸ್ಪಷ್ಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
