ನವದೆಹಲಿ:‘2047ರ ವೇಳೆಗೆ ಎಲ್ಲರಿಗೂ ವಿಮೆ’ ಗುರಿಯನ್ನು ಸಾಧಿಸುವ ಉದ್ದೇಶದಿಂದ ಈ ಸಲದ ಬಜೆಟ್ ಅಧಿವೇಶದಲ್ಲಿ ಕೇಂದ್ರ ಸರ್ಕಾರ 1938ರ ವಿಮಾ ಕಾಯ್ದೆಗೆ ತಿದ್ದುಪಡಿ ಮಸೂದೆ ಮಂಡಿಸುವ ಸಾಧ್ಯತೆ ಇದೆ. ಸಂಯೋಜಿತ ಪರವಾನಗಿ, ಹೂಡಿಕೆ ನಿಯಮಗಳಲ್ಲಿ ಬದಲಾವಣೆ, ಮಧ್ಯವರ್ತಿಗಳಿಗೆ ಒಂದು ಬಾರಿ ನೋಂದಣಿ ಮತ್ತು ಇತರ ಹಣಕಾಸು ಉತ್ಪನ್ನಗಳನ್ನು ವಿತರಿಸಲು ವಿಮಾದಾರರಿಗೆ ಅವಕಾಶ ನೀಡುವುದು ಮುಂತಾದ ಕ್ರಮಗಳಿಗೆ ಹೊಸ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಬ್ಯಾಂಕ್​ಗಳನ್ನು ಈಗ ಸಾರ್ವತ್ರಿಕ ಬ್ಯಾಂಕ್, ಸಣ್ಣ ಹಣಕಾಸು ಬ್ಯಾಂಕ್ ಮತ್ತು ಪಾವತಿ ಬ್ಯಾಂಕ್ ಎಂದು ವರ್ಗೀಕರಿಸಲಾಗಿದ್ದು ಅದೇ ರೀತಿ ವಿಮಾ ಕಂಪನಿಗಳನ್ನೂ ವರ್ಗೀಕರಿಸುವ ಉದ್ದೇಶ ಸರ್ಕಾರಕ್ಕಿದೆ. 1938ರ ಕಾಯ್ದೆ ಪ್ರಕಾರ, ಜೀವವಿಮಾ ಕಂಪನಿಯವರು ಕೇವಲ ಜೀವವಿಮೆ ಪಾಲಿಸಿ ಮಾಡಲು ಮತ್ತು ಸಾಮಾನ್ಯ ವಿಮಾ ಕಂಪನಿಯವರು ಆರೋಗ್ಯ, ವಾಹನ, ಬೆಂಕಿ ಅವಘಡ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ಪಾಲಿಸಿ ಮಾಡಲು ಅವಕಾಶ ಕಲ್ಪಿಸಿದೆ.
ಒಂದೇ ಕಂಪನಿ ಜೀವವಿಮೆ ಮತ್ತು ಆರೋಗ್ಯ-ವಸ್ತು ವಿಮೆ ಎರಡನ್ನೂ ಮಾಡಿಸಲು ಈಗ ಅವಕಾಶವಿಲ್ಲ. ಪ್ರಸ್ತಾವಿತ ತಿದ್ದುಪಡಿ ಮಸೂದೆಯಲ್ಲಿ, ಎರಡೂ ಬಗೆಯ ವಿಮೆ ಮಾಡಿಸಲು ಕಂಪನಿಗಳಿಗೆ ಅವಕಾಶ ನೀಡುವುದಕ್ಕೆ ಸರ್ಕಾರ ಉದ್ದೇಶಿಸಿದೆ. ಮಸೂದೆಯ ಕರಡು ಸಿದ್ಧವಾಗಿದ್ದು ಸಚಿವ ಸಂಪುಟ ಸಭೆಯ ಒಪ್ಪಿಗೆಗೆ ಕಾಯುತ್ತಿದೆ. ಮುಂಬರುವ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸುವ ವಿಶ್ವಾಸವನ್ನು ಹಣಕಾಸು ಸಚಿವಾಲಯ ಹೊಂದಿದೆ. ದೇಶದಲ್ಲೀಗ 25 ಜೀವವಿಮಾ ಕಂಪನಿಗಳು ಮತ್ತು 32 ಸಾಮಾನ್ಯ ವಿಮಾ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ.
2030ರ ವೇಳೆಗೆ ಡಿಜಿಟಲ್ ಪೇಮೆಂಟ್ ದ್ವಿಗುಣ
ನವದೆಹಲಿ: ಭಾರತದಲ್ಲಿ ನಗದು ಬಳಕೆಗಿಂತ ಡಿಜಿಟಲ್ ಪೇಮೆಂಟ್​ಗೆ ಜನ ಹೆಚ್ಚು ಒಗ್ಗಿಕೊಳ್ಳುತ್ತಿದ್ದು, ಇನ್ನು 6 ವರ್ಷಗಳಲ್ಲಿ (2030) ಡಿಜಿಟಲ್ ಪೇಮೆಂಟ್​ನ ಪ್ರಮಾಣ ದ್ವಿಗುಣಗೊಂಡು 7 ಟ್ರಿಲಿಯನ್ ಡಾಲರ್​ಗೆ ತಲುಪಲಿದೆ ಎಂದು ಕೀರ್ನಿ ಮತ್ತು ಅಮೆಜಾನ್ ಪೇ ನಡೆಸಿದ ಅಧ್ಯಯನದಲ್ಲಿ ಗೊತ್ತಾಗಿದೆ. ಆನ್​ಲೈನ್​ನಲ್ಲಿ ವಸ್ತುಗಳನ್ನು ಖರೀದಿಸುವಾಗ ಶೇ. 90ರಷ್ಟು ಗ್ರಾಹಕರು ಡಿಜಿಟಲ್ ಪೇಮೆಂಟ್​ಗೆ ಆದ್ಯತೆ ನೀಡುತ್ತಾರೆ. ಶ್ರೀಮಂತ ಗ್ರಾಹಕರು ತಮ್ಮ ಶೇ. 80ರಷ್ಟು ವಹಿವಾಟುಗಳಿಗೆ ಡಿಜಿಟಲ್ ಮೂಲಕವೇ ಪೇಮೆಂಟ್ ಮಾಡುತ್ತಾರೆ ಎಂಬ ಅಂಶ ‘ಹೌ ಅರ್ಬನ್ ಇಂಡಿಯಾ ಪೇಸ್’ (ಭಾರತದ ನಗರ ಪ್ರದೇಶಗಳಲ್ಲಿ ಜನ ಹೇಗೆ ಹಣ ಪಾವತಿಸುತ್ತಿದ್ದಾರೆ) ಎಂಬ ಅಧ್ಯಯನ ವರದಿಯಲ್ಲಿ ನಮೂದಾಗಿದೆ. ಈ ಅಧ್ಯಯನಕ್ಕಾಗಿ 6 ಸಾವಿರ ಗ್ರಾಹಕರನ್ನು ಮತ್ತು 1 ಸಾವಿರಕ್ಕಿಂತ ಹೆಚ್ಚು ವ್ಯಾಪಾರಸ್ಥರನ್ನು ಮಾತನಾಡಿಸಲಾಗಿತ್ತು. 120 ನಗರಗಳಲ್ಲಿ ನಡೆದ ಈ ಅಧ್ಯಯನದ ವೇಳೆ ವಿವಿಧ ಪ್ರದೇಶ, ಆದಾಯ, ವಯಸ್ಸು, ಲಿಂಗ ಪರಿಗಣಿಸಲಾಗಿದ್ದು, ಡಿಜಿಟಲ್ ಪೇಮೆಂಟ್ ವಿಷಯದಲ್ಲಿ ಮಹಿಳೆಯರು ಮತ್ತು ಪುರುಷರಿಬ್ಬರೂ ಸಮಾನವಾಗಿದ್ದಾರೆ. ಯುನಿಫೈಡ್ ಪೇಮೆಂಟ್ ಇಂಟರ್​ಫೇಸ್ (ಯುಪಿಐ) ಈ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ವರದಿ ತಿಳಿಸಿದೆ.
ಎಂಟಿಎನ್ನೆಲ್ ಬಡ್ಡಿ ಬಾಕಿ ಸರ್ಕಾರದಿಂದಲೇ ಪಾವತಿ
ತೀವ್ರ ನಷ್ಟದಲ್ಲಿರುವ ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್​ನ (ಎಂಟಿಎನ್​ಎಲ್) ಬಾಂಡ್ ಬಾಕಿಯನ್ನು ಕೇಂದ್ರ ಸರ್ಕಾರವೇ ಪಾವತಿಸಲಿದೆ. ಜುಲೈನಲ್ಲಿರುವ ಗಡುವಿನ ದಿನಾಂಕಕ್ಕೆ ಮೊದಲೇ ಬಾಕಿ ಮೊತ್ತವನ್ನು ಪಾವತಿಸಲಾಗುವುದು ಎಂದು ದೂರಸಂಪರ್ಕ ಇಲಾಖೆ ಮೂಲಗಳು ತಿಳಿಸಿವೆ. ಕೆಲವು ಬಾಂಡ್​ಗಳ ಮೇಲಿನ ಎರಡನೇ ಅರ್ಧವಾರ್ಷಿಕ ಬಡ್ಡಿ ಶೇ. 7.59 ಬೀಳುತ್ತಿದ್ದು ಅದನ್ನು ಜು. 20ರೊಳಗೆ ಪಾವತಿಸಬೇಕಿದೆ. ಹಣದ ತೀವ್ರ ಮುಗ್ಗಟ್ಟಿನಿಂದಾಗಿ ಕೆಲವು ಬಾಂಡ್​ಹೋಲ್ಡರ್​ಗಳಿಗೆ ಸಕಾಲಕ್ಕೆ ಬಡ್ಡಿ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೆಹಲಿ ಮತ್ತು ಮುಂಬೈನಲ್ಲಿ ಟೆಲಿಕಾಂ ಸೇವೆಗಳನ್ನು ಒದಗಿಸುವ ಎಂಟಿಎನ್​ಎಲ್ ಕಂಪನಿ ಕಳೆದ ವಾರ ಸಲ್ಲಿಸಿರುವ ಫೈಲಿಂಗ್​ನಲ್ಲಿ ತಿಳಿಸಿತ್ತು.
ಕೆಲವು ವರ್ಷಗಳಿಂದ ಖಾಸಗಿ ಕಂಪನಿಗಳ ಚಂದಾದಾರರ ಸಂಖ್ಯೆ ಏರಿಕೆಯಾಗುತ್ತಿದ್ದರೆ, ಸರ್ಕಾರಿ ಸ್ವಾಮ್ಯದ ಎಂಟಿಎನ್​ಎಲ್​ನ ಚಂದಾದಾರರ ಸಂಖ್ಯೆ ಏರುತ್ತಲೇ ಇಲ್ಲ. 2023ರ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ಎಂಟಿಎನ್​ಎಲ್ ಚಂದಾದಾರರ ಸಂಖ್ಯೆ 4.66 ದಶಲಕ್ಷ ಇದ್ದದ್ದು ಒಂದು ವರ್ಷದಲ್ಲಿ 4.1 ದಶಲಕ್ಷಕ್ಕೆ ಇಳಿದಿದೆ. ನಷ್ಟದ ಪ್ರಮಾಣ 2023ರಲ್ಲಿ 2,915 ಕೋಟಿ ರೂ. ಇದ್ದುದು 2024ರಲ್ಲಿ 3,267 ಕೋಟಿ ರೂ.ಗೆ ಏರಿದೆ. ಆದಾಯ ಕಳೆದ ಆರ್ಥಿಕ ವರ್ಷದಲ್ಲಿ 798 ಕೋಟಿ ರೂ. ಇತ್ತು.
ಶಾವ್​ವಿು ಲಾಭ ಶೇ. 77ರಷ್ಟು ಕುಸಿತ
ಚೀನಾದ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಶಾವ್​ವಿು ಟೆಕ್ನಾಲಜೀಸ್​ನ ಭಾರತ ಘಟಕದ ಆದಾಯ ಮತ್ತು ಲಾಭ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. 2022-23ರಲ್ಲಿ ಕಂಪನಿಯ ಲಾಭ 238.63 ಕೋಟಿ ರೂ.ಗೆ ತಲುಪಿದ್ದು, ಇದು ಅದರ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ. 77ರಷ್ಟು ಕಡಿಮೆ. ಹಿಂದಿನ ವರ್ಷ ಕಂಪನಿ 1,057.7 ಕೋಟಿ ರೂ. ಲಾಭ ದಾಖಲಿಸಿತ್ತು. ಕಾರ್ಯಾಚರಣೆಯಿಂದ ಬಂದ ಆದಾಯ 2022ರ ಆರ್ಥಿಕ ವರ್ಷದಲ್ಲಿ 39,100 ಕೋಟಿ ರೂ. ಇತ್ತು. 2023ರಲ್ಲಿ 26,697 ಕೋಟಿ ರೂ.ಗೆ ಇಳಿದು, ಶೇ. 32ರ ಕುಸಿತ ದಾಖಲಿಸಿದೆ. ಶಾವ್​ವಿು ತನ್ನ ಉತ್ಪನ್ನಗಳ ಮಾರಾಟದಿಂದ 26,395 ಕೋಟಿ ರೂ. ಮತ್ತು ಸೇವೆಗಳಿಂದ 264 ಕೋಟಿ ರೂ. ಗಳಿಸಿದೆ. ಶೇ. 21ರಷ್ಟು ಪಾಲಿನೊಂದಿಗೆ ಈಗಲೂ ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಈ ಕಂಪನಿ ಅಗ್ರಸ್ಥಾನದಲ್ಲಿದೆಯಾದರೂ 2002ರಲ್ಲಿ ಅದರ ಸ್ಮಾರ್ಟ್​ಫೋನ್ ಮಾರಾಟ ಶೇ. 25ರಷ್ಟು ಕಡಿಮೆಯಾಗಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾದ ಐಡಿಸಿ ಹೇಳಿದೆ.
ಆ ಕ್ಷಣದಿಂದ ಈಗಲೂ ಹೊರಬರಲು ಆಗ್ತಿಲ್ಲ… ಸ್ಟಾರ್​​ ಬ್ಯಾಟ್ಸ್​ಮನ್​ ಸಂಜು ಸ್ಯಾಮ್​ಸನ್ ಭಾವುಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 5 =
Remember me
