ಹುಟ್ಟಿನಿಂದ ಬದುಕಿನ ಯಾನ ಮುಗಿಸುವವರೆಗಿನ ವಿವಿಧ ಹಂತಗಳಲ್ಲಿ ದಾದಿಯರು ಸೇವೆ ಸಲ್ಲಿಸುತ್ತಾರೆ. ಅವರ ಈ ಸೇವೆಗೆ ಬೆಲೆ ಕಟ್ಟಲು ಆಗುವುದಿಲ್ಲ. ಆದ್ದರಿಂದ ಅವರ ಹೋರಾಟಕ್ಕೆ ನಾವು ಕೈಜೋಡಿಸಬೇಕಿದೆ. ಅವರ ನೋವುಗಳಿಗೆ ದನಿಯಾಗಬೇಕಿದೆ. ಅವರ ಕೆಲಸಗಳನ್ನು ತಾತ್ಸಾರದಿಂದ ಕಾಣುವ ಪ್ರವೃತ್ತಿ ಕೈಬಿಡಬೇಕು. ಇದೇ ನಾವು ಅವರಿಗೆ ಕೊಡುವ ದೊಡ್ಡ ಕೊಡುಗೆ.
-ವಿಲಾಸ ಮೇಲಗಿರಿ ಬೆಂಗಳೂರು
ದಾದಿಯರು ಸಾರ್ವಜನಿಕ ಮತ್ತು ಆರೋಗ್ಯ ರಕ್ಷಣಾ ವ್ಯವಸ್ಥೆಯ ನಡುವಿನ ಮೊದಲ ಕೊಂಡಿ. ಅವರ ಮಾನವೀಯ ಸೇವೆ ಅನನ್ಯ. ಕೋವಿಡ್ ಸಂದರ್ಭದಲ್ಲಂತೂ ದಾದಿಯರು ತೋರಿದ ನಿಸ್ವಾರ್ಥ, ನಿರ್ಭೀತ ಸೇವೆಗೆ ಸರಿಸಾಟಿಯೇ ಇಲ್ಲ. ದಾದಿಯರ ಆದರ್ಶ ಕಾರ್ಯದಿಂದಲೇ ದಿನಕ್ಕೆ ಒಂದು ಕೋಟಿಗಿಂತಲೂ ಹೆಚ್ಚು ಕೋವಿಡ್ ಲಸಿಕೆ ನೀಡಲು ಸಾಧ್ಯವಾಯಿತು!
ಮನು ಕುಲಕ್ಕೆ ಬೃಹತ್ ಸವಾಲು ಒಡ್ಡಿದ್ದ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ಶುಶ್ರೂಷಕರ ಕೊಡುಗೆ ಪ್ರಶಂಸನೀಯ. ಆರೋಗ್ಯ ರಕ್ಷಣೆ ಒದಗಿಸುವಲ್ಲಿ ಆಧಾರಸ್ತಂಭವಾಗಿರುವ ದಾದಿಯರು ತಮ್ಮ ಜೀವನವನ್ನೇ ಮುಡಿಪಿಟ್ಟು ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ.
ಈ ದಾದಿಯರ ಮಾನವೀಯ ಸೇವೆ ಗುರುತಿಸಲು ಮತ್ತು ಗೌರವಿಸಲು ಪ್ರತಿ ವರ್ಷ ಮೇ 12ನೇ ತಾರೀಖಿನಂದು ಪ್ರಪಂಚದಾದ್ಯಂತ ದಾದಿಯರ ದಿನವನ್ನು ಆರಿಸಲಾಗುತ್ತದೆ. ಮಾಡರ್ನ್ ನರ್ಸಿಂಗ್​ನ ಸಂಸ್ಥಾಪಕಿ ಫ್ಲೋರೆನ್ಸ್ ನೈಟಿಂಗೇಲ್ ಅವರ ಜನ್ಮ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ದಾದಿಯರ ದಿನ ಆಚರಿಸಲಾಗುತ್ತದೆ.
ವೈದ್ಯರು ನಿರ್ದೇಶಿಸಿದ ಚಿಕಿತ್ಸಾ ಸೂತ್ರಗಳನ್ನು ಅನುಷ್ಠಾನಗೊಳಿಸುವಲ್ಲಿ ಆಸ್ಪತ್ರೆಯ ದಾದಿಯರು ಮಹತ್ವದ ಪಾತ್ರ ವಹಿಸುತ್ತಾರೆ. ವಿಶ್ವ ಭ್ರಾತೃತ್ವದ ಪರಿಕಲ್ಪನೆಯನ್ನು ಕಾರ್ಯಾರ್ಥದಲ್ಲಿ ಸಾಕಾರಗೊಳಿಸುವವರು ನಿಜಕ್ಕೂ ಶುಶ್ರೂಷಕರು. ಅಪಘಾತ, ತೀವ್ರ ನಿಗಾ, ಶಸ್ತ್ರಕ್ರಿಯಾ, ಮಕ್ಕಳ ವಿಭಾಗ, ಹೆರಿಗೆ, ಹೃದಯ ಚಿಕಿತ್ಸೆ ಇತ್ಯಾದಿ ವಿಭಾಗಗಳಲ್ಲಿ ಶುಶ್ರೂಷಾ ಸೇವೆಗೆ ಅಗ್ರ ಸ್ಥಾನವಿದೆ. ಆದರೆ, ದಾದಿಯರ ಕ್ಷೇತ್ರದಲ್ಲಿ ಸವಾಲುಗಳೇ ಹೆಚ್ಚು. ಹಾಗಾಗಿ ಈ ಕ್ಷೇತ್ರ ಹೆಚ್ಚು ಜನರನ್ನು ಆಕರ್ಷಿಸುತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 350 ಜನರಿಗೆ ಒಬ್ಬ ಶುಶ್ರೂಷಕರು ಇರಬೇಕು. ಆದರೆ, ಭಾರತದಲ್ಲಿ ಪ್ರಸ್ತುತ 600 ಜನರಿಗೆ ಒಬ್ಬರು ದಾದಿಯರಿದ್ದಾರೆ.
ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸಿನಂತೆ 2024ಕ್ಕೆ 43 ಲಕ್ಷ ನರ್ಸ್ ಬೇಕಾಗಬಹುದು. ಭಾರತದಿಂದಲೇ ಹೆಚ್ಚು ಮಂದಿ ನರ್ಸ್​ಗಳು ವಿದೇಶಕ್ಕೆ ಹೋಗುತ್ತಾರೆ. ಆದರೆ, ಫಿಲಿಪಿನ್ಸ್ ಇತ್ತೀಚೆಗೆ ಮುಂಚೂಣಿಯಲ್ಲಿದೆ.
ವೈಜ್ಞಾನಿಕವಾಗಿ ನರ್ಸಿಂಗ್ ಸೇವೆ ವಿಸ್ತಾರಗೊಂಡಿದೆ. ಕರ್ನಾಟಕದಲ್ಲಿ ನರ್ಸ್ ಕೋರ್ಸ್ ಪ್ರವೇಶ ಪಡೆಯಬೇಕೆಂದರೆ ಪಿಯು ಆಗಿರಬೇಕು. ಜಿಎನ್​ಎಂ, ಬಿಎಸ್ಸಿ ನರ್ಸಿಂಗ್ ಎರಡು ರೀತಿ ಕೋರ್ಸ್​ಗಳಿವೆ. ಅಷ್ಟೇ ಅಲ್ಲದೆ, ನರ್ಸಿಂಗ್​ನಲ್ಲಿ ಕೆಪಾಸಿಟಿ ಬಿಲ್ಡಿಂಗ್ ಅಂಡ್ ಟ್ರೖೆನಿಂಗ್ ಫಾರ್ ಇಂಡಸ್ಟಿ್ರ ನರ್ಸಸ್, ಶಾರ್ಟ್ ಕೋರ್ಸ್ ಆನ್ ಕ್ರಿಟಿಕಲ್ ಕೇರ್, ಹೆಲ್ತ್ ಕೇರ್ ಏಡ್ ಪ್ರೋಗ್ರಾಂ, ಜನರಲ್ ಡ್ಯೂಟಿ ಅಸಿಸ್ಟಂಟ್, ಫಿನಿಶಿಂಗ್ ಸ್ಕಿಲ್ ಫಾರ್ ನರ್ಸಿಂಗ್ ಎಕ್ಸಲೆನ್ಸ್ (ಎಫ್​ಐಎನ್​ಇ), ಡಯಾಬಿಟೀಸ್ ಮ್ಯಾನೇಜ್​ವೆುಂಟ್ ಪ್ರೋಗ್ರಾಂ ಮತ್ತಿತರ ಹೊಸ ಹೊಸ ಕೋರ್ಸ್​ಗಳಿವೆ. ಕರ್ನಾಟಕದಲ್ಲಿ ಹೊಸದಾಗಿ ನರ್ಸಿಂಗ್ ವೃತ್ತಿಗೆ ಸೇರುವವರಿಗೆ 15 ರಿಂದ 20 ಸಾವಿರ ರೂ. ಮಾಸಿಕ ವೇತನ ಸಿಗುತ್ತದೆ. ಹಾಗಾಗಿ, ಇತ್ತೀಚೆಗೆ ಈ ಕೋರ್ಸ್​ಗೆ ಬೇಡಿಕೆ ಕಡಿಮೆಯಾಗಿದೆ.
ನರ್ಸ್​ಗಳಿಗೆ ಯೂರೋಪ್ ಮಾರುಕಟ್ಟೆ ಮುಕ್ತವಾಗಿದೆ. ಜರ್ಮನ್, ಇಟಲಿ, ಐರೋಪ್ಯ ಭಾಷೆಗಳನ್ನು ಕಲಿತವರಿಗಂತೂ ತುಂಬ ಬೇಡಿಕೆಯಿದೆ. ಜಪಾನ್, ಜರ್ಮನಿ ಇಟಲಿ ಮೂರೂ ದೇಶದ ಭಾಷೆ ಕಲಿತರೆ ವಾರ್ಷಿಕ 20-30 ಲಕ್ಷ ರೂ. ಸಂಬಳ ನಿಶ್ಚಿತವಾಗಿಯೂ ಸಿಗುತ್ತದೆ! ಐಇಎಲ್​ಟಿಎಸ್/ಒಇಟಿ ಪರೀಕ್ಷೆ ಆದರೆ ಯುಕೆಯಲ್ಲಿ ಇನ್ನೂ ವಿಫುಲ ಅವಕಾಶ ಸಿಗುತ್ತವೆ. ಆದ್ದರಿಂದ ನರ್ಸ್ ಕೋರ್ಸ್ ಮಾಡುವಾಗಲೇ ವಿದೇಶ ಭಾಷೆಗಳನ್ನು ಕಲಿತರೆ ಒಳ್ಳೆಯ ಭವಿಷ್ಯವಿರುತ್ತದೆ.
ಭಾರತದ ದಾದಿಯರಿಗೆ ವಿದೇಶಗಳಲ್ಲಿ ತುಂಬ ಬೇಡಿಕೆ ಇದೆ. ಬಹರೇನ್, ಕುವೈತ್, ಉಮನ್, ಕತಾರ್, ಸೌದಿ ಅರೆಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್​ಗಳಿಗೆ ಭಾರತದಿಂದ ಹೆಚ್ಚು ಮಂದಿ ನರ್ಸ್​ಗಳು ಹೋಗುತ್ತಾರೆ. ಅಲ್ಲಿ ಮೂರ್ನಾಲ್ಕು ವರ್ಷ ಅನುಭವವುಳ್ಳವರಿಗೆ ಮಾಸಿಕ 80 ಸಾವಿರದಿಂದ 1.50 ಲಕ್ಷ ರೂ.ವರೆಗೆ ವೇತನ ಸಿಗುತ್ತದೆ. ಕೇರಳದಿಂದ ಜಾಸ್ತಿ ಹೋಗುತ್ತಿದ್ದಾರೆ. ಜತೆಗೆ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶದಿಂದಲೂ ತುಂಬ ಜನ ಹೋಗುತ್ತಾರೆ. ಮುಂಬೈ, ಉತ್ತರ ಪ್ರದೇಶದಿಂದಲೂ ಕೆಲವರು ಹೋಗುತ್ತಾರೆ. ಸಂಬಳದ ಜತೆ ಏರ್ ಟಿಕೆಟ್, ಊಟ, ವಸತಿ ಮತ್ತಿತರ ಸೌಲಭ್ಯಗಳನ್ನು ಕೊಡುವುದರಿಂದ ಇಲ್ಲಿನ ನರ್ಸ್ ಗಳು ಹೆಚ್ಚು ಆಕರ್ಷಿತರಾಗುತ್ತಾರೆ.
ದಾದಿಯರಿಲ್ಲದೆ ಆರೋಗ್ಯ ಸೇವೆ ಪರಿಪೂರ್ಣಗೊಳ್ಳುವುದಿಲ್ಲ. ಹಾಗೆಂದು ನರ್ಸ್ ಎಂಬುದು ಹುದ್ದೆಯಲ್ಲ. ಅದೊಂದು ಸೇವೆ. ನರ್ಸ್​ಗಳು ಅನುಭವಿಸುವ ಕಷ್ಟಗಳು ಒಂದೆರಡಲ್ಲ. ಅವರ ಸಂಕಷ್ಟ ಸಮಾಜಕ್ಕೆ ಅರ್ಥವೂ ಆಗುವುದಿಲ್ಲ. ಹುಟ್ಟಿನಿಂದ ಬದುಕಿನ ಯಾನ ಮುಗಿಸುವವರೆಗಿನ ವಿವಿಧ ಹಂತಗಳಲ್ಲಿ ದಾದಿಯರು ಸೇವೆ ಸಲ್ಲಿಸುತ್ತಾರೆ. ಅವರ ಈ ಸೇವೆಗೆ ಬೆಲೆ ಕಟ್ಟಲು ಆಗುವುದೇ ಇಲ್ಲ. ಆದ್ದರಿಂದ ಅವರ ಹೋರಾಟಕ್ಕೆ ನಾವು ಕೈಜೋಡಿಸಬೇಕಿದೆ. ಅವರ ನೋವುಗಳಿಗೆ ದನಿಯಾಗಬೇಕಿದೆ. ಅವರ ಕೆಲಸಗಳನ್ನು ತಾತ್ಸಾರದಿಂದ ಕಾಣುವ ಪ್ರವೃತ್ತಿ ಕೈಬಿಡಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಅದೇ ನಾವು ಅವರಿಗೆ ಕೊಡುವ ದೊಡ್ಡ ಕೊಡುಗೆ.
ನರ್ಸಿಂಗ್ ಕಾಲೇಜುಗಳ ಗುಣಮಟ್ಟ, ಭಾರತೀಯ ನರ್ಸ್ ಗಳಿಗಿರುವ ಮಾನ್ಯತೆ, ಅವರ ನಡವಳಿಕೆ, ದೀರ್ಘಾವಧಿ ಸೇವಾ ಬದ್ಧತೆಗಳು ಭಾರತದ ನರ್ಸ್​ಗಳಿಗೆ ವಿದೇಶದಲ್ಲಿ ಬೇಡಿಕೆ ಹೆಚ್ಚಿರಲು ಪ್ರಮುಖ ಕಾರಣವಾಗಿವೆ. ಯೂರೋಪ್ ದೇಶಗಳಿಂದ ಖುದ್ದು ಭಾರತಕ್ಕೆ ಬಂದು ನರ್ಸ್​ಗಳನ್ನು ಆಯ್ಕೆ ಮಾಡಿ ಕರೆದೊಯ್ಯಲಾಗುತ್ತದೆ. ಅಲ್ಲೆಲ್ಲ ನರ್ಸ್ ಗಳಿಗೆ ಊಟ, ವಸತಿಯಷ್ಟೇ ಅಲ್ಲ, ಕುಟುಂಬದವರಿಗೂ ವೀಸಾವನ್ನು ಕೊಡಲಾಗುತ್ತಿದೆ. ಕೆಲವು ದೇಶಗಳಲ್ಲಿ ಶಾಶ್ವತ ಮನೆಗಳನ್ನು ಕೊಡುತ್ತಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 14 =
Remember me
