-ಮನು ಎಚ್. ಎಸ್. ಹೆಗ್ಗೋಡು
1994ರಬೇಸಿಗೆ, ನಾನು ಡಿಪ್ಲೋಮಾದ ಕೊನೆಯ ವರ್ಷದಲ್ಲಿ ಇದ್ದ ಸಮಯ. ಕಾಲೇಜಿನಿಂದ ಶೈಕ್ಷಣಿಕ ಪ್ರವಾಸಕ್ಕೆ ಅಂತ ಹೋಗಿದ್ದಾಗ ಬಾಗಲಕೋಟೆಯಲ್ಲಿ ಒಂದು ರಾತ್ರಿ ಉಳಿಯೋದಿತ್ತು. ರಾತ್ರಿ ಊಟ ಬೇಗ ಮುಗಿದಿತ್ತು. ಸೆಖೆ ಸಿಕ್ಕಾಪಟ್ಟೆ ಇರೋದ್ರಿಂದ ಮಲಗೋದು, ನಿದ್ದೆ ಮಾಡೋದಕ್ಕೆಲ್ಲಾ ಸಾಧ್ಯವೆ ಇರಲಿಲ್ಲ. ಹಾಗಾಗಿ ಅಲ್ಲಲ್ಲಿ ನಾವು ಗುಂಪು ಗುಂಪಾಗಿ ನಡಿತಾ ನಡಿತಾ ಪಟ್ಟಣದ ಹೊರಭಾಗದ ರಸ್ತೆ ಮೇಲೆ ಸಾವಕಾಶವಾಗಿ ಹೋಗ್ತಾ ಇದ್ವಿ.
ಮುಂದೆ ಮುಂದೆ ಹೋದ ಹಾಗೆ ರಸ್ತೆ ದೀಪಗಳು ವಿರಳ. ಅಲ್ಲೊಂದು ಇಲ್ಲೊಂದು ಅಷ್ಟೆ. ಅಂಥ ಸಮಯದಲ್ಲಿ ನಮ್ಮ ಗುಂಪಿಗೂ ಸ್ವಲ್ಪ ಮುಂದೆ ಹೆಣ್ಣು ಮಕ್ಕಳ ಒಂದು ಗುಂಪು ಕೂಡಾ ಹೋಗ್ತಾ ಇತ್ತು. ಕೆಲವರು ಸೀರೆ, ಇನ್ನೂ ಕೆಲವರು ನೈಟಿ ಹಾಕಿದ್ದರು ಅಂತ ನೆನಪು. ಅವರ ಪಾಡಿಗೆ ಅವರು ಸುಮ್ಮನೆ ನಡೆದ್ಕೊಂಡು ಹೋಗ್ತಾ ಇದ್ದಿದ್ದರೆ ಈಗ ಈ ಕತೆ ಹೇಳೋ ಸಂದರ್ಭವೇ ಬರ್ತಾ ಇರಲಿಲ್ಲ. ಅವರಲ್ಲಿ ಕೆಲವರು ನಮ್ಮ ಗುಂಪಿನ ಕಡೆ ತಿರುತಿರುಗಿ ನೋಡೋದು, ಮುಸಿ ಮುಸಿ ನಗೋದು ಮಾಡ್ತಾ ಇದ್ದುದಕ್ಕೆ ನಮ್ಮ ಹುಡುಗರಲ್ಲಿ ಕೆಲವು ಪ್ರಳಯಾಂತಕರಿಗೆ ಆ ಹುಡುಗಿಯರ ಮುಸಿ ಮುಸಿ ನಗುವಿನಲ್ಲಿ ಏನೇನೊ ಅರ್ಥ ಆಗ್ಲಿಕ್ಕೆ ಶುರು ಅಗಿತ್ತು!
ಹಾಗೆ ಹೋಗ್ತಾ ಹೋಗ್ತಾ ಸ್ವಲ್ಪ ಮುಂದಕ್ಕೆ ಹೋಗಿ ಅವರು ಎಡಕ್ಕೆ ತಿರುಗಿ ಇನ್ನೂ ಜಾಸ್ತಿ ಕತ್ತಲೆ ಇರೋ ರಸ್ತೆಗೆ ಹೋದ್ರು. ನಾವೇನ್ ಮಾಡೋದು? ನಾವು ಅದೇ ರಸ್ತೆ ಹಿಡಿದು ಅವರನ್ನೇ ಹಿಂಬಾಲಿಸಿದ್ವಿ! ಕತ್ತಲೆ, ಹೊಸ ಜಾಗ ಆಗಿದ್ದಕ್ಕೆ ನಮ್ಮ ನಡಿಗೆ ಸ್ವಲ್ಪ ನಿಧಾನ ಆಯ್ತು. ಅದ್ರೀಗ ನಮಗೂ ಆವರಿಗೂ ಅಂತರ ಜಾಸ್ತಿ ಆಗ್ತಾ ಬಂದಿತ್ತು. ಯಾಕೋ ಏನೋ ಅವರು ಸ್ವಲ್ಪ ದೂರ ಹೋಗಿ ರಸ್ತೆ ಮಧ್ಯದಲ್ಲೇ ನಿಂತೆ ಬಿಟ್ರು. ನಾವು ಸ್ವಲ್ಪ ದೂರದಲ್ಲಿ ಹಾಗೆ ರಸ್ತೆ ಮೇಲೆ ಸ್ವಲ್ಪ ಹೊತ್ತು ನಿಂತ್ವಿ.
ನಾವು ಬರ್ಲಿ ಅಂತ ಅವರು ನಿಂತಿದಾರೆ ಅನ್ನೋದು ನಮ್ಮಲ್ಲಿ ಕೆಲವರ ಅಂದಾಜು. ಆದ್ರೆ ಇನ್ನೂ ಇನ್ನೂ ಮುಂದೆ ಹೋಗೋಕೆ ನಮ್ಮಲ್ಲಿ ಕೆಲವರಿಗೆ ಯಾಕೋ ಮುಜುಗರ ಆಗೋಕೆ ಶುರು ಆಯ್ತು. ಮುಜುಗರ ಅಂತ ಅನ್ನೋ ಬದಲು ಭಯ ಆಗೋಕೆ ಶುರು ಆಯ್ತು. ಅವರು ಯಾರೋ ಏನೋ, ಹೀಗೆ ಎಲ್ಲಿಗೋ ಕರ್ಕೊಂಡು ಹೋಗಿ ನಮ್ಮ ಕಣ್ಣು ಕಿತ್ತರೆ, ಮತ್ತೇನಾದ್ರು ಮಾಡಿದ್ರೆ? ಹೀಗೆ ನಾವು ಕೆಲವು ಹುಡುಗರು ಭಯಭೀತರಾಗಿದ್ದರೆ ಇನ್ನು ಉಳಿದ ಹುಡುಗರು ಕೈ ಕೈ ಹಿಸುಕಿಕೊಂಡು ಚಡಪಡಿಸ್ತಾ ಇದ್ರು! ನಮ್ಮ ಜತೆ ಇದ್ದ ಭದ್ರಾವತಿ ಹುಡುಗರಿಗಂತೂ ಜಾಸ್ತಿ ಟೈಮ್ ವೇಸ್ಟ್ ಮಾಡೋಕೆ ಆಗ್ತಾ ಇರಲಿಲ್ಲಾ. ಅವರಿಗಂತೂ ಭಯ ಮತ್ತೊಂದು ಅನ್ನೋದು ಗೊತ್ತೇ ಇರಲಿಲ್ಲಾ ಬಿಡಿ. ನಮ್ಮ ಪುಕ್ಕಲುತನ ಅರ್ಥ ಅಗಿನೋ ಏನೋ ಅ ಹೆಣ್ಣು ಮಕ್ಕಳು ನಿಧಾನಕ್ಕೆ ಅಲ್ಲೇ ರಸ್ತೆ ಪಕ್ಕದ ಒಂದು ಹಾಳು ಜಾಗಕ್ಕೆ ನಿಧಾನಕ್ಕೆ ಒಬ್ಬೊಬ್ಬರಾಗೆ ಜಾರ್ಕೊತಾ ಇದ್ರು. ನಾವೀಗ ಪುಕ್ಕಲರು ಹಾಗೂ ಧೈರ್ಯಸ್ಥರು ಅಂತ ಎರಡು ಗುಂಪಾಗಿ ಒಡೆದು ಹೋಗಿದ್ವಿ.
ಧೈರ್ಯಸ್ತರಿಗೆ ನಮ್ಮ ಮೇಲೆ ಕೋಪ ಬರೋಕೆ ಶುರು ಆಯ್ತು. ”ಹೇ ಹೋಗ್ರಲೇ ಎಲ್ಲಾದ್ರು ಹೇಲ್ ತಿನ್ನೋಕೆ ಹೋಗ್ರೋ, ನಿಮ್ಮಂಥ ಪುಕ್ಕಲರನ್ನ ಕಟ್ಟಕೊಂಡ್ರೆ ಅಸ್ಟೆ ಕತೆ” ಅಂತ ಉಗ್ಯೋಕೆ ಶುರು ಮಾಡಿದ್ರು. ನಮಗೂ ಯಾಕೋ ಇದೆಲ್ಲಾ ಜಾಸ್ತಿ ಆಯಿತು ಅನ್ಸಿ ಅವರಿಗಿಂತಾ ಜಾಸ್ತಿನೇ ಧೈರ್ಯ ಮಾಡಿ ಹಿಂದೆ ತಿರುಗಿ ವಾಪಾಸ್ ಹೊರಟೆ ಬಿಟ್ವಿ. ನಮ್ಮ ಜತೆಗೆ ಇನ್ನೂ ಕೆಲವರು ದಿಕ್ಕು ತೋಚದೆ ವಾಪಸ್ ಬಂದ್ರು.

ಧೈರ್ಯಸ್ತ್ರು 6 ಜನ ಹಾಗೆ ಅ ಹುಡುಗಿಯರು ಹೋದ ಕಡೆ ಕತ್ತಲಿನಲ್ಲಿ ನಿಧಾನಕ್ಕೆ ಹೋಗೋಕೆ ಶುರು ಮಾಡಿದ್ರು. ಅವರು ಆ ಕಡೆ ಹೋಗೋದು ನೋಡೇ ನಮ್ಮ ಎದೆ ಡವ ಡವ ಅಂತಿತ್ತು. ನಾವು ಬೇಗ ಬೇಗ ಕಾಲ್ಕಿತ್ತು ಮುಖ್ಯ ರಸ್ತೆ ಕಡೆಗೆ ಓಡೋಡಿ ಬಂದು ಉಸಿರು ಬಿಡ್ತಾ ಇದ್ವಿ. ನಮ್ಮ ಜೊತೆ ಇದ್ದ ಕೆಲವು ಪುಕ್ಕರಿಗೆ ಅಷ್ಟಾದ್ರೂ ಮುಂದೆನಾಯ್ತು ಅನ್ನೋದನ್ನ ತಿಳಿಯೋ ಚಪಲ. ಸ್ವಲ್ಪ ಹೊತ್ತು ಇಲ್ಲೇ ಕಾಯೋಣ ಏನಾಗತ್ತೆ ನೋಡೋಣ ಅನ್ನೋಕೆ ಶುರು ಮಾಡಿದ್ರು! ಅಯ್ಯೋ ಏನು ಬೇಡಾ ಕಣ್ರೂ.. 9 ಗಂಟೆ ಅಗ್ತಾ ಬಂತು, ಸಾಕು ಬರ್ರೋ ಅಂತ ಅವರನ್ನು ಅಂತೂ ಇಂತೂ ಎಳಕೊಂಡು ಬಂದ್ವಿ.
ಇನ್ನೇನು ನಾವು ಉಳಕೊಂಡಿದ್ದ ಲಾಡ್ಜ್ ಹತ್ರ ಹತ್ರ ಬರ್ತಾ ಇರೋವಾಗ ಈ ಮಂಗ್ಯಾಗಳು ಬಿದ್ದು ಬಿದ್ದು ನಗ್ತಾ ನಮ್ಮ ಹಿಂದೆ ಓಡಿ ಓಡಿ ಬರ್ತಾ ಇದ್ದಿದ್ದು ನೊಡಿ ನಾವು ನಿಂತ್ವಿ. ‘ಏನಾತ್ರೋ?’ ಅಂತ ಕೇಳಿದ್ರೆ ಒಬ್ಬರೂ ಸರಿ ಏನು ಅಂತ ಹೇಳ್ತಾ ಇಲ್ಲಾ! ಅವರು ಅಷ್ಟೊಂದು ನಗೋದು ನೋಡಿ, ಒದೆ ಅಂತು ತಿನ್ಕೊಂಡು ಬಂದಿಲ್ಲಾ, ಹಾಗಿದ್ದರೆ ಇನ್ನೇನಾಗಿರ್ಬೋದು ಅನ್ನೋದು ಅರ್ಥ ಆಗದೆ ನಮಗೂ ನಗೂ ಬರೋಕೆ ಶುರು ಆಯ್ತು.
ಅವರ ಒಗ್ಗಟಿಗೆ ಬೆಂಕಿ ಹಾಕ, ಒಬ್ಬರೂ ವಿಷ್ಯ ಏನು ಅಂತ ಹೇಳ್ತಾ ಇಲ್ಲಾ. ಅಷ್ಟ್ರಲ್ಲಿ ಬೀಡಾ ತಿನ್ನೋಕೋ ಇಲ್ಲಾ ಹೊಗೆ ಬಿಡೊಕೋ ಹೋಗಿದ್ದ ನಮ್ಮ ಸರ್ ಅಲ್ಲಿಗೆ ಬಂದು “ಹೋಗ್ರೋ ನಿದ್ದೆ ಮಾಡ್ರೋ, ನಾಳೆ ಬೆಳಗ್ಗೆ ಎಲ್ಲಾ 6 ಗಂಟೆಗೆ ರೂಮ್ ಖಾಲಿ ಮಾಡ್ಬೆಕು” ಅಂತ ಅವಾಜ್ ಹಾಕಿದ್ದಕ್ಕೆ ಎಲ್ಲರೂ ಸೈಲೆಂಟ್ ಆಗಿ ಬಂದು ಮಲಗಿದಮೇಲೆ ನನ್ನ ಪಕ್ಕನೆ ಮಲಗಿದ್ದ ಒಂದು ಮಂಗ್ಯಾ ನಿಧಾನಕ್ಕೆ ಬಾಯಿ ಬಿಟ್ಟಾ.
ಏನು ಅಂದ್ರೆ ಅವರೆಲ್ಲಾ ಅಲ್ಲಿ ತನಕ ಹೋಗಿ ಕತ್ತಲಲ್ಲಿ ಮಾಯಾ ಆಗಿದ್ದು ಎರಡಾಕ್ಕೆ (ಬಹಿರ್ದೆಸೆಗೆ-ಶೌಚಕ್ಕೆ) ಕೂರಲಿಕ್ಕೆ ಅಂತ…ಮುಂದೇನು ಮಾತಾಡೋದು? ನಮ್ಮೂರಲ್ಲೂ ಮೊದಲು ಹೀಗೆ ಹಿಂದಿನ ಬೆಟ್ಟಕ್ಕೆ ಹೋಗೋದು ಇತ್ತು. ಅದರಲ್ಲೂ ಹೆಂಗಸ್ರು ತುಂಬ ಗುಟ್ಟಾಗೆ ಹೋಗಿ ಬರ್ತಾ ಇದ್ರು. ನಮ್ಮೂರು ಮಲೆನಾಡಾಗಿದ್ದಕ್ಕೆ ಹಗಲಿನ ಸಮಯದಲ್ಲೇ ಹೋಗಿಬರೋ ಅನುಕೂಲ ಇತ್ತು. ಆದ್ರೆ ಬಯಲು ಸೀಮೆ ಹೆಂಗಸರಿಗೆ ಹಗಲು ಹೊತ್ತು ಹೋಗೋಕೆ ಸಾಧ್ಯ ಇರಲಿಲ್ಲ. ಆದ್ರೂ ಹೀಗೆ ಗುಂಪಲ್ಲಿ ಹೋಗ್ತಾರೆ ಅನ್ನೋದನ್ನ ಎಲ್ಲೂ ಕೇಳೆ ಇರಲಿಲ್ಲಾ. ಪಾಪ ನಮ್ಮ ದೆಸೆಯಿಂದ ಅವರು ಅವತ್ತು ಅಂದಾಜು 2 ಕಿ.ಮೀಗೂ ಜಾಸ್ತಿ ದೂರಾ ಹೋಗಿದ್ರು.
ಮಹಿಳಾದಿನದ ಈ ಸಮಯದಲ್ಲಿ ಅಲ್ಲೀಗ ಮಹಿಳೆಯರ ಈ ಪರಿಸ್ಥಿತಿ ಬದಲಾಗಿರಬಹುದು ಎಂದುಕೊಳ್ಳೋಣ.
ಸವಾಲುಗಳ ನಡುವೆ ಮೇಲೇರುವುದೇ ಸಂಭ್ರಮ; ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 6 =
Remember me
