| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಬಿಜೆಪಿಯಲ್ಲಿ ಆಗಾಗ ಕೇಳಿಬರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವ ಕುರಿತ ಭಿನ್ನದನಿಗೆ ವರಿಷ್ಠರು ಏಕೆ ಮಣೆಹಾಕುತ್ತಿಲ್ಲ? ತಮ್ಮ ಉತ್ತರಾಧಿಕಾರಿ ಯಾರು ಎಂಬುದನ್ನು ಬಿಎಸ್​ವೈ ಅವರೇ ನಿರ್ಧರಿಸಬೇಕಾಗಿದೆಯೇ?
ರಾಜ್ಯ ರಾಜಕೀಯದಲ್ಲಿ ಬಹು ಚರ್ಚೆಗೆ ಒಳಗಾಗಿರುವ ಪ್ರಶ್ನೆಗಳಿವು. ಇವು ಅನೇಕ ಆಯಾಮಗಳನ್ನು ಒಳಗೊಂಡಿರುವ ಪ್ರಶ್ನೆಗಳಾಗಿದ್ದರೂ ಉತ್ತರ ಮಾತ್ರ ಕಷ್ಟದ್ದೇನಲ. ರಾಜ್ಯದಲ್ಲಿ ನಡೆದಿರುವ ಅನೇಕ ಉದಾಹರಣೆಗಳು ವರಿಷ್ಠರ ಗಮನಕ್ಕೆ ಇರುವುದರಿಂದಾಗಿ, ಯಡಿಯೂರಪ್ಪ ವಿರುದ್ಧ ಕೆಲವರು ‘ಅಸಂತೋಷ’ ತೋರಿದರೂ ಯಾವುದೇ ನಿರ್ಧಾರವನ್ನು ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಾಗದ ಸ್ಥಿತಿ ಹೈಕಮಾಂಡ್​ನದು. ಇದು ಬಿಎಸ್​ವೈ ವಿರೋಧಿ ಬಣಕ್ಕೆ ಕೈಕೈ ಹಿಸುಕಿಕೊಳ್ಳುವಂತಹ ಸ್ಥಿತಿಯನ್ನು ತಂದಿರುವುದಂತೂ ಸುಳ್ಳಲ್ಲ. ಇತ್ತೀಚೆಗೆ ಪಕ್ಷದಲ್ಲಿನ ಒಂದಿಬ್ಬರು ಶಾಸಕರು ನಾಯಕತ್ವ ಪ್ರಶ್ನಿಸುವ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಹೈಕಮಾಂಡ್​ನ ಕೆಲವರು ಇಂತಹ ಶಾಸಕರ ಬೆನ್ನಿಗೆ ನಿಂತಿದ್ದಾರೆ ಎಂಬ ಮಾತಿದ್ದರೂ ವರಿಷ್ಠರ ಬೆಂಬಲ ಇಲ್ಲ ಎಂಬುದು ಸಾಬೀತಾ ಗುತ್ತಿದೆ. ಆದರೆ, ಯಾವುದೇ ಕ್ರಮ ತೆಗೆದುಕೊಳ್ಳದೆ ಅಂತಹವರನ್ನು ಮಾತನಾಡಲು ಬಿಟ್ಟಿರುವ ಕ್ರಮ ಪ್ರತಿಪಕ್ಷದಲ್ಲಿರಲಿ ಬಿಜೆಪಿಯಲ್ಲಿಯೇ ನಗೆಪಾಟಿಲಿಗೆ ಕಾರಣವಾಗಿದೆ. ಪಕ್ಷದ ಬೆಳವಣಿಗೆಗೂ ಅಡ್ಡಿಯಾಗುತ್ತಿದೆ.
ಕಷ್ಟ ಏಕೆ?:ರಾಜ್ಯದಲ್ಲಿರುವ ಬಹುಸಂಖ್ಯಾತ ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪ ಈಗ ಪ್ರಶ್ನಾತೀತ ನಾಯಕ. ಬೇರೆ ಯಾವ ಪಕ್ಷದಲ್ಲಿಯೂ ಈ ಸಮುದಾಯಕ್ಕೆ ಬಲಿಷ್ಠ ನಾಯಕತ್ವ ಇಲ್ಲ. ಬಿಜೆಪಿಯಲ್ಲಿಯೂ ಅನೇಕ ಲಿಂಗಾಯತ ಸಚಿವರು, ಶಾಸಕರು ಇದ್ದರೂ ಸಮುದಾಯ ಅವರನ್ನು ಪಕ್ಷ ಮುನ್ನಡೆಸುವಂತಹ ನಾಯಕರನ್ನಾಗಿ ಒಪ್ಪಿಲ್ಲ. ಬಿಜೆಪಿಯ ವೈಚಾರಿಕ ಸಿದ್ಧಾಂತಗಳಿಗಿಂತ ಹೆಚ್ಚಾಗಿ ಯಡಿಯೂರಪ್ಪ ಕಾರಣಕ್ಕೆ ಈ ಸಮುದಾಯ ಬಿಜೆಪಿ ಜತೆ ಉಳಿದಿದೆ. ಇಂತಹ ಸಂದರ್ಭದಲ್ಲಿ ಪಕ್ಷ ಏನಾದರೂ ಅವರನ್ನು ಇಳಿಸುವ ಪ್ರಯತ್ನ ಮಾಡಿದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬುದಕ್ಕೆ ರಾಜ್ಯದಲ್ಲಿಯೇ ಹಿಂದೆ ನಡೆದಿರುವ ಉದಾಹರಣೆಗಳು ಸಾಕ್ಷಿಯಾಗುತ್ತವೆ.
ಹಿಂದಿನ ಉದಾಹರಣೆಗಳೇನು?:ಹಿಂದೆ ಲಿಂಗಾಯತ ಸಮುದಾಯಕ್ಕೆ ಎಸ್. ನಿಜಲಿಂಗಪ್ಪ ಅವರೇ ಸವೋಚ್ಚ ನಾಯಕರಾಗಿದ್ದರು. ಕಾಂಗ್ರೆಸ್ ವಿಭಜನೆಯ ನಂತರ ಅವರು ಇಂದಿರಾ ಗಾಂಧಿ ವಿರುದ್ಧ ಸಿಡಿದೆದ್ದರೂ ಸಮುದಾಯ ಕಾಂಗ್ರೆಸ್​ನಿಂದ ದೂರವಾಗಿ ನಿಜಲಿಂಗಪ್ಪ ಬೆನ್ನಿಗೆ ನಿಂತಿತ್ತು. ನಿಜಲಿಂಗಪ್ಪ ನೇರವಾಗಿ ತಮ್ಮ ಉತ್ತರಾಧಿಕಾರಿಗಳೆಂದು ಗುರುತಿಸಿದ್ದು ರಾಮಕೃಷ್ಣ ಹೆಗಡೆ ಮತ್ತು ವೀರೇಂದ್ರ ಪಾಟೀಲ್ ಅವರನ್ನು. ಉತ್ತರ ಕರ್ನಾಟಕದಲ್ಲಿ ಹೆಗಡೆ ಲಿಂಗಾಯತ ಸಮುದಾಯದ ನಾಯಕರಾದರು. ಪ್ರಧಾನಿಯಾಗಿದ್ದ ಎಚ್.ಡಿ. ದೇವೇಗೌಡರು ಹೆಗಡೆಯವರನ್ನು ಜನತಾ ಪಕ್ಷದಿಂದ ಉಚ್ಚಾಟಿಸಿದರೂ ಲಿಂಗಾಯತ ಸಮುದಾಯ ಹೆಗಡೆ ಬೆಂಬಲಕ್ಕೆ ನಿಂತಿತ್ತು. ಮುಂದೆ ಹೆಗಡೆ ತಮ್ಮ ಲೋಕಶಕ್ತಿಯೊಂದಿಗೆ ಎನ್​ಡಿಎ ಸೇರಿ ವಾಜಪೇಯಿ ಸಂಪುಟದಲ್ಲಿ ಮಂತ್ರಿಯಾದರು.
ಮತ್ತೊಂದು ಉದಾಹರಣೆ ವೀರೇಂದ್ರ ಪಾಟೀಲ್ ಅವರದ್ದು. 1971ರಲ್ಲಿ ಅವರು ಅಧಿಕಾರ ಕಳೆದುಕೊಂಡ ನಂತರ 1988ರಲ್ಲಿ ಎಸ್.ಆರ್. ಬೊಮ್ಮಾಯಿ ಮುಖ್ಯಮಂತ್ರಿ ಆಗುವ ತನಕ 17 ವರ್ಷಗಳ ಕಾಲ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಬೊಮ್ಮಾಯಿ ಅವರನ್ನು ಅದೇ ಸಮುದಾಯದ ಶಾಸಕರ ಮೂಲಕವೇ ಅಧಿಕಾರದಿಂದ ಕೆಳಗಿಳಿಸಲಾಯಿತು. ಆ ಸಂದರ್ಭದಲ್ಲಿ ಸಮುದಾಯ ಕಾಂಗ್ರೆಸ್​ನಲ್ಲಿ ನಾಯಕತ್ವ ವಹಿಸಿದ್ದ ವೀರೇಂದ್ರ ಪಾಟೀಲ್ ಅವರನ್ನು ಬೆಂಬಲಿಸಿತ್ತು. ಆದ್ದರಿಂದಲೇ ಕಾಂಗ್ರೆಸ್ 186 ಸ್ಥಾನಗಳನ್ನು ಗೆಲ್ಲುವಂತಾಯಿತು. ಆದರೆ ಆಗಿನ ಪ್ರಧಾನಿ ರಾಜೀವ್ ಗಾಂಧಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ವಾತಾವರಣ ಚೆನ್ನಾಗಿದೆ’ ಎಂಬ ಅಭಿಪ್ರಾಯ ಹೇಳುವ ಮೂಲಕ ಪಾಟೀಲರನ್ನು ಕೆಳಗಿಳಿಸಿದ್ದರು. ನಿಜಲಿಂಗಪ್ಪ ನಂತರ ಕಾಂಗ್ರೆಸ್ ಕಡೆ ಬಂದಿದ್ದ ಸಮುದಾಯ ವೀರೇಂದ್ರ ಪಾಟೀಲರ ಅಧಿಕಾರ ಚ್ಯುತಿ ಕಾರಣಕ್ಕೆ ಸಿಡಿದು ದೂರವಾಯಿತು. ಮತ್ತೆ ಕಾಂಗ್ರೆಸ್ ಕಡೆ ಬರಲೇ ಇಲ್ಲ. ಸಮುದಾಯದ ಒಲವು ಸ್ವಲ್ಪ ಮಟ್ಟಿಗೆ ಚದುರಿತ್ತು. ಜನತಾದಳ ಸರ್ಕಾರದಲ್ಲಿ ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾದರೂ ಸಮುದಾಯದ ನಾಯಕರಾಗಿ ಅವರು ಹೊರಹೊಮ್ಮಲಿಲ್ಲ. ಜನತಾ ಪರಿವಾರ ವಿಭಜನೆ ಬಿಜೆಪಿಗೆ ವರವೇ ಆಯಿತು. ಲಿಂಗಾಯತ ಸಮುದಾಯವನ್ನು ಬಿಜೆಪಿ ಪರವಾಗಿ ಒಗ್ಗೂಡಿಸಿದ್ದು ಯಡಿಯೂರಪ್ಪ ಎಂಬುದರಲ್ಲಿ ಎರಡು ಮಾತಿಲ್ಲ.
ಅಧಿಕಾರ ಸಿಕ್ಕಲ್ಲಿ ಸಮುದಾಯವನ್ನು ಕೈಯಲ್ಲಿ ಇಟ್ಟುಕೊ ಳ್ಳಲು ಸುಲಭ ಎಂಬುದನ್ನು ಅರಿತ ಅವರು ಜನತಾದಳದ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದರು. ಹಠಕ್ಕೆ ಬಿದ್ದು ಹಣಕಾಸು ಖಾತೆ ಪಡೆದುಕೊಂಡರು. ಆ ಮೂಲಕ ಬೇರೆ ಬೇರೆ ಜನಪ್ರಿಯ ಯೋಜನೆಗಳ ಜತೆಗೆ ಮಠಗಳನ್ನೂ ಸೆಳೆದುಕೊಂಡರು. ಅದರೊಂದಿಗೆ ಸಮುದಾಯದ ಗಟ್ಟಿ ನಾಯಕರಾದರು.
ಪಕ್ಷದಲ್ಲಿ ಸದ್ಯಕ್ಕಂತೂ ಯಡಿಯೂರಪ್ಪ ಅವರಿಗೆ ಪರ್ಯಾಯ ಎಂಬ ನಾಯಕತ್ವ ಹೈಕಮಾಂಡ್​ಗೆ ಕಂಡಿಲ್ಲ. ಉಪ ಮುಖ್ಯಮಂತ್ರಿಗಳಾಗಿ ನೇಮಕ ವಾದವರು ವಿಫಲರಾಗಿದ್ದಾರೆ. ಸಮುದಾಯದ ಮುಖಂಡರು ನಾಯಕತ್ವ ವಹಿಸುವ ರೀತಿಯಲ್ಲಿ ಹೈಕಮಾಂಡ್​ಗೆ ಗೋಚರಿಸುತ್ತಿಲ್ಲ. ಭಿನ್ನಮತದ ದನಿಗಳನ್ನು ಕೆಲವರ ಮೂಲಕ ಹೇಳಿಸುವವರು ಕೆನ್ನೆ ಚಿವುಟುವ ಹಾಗೂ ತೊಟ್ಟಿಲು ತೂಗುವ ಕೆಲಸ ಮಾಡುತ್ತಿದ್ದಾರೆ ಅಷ್ಟೇ. ಇದರಿಂದ ಬಿಎಸ್​ವೈ ನಿರಾಳರಾಗಿದ್ದಾರೆಂದೇ ರಾಜ್ಯದ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ನಿಜಲಿಂಗಪ್ಪ ಜತೆ ಹೇಗೆ ಲಿಂಗಾಯತ ಸಮುದಾಯ ಬಲವಾಗಿ ನಿಂತಿತ್ತೋ ಇಂದು ಅದೇ ರೀತಿ ಯಡಿಯೂರಪ್ಪ ಜತೆ ನಿಂತಿದೆ. ನಿಜಲಿಂಗಪ್ಪ ರೀತಿಯಲ್ಲಿ ಉತ್ತರಾಧಿಕಾರಿ ಆಯ್ಕೆಯನ್ನು ಬಿಎಸ್​ವೈ ಮಾಡಬೇಕು. ಆಗ ಮಾತ್ರ ಸಮುದಾಯ ಇದೇ ರೀತಿಯಲ್ಲಿ ಬಿಜೆಪಿಯೊಂದಿಗೆ ಉಳಿಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಪಕ್ಷದ ಬೆಳವಣಿಗೆ, ಸರ್ಕಾರದ ಅಸ್ತಿತ್ವ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಉತ್ತರಾಧಿಕಾರಿ ಆಯ್ಕೆಯಾಗಬೇಕಾಗಿರುವ ಕಾರಣ ಅಲ್ಲಿಯ ತನಕ ಯಡಿಯೂರಪ್ಪ ಅವರನ್ನು ಇಳಿಸುವುದು ಸುಲಭವಲ್ಲ. ಬೇರೆ ಪಕ್ಷದ ಮುಖಂಡರ ಜತೆಗೂ ಉತ್ತಮ ಸಂಬಂಧ ಹೊಂದಿರುವುದು ಬಿಎಸ್​ವೈ ಪ್ಲಸ್ ಪಾಯಿಂಟ್ ಕೂಡ ಆಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
