ಈ ಬಾರಿ ಮುಖ್ಯಮಂತ್ರಿ ಮೋಹನ್​ಲಾಲ್ ಯಾದವ್ ನೇತೃತ್ವದಲ್ಲಿ ಕಮಲಪಡೆ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದೆ. ಚೌಹಾಣ್​ಗೆ ಹೋಲಿಸಿದರೆ ಮೋಹನ್​ಲಾಲ್ ಜನಪ್ರಿಯತೆ ಕೊಂಚ ಕಡಿಮೆಯೇ. ಆದರೂ ಈ ರಾಜ್ಯದಲ್ಲಿ ಬಿಜೆಪಿ ಕ್ಲೀನ್​ಸ್ವೀಪ್ ಮಾಡುವ ಮೂಲಕ ತನ್ನ ವಿಜಯಯಾತ್ರೆಯನ್ನು ಮುಂದುವರಿಸುತ್ತದೆಯೇ ಎಂಬುದೇ ಕುತೂಹಲ.
| ರಾಘವ ಶರ್ಮ ನಿಡ್ಲೆ, ನವದೆಹಲಿ
ಕಳೆದ ವರ್ಷ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ್ದ ಬಿಜೆಪಿ ಈ ಬಾರಿ ಆ ರಾಜ್ಯದ ಎಲ್ಲಾ 29 ಸೀಟುಗಳನ್ನು ಗೆದ್ದು ಕ್ಲೀನ್​ಸ್ವೀಪ್ ಮಾಡುವ ಲೆಕ್ಕಾಚಾರದಲ್ಲಿದೆ. 2014 ಮತ್ತು 2019ರಂತೆ ಈ ಬಾರಿಯೂ ರಾಜ್ಯದ ಲೋಕಸಭಾ ಚುನಾವಣೆ ಕಣದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸುವುದೇ ಅಥವಾ ಕಾಂಗ್ರೆಸ್ ತನ್ನ ಶಕ್ತಿ ಪ್ರದರ್ಶನ ಮಾಡುವುದೇ? ಬಿಜೆಪಿ 2014ರಲ್ಲಿ 27 ಮತ್ತು 2019ರಲ್ಲಿ 28 ಲೋಕಸಭಾ ಸೀಟುಗಳನ್ನು ಬಾಚಿಕೊಂಡಿತ್ತು. 2019ರಲ್ಲಿ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಅಧಿಕಾರದಲ್ಲಿರಲಿಲ್ಲ. ಬದಲಿಗೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದು, ಕಮಲ್​ನಾಥ್ ಮುಖ್ಯಮಂತ್ರಿಯಾಗಿದ್ದರು. ಹೀಗಿದ್ದರೂ, ಲೋಕಸಭೆ ಚುನಾವಣೆಗೆ ರಾಜ್ಯದ ಮತದಾರರು ಬಿಜೆಪಿಯನ್ನೇ ಆಯ್ಕೆ ಮಾಡಿದ್ದರು. ಈಗ ಬಿಜೆಪಿ ಅಧಿಕಾರದಲ್ಲಿದೆ ಮತ್ತು ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಬದಲಿಗೆ ಮೋಹನ್ ಯಾದವ್ ಸಿಎಂ ಸ್ಥಾನದಲ್ಲಿದ್ದಾರೆ. 2018ರಲ್ಲಿ 114 ಸ್ಥಾನ ಗೆದ್ದು ಅಧಿಕಾರಕ್ಕೇರಿದ್ದ ಕಾಂಗ್ರೆಸ್, ಒಂದೂವರೆ ವರ್ಷದಲ್ಲಿ ಶಾಸಕರ ಪಕ್ಷಾಂತರದಿಂದಾಗಿ ಅಧಿಕಾರ ಕಳೆದುಕೊಂಡಿತು. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂತು. 2023ರಲ್ಲಿ ಬಿಜೆಪಿ 163 ಸೀಟುಗಳನ್ನು ಗೆದ್ದು ಅಭೂತಪೂರ್ವ ಗೆಲುವು ಸಾಧಿಸಿತು. ಶಿವರಾಜ್ ಸಿಂಗ್​ರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡದ ಬಿಜೆಪಿ ವರಿಷ್ಠರ ನಿರ್ಧಾರ ರಾಜ್ಯ ಬಿಜೆಪಿಯ ಅನೇಕರಿಗೆ ಅಸಮಾಧಾನ ಉಂಟು ಮಾಡಿದ್ದು ಸುಳ್ಳಲ್ಲ. ಏಕೆಂದರೆ, ಹಾಲಿ ಸಿಎಂ ಮೋಹನ್ ಯಾದವ್​ಗಿಂತ ಶಿವರಾಜ್ ಎಷ್ಟೋ ಪಟ್ಟು ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ. ಈಗಲೂ ಶಿವರಾಜ್ ರಾಜ್ಯದ ಜನರ ಪ್ರೀತಿಯ ‘ಮಾಮಾ’ ಆಗಿ ಹೃದಯದಲ್ಲಿ ನೆಲೆಸಿದ್ದಾರೆ.
ಕಾಂಗ್ರೆಸ್ ಈ ಬಾರಿ ಹಲವು ಶಾಸಕರಿಗೆ ಲೋಕಸಭೆ ಟಿಕೆಟ್ ಪ್ರಕಟಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತಂತ್ರಗಾರಿಕೆ ಅನುಸರಿಸಿ, ಸಂಸದರಿಗೆ ವಿಧಾನಸಭೆ ಟಿಕೆಟ್ ನೀಡಿತ್ತು. ಕಾಂಗ್ರೆಸ್ 2009ರಲ್ಲಿ 12 ಲೋಕಸಭೆ ಸೀಟುಗಳನ್ನು ಗೆದ್ದು ಉತ್ತಮ ನಿರ್ವಹಣೆ ತೋರಿದ್ದು ಬಿಟ್ಟರೆ, 2000ದಿಂದ ಎಲ್ಲಾ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಯನ್ನೇ ಜನ ನೆಚ್ಚಿಕೊಂಡಿದ್ದಾರೆ.
ಬಿಜೆಪಿ ಕೂಡ 11 ಹಾಲಿ ಸಂಸದರಿಗೆ ಟಿಕೆಟ್ ನೀಡಿಲ್ಲ. ಭೋಪಾಲ್, ಗ್ವಾಲಿಯರ್, ವಿದಿಶಾ, ರತ್ಲಂ, ಗುನಾ, ಬಾಲಾಘಾಟ್, ದಾಮೋಹ್ ಸೇರಿ ಹಲವು ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕೆಟ್ ನೀಡಿದೆ. ಕಮಲ್​ನಾಥ್ ಮತ್ತು ದಿಗ್ವಿಜಯ ಸಿಂಗ್ ಅವರು ಕಾಂಗ್ರೆಸ್ ಪ್ರಚಾರದ ಮುಂದಾಳತ್ವ ವಹಿಸಿದ್ದರೆ, ಪ್ರಧಾನಿ ಮೋದಿ ಜನಪ್ರಿಯತೆಯನ್ನೇ ಬಿಜೆಪಿ ಅಸ್ತ್ರವನ್ನಾಗಿ ಇಟ್ಟುಕೊಂಡಿದೆ.
ಈ ಬಾರಿ ಒಟ್ಟು ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 19ರಂದು ಛಿಂದ್ವಾರಾ, ಜಬಲ್​ಪುರ್ ಸೇರಿ 6 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಭೋಪಾಲ್ ಕ್ಷೇತ್ರದಿಂದ ಕಳೆದ ಬಾರಿ ಕಾಂಗ್ರೆಸ್​ನ ದಿಗ್ವಿಜಯ ಸಿಂಗ್ ವಿರುದ್ಧ ಬಿಜೆಪಿಯ ಸಾಧಿ್ವ ಪ್ರಜ್ಞಾ ಸಿಂಗ್ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ಪ್ರಜ್ಞಾಸಿಂಗ್​ಗೆ ಬಿಜೆಪಿ ಟಿಕೆಟ್ ಕೊಟ್ಟಿಲ್ಲ.
ವಿದಿಶಾಕ್ಕೆ ಶಿವರಾಜ್ ಚೌಹಾಣ್:ನಿರೀಕ್ಷೆಯಂತೆ ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶದ ವಿದಿಶಾ ಕ್ಷೇತ್ರ ದಿಂದ ಸ್ಪರ್ಧಿಸುತ್ತಿದ್ದು, ಲೋಕಸಭೆ ಪ್ರವೇಶಿಸುವುದು ಬಹುತೇಕ ಖಚಿತ ವಾಗಿದೆ. ಚೌಹಾಣ್​ಗೆ ವಿದಿಶಾ ಹೊಸತೇನಲ್ಲ. ಇಲ್ಲಿಂದ 5 ಬಾರಿ ಸಂಸದ ರಾಗಿದ್ದ ಚೌಹಾಣ್, ಕ್ಷೇತ್ರದ ಆಳ-ಅಗಲ ತಿಳಿದುಕೊಂಡಿದ್ದಾರೆ. ಇದು ಬಿಜೆಪಿಯ ಭದ್ರಕೋಟೆ. ಇಲ್ಲಿ ಯಾರೇ ನಿಂತರೂ ಬಿಜೆಪಿಗೆ ಗೆಲುವು ಖಚಿತವೆಂಬ ಅಭಿಪ್ರಾಯ ವಿದೆ. 1980 ಮತ್ತು 1984ರಲ್ಲಿ ಕಾಂಗ್ರೆಸ್ ಗೆದ್ದದ್ದು ಬಿಟ್ಟರೆ 1989ರಿಂದ ಮತದಾರರು ಬಿಜೆಪಿಯನ್ನೇ ಆಯ್ಕೆ ಮಾಡಿದ್ದಾರೆ. 2009 ಮತ್ತು 2014ರಲ್ಲಿ ಸುಷ್ಮಾ ಸ್ಪರ್ಧಿಸಿದ್ದರು. 1991ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇದೇ ಕ್ಷೇತ್ರದಿಂದ ಗೆದ್ದಿದ್ದರು.
ರಾಜ್ಯದ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಈ ಬಾರಿ ರಾಜ್​ಗಢ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. 1991ರಲ್ಲಿ ಇದೇ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ದಿಗ್ವಿಜಯ್ 33 ವರ್ಷಗಳ ಬಳಿಕ ಮತ್ತೊಂದು ಲೋಕಸಭೆ ಸವಾಲಿಗೆ ಸಜ್ಜಾಗಿದ್ದಾರೆ. 2003ರಲ್ಲಿ ಅವರು ರಾಜಗಢ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ರಾಜಗಢ ಕ್ಷೇತ್ರದ ಮೇಲೆ ರಾಘವಗಢ ರಾಜಮನೆತನದ ಪ್ರಭಾವವಿದ್ದು, ದಿಗ್ವಿಜಯ್ ಸಿಂಗ್ ಕೂಡ ಇದೇ ವಂಶಜರಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ, 2 ಬಾರಿ ಸಂಸದರಾಗಿರುವ ರೋಡ್​ವುಲ್ ನಾಗರ್ ಕಣದಲ್ಲಿದ್ದಾರೆ. ದಿಗ್ವಿಜಯ್ ಸಿಂಗ್ ದೇಶದ ಬಹುಸಂಖ್ಯಾತರ ವಿರೋಧಿ ಎಂದು ಅಭಿಯಾನ ಮಾಡುತ್ತಿರುವ ಬಿಜೆಪಿ, 2019ರ ಚುನಾವಣೆಯಲ್ಲೂ ಭೋಪಾಲ್ ಕ್ಷೇತ್ರದಲ್ಲಿ ಇದೇ ತಂತ್ರ ಅನುಸರಿಸಿ, ದಿಗ್ವಿಜಯ್ರನ್ನು ಸೋಲಿಸಿತ್ತು. ಹಿಂದೆ ಇಲ್ಲಿನ ಪ್ರತಿ ಮನೆಯಲ್ಲೂ ದಿಗ್ವಿಜಯ್ ಸಿಂಗ್ ಪ್ರಭಾವವಿದ್ದ ಕಾಲವಿತ್ತು. ಆದರೆ, ಕಳೆದ 20-25 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ಬಿಜೆಪಿ ಕೂಡ ತನ್ನ ಪ್ರಾಬಲ್ಯ ವಿಸ್ತರಿಸಿಕೊಂಡಿದೆ. 2 ಬಾರಿ ಸಂಸದರಾಗಿದ್ದರೂ, ನಾಗರ್ ಅವರು ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ ಎಂಬ ಆಪಾದನೆ ಎದುರಿಸುತ್ತಿದ್ದಾರೆ. ಇದಕ್ಕಾಗಿ, ಪ್ರಚಾರದ ವೇಳೆ ಜನರಲ್ಲಿ ಕ್ಷಮೆಯನ್ನೂ ಯಾಚಿಸಿ, ‘ಈ ಬಾರಿ ನನಗಾಗಿ ಅಲ್ಲ. ಮೋದಿಯವರಿಗಾಗಿ ಮತ ಕೊಡಿ’ ಎಂದು ಬೇಡಿಕೊಳ್ಳುತ್ತಿದ್ದಾರೆ.
ಮಧ್ಯಪ್ರದೇಶದ ಛಿಂದ್ವಾರಾ ಲೋಕಸಭೆ ಕ್ಷೇತ್ರ ಕಳೆದ 44 ವರ್ಷಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಈ ಬಾರಿ ವಿವೇಕ್ ಬಂಟಿ ಸಾಹುಗೆ ಟಿಕೆಟ್ ನೀಡಿರುವ ಬಿಜೆಪಿ, ಕಾಂಗ್ರೆಸ್ ಕೋಟೆಯನ್ನು ಭೇದಿಸಲು ಶಕ್ತಿಮೀರಿ ಯತ್ನಿಸಿದೆ. ರಾಜ್ಯದ ಮಾಜಿ ಸಿಎಂ ಕಮಲ್​ನಾಥ್ ಈ ಕ್ಷೇತ್ರದಿಂದ 9 ಬಾರಿ ಸಂಸದರಾಗಿದ್ದು, ಕಳೆದ ಚುನಾವಣೆಯಲ್ಲಿ ಪುತ್ರ ನಕುಲ್ ನಾಥ್ ಈ ಕ್ಷೇತ್ರದಲ್ಲಿ ಗೆದ್ದಿದ್ದರು. 1998ರ ಚುನಾವಣೆಯಲ್ಲಿ ಕಮಲ್​ನಾಥ್ ಪತ್ನಿ ಅಲ್ಕಾನಾಥ್ ಸ್ಪರ್ಧಿಸಿ ವಿಜಯಿಯಾಗಿದ್ದರು. 1997ರ ಚುನಾವಣೆ ಹೊರತುಪಡಿಸಿದರೆ ಉಳಿದ 11 ಬಾರಿ ಕಮಲ್​ನಾಥ್ ಕುಟುಂಬವೇ ಇಲ್ಲಿ ಗೆದ್ದಿದೆ. ಹಾಲಿ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷದ ಛಿಂದ್ವಾರಾ ಮೇಯರ್ ವಿಕ್ರಮ್ ಅಹಕೆ, ಮಾಜಿ ಶಾಸಕ ದೀಪಕ್ ಸಕ್ಸೇನಾ, ಪುತ್ರ ಅಜಯ್ ಸಕ್ಸೇನಾ, ಅಮರ್ವಾರಾ ಶಾಸಕ ಕಮಲೇಶ್ ಶಾ ಸೇರಿ ನೂರಾರು ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ. ಏತನ್ಮಧ್ಯೆ ಸಿಎಂ ಮೋಹನ್   ಯಾದವ್ ಕೂಡ ಬಿಜೆಪಿ ಅಭ್ಯರ್ಥಿ ಬಂಟಿ ಸಾಹು ಪರ ಭಾರಿ ಪ್ರಚಾರ ನಡೆಸಿದ್ದು, ಕ್ಷೇತ್ರಕ್ಕೆ ನಾಲ್ಕು ಬಾರಿ ಭೇಟಿ ನೀಡಿದ್ದಾರೆ. ಹೀಗಾಗಿ, ನಕುಲ್​ನಾಥ್​ಗೆ ಈ ಬಾರಿ ಸವಾಲಿನ ಹಾದಿಯಿದೆ. 2014ರ ಚುನಾವಣೆಯಲ್ಲಿ ಕಮಲ್​ನಾಥ್ 1 ಲಕ್ಷ ಮತಗಳ ಅಂತರದಲ್ಲಿ ಇಲ್ಲಿ ಗೆದ್ದಿದ್ದರು. 2019ರಲ್ಲಿ ನಕುಲ್​ನಾಥ್ ಗೆಲುವಿನ ಅಂತರ 37 ಸಾವಿರಕ್ಕೆ ಇಳಿದಿತ್ತು. ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಕಮಲ್​ನಾಥ್ ಛಿಂದ್ವಾರಾ ವಿಧಾನಸಭೆಯಿಂದ ಸ್ಪರ್ಧಿಸಿದ್ದಾಗ ಸಾಹು ಎದುರಾಳಿ ಅಭ್ಯರ್ಥಿಯಾಗಿ ಪ್ರಬಲ ಪೈಪೋಟಿ ನೀಡಿದ್ದರು. ಅಂತಿಮವಾಗಿ ಕಮಲ್​ನಾಥ್ ಚುನಾವಣೆ ಗೆದ್ದರು. ಆದರೆ, ಪಕ್ಷ ಅಧಿಕಾರಕ್ಕೆ ಬರಲಿಲ್ಲ.
2019ರ ಲೋಕಸಭೆ ಚುನಾವಣೆಯಲ್ಲಿ ಗುನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ, ಬಿಜೆಪಿಯ ಕೃಷ್ಣಪಾಲ್ ಯಾದವ್ ವಿರುದ್ಧ 1.25 ಲಕ್ಷ ಮತಗಳ ಅಂತರದಿಂದ ಸೋತಿದ್ದರು. ಹಿಂದೊಮ್ಮೆ ಸಿಂಧಿಯಾ ಆಪ್ತರಾಗಿದ್ದ ಕೃಷ್ಣಪಾಲ್ ನಂತರ ಸಿಂಧಿಯಾ ವಿರುದ್ಧವೇ ಸ್ಪರ್ಧಿಸಿ ಸೋಲಿನ ಕಹಿ ಉಣ್ಣುವಂತೆ ಮಾಡಿದ್ದರು. 2020ರಲ್ಲಿ ಕಾಂಗ್ರೆಸ್ ತೊರೆದು, ತಮ್ಮೊಂದಿಗೆ 22 ಶಾಸಕರನ್ನೂ ಬಿಜೆಪಿಗೆ ಸೇರಿಸಿದ್ದ ಜ್ಯೋತಿರಾದಿತ್ಯ, ರಾಜ್ಯಸಭೆ ಸದಸ್ಯರಾಗಿ ಎನ್​ಡಿಎ ಸರ್ಕಾರದಲ್ಲಿ ಕೇಂದ್ರ ಮಂತ್ರಿಯೂ ಆದರು. ಈ ಬಾರಿ ಬಿಜೆಪಿ ಗುನಾದಿಂದ ಸಿಂಧಿಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿರುವುದು ಕೃಷ್ಣಪಾಲ್​ಗೆ ತೀವ್ರ ಬೇಸರ ತರಿಸಿದೆ. ಆರ್​ಎಸ್​ಎಸ್ ಮುಖಂಡರನ್ನೂ ಭೇಟಿ ಮಾಡಿದ್ದ ಕೃಷ್ಣಪಾಲ್, ತಮಗೆ ಅನ್ಯಾಯವಾಗಿದೆ ಎಂದು ಅತೃಪ್ತಿ ತೋಡಿಕೊಂಡಿದ್ದರು. ಗುನಾ ಕ್ಷೇತ್ರದಲ್ಲಿ ಸಿಂಧಿಯಾ ರಾಜಮನೆತನದ ಪ್ರಾಬಲ್ಯವೇ ಹೆಚ್ಚಿದ್ದು, ಹೆಚ್ಚಿನ ಚುನಾವಣೆಗಳಲ್ಲಿ ಸಿಂಧಿಯಾ ಕುಟುಂಬದ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಕಾಂಗ್ರೆಸ್ ಈ ಬಾರಿ ರಾವ್ ಯಾದವೇಂದ್ರ ಸಿಂಗ್ ಯಾದವ್​ರನ್ನು ಕಣಕ್ಕಿಳಿಸಿದೆ.
ಪಂಜಾಬ್ ಪ್ರಾಂತ್ಯದ ಪೊಲೀಸರ ಮೇಲೆ ಪಾಕ್ ಸೇನೆಯಿಂದ ಹಲ್ಲೆ! ಅಷ್ಟಕ್ಕೂ ಆಗಿದ್ದೇನು..?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
