ಗಾಜಾ:ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧ ತೀವ್ರಗೊಂಡಿದೆ. ಹಮಾಸ್​ನ ವಾಯುಪಡೆಯ ಮುಖ್ಯಸ್ಥನನ್ನು ಹತ್ಯೆಗೈದಿರುವುದಾಗಿ ಇಸ್ರೇಲ್ ಘೋಷಿಸಿದ್ದು, ಇದು ತನಗೆ ಸಿಕ್ಕ ದೊಡ್ಡ ಜಯ ಎಂದು ಹೇಳಿಕೊಂಡಿದೆ. ಅಕ್ಟೋಬರ್ 7ರ ಇಸ್ರೇಲ್ ಮೇಲಿನ ಹಠಾತ್ ಮಾರಕ ದಾಳಿಯ ಸೂತ್ರಧಾರರಲ್ಲಿ ಒಬ್ಬನೆನ್ನಲಾದ ಹಮಾಸ್ ನಾಯಕ ಅಸೇಂ ಅಬು ರಕಾಬಾನನ್ನು ಇಸ್ರೇಲ್ ರಕ್ಷಣಾ ಪಡೆಯ (ಐಡಿಎಫ್) ಸಮರ ವಿಮಾನಗಳು ದಾಳಿ ನಡೆಸಿ ಕೊಂದಿವೆ. ಅಬು ರಕಾಬಾ ಹಮಾಸ್​ನ ಮಾನವರಹಿತ ವೈಮಾನಿಕ ವಾಹನಗಳು, ಡ್ರೋನ್​ಗಳು, ಪ್ಯಾರಾಗ್ಲೈಡರ್​ಗಳು ಮತ್ತು ವೈಮಾನಿಕ ರಕ್ಷಣಾ ವ್ಯವಸ್ಥೆಗಳ ಉಸ್ತುವಾರಿ ಹೊಣೆ ಹೊತ್ತಿದ್ದ. ಈ ನಡುವೆ ಕದನವಿರಾಮಕ್ಕೆ ವಿಶ್ವಸಂಸ್ಥೆ ಕರೆ ನೀಡಿದ ಮಹತ್ವದ ವಿದ್ಯಮಾನವೂ ನಡೆದಿದ್ದು, ಭಾರತ ಈ ಗೊತ್ತುವಳಿಗೆ ಬೆಂಬಲ ನೀಡಿಲ್ಲ.
ನಾಶಕ್ಕೆ ಪಣ:ಅಬು ರಕಾಬಾ ಮೇಲಿನ ದಾಳಿ ಹಮಾಸ್ ಅನ್ನು ಸಂಪೂರ್ಣ ನಾಶ ಮಾಡುವ ಕಾರ್ಯದ ಭಾಗವಾಗಿದೆ ಎಂದು ಇಸ್ರೇಲ್ ಘೋಷಿಸಿದೆ. ಹಮಾಸ್​ನ ಭಯೋತ್ಪಾದನಾ ಕೃತ್ಯಗಳ ಸಾಮರ್ಥ್ಯವನ್ನು ನಿಮೂಲನೆ ಮಾಡುವ ಉದ್ದೇಶದಿಂದ ಗಾಜಾದಲ್ಲಿ ಅದರ ನೆಲೆಗಳ ಮೇಲೆ ಇಸ್ರೇಲ್ ವಾಯು ಹಾಗೂ ಭೂ ದಾಳಿಯನ್ನು ತೀವ್ರಗೊಳಿಸಿದೆ. ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರುವುದೂ ಐಡಿಎಫ್ ಗುರಿಯಾಗಿದೆ. ಕದನವಿರಾಮಕ್ಕೆ ವಿಶ್ವಸಂಸ್ಥೆ ನೀಡಿರುವ ಕರೆಯನ್ನು ನಿರ್ಲಕ್ಷಿಸಿರುವ ಇಸ್ರೇಲ್, ತನ್ನ ರಕ್ಷಣೆಗೆ ಕ್ರಮಕೈಗೊಳ್ಳುವುದನ್ನು ಮುಂದುವರಿಸುವುದಾಗಿ ಹೇಳಿದೆ.
ಆಸ್ಪತ್ರೆ ಕೆಳಗೆ ಸುರಂಗ:ಗಾಜಾದಲ್ಲಿರುವ ಅಲ್-ಶಿಫಾ ಆಸ್ಪತ್ರೆಯನ್ನು ಹಮಾಸ್ ತನ್ನ ಕಾರ್ಯಾಚರಣೆಗಳ ನೆಲೆಯಾಗಿ ಬಳಸಿಕೊಳ್ಳುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ತನ್ನ ಆಪಾದನೆಗೆ ಪೂರಕವಾಗಿ ಅದು ಕೆಲವು ಆಡಿಯೋ ಮತ್ತು ವಿಡಿಯೋ ಕ್ಲಿಪ್​ಗಳನ್ನು ಬಿಡುಗಡೆ ಮಾಡಿದೆ. ಬಾಂಬ್ ದಾಳಿ ನಡುವೆ, ಗಾಜಾದಲ್ಲಿನ ಅತ್ಯಂತ ದೊಡ್ಡ ಆಸ್ಪತ್ರೆಯಾದ ಅಲ್-ಶಿಫಾದಲ್ಲಿ ಸುಮಾರು 40,000 ಜನ ಆಶ್ರಯ ಪಡೆದಿದ್ದಾರೆ. ಅಲ್ಲಿ ಗಾಯಾಳುಗಳು ಮತ್ತು ಗರ್ಭಿಣಿಯರಿಗೆ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಸುರಂಗಗಳಿದ್ದು ರಹಸ್ಯ ನಿರ್ಗಮನ ಮಾರ್ಗಗಳೂ ಇರುವ ಬಗ್ಗೆ ಬೇಹುಗಾರಿಕೆ ಮಾಹಿತಿಗಳು ಲಭ್ಯವಾಗಿವೆ ಎಂದು ಇಸ್ರೇಲ್ ಹೇಳಿದೆ. ಇದರಿಂದಾಗಿ ಆಸ್ಪತ್ರೆಯನ್ನು ಪ್ರವೇಶಿಸದೆಯೇ ಹಮಾಸ್ ನಾಯಕರು ಗುಪ್ತನೆಲೆಗೆ ತೆರಳಬಹುದಾಗಿದೆ ಎಂದು ವಿವರಿಸಿದೆ. ಆದರೆ ಇಸ್ರೇಲ್​ನ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹಮಾಸ್ ಸ್ಪಷ್ಟಪಡಿಸಿದೆ.
ಹಮಾಸ್ ಮಾಜಿ ಮುಖ್ಯಸ್ಥನಿಗೆ ಕೇರಳ ಕಾರ್ಯಕ್ರಮದಲ್ಲಿ ಸ್ಥಾನ:ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷಕ್ಕೆ ಕಾರಣವಾಗಿ ರುವ ಉಗ್ರಗಾಮಿ ಸಂಘಟನೆ ಹಮಾಸ್​ನ ಮಾಜಿ ಮುಖ್ಯಸ್ಥ, ಈಗ ಕತಾರ್​ನಲ್ಲಿ ದೇಶಾಂತರ ವಾಸದಲ್ಲಿದ್ದಾನೆಂದು ನಂಬಲಾಗಿರುವ ಖಾಲಿದ್ ಮಾಶೆಲ್​ಗೆ ಕೇರಳದ ಮಲಪು್ಪರಂನಲ್ಲಿ ಯುವ ಸೌಹಾರ್ದ ಆಂದೋಲನ (ಎಸ್​ವೈಎಂ) ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಹತ್ವದ ಸ್ಥಾನ ನೀಡಲಾಗಿತ್ತು. ಆತ ಕಾರ್ಯಕ್ರಮ ಉದ್ದೇಶಿಸಿ ವರ್ಚುವಲ್ ಭಾಷಣ ಮಾಡಿದ್ದು ಈಗ ವಿವಾದವನ್ನು ಸೃಷ್ಟಿಸಿದೆ. ಕೇವಲ ಒಂದು ವಾರದಲ್ಲಿ ಹಮಾಸ್ ಕಮಾಂಡರ್​ನನ್ನು ಸಂರ್ಪಸಿ ಭಾಷಣಕ್ಕೆ ಒಪ್ಪಿಸಲು ತಮಗೆ ಸಾಧ್ಯವಾಯಿತು ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಬಾಷಾ ಪಿ.ಪಿ. ಹೇಳಿದ್ದಾರೆ.
‘ಬುಲ್ಡೋಜರ್ ಹಿಂದುತ್ವ ಮತ್ತು ಜನಾಂಗವಾದಿ ಝಿಯೋನಿಸಂ ಅನ್ನು ನಾಶ ಮಾಡಿ’ ಎಂಬ ಘೋಷಣೆ ಯಡಿ ಪ್ಯಾಲೆಸ್ತೀನ್​ಗೆ ಬೆಂಬಲವಾಗಿ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ‘ಸ್ವಾತಂತ್ರ್ಯ ಹೋರಾಟದ ಮುಂಚೂಣಿಯ ಬಹು-ನಿರೀಕ್ಷಿತ ಸೂಕ್ತ ವ್ಯಕ್ತಿ ಮತ್ತು ಇಸ್ರೇಲಿಗಳ ಕಣ್ಣ ಕಿಸುರು’ ಎಂದು ಸಂಘಟಕರು ಮಾಶೆಲ್​ರನ್ನು ಪರಿಚಯಿಸಿದರು. ಮುಸ್ಲಿಮರಿಗೆ ಪವಿತ್ರವಾದ ಅಲ್-ಅಕ್ಸಾ ಮಸೀದಿಯನ್ನು ರಕ್ಷಿಸಲು ಹಮಾಸ್ ಅಕ್ಟೋಬರ್ 7ರಂದು ದಾಳಿ ನಡೆಸಿತು ಎಂದು ಮಾಶೆಲ್ ತನ್ನ ಭಾಷಣದಲ್ಲಿ ವರ್ಣಿಸಿದ. ಈ ಮೂಲಕ ಹಮಾಸ್​ನ ಹಠಾತ್ ಮಾರಕ ಆಕ್ರಮಣವನ್ನು ಸಮರ್ಥಿಸಿಕೊಂಡ.
ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಶನಿವಾರ 22ನೇ ದಿನವನ್ನು ಪ್ರವೇಶಿಸಿದ್ದು ಗಾಜಾದಲ್ಲಿ ಇಸ್ರೇಲ್ ದಾಳಿಯಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 7,703ಕ್ಕೆ ಏರಿದೆ. ಎರಡೂ ಕಡೆಗಳ ಸಾವಿನ ಸಂಖ್ಯೆ 8,500ನ್ನು ದಾಟಿದೆ.
ಪ್ಯಾಲೆಸ್ತೀನಿ ವಿಚಾರ ಮತ್ತು ಇಸ್ರೇಲ್-ಹಮಾಸ್ ಯುದ್ಧದ ವಿಷಯದಲ್ಲಿ ಭಾರತ ಸರ್ಕಾರದಲ್ಲಿ ಗೊಂದಲವಿದೆ ಎಂದು ಟೀಕಿಸಿರುವ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್​ಸಿಪಿ) ಮುಖ್ಯಸ್ಥ ಶರದ್ ಪವಾರ್, ಈ ಸಂಬಂಧ ಭಾರತದ ‘ನೀತಿಯಲ್ಲಿ ಪಲ್ಲಟವಾಗಿದೆ’ ಎಂದು ಹೇಳಿದ್ದಾರೆ. ಪ್ಯಾಲೆಸ್ತೀನ್ ವಿಚಾರವಾಗಿ ತಾವು ಯಾವತ್ತೂ ಈ ರೀತಿಯ ಗೊಂದಲವನ್ನು ಕಂಡಿರಲಿಲ್ಲ ಎಂದಿದ್ದಾರೆ.
ಹಮಾಸ್ ಅನ್ನು ನಿರ್ನಾಮ ಮಾಡಲು ಟೊಂಕ ಕಟ್ಟಿರುವ ಇಸ್ರೇಲ್, ತನ್ನ ಮಾತಿಗೆ ಅನುಗುಣವಾಗಿ ಶನಿವಾರ ರಾತ್ರಿ ಉತ್ತರ ಗಾಜಾದಲ್ಲಿ ಹಮಾಸ್​ನ ಸುಮಾರು 150 ಭೂಗತ ಅಡಗುದಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ.
ಈಜಿಪ್ಟ್ ಅಧ್ಯಕ್ಷರೊಂದಿಗೆ ಮೋದಿ ಚರ್ಚೆ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾ ಎಲ್-ಸಿಸಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ ಬಿರುಸುಗೊಂಡಿರುವ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಯ ಅಪಾಯದ ಕುರಿತು ರ್ಚಚಿಸಿದರು.
ಒತ್ತೆಯಾಳುಗಳ ಬಂಧುಗಳ ಭೇಟಿ: ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೇತನ್ಯಾಹು ಹಮಾಸ್​ನಿಂದ ಅಪಹೃತರಾಗಿರುವ ಒತ್ತೆಯಾಳುಗಳ ಸಂಬಂಧಿಗಳನ್ನು ಭೇಟಿಯಾಗಿ ಧೈರ್ಯ ತುಂಬಿದರು. ಒತ್ತೆಯಾಳುಗಳನ್ನು ಬಿಡಿಸಿ ತರಲು ಸರ್ವ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು.
ಇಸ್ರೇಲ್-ಹಮಾಸ್ ಸಂಘರ್ಷವನ್ನು ಕೊನೆಗೊಳಿಸಲು ಮಾನವೀಯ ನೆಲೆಯಲ್ಲಿ ಕದನವಿರಾಮ ಘೋಷಿಸಬೇಕೆಂದು ಕರೆ ನೀಡುವ, ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಶುಕ್ರವಾರ ಮಂಡಿಸಲಾದ ಗೊತ್ತುವಳಿಯೊಂದರ ಮೇಲಿನ ಮತದಾನದಲ್ಲಿ ಭಾರತ ಭಾಗವಹಿಸದೆ ಹೊರಗುಳಿದಿದ್ದು, ಚರ್ಚೆಗೆ ಗ್ರಾಸವಾಗಿದೆ. ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಜಪಾನ್,
ಯೂಕ್ರೇನ್ ಮತ್ತು ಬ್ರಿಟನ್ ಕೂಡ ಮತದಾನದಲ್ಲಿ ಭಾಗವಹಿಸಲಿಲ್ಲ. ಗಾಜಾ ಪಟ್ಟಿಯಲ್ಲಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಮಾನವೀಯ ನೆರವು ಲಭ್ಯಗೊಳಿಸಬೇಕು ಎಂದೂ ಕರೆ ನೀಡುವ ಗೊತ್ತುವಳಿಯನ್ನು ಜೋರ್ಡಾನ್ ಮಂಡಿಸಿತ್ತು. ಬಾಂಗ್ಲಾದೇಶ, ಮಾಲ್ದೀವ್ಸ್, ಪಾಕಿಸ್ತಾನ, ರಷ್ಯಾ ಮತ್ತು ದಕ್ಷಿಣ ಆಫ್ರಿಕಾ ಸಹಿತ 40ಕ್ಕೂ ಹೆಚ್ಚು ಇತರ ದೇಶಗಳು ಗೊತ್ತುವಳಿಯನ್ನು ಸಹ-ಪ್ರಾಯೋಜಿಸಿದ್ದವು.
ಕದನವಿರಾಮಕ್ಕೆ ಕರೆ ನೀಡುವ ಜೋರ್ಡಾನ್ ದೇಶದ ಕರಡಿನಲ್ಲಿ ಹಮಾಸ್ ಹೆಸರಿನ ಉಲ್ಲೇಖ ಇಲ್ಲದಿದ್ದುದು ಗೊತ್ತುವಳಿಯಿಂದ ಭಾರತ ದೂರವುಳಿಯಲು ಕಾರಣವಾಗಿದೆ. ಭಯೋತ್ಪಾದನೆ ವಿರುದ್ಧ ವಿಶ್ವಸಂಸ್ಥೆ ಸ್ಪಷ್ಟಸಂದೇಶ ನೀಡುವುದು ಅಗತ್ಯ ಎಂದು ವಿಶ್ವಸಂಸ್ಥೆಯಲ್ಲಿನ ಭಾರತ ಕಾಯಂ ಉಪ ಪ್ರತಿನಿಧಿ ಯೋಜನಾ ಪಟೇಲ್ ಹೇಳಿದ್ದಾರೆ.
120 ದೇಶಗಳ ಬೆಂಬಲದೊಂದಿಗೆ ಭಾರಿ ಬಹುಮತದಿಂದ ಕದನವಿರಾಮ ಗೊತ್ತುವಳಿ ಅಂಗೀಕಾರವಾಯಿತು. 14 ದೇಶಗಳು ಅದನ್ನು ವಿರೋಧಿಸಿದರೆ ಭಾರತ ಸಹಿತ 45 ದೇಶಗಳು ಮತದಾನದಿಂದ ಹೊರಗುಳಿದವು. ಗಾಜಾದಲ್ಲಿ ಇಸ್ರೇಲ್ ಭೂ ದಾಳಿಯನ್ನು ತೀವ್ರಗೊಳಿಸಿರುವ ನಡುವೆ ತಾನು ‘ಸಂಪೂರ್ಣ ಬಲ’ದಿಂದ ತೀಕ್ಷ್ಣವಾದ ಪ್ರತಿ ದಾಳಿ ನಡೆಸುವುದಾಗಿ ಹಮಾಸ್ ಶನಿವಾರ ಘೋಷಿಸಿದೆ. ನಾಜಿಗಳು ಮತ್ತು ಐಎಸ್​ಐಎಸ್ ವಿರುದ್ಧ ಇಡೀ ಜಗತ್ತು ಏನು ಮಾಡಿತ್ತೋ ಹಾಗೆಯೇ ಹಮಾಸ್​ಅನ್ನು ನಾಶ ಮಾಡುವುದು ಇಸ್ರೇಲ್ ಗುರಿಯಾಗಿದೆ ಎಂದು ಅದರ ವಿದೇಶಾಂಗ ಸಚಿವ ಎಲಿ ಕೊಹೆನ್ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − ten =
Remember me
