ಚಂದ್ರಯಾನ-1 ಯೋಜನೆಯನ್ನು ಭಾರತ 2008ರ ಅಕ್ಟೋಬರ್​ನಲ್ಲಿ ಕೈಗೊಂಡಿತ್ತು. ಚಂದ್ರನ ಕಕ್ಷೆ ಸುತ್ತ ಪರಿಭ್ರಮಣೆ ಉದ್ದೇಶದ ಈ ಉಡಾವಣೆಯು ಯಶಸ್ಸನ್ನು ಕಂಡಿತ್ತು. ನಂತರ 2019ರ ಆಗಸ್ಟ್​ನಲ್ಲಿ ಕೈಗೊಳ್ಳಲಾದ ಚಂದ್ರಯಾನ-2 ಯೋಜನೆಯು ಭಾಗಶಃ ಮಾತ್ರ ಯಶಸ್ಸು ಸಾಧಿಸಿತ್ತು. ಈ ಅಪೂರ್ಣ ಯಶಸ್ಸನ್ನು ಸಂಪೂರ್ಣವಾಗಿ ಸಾಧಿಸಲು ಚಂದ್ರಯಾನ-3 ಯೋಜನೆಗೆ ಇಸ್ರೋ ಈಗ ಸಜ್ಜಾಗಿದೆ.
ಚಂದ್ರನನ್ನು ತಲುಪುವ ಭಾರತದ ಮೂರನೇ ಕಾರ್ಯಾಚರಣೆಗಾಗಿ ಜುಲೈ 14ರಂದು ಮಧ್ಯಾಹ್ನ 2.35 ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಬಾಹ್ಯಾಕಾಶ ನೌಕೆಯು ಉಡಾವಣೆಯಾಗಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಉಡಾವಣಾ ವಾಹನ ಮಾರ್ಕ್ 3 ಮೂಲಕ ಚಂದ್ರಯಾನ-3 ಮಿಷನ್​ಗೆ ಚಾಲನೆ ನೀಡಲಿದೆ.
2019ರಲ್ಲಿ ಕೈಗೊಳ್ಳಲಾದ ಚಂದ್ರಯಾನ- 2 ಮಿಷನ್​ನ ಅನುಸರಣೆ ಹಾಗೂ ಪ್ರತಿರೂಪವಾಗಿದೆ ಚಂದ್ರಯಾನ-3. ಚಂದ್ರಯಾನ-2ರ ನೌಕೆಯು ತನ್ನ ಲ್ಯಾಂಡರ್ ಮತ್ತು ರೋವರ್ ಅನ್ನು ಚಂದ್ರನ ಮೇಲೆ ಸುಲಲಿತವಾಗಿ ಇಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಭಾಗಶಃ ವೈಫಲ್ಯವನ್ನು ಅನುಭವಿಸಿತ್ತು.
ಚಂದ್ರಯಾನ-3 ನೌಕೆಯು ಉಡಾವಣೆಯಾದ ಅಂದಾಜು ಒಂದು ತಿಂಗಳ ನಂತರ ಚಂದ್ರನ ಕಕ್ಷೆಯನ್ನು ತಲುಪಲಿದೆ. ಇದರ ವಿಕ್ರಮ್ ಹೆಸರಿನ ಲ್ಯಾಂಡರ್ ಮತ್ತು ಪ್ರಜ್ಞಾನ ಹೆಸರಿನ ರೋವರ್ ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿಯುವ ಸಾಧ್ಯತೆಯಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಚಂದ್ರಯಾನ-3 ನೌಕೆಯು ಚಂದ್ರನ ಮೇಲೆ ಇಳಿಯುವ ಪ್ರದೇಶವು ಬಹುತೇಕವಾಗಿ ಚಂದ್ರಯಾನ-2 ರೀತಿಯಲ್ಲಿಯೇ ಇದೆ. 70 ಡಿಗ್ರಿ ಅಕ್ಷಾಂಶದಲ್ಲಿ ಚಂದ್ರನ ದಕ್ಷಿಣ ಧ್ರುವದ ಬಳಿ ಲ್ಯಾಂಡರ್ ಅವರೋಹಣವಾಗಲಿದೆ. ಎಲ್ಲವೂ ಸರಿಯಾಗಿ ಸಾಗಿದರೆ, ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದ ಬಳಿ ಸುಲಿತವಾಗಿ ಇಳಿದ ವಿಶ್ವದ ಮೊದಲ ನೌಕೆ ಇದಾಗಲಿದೆ.
ಚಂದ್ರನ ಮೇಲೆ ಇಳಿದ ಈ ಹಿಂದಿನ ಎಲ್ಲಾ ಬಾಹ್ಯಾಕಾಶ ನೌಕೆಗಳು ಚಂದ್ರನ ಸಮಭಾಜಕ ಪ್ರದೇಶದಲ್ಲಿ, ಸಮಭಾಜಕದ ಉತ್ತರ ಅಥವಾ ದಕ್ಷಿಣಕ್ಕೆ ಕೆಲವು ಡಿಗ್ರಿ ಅಕ್ಷಾಂಶ ತಲುಪಿವೆ. ಇದುವರೆಗೂ ಚಂದ್ರನ ಸಮಭಾಜಕದಿಂದ ಹೆಚ್ಚು ದೂರ ಹೋಗಿ ಇಳಿದ ಬಾಹ್ಯಾಕಾಶ ನೌಕೆಯೆಂದರೆ ಅದು ಅಮೆರಿಕದ ನಾಸಾ ಉಡಾವಣೆ ಮಾಡಿದ ಸರ್ವೆಯರ್ 7. ಇದು 1968ರ ಜನವರಿ 10ರಂದು ಚಂದ್ರನಲ್ಲಿ ಇಳಿಯಿತು. ಈ ಬಾಹ್ಯಾಕಾಶ ನೌಕೆಯು 40 ಡಿಗ್ರಿ ದಕ್ಷಿಣ ಅಕ್ಷಾಂಶದ ಬಳಿ ಲ್ಯಾಂಡಿಂಗ್ ಆಗಿತ್ತು.
ಒರಟಾದ ಪರಿಸರದ ಕಾರಣದಿಂದಾಗಿ ಚಂದ್ರನ ಧ್ರುವ ಪ್ರದೇಶಗಳು ಪರಿಶೋಧಿಸದೆ ಉಳಿದಿವೆ. ಆದರೆ, ಹಲವಾರು ಆರ್ಬಿಟರ್ (ನೆಲಕ್ಕೆ ಇಳಿಯದೆ ಕಕ್ಷೆ ಸುತ್ತುವ ನೌಕೆಗಳು) ಕಾರ್ಯಾಚರಣೆಗಳು ಚಂದ್ರನ ದಕ್ಷಿಣ ಧ್ರುವ ಪ್ರದೇಶಗಳು ಅನ್ವೇಷಿಸಲು ತುಂಬಾ ಆಸಕ್ತಿದಾಯಕವಾಗಿದೆ ಎಂಬುದಕ್ಕೆ ಪುರಾವೆಗಳನ್ನು ಒದಗಿಸಿವೆ. ಈ ಪ್ರದೇಶದಲ್ಲಿನ ಆಳವಾದ ಕುಳಿಗಳಲ್ಲಿ ಗಣನೀಯ ಪ್ರಮಾಣದಲ್ಲಿ ಮಂಜಿನ ಕಣಗಳ ಉಪಸ್ಥಿತಿಯ ಸೂಚನೆಗಳಿವೆ. ಚಂದ್ರನ ಮೇಲ್ಮೈಯಲ್ಲಿ ನೀರಿನ ಉಪಸ್ಥಿತಿ ಇರುವುದನ್ನು 2008ರಲ್ಲಿ ಕೈಗೊಳ್ಳಲಾದ ಭಾರತದ ಚಂದ್ರಯಾನ-1 ಮಿಷನ್ ಸೂಚಿಸಿದೆ. ಇದರ ಜತೆಯಲ್ಲಿ, ಇಲ್ಲಿನ ಅತ್ಯಂತ ತಂಪಾದ ತಾಪಮಾನ ಇರುವುದರಿಂದ ಈ ಪ್ರದೇಶದಲ್ಲಿ ಈ ಹಿಂದೆ ಸಿಲುಕಿಕೊಂಡಿರುವ ಯಾವುದಾದರೂ ವಸ್ತುವು ಹೆಚ್ಚಿನ ಬದಲಾವಣೆಗೆ ಒಳಗಾಗದೆ ಹೆಪ್ಪುಗಟ್ಟಿರಬಹುದಾಗಿದೆ. ಹೀಗಾಗಿ, ಚಂದ್ರನ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿನ ಕಲ್ಲುಗಳು ಮತ್ತು ಮಣ್ಣು ಆರಂಭಿಕ ಸೌರವ್ಯೂಹದ ಸುಳಿವುಗಳನ್ನು ನೀಡಬಹುದು ಎಂದು ಅಂದಾಜಿಸಲಾಗಿದೆ.
ಇಲ್ಲಿಯವರೆಗೆ ಚಂದ್ರನ ಮೇಲೆ ಸಮಭಾಜಕ ಪ್ರದೇಶದಲ್ಲಿಯೇ ನೌಕೆಗಳು ಇಳಿಯದಿರುವುದಕ್ಕೆ ಸೂಕ್ತ ಕಾರಣವಿದೆ. ಚೀನಾದ ಚಾಂಗ್ ಇ 4 ಕೂಡ ಚಂದ್ರನ ಸಮಭಾಜಕದಿಂದ ಸ್ವಲ್ಪ ದೂರದಲ್ಲಿ ಇಳಿದ ಬಾಹ್ಯಾಕಾಶ ನೌಕೆಯಾಗಿದೆ. ಆದರೆ, ಇದು ಕೂಡ ಪೂರ್ಣವಾಗಿ ದಕ್ಷಿಣ ಧ್ರುವದಲ್ಲಿ ಇಳಿಯದೆ, ಭೂಮಿಗೆ ಮುಖ ಮಾಡದ ಭಾಗದಲ್ಲಿ 45 ಡಿಗ್ರಿ ಅಕ್ಷಾಂಶದಲ್ಲಿ ಚಂದ್ರನ ಮೇಲೆ ಅವರೋಹಣ ಮಾಡಿತ್ತು. ಚಂದ್ರನ ಸಮಭಾಜಕದ ಬಳಿ ಇಳಿಯುವುದು ಸುಲಭ ಮತ್ತು ಸುರಕ್ಷಿತವಾಗಿದೆ. ಇಲ್ಲಿನ ಭೂಪ್ರದೇಶ ಮತ್ತು ತಾಪಮಾನವು ನೌಕೆಯಲ್ಲಿನ ಉಪಕರಣಗಳ ದೀರ್ಘ ಮತ್ತು ನಿರಂತರ ಕಾರ್ಯಾಚರಣೆಗೆ ಅನುಕೂಲಕರವಾಗಿದೆ. ಇಲ್ಲಿ ಮೇಲ್ಮೈ ಸಮ ಮತ್ತು ಮೃದುವಾಗಿರುತ್ತದೆ. ಅತ್ಯಂತ ಕಡಿದಾದ ಇಳಿಜಾರುಗಳು ಬಹುತೇಕ ಇರುವುದಿಲ್ಲ. ಕಡಿಮೆ ಬೆಟ್ಟಗಳು ಅಥವಾ ಕುಳಿಗಳಿವೆ. ಸೂರ್ಯನ ಬೆಳಕು ಹೇರಳವಾಗಿ ಇರುತ್ತದೆ, ಹೀಗಾಗಿ, ಸೌರ-ಚಾಲಿತ ಉಪಕರಣಗಳಿಗೆ ಶಕ್ತಿಯನ್ನು ನಿಯಮಿತ ಒದಗಿಸಲು ಸಾಧ್ಯವಾಗುತ್ತದೆ. ಆದರೆ, ಚಂದ್ರನ ಧ್ರುವ ಪ್ರದೇಶಗಳು ಬಹಳ ವಿಭಿನ್ನವಾದ ಮತ್ತು ಕಷ್ಟಕರವಾದ ಭೂಪ್ರದೇಶವಾಗಿದೆ. ಅನೇಕ ಭಾಗಗಳು ಸಂಪೂರ್ಣವಾಗಿ ಕತ್ತಲೆಮಯವಾಗಿವೆ. ಇಲ್ಲಿ ಸೂರ್ಯನ ಬೆಳಕು ಎಂದಿಗೂ ತಲುಪುವುದಿಲ್ಲ. ಅಲ್ಲದೆ, ತಾಪಮಾನವು 230 ಡಿಗ್ರಿ ಸೆಲ್ಸಿಯಸ್​ಗಿಂತ ಕಡಿಮೆಯಾಗಿರುತ್ತದೆ. ಸೂರ್ಯನ ಬೆಳಕಿನ ಕೊರತೆ ಮತ್ತು ಅತ್ಯಂತ ಕಡಿಮೆ ತಾಪಮಾನವು ನೌಕೆಯ ಉಪಕರಣಗಳ ಕಾರ್ಯಾಚರಣೆಯಲ್ಲಿ ತೊಂದರೆ ಉಂಟು ಮಾಡುತ್ತದೆ. ಭೂಮಿಯ ಭ್ರಮಣ ಅಕ್ಷವು ಭೂಮಿ- ಸೌರ ಕಕ್ಷೆಯ ಸಮತಲಕ್ಕೆ 23.5 ಡಿಗ್ರಿಗಳಷ್ಟು ಓರೆಯಾಗಿದೆ. ಆದರೆ, ಚಂದ್ರನ ಅಕ್ಷವು ಕೇವಲ 1.5 ಡಿಗ್ರಿಗಳಷ್ಟು ಓರೆಯಾಗಿದೆ. ಈ ವಿಶಿಷ್ಟ ಜ್ಯಾಮಿತಿಯಿಂದಾಗಿ, ಚಂದ್ರನ ಉತ್ತರ ಮತ್ತು ದಕ್ಷಿಣ ಧ್ರುವಗಳ ಬಳಿ ಹಲವಾರು ಕುಳಿಗಳ ಮಹಡಿಗಳಲ್ಲಿ ಸೂರ್ಯನ ಬೆಳಕು ಎಂದಿಗೂ ಹೊಳೆಯುವುದಿಲ್ಲ. ಈ ಪ್ರದೇಶಗಳನ್ನು ಶಾಶ್ವತವಾಗಿ ನೆರಳಿನ ಪ್ರದೇಶಗಳಾಗಿವೆ. ಹೀಗಾಗಿ, ದಕ್ಷಿಣ ಧ್ರುವದಲ್ಲಿ ಅವರೋಹಣ ಜಟಿಲ ಸಂಗತಿಯಾಗಿದೆ.
ಚಂದ್ರಯಾನ-3 ಬಹುಮಟ್ಟಿಗೆ ಅದರ ಪೂರ್ವ ಆವೃತ್ತಿಯಾದ ಚಂದ್ರಯಾನ-2 ರ ಪ್ರತಿರೂಪವಾಗಿದೆ. ಜುಲೈ 2019ರಂದು ಚಂದ್ರಯಾನ-2ರಲ್ಲಿ ಕೂಡ ವಿಕ್ರಮ್ ಹೆಸರಿನ ಆರ್ಬಿಟರ್ (ಕಕ್ಷೆ ಸುತ್ತುವ ಉಪಕರಣ) ಮತ್ತು ಪ್ರಜ್ಞಾನ ಹೆಸರಿನ ಲ್ಯಾಂಡರ್ (ನೆಲದ ಮೇಲೆ ಇಳಿಸುವ ಸಾಧನ) ಉಡಾವಣೆ ಮಾಡಲಾಗಿತ್ತು. ಚಂದ್ರಯಾನ – 2ರಲ್ಲಿ ಆರ್ಬಿಟರ್ ಚಂದ್ರನ ಸುತ್ತ ಕಕ್ಷೆಗೆ ಪ್ರವೇಶಿಸಿತ್ತು. ಆದರೆ, ಸೆಪ್ಟೆಂಬರ್​ನಲ್ಲಿ ಲ್ಯಾಂಡರ್ ನಿಧಾನವಾಗಿ ಇಳಿಯುವ ಬದಲು ಅಪ್ಪಳಿಸಿದಾಗ ಚಂದ್ರನ ಮೇಲ್ಮೈ ಕಾರ್ಯಾಚರಣೆ ವಿಫಲವಾಯಿತು. ಮಾರ್ಗದರ್ಶನ ಸಾಫ್ಟ್​ವೇರ್​ನಲ್ಲಿನ ಸಮಸ್ಯೆ ಮತ್ತು ಅವರೋಹಣದ ಕೆಲವು ಹಂತಗಳಲ್ಲಿ ಸಂಚಾಲನೆ ವ್ಯವಸ್ಥೆಯಲ್ಲಿ ಅನಿರೀಕ್ಷಿತ ಪ್ರಸರಣದ ದೋಷ ಇರುವುದನ್ನು ನಂತರ ಇಸ್ರೋ ಗುರುತಿಸಿತು. ಈ ಹಿನ್ನೆಲೆಯಲ್ಲಿ, ಚಂದ್ರಯಾನ- 3ರಲ್ಲಿ ಯಶಸ್ಸಿನ ಸಾಧ್ಯತೆಗಳನ್ನು ಸುಧಾರಿಸಲು ಅನೇಕ ಮುನ್ನೆಚ್ಚರಿಕೆಗಳನ್ನು ಇಸ್ರೋ ವಹಿಸಿದೆ. ಲ್ಯಾಂಡರ್​ನ ಕಾಲುಗಳನ್ನು ಬಲಪಡಿಸಿದೆ. ಅದರ ಮೇಲಿನ ಒತ್ತಡವನ್ನು ಕಡಿಮೆ ಮಾಡಿದ್ದು, ಶಕ್ತಿಯ ಲಭ್ಯತೆಯನ್ನು ಹೆಚ್ಚಿಸಿದೆ. ಅಲ್ಲದೆ, ಅವರೋಹಣದ ಅನುಕ್ರಮವನ್ನು ನವೀಕರಿಸಿದೆ. ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಮತ್ತು ರೋವರ್ ಅನ್ನು ಸುಲಲಿತಾಗಿ ಇಳಿಸಲು ಮತ್ತು ಸಂಬಂಧಿತ ತಂತ್ರಜ್ಞಾನಗಳಲ್ಲಿ ಅಂತ್ಯದಿಂದ ಕೊನೆಯವರೆಗೆ ಸಾಮರ್ಥ್ಯವನ್ನು ಪ್ರದರ್ಶಿಸಲು ಇದು ಭಾರತದ ಎರಡನೇ ಪ್ರಯತ್ನವಾಗಿದೆ. ಚಂದ್ರನ ಮೇಲೆ ಸುಲಲಿತ ಅವರೋಹಣವು ಒಂದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ವೈಫಲ್ಯದ ಸಾಧ್ಯತೆಯು ಇದ್ದೇ ಇರುತ್ತದೆ. ಚಂದ್ರಯಾನ- 3 ಮಿಷನ್ ಯಶಸ್ವಿಯಾದರೆ, ಚಂದ್ರನ ಮೇಲೆ ರೋವರ್ ಅನ್ನು ಸುರಳಿತವಾಗಿ ಇಳಿಸಿದ ಎರಡನೇ ದೇಶವಾಗಿ ಭಾರತ ಹೊರಹೊಮ್ಮಲಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + two =
Remember me
