ಶ್ರೀಹರಿಕೋಟ:ಭಾರತದ 42ನೇ ಸಂವಹನ ಉಪಗ್ರಹ ‘ಸಿಎಂಎಸ್-01’ ಯಶಸ್ವಿಯಾಗಿ ಉಡಾವಣೆ ಆಗಿದ್ದು, ಸುರಕ್ಷಿತವಾಗಿ ಕಕ್ಷೆಗೆ ಸೇರಿದೆ. ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಲ್ಯಾಂಚ್​ಪ್ಯಾಡ್​ನಿಂದ ಗುರುವಾರ ಮಧ್ಯಾಹ್ನ 3.41ಕ್ಕೆ ಉಡಾವಣೆಯಾದ ಪಿಎಸ್​ಎಲ್​ವಿ-ಸಿ50 ರಾಕೆಟ್ ಈ ಉಪಗ್ರಹವನ್ನು ಹೊತ್ತೊಯ್ಯಿತು.
ಉಡಾವಣೆಯಾದ 20 ನಿಮಿಷದಲ್ಲಿ ಸ್ಯಾಟಲೈಟ್ ಉಪಜಿಯೋ ಸಿಂಕ್ರೊನಸ್ ವರ್ಗಾವಣೆ ಕಕ್ಷೆಗೆ (ಸಬ್​ಜಿಟಿಒ) ತಲುಪಿತು. ನಂತರದಲ್ಲಿ ಈ ಸ್ಯಾಟಲೈಟ್​ನ್ನು ನೋದಕ ಶಕ್ತಿ ಮೂಲಕ ನಿಗದಿತ ಕಕ್ಷೆಗೆ ಎತ್ತರಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ. ‘ಸಿಎಂಎಸ್-01’ ಉಪಗ್ರಹದ ಜೀವಿತಾವಧಿ 7 ವರ್ಷವಾಗಿದ್ದು, ಅಂಡಮಾನ್-ನಿಕೋಬಾರ್ ಹಾಗೂ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಗಳು ಸೇರಿ ಇಡೀ ಭಾರತಕ್ಕೆ ಸಿ-ಬ್ಯಾಂಡ್ ಸೇವೆ ವಿಸ್ತರಿಸಲಿದೆ. 11 ವರ್ಷಗಳ ಹಿಂದೆ ಉಡಾವಣೆಯಾಗಿದ್ದ ಜಿಸ್ಯಾಟ್-12 ಉಪಗ್ರಹವನ್ನು ‘ಸಿಎಂಎಸ್-01’ ಬದಲಿಸಲಿದೆ. ಕರೊನಾ ಸಾಂಕ್ರಾಮಿಕದ ಕಾರಣ ಮುಂದೂಡಲ್ಪಟ್ಟಿರುವ ಚಂದ್ರಯಾನ-3 ಯೋಜನೆಯ ಪರೀಕ್ಷಾರ್ಥ ಮಿಷನ್​ಗಳು, ಆದಿತ್ಯ ಎಲ್-1, ಗಗನಯಾನ ಹಾಗೂ ಜಿಎಸ್​ಎಲ್​ವಿ, ಎಸ್​ಎಸ್​ಎಲ್​ವಿ ವಾಹಕಗಳ ಮಿಷನ್​ಗಳಿಗೂ ಮುಂದಿನ ವರ್ಷ ಮರುಚಾಲನೆ ನೀಡಲಾಗುವುದು ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.
ವರ್ಷದ ಕೊನೆಯ ಉಡಾವಣೆ: ಗುರುವಾರ ಉಡಾವಣೆಯಾದ ಪಿಎಸ್​ಎಲ್​ವಿ-ಸಿ 50 ಶ್ರೀಹರಿಕೋಟದಿಂದ ಉಡಾವಣೆಯಾದ 77ನೇ ಮತ್ತು ಪಿಎಸ್​ಎಲ್​ವಿಯ 52ನೇ ರಾಕೆಟ್ ಆಗಿದ್ದು, ಎಕ್ಸ್​ಎಲ್ ಸಂರಚನೆ (ಆರು ಸ್ಟ್ರಾಪ್-ಆನ್ ಮೋಟಾರ್) ಹೊಂದಿದ 22ನೇ ಪಿಎಸ್​ಎಲ್​ವಿ ರಾಕೆಟ್ ಇದಾಗಿತ್ತು. ಕರೊನಾ ಸಂಕಷ್ಟ ಎದುರಾಗಿರುವ ಈ ವರ್ಷ ಇಸ್ರೊ ಉಡಾವಣೆ ಮಾಡಿರುವ ಎರಡನೇ ಮತ್ತು ಕೊನೆಯ ರಾಕೆಟ್ ಇದಾಗಿದೆ. ನ. 7ರಂದು ಸರ್ವಋತುವಿನಲ್ಲೂ ಭೂಮಿಯ ಚಿತ್ರವನ್ನು ಸೆರೆ ಹಿಡಿಯುವ ಇಒಎಸ್-01 ಸ್ಯಾಟಲೈಟ್ ಸೇರಿ ವಿದೇಶದ 9 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು.
ಖಾಸಗಿ ಉಪಗ್ರಹ
ಸ್ಟಾರ್ಟಪ್​ವೊಂದು ಅಭಿವೃದ್ಧಿ ಪಡಿಸಿರುವ ಭೂಮಿಯ ನಿಗಾವಣೆ ಇರಿಸುವ ‘ಆನಂದ್’ ಸ್ಯಾಟಲೈಟ್​ನ್ನು ಪಿಎಸ್​ಎಲ್​ವಿ-ಸಿ51 ರಾಕೆಟ್ ಮೂಲಕ ಮುಂಬರುವ ದಿನಗಳಲ್ಲಿ ಇಸ್ರೊ ಉಡಾವಣೆ ಮಾಡಲಿದೆ. ಬಾಹ್ಯಾಕಾಶದಲ್ಲಿ ಖಾಸಗಿ ವಲಯ ಪಾಲ್ಗೊಳ್ಳಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿರುವುದರಿಂದ ಅಂತರಿಕ್ಷ ಪರಿಶೋಧನೆಯಲ್ಲಿ ಖಾಸಗಿ ಸಂಸ್ಥೆಗಳಿಗೂ ಅವಕಾಶ ತೆರೆದುಕೊಳ್ಳುತ್ತಿದೆ ಎಂದು ಕೆ.ಶಿವನ್ ಹೇಳಿದ್ದಾರೆ.
ಚೀನಾದ ಚಂದ್ರಾನ್ವೇಷಣೆ ಯಶಸ್ವಿ
ಬೀಜಿಂಗ್: ಚಂದ್ರನ ಮೇಲ್ಮೈ ಮಾದರಿಗಳನ್ನು ಹೊತ್ತ ಚೀನಾದ ಷಾಂಗೆ-5 ಬಾಹ್ಯಾಕಾಶ ನೌಕೆ ಗುರುವಾರ ಭೂಮಿಗೆ ಯಶಸ್ವಿಯಾಗಿ ಮರಳಿದೆ. 40 ವರ್ಷಗಳಲ್ಲಿ ಚಂದ್ರನ ಮಾದರಿ ತಂದಿರುವುದು ಇದೇ ಮೊದಲ ಸಲವಾಗಿದೆ. ಉತ್ತರ ಚೀನಾದ ಇನ್ನರ್ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಸಿಜಿವಾಂಗ್ ಬಾನರ್​ನಲ್ಲಿ ನೌಕೆ ಭೂಸ್ಪರ್ಶ ಮಾಡಿತು ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ (ಸಿಎನ್​ಎಸ್​ಎ) ತಿಳಿಸಿದೆ. ಷಾಂಗೆ-5 ಮಿಷನ್ ಯಶಸ್ವಿಯಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಝಾಂಗ್ ಕೆಜಿಯಾನ್ ಘೋಷಿಸಿದ್ದಾರೆ. 2004ರಲ್ಲಿ ಆರಂಭವಾದ ಚಂದ್ರಾನ್ವೇಷಣೆಯ ಮೂರು ಹಂತದ ಕಾರ್ಯಕ್ರಮ ಇದರೊಂದಿಗೆ ಪೂರ್ಣಗೊಂಡಿದೆ.
ಜಿನ್​ಪಿಂಗ್ ಅಭಿನಂದನೆ:ಯೋಜನೆ ಯಶಸ್ವಿಯಾಗಿರುವುದಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಅತಿ ಸಂಕೀರ್ಣ ಕಾರ್ಯವನ್ನು ಎಲ್ಲ ಅಡೆತಡೆಗಳನ್ನು ಮೀರಿ ಯಶಸ್ವಿಗೊಳಿಸಿದ್ದು ಮಹತ್ತರ ಸಾಧನೆ ಎಂದು ವರ್ಣಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
