ಬೆಂಗಳೂರು:ಬಾಹ್ಯಾಕಾಶವನ್ನು ಪ್ರವಾಸೋದ್ಯಮಕ್ಕೆ ಮಾತ್ರವಲ್ಲದೆ, ಮಾನವನ ಇನ್ನೊಂದು ನೆಲೆಯಾಗಿ ರೂಪಿಸುವ ಯತ್ನಗಳು ಭರದಿಂದ ಸಾಗಿವೆ. ಇಂಥದ್ದೊಂದು ನೆಲೆ ಕಟ್ಟಲು ಅತ್ಯಗತ್ಯವಾಗಬಲ್ಲ ‘ಇಟ್ಟಿಗೆ’ಯನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ನಿರ್ವಿುಸಿದ್ದಾರೆ. ಮಂಗಳನ ಅಂಗಳದಲ್ಲಿರುವ ಮಣ್ಣಿನ ರಾಸಾಯನಿಕ ಗುಣಲಕ್ಷಣಗಳ ಬಗ್ಗೆ ಅರಿವಿದ್ದು, ಇದನ್ನೇ ಆಧರಿಸಿ ತಯಾರಿಸಿದ ಮಾದರಿ ಮಣ್ಣನ್ನು ಇದಕ್ಕಾಗಿ ಬಳಸಲಾಗಿದೆ. ಇದನ್ನು ಮಾರ್ಷಿಯನ್ ಸಿಮ್ಯುಲಂಟ್ ಸಾಯಿಲ್ (ಎಂಎಎಸ್​ಎಸ್) ಎಂದು ಕರೆಯಲಾಗಿದೆ. ಇದರಲ್ಲಿ ಬ್ಯಾಕ್ಟೀರಿಯಾಗಳಂಥ ಸೂಕ್ಷಾ್ಮಣುಗಳನ್ನು ಪ್ರಚೋದಕವಾಗಿ ಬಳಸಿ ಕ್ಯಾಲ್ಸಿಯಂ ಕಾಬೋನೇಟ್ ರೂಪಾಂತರಗೊಳ್ಳುವಂತೆ ಮಾಡಿ ಇಟ್ಟಿಗೆ ತಯಾರಿಸಲಾಗಿದೆ ಎಂದು ಐಐಎಸ್​ಸಿ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಅಲೋಕ್​ಕುಮಾರ್ ನೇತೃತ್ವದ ತಂಡ ತಿಳಿಸಿದೆ.
ಬ್ಯಾಕ್ಟೀರಿಯಾ ವರ್ಧನೆಯ ಜೈವಿಕಗಾರೆ (ಬ್ಯಾಕ್ಟೀರಿಯಲ್ ಗ್ರೋತ್ ಇಂಡ್ಯೂಸ್ಡ್ ಬಯೋಸಿಮೆಂಟೇಷನ್) ಪ್ರಕ್ರಿಯೆಯನ್ನು ಸಾವಯವ ವಿಧಾನದಲ್ಲಿ ಇದಕ್ಕೆ ಬಳಸಲಾಗಿದೆ ಎಂದು ಅಲೋಕ್ ವಿವರಿಸುತ್ತಾರೆ. ಬ್ಯಾಕ್ಟೀರಿಯಾಗಳು ಬಹುಮುಖ ಸಾಮರ್ಥ್ಯದ ಜೀವಿಗಳಾಗಿವೆ. ಕೆಲ ಜಾತಿಯ ಬ್ಯಾಕ್ಟೀರಿಯಾಗಳು ಸಕ್ರಿಯ ಖನಿಜಾಂಶಗಳನ್ನು ಉತ್ಪಾದಿಸುವಲ್ಲಿ ಶಕ್ತವಾಗಿವೆ.
ಐವರ ತಂಡ:ಅಲೋಕ್ ಜತೆಗೆ ಈ ತಂಡದಲ್ಲಿ ಐಐಎಸ್​ಸಿಯ ರಶ್ಮಿ ದೀಕ್ಷಿತ್, ನಿತಿನ್ ಗುಪ್ತಾ, ಕೌಶಿಕ್ ವಿಶ್ವನಾಥ ಹಾಗೂ ಇಸ್ರೋ ಅಧೀನದ ಯು.ಆರ್. ರಾವ್ ಸೆಟಲೈಟ್ ಸೆಂಟರ್​ನ ಅರ್ಜುನ್ ಡೇ ಇದ್ದಾರೆ. 2018ರಲ್ಲಿ ಚಂದ್ರನ ಅಂಗಳದ ಮಣ್ಣಿನ ಮಾದರಿಯಲ್ಲೂ ಇಟ್ಟಿಗೆಯನ್ನು ತಯಾರಿಸುವಲ್ಲಿ ಯಶಸ್ವಿಯಾದ ತಂಡದಲ್ಲೂ ಈ ಐವರು ಸದಸ್ಯರಿದ್ದರು. ಈ ಅಧ್ಯಯನ ವರದಿಯು ಪಬ್ಲಿಕ್ ಲೈಬ್ರರಿ ಆಫ್ ಸೈನ್ಸ್ (ಪಿಎಲ್​ಒಎಸ್- ಒನ್) ನಿಯತಕಾಲಿಕದಲ್ಲಿ ಪ್ರಕಟವಾಗಿದೆ.
ಸಸ್ಯದ ಅಂಟು ಬಳಕೆ:ಈ ವಿಧಾನದಲ್ಲಿ ಸ್ಪೋರೋಸಾರ್ಸಿನಾ ಪೆಸ್ಟೇರಿಯಾಯ್ ಎಂಬ ಬ್ಯಾಕ್ಟೀರಿಯಾ ಬಳಸಲಾಗಿದೆ. ಮಂಗಳನ ಮಣ್ಣಿನ ಮಾದರಿಯಲ್ಲಿ ಇದನ್ನು ಸೇರಿಸಿದಾಗ 15-20 ದಿನಗಳಲ್ಲಿ ಗಟ್ಟಿಯಾಗಿ ಇಟ್ಟಿಗೆ ರೂಪ ಪಡೆದಿದೆ. ಇನ್ನಷ್ಟು ಸುದೃಢಗೊಳಿಸಲು ಆಹಾರ, ಇತರ ಕೈಗಾರಿಕಾ ಉದ್ದೇಶಗಳಿಗೆ ಬಳಸಲಾಗುವ ಗೋರಿಕಾಯಿ ಸಸ್ಯದ ಬೀಜಗಳಿಂದ ತಯಾರಿಸಿದ ಅಂಟು ಸೇರ್ಪಡೆ ಮಾಡಲಾಗಿತ್ತು.
ಸವಾಲುಗಳೇನು?:ಬ್ಯಾಕ್ಟೀರಿಯಾ ಭೂಮಿಯ ಮಣ್ಣಿನದ್ದು. ಚಂದ್ರನ ಮಾದರಿಯ ಮಣ್ಣಿನಲ್ಲಿ ಇದು ಉತ್ತಮವಾಗಿ ಕಾರ್ಯ ನಿರ್ವಹಿಸಿತ್ತು. ಆದರೆ ಮಂಗಳನ ಮಾದರಿಯ ಮಣ್ಣಿನಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು, ವಿಷಕಾರಿಯಾಗಿದೆ. ಅಲ್ಲದೆ ಇನ್ನೂ ಹಲವಾರು ಮಾರಕ ರಾಸಾಯನಿಕಗಳಿದ್ದವು. ಈ ಮಣ್ಣಿನಲ್ಲಿ ಸೂಕ್ಷಾ್ಮಣುಗಳು ಬೆಳೆಯುವುದು ಸವಾಲಿನ ಕೆಲಸವೇ ಆಗಿದೆ
ಜೈವಿಕ ಖನಿಜಾಂಶಗಳ ಪಾತ್ರ:ಜೈವಿಕ ಖನಿಜಗಳ ಉತ್ಪಾದನೆ ಚಂದ್ರ ಹಾಗೂ ಮಂಗಳನ ಅಂಗಳದಲ್ಲಿ ನಿರ್ಮಾಣ ಕಾಮಗಾರಿಯ ವೆಚ್ಚವನ್ನು ಗಣನೀಯವಾಗಿ ತಗ್ಗಿಸಲಿದೆ ಎಮದು ಹೇಳಲಾಗಿದೆ. ಮಂಗಳನ ಮಣ್ಣು ಹಾಗೂ ಅಲ್ಲಿನ ಧೂಳನ್ನು ಇಟ್ಟಿಗೆ ತಯಾರಿಕೆಗೆ ಬಳಸುವ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿವೆ. ಈ ವಿಧಾನವನ್ನು ಮಂಗಳನಂಥ ಪ್ರತಿಕೂಲ ವಾತಾವರಣದಲ್ಲಿ ಪರೀಕ್ಷೆ ನಡೆಸಬೇಕಿದೆ. ಅಲ್ಲಿನ ಲವಣಾಂಶಗಳು ಬ್ಯಾಕ್ಟೀರಿಯಾ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು. ಮಂಗಳನ ಮಣ್ಣು ಚಂದ್ರನ ಮಣ್ಣಿನಂತಿಲ್ಲ ಎಂಬುದಂತೂ ಸತ್ಯ. ಜೀವಿಗಳ ಬೆಳವಣಿಗೆಗೆ ಕಠಿಣವೆನಿಸಿದೆ. ಇದನ್ನು ನಿವಾರಿಸಲು ಶ್ರಮಿಸಲಾಗಿದೆ ಎಂದು ಅಲೋಕ್ ವಿವರಿಸುತ್ತಾರೆ.
ತಯಾರಿಸುವುದು ಹೇಗೆ?:ಮಂಗಳ ಗ್ರಹದ ಮಣ್ಣಿನ ಮಾದರಿಯನ್ನು ಗ್ವಾರ್ ಗಮ್ ಎಂದು ಕರೆಯಲಾಗುವ ಸಸ್ಯಾಧಾರಿತ ಅಂಟಿನೊಂದಿಗೆ ಕಲೆಸಲಾಗುತ್ತದೆ. ಸ್ಪೋರೋಸಾರ್ಸಿನಾ ಪೇಸ್ಟೆರಿಯಾಯ್ ಎಂಬ ಬ್ಯಾಕ್ಟೀರಿಯಾ, ಯೂರಿಯಾ, ನಿಕಲ್ ಕ್ಲೋರೈಡ್​ಗಳನ್ನು ಸೇರಿಸಲಾಗುತ್ತದೆ. ಈ ತಿಳಿ ಕೆಸರಿನಂಥ ಪದಾರ್ಥವನ್ನು ವಿವಿಧ ಆಕಾರದ ಅಚ್ಚುಗಳಿಗೆ ಸುರಿಯಲಾಗುತ್ತದೆ. ಬ್ಯಾಕ್ಟೀರಿಯಾ ಯೂರಿಯಾವನ್ನು ಕ್ಯಾಲ್ಸಿಯಂ ಕಾಬೋನೇಟ್ ಕಣಗಳಾಗಿಸುತ್ತದೆ. ಸೂಕ್ಷಾ್ಮಣುಗಳಿಂದ ಸ್ರವಿಸಿದ ಬಯೋಪಾಲಿಮರ್​ಗಳು ಸಿಮೆಂಟ್​ನಂತೆ ವರ್ತಿಸಿ ಮಣ್ಣಿನ ಕಣಗಳನ್ನು ಹಿಡಿದಿಟ್ಟುಕೊಂಡಿರುತ್ತವೆ.
ಕೆಜಿಎಫ್-​2 ಹವಾ: ಮದುವೆ ಆಮಂತ್ರಣದಲ್ಲೂ ‘ವಯಲೆನ್ಸ್​’!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
