ಬೆಂಗಳೂರು:ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಯೋಜನೆ ಆದಿತ್ಯ-ಎಲ್1ಗೆ ಯಶಸ್ಸು ಸಿಕ್ಕಿದೆ. ನೌಕೆಯನ್ನು ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಅಂತಿಮ ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಶನಿವಾರ ಯಶಸ್ವಿಯಾಗಿದೆ.
ಬಾಹ್ಯಾಕಾಶ ವೀಕ್ಷಣಾಲಯ ಹೊಂದಿರುವ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯನ್ನು ಸೂರ್ಯ ಮತ್ತು ಭೂಮಿಯ ನಡುವಿನ ಲಾಗ್ರೇಂಜ್ ಪಾಯಿಂಟ್ 1 (ಎಲ್ 1) ಸುತ್ತಲಿನ ಹಾಲೋ ಕಕ್ಷೆಯಲ್ಲಿ ಇರಿಸಲಾಗಿದೆ. ಎಲ್1 ಬಿಂದುವು ಭೂಮಿ ಮತ್ತು ಸೂರ್ಯನ ನಡುವಿನ ಒಟ್ಟು ಅಂತರದ ಶೇಕಡಾ ಒಂದು ಭಾಗವಾಗಿದೆ. ಎಲ್1 ಬಿಂದುವಿನ ಸುತ್ತ ಹಾಲೋ ಕಕ್ಷೆಯಲ್ಲಿರುವ ಉಪಗ್ರಹವು ಸೂರ್ಯ ನನ್ನು ನಿರಂತರವಾಗಿ ವೀಕ್ಷಣೆ ನಡೆಸಿ, ಅಲ್ಲಿನ ಚಟುವಟಿಕೆ ಬಗ್ಗೆ ಅಧ್ಯಯನ ನಡೆಸಲಿದೆ. ಇದು ಸೌರ ಚಟುವಟಿಕೆ ಮತ್ತು ನೈಜ ಸಮಯದಲ್ಲಿ ಬಾಹ್ಯಾ ಕಾಶ ಹವಾಮಾನದ ಮೇಲೆ ಬೀರುವ ಪರಿಣಾಮವನ್ನು ಅಧ್ಯಯನ ನಡೆಸಲು ಅನುಕೂಲವಾಗಲಿದೆ.
ಆದಿತ್ಯ ಬಾಹ್ಯಾಕಾಶ ನೌಕೆಯನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್​ಎಲ್​ವಿ-ಸಿ57) ಮೂಲಕ ಕಳೆದ ವರ್ಷ ಸೆಪ್ಟೆಂಬರ್ 2ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. 63 ನಿಮಿಷ ಮತ್ತು 20 ಸೆಕೆಂಡುಗಳ ಹಾರಾಟದ ಅವಧಿಯ ನಂತರ ಭೂಮಿಯ ಅಂಡಾಕಾರದ ಕಕ್ಷೆಗೆ ಯಶಸ್ವಿಯಾಗಿ ತಲುಪಿತ್ತು. ನಂತರ ಹಲವಾರು ಬಾರಿ ಕಕ್ಷೆ ಬದಲಾವಣೆ ಮಾಡಲಾಯಿತು. ಭೂಮಿಯ ಪ್ರಭಾವ ಗೋಳದಿಂದ ತಪ್ಪಿಸಿಕೊಂಡು ಈಗ ಕೊನೆಯ ಹಂತವಾಗಿ ಸೂರ್ಯ-ಭೂಮಿ ನಡುವಿನ ಲ್ಯಾಗ್ರೇಂಜ್ ಪಾಯಿಂಟ್​ಗೆ ನೌಕೆ ತಲುಪಿದೆ.
ಬಾಹ್ಯಾಕಾಶ ನೌಕೆಯು ಒಟ್ಟು ಏಳು ಪೇಲೋಡ್​ಗಳನ್ನು (ಉಪಕರಣ) ಹೊಂದಿದೆ. ವಿದ್ಯುತ್ಕಾಂತೀಯ ಮತ್ತು ಕಣ ಕಾಂತೀಯ ಶೋಧಕಗಳನ್ನು ಬಳಸಿಕೊಂಡು ಸೂರ್ಯನ ದ್ಯುತಿಗೋಳ, ವರ್ಣಗೋಳ ಮತ್ತು ಸೂರ್ಯನ ಹೊರಗಿನ ಪದರಗಳನ್ನು (ಕರೋನಾ) ವೀಕ್ಷಣೆ ಮಾಡಲಿದೆ. ಎಲ್1 ಪಾಯಿಂಟ್​ನಿಂದ ನಾಲ್ಕು ಉಪಕರಣಗಳು ನೇರವಾಗಿ ಸೂರ್ಯನನ್ನು ವೀಕ್ಷಿಸುತ್ತವೆ. ಮೂರು ಉಪಕರಣಗಳು ಲ್ಯಾಗ್ರೇಂಜ್ ಪಾಯಿಂಟ್ ಎಲ್1ನಲ್ಲಿ ಕಣಗಳು ಮತ್ತು ಕ್ಷೇತ್ರಗಳ ಅಧ್ಯಯನಗಳನ್ನು ನಡೆಸುತ್ತವೆ. ಹೀಗಾಗಿ ಅಂತರಗ್ರಹದಲ್ಲಿ ಸೌರ ಜ್ವಾಲೆ ಪ್ರಸರಣದ ಪರಿಣಾಮ ಏನು ಎಂಬುದು ತಿಳಿಯಲಿದೆ.
ಎಲ್1, ಹಾಲೋ ಕಕ್ಷೆ ಮಹತ್ವ:ಎಲ್1 ಅಂದರೆ ಲಾಗ್ರೇಂಜ್ ಪಾಯಿಂಟ್-1. ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣೆ ಪರಸ್ಪರ ಸಮತೋಲನಗೊಳಿಸುವ ಐದು ಸ್ಥಾನಗಳಲ್ಲಿ ಇದು ಒಂದಾಗಿದೆ. ಎಲ್1 ಅತ್ಯಂತ ಸ್ಥಿರವಾದ ಸ್ಥಳವಾಗಿದೆ. ಫ್ರೆಂಚ್ ಗಣಿತಜ್ಞ ಜೋಸೆಫ್-ಲೂಯಿಸ್ ಲಾಗ್ರೇಂಜ್ ಕಂಡು ಹಿಡಿದ ಕಾರಣ ಈ ಪಾಯಿಂಟ್​ಗಳಿಗೆ ಲಾಗ್ರೇಂಜಿಯನ್ ಪಾಯಿಂಟ್ ಎಂದು ಹೆಸರಿಡಲಾಗಿದೆ. ಆದಿತ್ಯ ನೌಕೆ ಈಗ ಇದೇ ಪ್ರದೇಶವನ್ನು ತಲುಪಿದೆ. ಹ್ಯಾಲೊ ಆರ್ಬಿಟ್ ಎಲ್1ನ ಕಕ್ಷೆಯಾಗಿದೆ. ಅಲ್ಲಿ ಉಪಗ್ರಹಗಳು ಮತ್ತು ಬಾಹ್ಯಾಕಾಶ ನೌಕೆಗಳು ಸ್ಥಿರವಾಗಿ ಕಾರ್ಯನಿರ್ವಹಿಸಬಹುದು. ಉಪಗ್ರಹ ಈ ಕಕ್ಷೆಯನ್ನು ತಲುಪದಿದ್ದರೆ, ಅದು ಸೂರ್ಯನ ಕಡೆಗೆ ಪ್ರಯಾಣಿಸುವುದನ್ನು ಮುಂದುವರೆಸುತ್ತದೆ. ಸೂರ್ಯನ ಶಾಖಕ್ಕೆ ಉಪಗ್ರಹ ಸುಟ್ಟುಹೋಗುತ್ತದೆ. ಹ್ಯಾಲೋ ಆರ್ಬಿಟ್​ನಿಂದ ಸೂರ್ಯನನ್ನು ವಿವಿಧ ಕೋನಗಳಿಂದ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ.
ಅಧ್ಯಯನ ಏಕೆ?:ಸೂರ್ಯನಲ್ಲಿ ಶೇ. 92.1 ಹೈಡ್ರೊಜನ್, ಶೇ. 7.8 ಹೀಲಿಯಂ ಅನಿಲ ಇದೆ. ಅಲ್ಲಿ ಕಾಂತೀಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಹಲವು ವರ್ಷಕ್ಕೊಮ್ಮೆ ಇದು ಉತ್ತುಂಗ ತಲುಪುತ್ತವೆ. ಸೌರಚಕ್ರದ ಸಮಯದಲ್ಲಿ ಶತಕೋಟಿ ಟನ್ ಜ್ವಾಲೆಗಳು ಭೂ ವಾತಾವರಣವನ್ನು ಪ್ರವೇಶಿಸುತ್ತವೆ. ಇದನ್ನು ಸೌರ ಚಂಡಮಾರುತ ಎನ್ನಲಾಗುತ್ತದೆ. ಇವು ಭೂಮಿಯ ಮೇಲೂ ಸಾಕಷ್ಟು ಪ್ರತಿಕೂಲ ಪರಿಣಾಮ ಬೀರುತ್ತದೆ. ಸೂರ್ಯನ ಜ್ವಾಲೆಯ ಚಂಡಮಾರುತಗಳು ಬಾಹ್ಯಾಕಾಶ ನಿಲ್ದಾಣಗಳಲ್ಲಿನ ಗಗನಯಾತ್ರಿಗಳ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತದೆ. ಹೀಗಾಗಿ ಸೂರ್ಯನ ಅಧ್ಯಯನ ಅಗತ್ಯವಾಗಿದೆ. ಮುಂದಿನ 5 ವರ್ಷಗಳವರೆಗೆ ಸೂರ್ಯನ ಕರೊನಾ ಭಾಗದಿಂದ ಹೊರಹೊಮ್ಮುವ ಸೌರಜ್ವಾಲೆಗಳನ್ನು ಸಮೀಪದಿಂದ ಅಧ್ಯಯನ ನಡೆಸಲಾಗುತ್ತದೆ. ಸೂರ್ಯನ ದ್ಯುತಿಗೋಳ, ವರ್ಣಗೋಳ ಮತ್ತು ಹೊರ ಪದರಗಳನ್ನು ಅಧ್ಯಯನ ಮಾಡಲಿದೆ.
ಇನ್ನೂ ಹತ್ತಿರ ಅಸಾಧ್ಯ:ನಕ್ಷತ್ರವಾಗಿರುವ ಸೂರ್ಯ ಅನಿಲದ ಬೃಹತ್ ಗೋಳವಾಗಿದ್ದು ಅದರ ಬಾಹ್ಯ ವಾತಾವರಣದ ಅಧ್ಯಯನ ಆದಿತ್ಯ- ಎಲ್1 ನೌಕೆಯ ಉದ್ದೇಶವಾಗಿದೆ. ಅದಕ್ಕೆ ಸೂರ್ಯನ ಮೇಲೆ ಇಳಿಯಲೂ ಸಾಧ್ಯವಿಲ್ಲ, ಇದಕ್ಕಿಂತ ಇನ್ನೂ ಹತ್ತಿರ ಹೋಗಲೂ ಸಾಧ್ಯವಿಲ್ಲ ಎಂದು ಇಸ್ರೋ ವಿವರಿಸಿದೆ.
ವ್ಯೋಮ ವೀಕ್ಷಣಾಲಯ:1,480.7 ಕೆಜಿ ತೂಕದ ಆದಿತ್ಯ-ಎಲ್1, ಸೂರ್ಯನ ಅಧ್ಯಯನಕ್ಕಾಗಿ ಪ್ರಥಮ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
