ನವದೆಹಲಿ:ಮೂರೂಕಾಲು ವರ್ಷದ ಹಿಂದೆ ನೋಟು ಅಮಾನ್ಯೀಕರಣಗೊಂಡ ಬಳಿಕ ದೇಶದಲ್ಲಿ ನಡೆದ ಬಂಗಾರದ ಮಾರಾಟ ವ್ಯವಹಾರಗಳ ಮೇಲೆ ಅನುಮಾನದ ದೃಷ್ಟಿ ನೆಟ್ಟಿದ್ದ ಆದಾಯ ತೆರಿಗೆ ಇಲಾಖೆ ಇದೀಗ ಆ ಅವಧಿಯ ವ್ಯವಹಾರಗಳನ್ನು ಕೆದಕಿ ಚಿನ್ನಾಭರಣ ವರ್ತಕರಿಗೆ ನೋಟಿಸ್ ಜಾರಿ ಮಾಡಿದೆ.
ನೋಟ್ ಬ್ಯಾನ್ ಅವಧಿಯಲ್ಲಿ ಯಾವುದೇ ದಾಖಲೆ, ಮಾಹಿತಿ ಸಂಗ್ರಹಿಸದೆ ಬಂದ ಗ್ರಾಹಕರಿಗೆಲ್ಲ ಚಿನ್ನಾಭರಣ ಮಾರಾಟ ಮಾಡಿದ್ದ ಆಭರಣ ವರ್ತಕರು ಕಾಳಧನವನ್ನು ಸಕ್ರಮಗೊಳಿಸಲು ಪರೋಕ್ಷವಾಗಿ ನೆರವಾಗಿದ್ದರೆಂಬ ಆರೋಪ ಕೇಳಿಬಂದಿತ್ತು. ಇದೀಗ ಈ ಶಂಕೆಯ ಮೇಲೆ ಇಲಾಖೆ ದೇಶಾದ್ಯಂತ ಸುಮಾರು 15 ಸಾವಿರ ಆಭರಣ ವರ್ತಕರಿಗೆ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿದು ಬಂದಿದೆ.
ಪ್ರಧಾನಿ ನರೇಂದ್ರ ಮೋದಿ 2016ರ ನ.8ರಂದು 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಘೋಷಿಸಿದ್ದರು.
ಆ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ 500, 1000 ರೂ. ಮುಖಬೆಲೆಯ ನಗದು ಸಂಗ್ರಹಿಸಿದ್ದವರು ಅಪಾರ ಪ್ರಮಾಣದಲ್ಲಿ ಚಿನ್ನಾಭರಣ ಖರೀದಿಸಿದ್ದರು. ಚಿನ್ನಾಭರಣ ಮಳಿಗೆಗಳಲ್ಲಿ ಎರಡು ವಾರಗಳಲ್ಲಿ ನಡೆಯುವ ವಹಿವಾಟು ಒಂದೇ ದಿನ ನಡೆದಿತ್ತು ಎಂದು ಮುಂಬೈ ಮೂಲದ ಜೈನ್ ಎಂಬ ವರ್ತಕರೊಬ್ಬರು ನೆನಪಿಸಿಕೊಳ್ಳುತ್ತಾರೆ. ಇಷ್ಟೊಂದು ಪ್ರಮಾಣದ ಖರೀದಿಯ ಹಿಂದೆ ಕಪು್ಪಹಣದ ಪಾತ್ರವಿದೆ ಎಂಬುದು ಇಲಾಖೆಯ ಅನುಮಾನ. ಹೀಗಾಗಿ ಆದಾಯದ ಮೂಲ, ಆ ದಿನ ಬಂದ ಪೂರ್ಣ ಆದಾಯದ ವಿವರ ನೀಡುವಂತೆ ಸೂಚಿಸಿ ಹಲವು ಆಭರಣ ವರ್ತಕರಿಗೆ ನೋಟಿಸ್ ನೀಡಲಾಗಿದೆ.
50 ಸಾವಿರ ಕೋಟಿ ರೂ. ಗುರಿ?: ತೆರಿಗೆ ಸಂಗ್ರಹ ಗುರಿ ತಲುಪದಿದ್ದರೆ ಬಡ್ತಿ ಮತ್ತು ವರ್ಗಾವಣೆಯಂಥ ಸೌಲಭ್ಯಕ್ಕೆ ಕತ್ತರಿ ಬೀಳುವ ಆತಂಕದಲ್ಲಿರುವ ಅಧಿಕಾರಿಗಳು ವಿತ್ತ ವರ್ಷದ ಕೊನೆಯಲ್ಲಿ ಭಾಗಶಃ ಗುರಿ ಸಾಧಿಸಲು ನೋಟಿಸ್ ಅಸ್ತ್ರ ಹಿಡಿದಿದ್ದಾರೆಂಬುದು ವರ್ತಕರ ಆರೋಪ. ‘ದೇಶಾದ್ಯಂತ 15,000 ಆಭರಣ ವರ್ತಕರಿಗೆ ತೆರಿಗೆ ಇಲಾಖೆ ನೋಟಿಸ್ ಕಳಿಸಿದೆ. ವಜ್ರ ಹಾಗೂ ಬಂಗಾರದ ಆಭರಣ ವರ್ತಕರಿಂದ 50,000 ಕೋಟಿ ರೂಪಾಯಿ ಸಂಗ್ರಹಿಸುವುದು ತೆರಿಗೆ ಅಧಿಕಾರಿಗಳ ಉದ್ದೇಶವಾಗಿದೆ’ ಎಂದು ಭಾರತ ಬುಲಿಯನ್ ಮತ್ತು ಆಭರಣ ವರ್ತಕರ ಸಂಘದ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಅಂದಾಜಿಸಿದ್ದಾರೆ.
ಕಾನೂನು ಏನು?
ಕಾನೂನು ಹೋರಾಟದ ಸಂದರ್ಭದಲ್ಲಿ ಭಾರತೀಯ ಕಾನೂನಿನ ಪ್ರಕಾರ ಒಟ್ಟು ವಿವಾದಾತ್ಮಕ ಮೊತ್ತದಲ್ಲಿ ಶೇ.20 ಠೇವಣಿ ಇಡಬೇಕು. ಒಂದು ವೇಳೆ ಪ್ರಕರಣ ಸೋತರೆ ಆಭರಣ ವರ್ತಕರ ಸಾಲ ಸುಸ್ತಿಯಾಗುತ್ತದೆ. ಇದರಿಂದ ಉದ್ಯಮ ಹಾಗೂ ಬ್ಯಾಂಕ್ ಎರಡಕ್ಕೂ ಹೊಡೆತ ಬೀಳುತ್ತದೆ ಎಂಬುದು ಆರೋಪ.
ಗಾಯದ ಮೇಲೆ ಬರೆ
ಸದ್ಯ ಆರ್ಥಿಕ ಹಿಂಜರಿತದ ಪರಿಣಾಮ ಆಭರಣ ಮಾರುಕಟ್ಟೆ ಮೇಲೂ ಆಗಿದ್ದು, ಆದಾಯ ಕುಸಿಯುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮೂರು ವರ್ಷಗಳ ಹಿಂದಿನ ವ್ಯವಹಾರ ಕೆದಕು ತ್ತಿರುವುದರಿಂದ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂಬುದು ಆಭರಣ ವರ್ತಕರ ಆರೋಪ.
3 ವರ್ಷದ ಬಳಿಕ ಏಕೆ?
ನೋಟ್​ಬ್ಯಾನ್ ಆದ ಮೂರೂಕಾಲು ವರ್ಷದ ಬಳಿಕ ಕ್ರಮಕ್ಕೆ ಮುಂದಾಗಿರುವ ನಡೆ ಚರ್ಚೆ ಹುಟ್ಟುಹಾಕಿದೆ. ಆದರೆ ಐಟಿ ಮೂಲಗಳ ಪ್ರಕಾರ ಆ ಅವಧಿಯ ವಹಿವಾಟು ಶೋಧಕ್ಕೆ ಸುದೀರ್ಘ ಕಾಲಾವಕಾಶ ಹಿಡಿದಿದೆ. ಲಕ್ಷಾಂತರ ವಹಿವಾಟು ಅಧ್ಯಯನ ಮಾಡಿ ಅಕ್ರಮ ಕಂಡುಬಂದ ನಂತರವಷ್ಟೇ ನೋಟಿಸ್ ನೀಡಲಾಗಿದೆ.
2 ಲಕ್ಷ ಕೋಟಿ ರೂ.ತೆರಿಗೆ
ಪ್ರಸಕ್ತ ವರ್ಷ ಜ್ಯುವೆಲರ್​ಗಳು ಸೇರಿದಂತೆ ಅನೇಕರಿಗೆ ಸಾವಿರಾರು ನೋಟಿಸ್ ನೀಡಲಾಗಿದೆ. 1.5ರಿಂದ 2 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿಯನ್ನು ಇಲಾಖೆ ಹೊಂದಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಹೇಳುತ್ತಾರೆ.
ಚಿನ್ನಾಭರಣ ವರ್ತಕರಿಗೆ ನೋಟಿಸ್ ನೀಡುವ ಅಥವಾ ಆಭರಣ ವಶಪಡಿಸಿಕೊಳ್ಳುವ ಅಧಿಕಾರವಿರುವ ಆದಾಯ ತೆರಿಗೆ ಇಲಾಖೆ ನೋಟು ಅಮಾನ್ಯೀಕರಣಗೊಂಡ ಮೂರು ವರ್ಷಗಳ ಬಳಿಕ ಈಗ ನೋಟಿಸ್ ನೀಡುತ್ತಿರುವುದು ಏಕೆ ಎಂಬ ಅನುಮಾನ ಮೂಡುತ್ತದೆ. ಕೇವಲ 100 ಗ್ರಾಂಗೂ ಹೆಚ್ಚು ವಹಿವಾಟು ನಡೆಸಿರುವವರ ವಿರುದ್ಧ ನೋಟಿಸ್ ಕೊಟ್ಟು ಕಿರುಕುಳ ನೀಡಲಾಗುತ್ತಿದೆ.
| ಡಾ.ಬಿ.ರಾಮಚಾರಿ ಕರ್ನಾಟಕ ರಾಜ್ಯ ಅಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
