ಲಡಾಖ್​ನಲ್ಲಿ ಭಾರತೀಯ ಯೋಧರ ಮೇಲುಗೈನಿಂದ ನಿರಂತರ ಮುಖಭಂಗ ಅನುಭವಿಸುತ್ತಿದ್ದರೂ ಚೀನಾ 10 ಸಾವಿರ ಯೋಧರನ್ನು ಗಡಿಯಲ್ಲಿ ನಿಯೋಜಿಸಿ, ಸಮರಾಭ್ಯಾಸ ನಡೆಸುವ ಮೂಲಕ ಭಾರತಕ್ಕೆ ಸೆಡ್ಡು ಹೊಡೆದಿದೆ. ಅತ್ತ ಲಡಾಖ್​ನಲ್ಲಿನ ಉದ್ವಿಗ್ನತೆಯ ಲಾಭ ಪಡೆಯಲು ಹೊಂಚುಹಾಕುತ್ತಿರುವ ಪಾಕಿಸ್ತಾನ ತನ್ನ 400ಕ್ಕೂ ಹೆಚ್ಚು ಉಗ್ರರನ್ನು ಭಾರತಕ್ಕೆ ನುಸುಳಿಸಲು ತುದಿಗಾಲಲ್ಲಿ ನಿಂತಿದೆ. ಏಕಕಾಲದಲ್ಲಿ ಈ ಮಗ್ಗುಲ ಮುಳ್ಳುಗಳನ್ನು ಹೊಸೆದು ಹಾಕುವ ಸವಾಲು ಭಾರತಕ್ಕೆ ಎದುರಾಗಿದೆ.
ತೊಡೆತಟ್ಟಿದ ಡ್ರ್ಯಾಗನ್:ರಷ್ಯಾದಲ್ಲಿ ನಡೆದ ರಕ್ಷಣಾ ಸಚಿವರ ಸಭೆಯಲ್ಲಿ ಗಡಿಯಿಂದ ಕಾಲ್ತೆಗೆಯುವಂತೆ ಭಾರತ ಖಡಕ್ ಸೂಚನೆ ನೀಡಿದ ಹೊರತಾಗಿಯೂ ಚೀನಾ ಸೇನೆ ಚುಶುಲ್ ಉಪವಲಯದ ಗಡಿಯಲ್ಲಿ ಬೀಡುಬಿಡುವ ಮೂಲಕ ಭಾರತದ ವಿರುದ್ಧ ತೊಡೆತಟ್ಟಿದೆ. ಚೀನಾ ಪೀಪಲ್ಸ್ ಲಿಬರೇಷನ್ ಆರ್ವಿುಯ (ಪಿಎಲ್​ಎ) 10 ಸಾವಿರ ಯೋಧರನ್ನು ಒಳಗೊಂಡ ತುಕಡಿ ಭಾರತೀಯ ಸೇನೆಗೆ ಮುಖಾಮುಖಿಯಾಗಿ ನಿಂತಿದ್ದು, ವಾಯವ್ಯ ಚೀನಾದಲ್ಲಿ ಬೃಹತ್ ಸಮರಾಭ್ಯಾಸ ನಡೆಸುತ್ತಿದೆ. ಹೀಗಾಗಿ ಪೂರ್ವ ಲಡಾಖ್​ನ ಬಿಕ್ಕಟ್ಟು ಶೀಘ್ರದಲ್ಲಿ ಶಮನವಾಗುವ ಲಕ್ಷಣ ಕಾಣುತ್ತಿಲ್ಲ. ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯ ಮಹತ್ವದ ದಿಣ್ಣೆಗಳಿಗೆ ಸನಿಹದಲ್ಲಿರುವ ಆಯಕಟ್ಟಿನ ಸ್ಥಳವೇ ಚುಶುಲ್ ಕಣಿವೆ. ಇಲ್ಲಿಗೆ ಪಿಎಲ್​ಎ ಸೇನಾ ಸಾಮಗ್ರಿಯ ವಾಹನ, ಭಾರಿ ಫಿರಂಗಿಗಳು ಮತ್ತು ಅಧಿಕ ಸಂಖ್ಯೆಯ ಯೋಧರನ್ನು ಜಮಾಯಿಸಿರುವುದು ಉಪಗ್ರಹದ ಅತ್ಯಾಧುನಿಕ ಕ್ಯಾಮರಾಗಳ ಚಿತ್ರದಿಂದ ತಿಳಿದುಬಂದಿರುವುದಾಗಿ ಬೇಹುಗಾರಿಕಾ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪೂರ್ವ ಲಡಾಖ್​ನ ಎಲ್​ಎಸಿಯ ಆಚೆಗೆ ಇರುವ ವಾಯವ್ಯ ಚೀನಾದಲ್ಲಿ ಪಿಎಲ್​ಎ ದೊಡ್ಡ ಮಟ್ಟದಲ್ಲಿ ಸೇನಾ ಕವಾಯತು ನಡೆಸುತ್ತಿದೆ. 100ಕ್ಕೂ ಹೆಚ್ಚು ಸೇನಾ ವಾಹನ, ಭಾರಿ ಫಿರಂಗಿ, ಟ್ಯಾಂಕ್, ಕ್ಷಿಪಣಿಗಳು, 80 ತುಕಡಿಯನ್ನು ರೈಲಿನ ಮೂಲಕ ಇಲ್ಲಿಗೆ ರವಾನಿಸಿದೆ. ಇದನ್ನು ಚೀನಾದ ಸರ್ಕಾರಿ ಟಿವಿ ವಾಹಿನಿ ಸಿಜಿಟಿಎನ್ ವರದಿ ಮಾಡಿದೆ.
ವಾರದ ಹಿಂದೆ ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣ ದಂಡೆಯ ದಿಣ್ಣೆಗಳನ್ನು ವಶಪಡಿಸಿಕೊಳ್ಳುವ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಇದರಿಂದ ಮುಖಭಂಗ ಅನುಭವಿಸಿರುವ ಪಿಎಲ್​ಎ ಗಡಿಯ ಸನಿಹದಲ್ಲೇ ಸಮರಾಭ್ಯಾಸ ನಡೆಸಿ ಭಾರತದ ಮೇಲೆ ಒತ್ತಡ ಹೇರುವ ಪ್ರಯತ್ನದಲ್ಲಿ ತೊಡಗಿದೆ.
ವಿಟಮಿನ್-ಸಿ ತನಿಖೆ:ಭಾರತದ ಔಷಧ ತಯಾರಿಕಾ ಸಂಸ್ಥೆಗಳು ಚೀನಾದಿಂದ ಪೂರೈಕೆಯಾದ ‘ವಿಟಮಿನ್-ಸಿ’ ಮೂಲದ್ರವ್ಯ ಬಳಕೆ ಮಾಡಿ ಔಷಧ ತಯಾರಿಸುತ್ತಿವೆ ಎಂಬ ದೂರಿನ ಬಗ್ಗೆ ಕೇಂದ್ರ ಸರ್ಕಾರ ತನಿಖೆ ಆರಂಭಿಸಿದೆ.
ಚೀನಾ ಯಥೇಚ್ಛವಾಗಿ ‘ವಿಟಮಿನ್-ಸಿ’ ಸರಕನ್ನು ಭಾರತಕ್ಕೆ ತಂದು ಸುರಿದಿದೆ. ಇದರಿಂದ ‘ವಿಟಮಿನ್-ಸಿ’ ಉತ್ಪಾದಿಸುವ ದೇಶೀಯ ಫಾರ್ವಸುಟಿಕಲ್ ಕಂಪನಿಗಳಿಗೆ ಹೊಡೆತ ಬಿದ್ದಿದೆ ಎಂದು ಬಜಾಜ್ ಹೆಲ್ತ್ ಕೇರ್ ಲಿಮಿಟೆಡ್ ಕೇಂದ್ರ ವಾಣಿಜ್ಯ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಗುಪ್ತಚರ ಸಂಸ್ಥೆ ಡಿಜಿಟಿಆರ್​ಗೆ ದೂರು ನೀಡಿದೆ.
ಪಾಕ್​ನ ಸೇನಾ ಲಾಜಿಸ್ಟಿಕ್ ಬಳಕೆ:ಪಾಕಿಸ್ತಾನದ ಸೇನಾ ಸಾಮಗ್ರಿ ಸರಬರಾಜು ವ್ಯವಸ್ಥೆಯನ್ನು (ಲಾಜಿಸ್ಟಿಕ್) ಚೀನಾ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅಮೆರಿಕ ಹೇಳಿದೆ. ಸಾಗರೋತ್ತರ ಸಾಗಣೆ ಮತ್ತು ಚೀನಾ ಸೇನೆಗೆ ಅಗತ್ಯ ಮೂಲಸೌಕರ್ಯ ಹಾಗೂ ಬಹುದೂರದವರೆಗೆ ಸೇನಾ ಶಕ್ತಿ ಸ್ಥಾಪಿಸಲು ಪಾಕ್ ಸೇರಿದಂತೆ ಇನ್ನಿತರ ದೇಶಗಳ ಲಾಜಿಸ್ಟಿಕ್ ಅನ್ನು ಚೀನಾ ಆಶ್ರಯಿಸಿರುವುದಾಗಿ ಅನುಮಾನ ವ್ಯಕ್ತಪಡಿಸಿದೆ.
ಅರುಣಾಚಾಲ ಭಾರತದ ಭಾಗವೇ ಅಲ್ಲ!:ಅರುಣಾಚಲದ ಐವರು ಯುವಕರನ್ನು ನಮ್ಮ ಸೇನೆ ಅಪಹರಿಸಿಲ್ಲ ಎಂದು ಸ್ಪಷ್ಟನೆ ನೀಡಿರುವ ಚೀನಾ ಅರುಣಾಚಲ ಪ್ರದೇಶವೆಂದು ಕರೆಯಲಾಗುವ ಭೂಭಾಗವನ್ನು ನಾವು ಮಾನ್ಯ ಮಾಡಿಲ್ಲ. ಈ ಪ್ರಾಂತ್ಯ ನಮ್ಮ ದಕ್ಷಿಣ ಟಿಬೆಟ್​ಗೆ ಸೇರಿದ ಪ್ರದೇಶ ಎನ್ನುವ ಮೂಲಕ ಉದ್ದಟತನ ತೋರಿದೆ.
ಯುದ್ಧಕ್ಕೆ ಭಾರತವೂ ಸನ್ನದ್ಧ:ಚೀನಾ ತಂತ್ರಕ್ಕೆ ಪ್ರತಿಯಾಗಿ ಭಾರತ ಕೂಡ ಚುಶುಲ್ ಉಪವಲಯಕ್ಕೆ ಹೊಂದಿಕೊಂಡಿರುವ ಸ್ಪಂಗ್ಗುರ್ ಗ್ಯಾಪ್ ಮತ್ತು ರೆಚಿನ್ ಲಾ ಪಾಸ್​ನಲ್ಲಿ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ. ಚೀನಾ ಸೇನೆ ಬೀಡುಬಿಟ್ಟಿರುವ ಪ್ರದೇಶಕ್ಕಿಂತ ಭಾರತದ ಸೇನೆಯ ಠಿಕಾಣಿಗಳು ಎತ್ತರ ಜಾಗದಲ್ಲಿ ಇವೆ ಎಂದು ಮೂಲಗಳು ಹೇಳಿವೆ.
ಪಾಕ್ ಉಗ್ರರ ಸರದಿ ಸಾಲು:ಲಡಾಖ್​ನಲ್ಲಿ ಉಂಟಾಗಿರುವ ಉದ್ವಿಗ್ನತೆಯತ್ತ ಭಾರತೀಯ ಸೇನೆ ಗಮನ ಕೇಂದ್ರೀಕರಿಸಿರುವ ಸಂದರ್ಭದಲ್ಲಿ ಜಮ್ಮು- ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್​ಒಸಿ) ಕಡೆಯಿಂದ ಉಗ್ರರನ್ನು ಒಳನುಸುಳಿಸಲು ಪಾಕ್ ಸಂಚು ರೂಪಿಸಿದೆ. ಎಲ್​ಎಸಿ ಬಳಿಯ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಲಾಂಚ್​ಪ್ಯಾಡ್​ಗಳಲ್ಲಿ ಸುಮಾರು 400 ಉಗ್ರರು ಭಾರತಕ್ಕೆ ನುಸುಳಲು ಸನ್ನದ್ಧರಾಗಿದ್ದಾರೆ ಎಂದು ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಉಗ್ರರು ಭಾರತದೊಳಗೆ ನುಸುಳಲು ಅಗತ್ಯ ನೆರವು ನೀಡುವಂತೆ ಪಾಕ್ ಸೇನೆಗೆ ಎಸ್​ಎಸ್​ಐ ಸೂಚನೆ ನೀಡಿದೆ ಎಂದು ಬೇಹುಗಾರಿಕಾ ಸಂಸ್ಥೆಯ ಉನ್ನತ ಮೂಲಗಳು ತಿಳಿಸಿ ರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಉಗ್ರರು ಎಲ್ಲೆಲ್ಲಿ ಇದ್ದಾರೆ?: ಜಮ್ಮು-ಕಾಶ್ಮೀರದ ಗುರೆಜ್, ಮಚ್ಚಲ್, ಕೇರನ್, ತಂಗ್ಧರ್, ನೌಗಾಮ್ ಉರಿ, ಫೂಂಛ್, ಬಿಂಭರ್ ಗಾಲಿ, ಕೃಷ್ಣ ಕಣಿವೆ, ನೌಶೆರಾ, ಅಕ್ನೂರ್ ಮತ್ತು ದ್ರಾಸ್ ವಲಯಗಳ ಎಲ್​ಒಸಿಯ ಆಚೆ ಬದಿಯ ಲಾಂಚ್​ಪ್ಯಾಡ್​ಗಳಲ್ಲಿ ಉಗ್ರರು ಬೀಡುಬಿಟ್ಟಿದ್ದಾರೆಂದು ತಿಳಿದು ಬಂದಿದೆ.
ಗಡಿಯಲ್ಲಿ ಕಟ್ಟೆಚ್ಚರ:ಉಗ್ರರು ಒಳನುಸುಳಲು ಬಳಸುವ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಇತ್ತೀಚೆಗೆ ಗಡಿ ಬಳಿ ಸುರಂಗಗಳನ್ನು ಪತ್ತೆ ಮಾಡಿ ಮುಚ್ಚಲಾಗಿದೆ. ಹೀಗಾಗಿ ಒಳನುಸುಳುವಿಕೆಗೆ ಉಗ್ರರು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಆದರೆ, ಈ ಪ್ರಯತ್ನವನ್ನೂ ನಾವು ವಿಫಲಗೊಳಿಸುತ್ತೇವೆ ಎಂದು ಸೇನೆ ತಿಳಿಸಿದೆ.
ಸೇನೆಗೆ ಜಿನ್​ಪಿಂಗ್ ತಪರಾಕಿ:ಲಡಾಖ್​ನಲ್ಲಿ ಭಾರತದಿಂದ ಮುಖಭಂಗ ಅನುಭವಿಸಿದ ತಮ್ಮ ಸೇನೆ ವಿರುದ್ಧ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಕಿಡಿಕಾರಿ ದ್ದಾರೆ. ಸ್ಪಂಗ್ಗುರ್ ಗ್ಯಾಪ್​ನಲ್ಲಿ ಮುಖಾಮುಖಿಯಾದ ಶತ್ರು ಸೇನೆ ಎದುರಿಸಲಾಗದೆ ಹಿಂದಿರುಗಿದ ಸೇನೆಗೆ ಅವರು ತಪರಾಕಿ ಹಾಕಿದ್ದು, ಇದರಿಂದ ಪಿಎಲ್​ಎ ಹಿರಿಯ ಅಧಿಕಾರಿಗಳು ಕಂಗಾಲಾಗಿದ್ದಾರೆ.
ಕರೊನಾ ಮರು ಸೋಂಕು; ತಿಂಗಳ ಬಳಿಕ ಮತ್ತೆ ಕೋವಿಡ್​; ಬೆಂಗಳೂರಿನಲ್ಲಿ ಪತ್ತೆಯಾಯ್ತು ಮೊದಲ ಪ್ರಕರಣ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − ten =
Remember me
