ಚೀನಾದ ವುಹಾನ್ ನಗರದಲ್ಲಿ 2019ರ ನವೆಂಬರ್ 17ರಂದು ಮೊದಲ ಕರೊನಾ ಸೋಂಕು ಪ್ರಕರಣ ಪತ್ತೆಯಾಗಿತ್ತು. ಆದರೆ, ಈ ವಿಷಯವನ್ನು ಗೌಪ್ಯವಾಗಿರಿಸಿದ ಚೀನಾ, ವಿಶ್ವ ಆರೋಗ್ಯ ಸಂಸ್ಥೆಗೂ ತಪು್ಪಮಾಹಿತಿ ನೀಡಿ ದಾರಿ ತಪ್ಪಿಸಿತು. ಹುವೈ ಆಸ್ಪತ್ರೆಯ ವೈದ್ಯರೊಬ್ಬರು ಡಿಸೆಂಬರ್ 27ರಂದು ಮಾಧ್ಯಮಗಳೊಂದಿಗೆ ಮಾತನಾಡಿ, ‘ಕರೊನಾ ಎಂಬ ವೈರಸ್ ವೇಗವಾಗಿ ಹರಡುತ್ತಿರುವುದರಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ’ ಎಂದು ಬಹಿರಂಗ ಪಡಿಸಿದರು. ವಿಶ್ವ ಆರೋಗ್ಯ ಸಂಸ್ಥೆಗೆ ಮತ್ತು ಹೊರದೇಶಗಳಿಗೆ ಕೂಡಲೇ ಮಾಹಿತಿ ನೀಡದೆ ಮೋಸ ಎಸಗಿದ ಚೀನಾ, ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ, ಪಿಪಿಇ ಕಿಟ್, ಮಾಸ್ಕ್​ಗಳನ್ನು ತಯಾರಿಸಿ, ರಫ್ತು ಮಾಡುತ್ತ, ಅದರಲ್ಲೂ ಆರ್ಥಿಕ ಲಾಭ ಮಾಡಹೊರಟಿತು. ಆದರೆ, ಅದಕ್ಕೂ ಮುಂಚೆ ಬೃಹತ್ ಪ್ರಮಾಣದಲ್ಲಿ ಈ ವಸ್ತುಗಳನ್ನು ಆಮದು ಮಾಡಿಕೊಂಡು ಸಂಗ್ರಹಿಸಿಕೊಂಡಿತ್ತು. ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿರುವ ಚೀನಾಮೂಲದ ನಾಗರಿಕರು ಹೊಸ ವರ್ಷಾಚರಣೆಗೆಂದು ಸ್ವದೇಶಕ್ಕೆ ತೆರಳಿ, ಮತ್ತೆ ಯುಎಸ್​ಗೆ ಮರಳಿದಾಗ ತಮ್ಮ ಜತೆ ಕರೊನಾವನ್ನೂ ತೆಗೆದುಕೊಂಡು ಬಂದರು. ಹಾಗಾಗಿಯೇ, ಅಮೆರಿಕದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಸೋಂಕು ವೇಗವಾಗಿ ವ್ಯಾಪಿಸಿತು. ‘ಚೀನಾ ವೈರಸ್ ಇಷ್ಟು ದೂರ ಹೇಗೆ ಬರುತ್ತೆ’ ಎಂದು ಕೆಲವರು ಭಾರತದಲ್ಲಿ ನಿರುಮ್ಮಳರಾಗಿದ್ದರು. ಆದರೆ, 2020ರ ಫೆಬ್ರವರಿ-ಮಾರ್ಚ್ ಹೊತ್ತಿಗೆ ಭಾರತಕ್ಕೂ ಕರೊನಾ ವಕ್ಕರಿಸಿತು. ಕಳೆದೊಂದು ವರ್ಷದಲ್ಲಿ ಇಡೀ ಜಗತ್ತೇ ಈ ಸೋಂಕಿನ ವಿರುದ್ಧ ಹೋರಾಡುತ್ತಿದ್ದರೂ, ಸಮಸ್ಯೆಯ ಗಂಭೀರತೆ ಮಾತ್ರ ತಗ್ಗಿಲ್ಲ. ಜಾಗತಿಕವಾಗಿ 6 ಕೋಟಿಗೂ ಅಧಿಕ ಜನ ಸೋಂಕಿತರಾಗಿದ್ದು, 14.50 ಲಕ್ಷಕ್ಕಿಂತ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಭಾರತದ ಸ್ಥಿತಿ:ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ 2ನೇ ದೇಶ; ಮರಣ ಪ್ರಮಾಣದಲ್ಲಿ 3ನೇ ದೇಶ; ಸಕ್ರಿಯ ಪ್ರಕರಣಗಳಲ್ಲಿ 7ನೇ ದೇಶ.
ಹೆಚ್ಚು ಸಕ್ರಿಯ ಪ್ರಕರಣಗಳು ಎಲ್ಲಿವೆ?:ಅಮೆರಿಕ, ಫ್ರಾನ್ಸ್, ಇಟಲಿ, ಬೆಲ್ಜಿಯಂ, ಬ್ರೆಜಿಲ್, ರಷ್ಯಾ, ಭಾರತ

ಮೂರ್ನಾಲ್ಕು ತಿಂಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎಂಬ ತಜ್ಞರ ಅಂದಾಜುಗಳು ಹುಸಿಯಾದವು. ಅಮೆರಿಕ, ಭಾರತದಲ್ಲಿ ಒಂದಿಷ್ಟು ಅವಧಿಗೆ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದರೂ, ಚಳಿಗಾಲ ಆರಂಭವಾಗುತ್ತಿದ್ದಂತೆ ಮತ್ತೆ ರೋಗಿಗಳ ಸಂಖ್ಯೆ ಹೆಚ್ಚಾಗತೊಡಗಿತು. ಅದರಲ್ಲೂ, ಅಮೆರಿಕ, ಬ್ರೆಜಿಲ್, ಫ್ರಾನ್ಸ್, ರಷ್ಯಾ, ಭಾರತ (ಭಾರತದ ಕೆಲವು ರಾಜ್ಯಗಳಲ್ಲಿ ಸೋಂಕು ಪ್ರಮಾಣ ಕಡಿಮೆಯಾಗಿದ್ದರೆ ಕೆಲ ರಾಜ್ಯಗಳಲ್ಲಿ ಮತ್ತೆ ಹೆಚ್ಚಿಗೆಯಾಗಿದೆ) ಸೇರಿ 54 ದೇಶಗಳಲ್ಲಿ ಕರೊನಾ ಎರಡನೇ ಅಲೆ ಕಾಣಿಸಿಕೊಂಡಿರುವುದರಿಂದ, ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. 54 ದೇಶಗಳ ಪೈಕಿ 25 ಯುರೋಪಿಯನ್, ಏಷ್ಯಾದ 11, ಉತ್ತರ ಅಮೆರಿಕದ 7, ಆಫ್ರಿಕಾದ 6, ದಕ್ಷಿಣ ಆಫ್ರಿಕಾದ 5 ದೇಶಗಳಿವೆ. ಸೆಪ್ಟೆಂಬರ್​ವರೆಗೆ ಜಾಗತಿಕವಾಗಿ ಪ್ರತಿನಿತ್ಯ ಸರಾಸರಿ 3 ಲಕ್ಷ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೆ, ಪ್ರಸಕ್ತ ಈ ಸಂಖ್ಯೆ 6 ಲಕ್ಷಕ್ಕೆ ಏರಿಕೆಯಾಗಿದೆ.

ಪ್ರಪಂಚದಾದ್ಯಂತ 100ಕ್ಕೂ ಹೆಚ್ಚು ವ್ಯಾಕ್ಸಿನ್ ತಯಾರಿಕೆಯ ಯೋಜನೆಗಳು ಪ್ರಗತಿಯಲ್ಲಿವೆ. ಈ ಪೈಕಿ 5 ಲಸಿಕೆಗಳು ಪ್ರಮುಖವಾಗಿವೆ. ಪರೀಕ್ಷಾ ಫಲಿತಾಂಶಗಳು ಉತ್ತಮವಾಗಿವೆ ಎಂದು ಈ ಐದೂ ಕಂಪನಿಗಳು ವಿಶ್ವಾಸ ವ್ಯಕ್ತಪಡಿಸಿವೆ. ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಸ್ಟ್ರಾಜೆನೆಕಾ ಕಂಪನಿ ಭಾರತದಲ್ಲಿ ತಯಾರಿಸುತ್ತಿರುವ ಕೋವಿಶೀಲ್ಡ್ ಲಸಿಕೆ ಭಾರತಕ್ಕೆ ಪರಿಣಾಮಕಾರಿಯಾಗಬಲ್ಲದು ಎಂಬುದು ತಜ್ಞರ ಅನಿಸಿಕೆ. 2021 ಫೆಬ್ರವರಿ ಕೊನೆಯ ವಾರದ ಹೊತ್ತಿಗೆ 10 ಕೋಟಿ ಡೋಸೇಜ್ ತಯಾರಾಗಲಿವೆ ಎಂದು ಕಂಪನಿ ಹೇಳಿಕೊಂಡಿದೆ. 2021ರ ಮೊದಲ ಮೂರು ತಿಂಗಳೊಳಗೆ ಲಸಿಕೆ ಬರುವ ವಿಶ್ವಾಸವನ್ನು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಕೂಡ ವ್ಯಕ್ತಪಡಿಸಿದ್ದಾರೆ.
ನೀಲಿನಕ್ಷೆ ತಯಾರು:ಲಸಿಕೆ ವಿತರಣೆಗೆ ಭಾರತ ಸರ್ಕಾರ ನೀಲಿನಕ್ಷೆ ಸಿದ್ಧಪಡಿಸಿದೆ. ಮೊದಲ ಹಂತದಲ್ಲಿ 31 ಕೋಟಿ ಜನರಿಗೆ ಲಸಿಕೆ ಸಿಗಲಿದೆ. ಇದರಲ್ಲಿ ವೈದ್ಯರು, ಇತರ ಆರೋಗ್ಯ ಕಾರ್ಯಕರ್ತರು, 50 ವರ್ಷ ಮೇಲ್ಪಟ್ಟ ಹಿರಿಯರು ಸೇರಿದ್ದಾರೆ. ಜುಲೈ-ಆಗಸ್ಟ್ ವೇಳೆಗೆ 40-50 ಕೋಟಿ ಡೋಸೇಜ್ ಲಭ್ಯವಾಗುವ ನಿರೀಕ್ಷೆ ಇದೆ.

ಕರೊನಾ ವಿರುದ್ಧದ ಹೋರಾಟದಲ್ಲಿ ಭಾರತ ನಿರ್ಣಾಯಕ ಹಂತಕ್ಕೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ದೇಶದ 3 ಕಡೆಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ವಿವಿಧ ಲಸಿಕೆಗಳ ಪ್ರಗತಿ ಪರಿಶೀಲನೆಯನ್ನು ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಕೈಗೊಂಡರು. ಅಹಮದಾಬಾದ್​ನ ಜೈಡುಸ್ ಕ್ಯಾಡಿಲಾ, ಹೈದರಾಬಾದ್​ನ ಭಾರತ್ ಬಯೋಟೆಕ್ ಹಾಗೂ ಪುಣೆಯ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಭೇಟಿ ನೀಡಿ, ಲಸಿಕೆಗಳ ಅಭಿವೃದಿ, ಕ್ಲಿನಿಕಲ್ ಪ್ರಯೋಗಗಳ ವರದಿ ಪಡೆದರು.
ಶನಿವಾರ ಬೆಳಗ್ಗೆ 10ಕ್ಕೆ ಅಹಮದಾ ಬಾದ್​ನ ಜೈಡುಸ್ ಕ್ಯಾಡಿಲಾಗೆ ಮೋದಿ ಭೇಟಿ ನೀಡಿದರು. ಜೈಕೋವಿಡ್ ಎಂಬ ಲಸಿಕೆಯನ್ನು ಜೈಡುಸ್ ಕ್ಯಾಡಿಲಾ ಅಭಿವೃದ್ಧಿಪಡಿಸುತ್ತಿದ್ದು, ತಜ್ಞರು ಹಾಗೂ ವಿಜ್ಞಾನಿಗಳ ಪ್ರಯತ್ನಕ್ಕೆ ಮೋದಿ ಶ್ಲಾಘನೆ ವ್ಯಕ್ತಪಡಿಸಿದರು. ಜೈಡುಸ್ ಬಯೋಟೆಕ್ ಪಾರ್ಕ್​ಗೂ ಭೇಟಿ ನೀಡಿದ ಪ್ರಧಾನಿ, ‘ಲಸಿಕೆ ತಯಾರಿಕೆಯಲ್ಲಿ ಸರ್ಕಾರ ನಿಮ್ಮೊಂದಿಗಿದೆ’ ಎಂದು ಭರವಸೆ ನೀಡಿದರು.
ಮಧ್ಯಾಹ್ನದ ವೇಳೆಗೆ ಹೈದರಾಬಾದ್​ಗೆ ತೆರಳಿದ ಪ್ರಧಾನಿ, ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಮೊದಲ ದೇಶೀಯ ಲಸಿಕೆ ಕೋವ್ಯಾಕ್ಸಿನ್​ನ ಪ್ರಗತಿ ಪರಿಶೀಲಿಸಿ ದರು. ಕೋವ್ಯಾಕ್ಸಿನ್ ಲಸಿಕೆಯ ಪ್ರಯೋಗಗಳಲ್ಲಿ ಈವರೆಗೆ ದೊರೆತಿರುವ ಯಶಸ್ಸನ್ನು ಪ್ರಶಂಸಿಸಿದರು. ಭಾರತ್ ಬಯೋಟೆಕ್​ನ ಸಂಶೋಧನಾಕಾರು, ಪ್ರಮೋಟರ್​ಗಳು ಹಾಗೂ ಎಕ್ಸಿಕ್ಯೂಟಿವ್​ಗಳ ಜತೆ ಸಭೆ ನಡೆಸಿ ಲಸಿಕೆ ಲಭ್ಯತೆಯ ಸಮಯ, ಫಲಿತಾಂಶ ಸೇರಿ ಪ್ರಮುಖ ವಿಷಯಗಳ ಕುರಿತು ರ್ಚಚಿಸಿದರು.
ವಿಶ್ವದ ಅತಿ ದೊಡ್ಡ ಲಸಿಕೆ ಉತ್ಪಾದಕ ಸಂಸ್ಥೆ ಪುಣೆಯ ಸೆರಂ:ಇನ್​ಸ್ಟಿಟ್ಯೂಟ್​ಗೆ ಸಂಜೆ 4.30ರ ವೇಳೆಗೆ ಭೇಟಿ ನೀಡಿದ ಮೋದಿ, ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಹಾಗೂ ಉತ್ಪಾದನಾ ಕಾರ್ಯಗಳನ್ನು ಪರಿಶೀಲಿಸಿ ದರು. ಸಂಶೋಧಕರ ಜತೆ ಸಭೆ ನಡೆಸಿ ಕ್ಲಿನಿಕಲ್ ಪ್ರಯೋಗಗಳ ಪ್ರಗತಿಯ ಮಾಹಿತಿ ಪಡೆದರು. ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಸ್ಟ್ರಾಜೆನಿಕಾ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸಲು ಸೆರಂ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ.


ಪಿಪಿಇ ಕಿಟ್ ಧರಿಸಿದರು:ಅಹಮದಾಬಾದ್​ನ ಜೈಡುಸ್ ಕ್ಯಾಡಿಲಾ ಕೇಂದ್ರದೊಳಗೆ ಪ್ರಧಾನಿ ನರೇಂದ್ರ ಮೋದಿ ಪಿಪಿಇ ಕಿಟ್ ಧರಿಸಿದ್ದರು. ಕೇಂದ್ರದ ಮುಖ್ಯಸ್ಥರು ಲಸಿಕೆ ಅಭಿವೃದ್ಧಿ ಬಗ್ಗೆ ಪ್ರತಿಯೊಂದು ವಿಭಾಗದಲ್ಲಿ ನಡೆಯುತ್ತಿರುವ ಕೆಲಸಗಳ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 16 =
Remember me
