ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೂನ್ 24ರಂದು ದೆಹಲಿಯಲ್ಲಿ ಜಮ್ಮು-ಕಾಶ್ಮೀರದ ರಾಜಕೀಯ ಪಕ್ಷಗಳ ಮುಖಂಡರನ್ನು ವಿಶೇಷ ಸಭೆಗೆ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಕಣಿವೆ ಪ್ರದೇಶದಲ್ಲಿ ರಾಜಕೀಯ ಪ್ರಕ್ರಿಯೆಗೆ ಮರುಚಾಲನೆ ಸಿಗುವ ಸುಳಿವು ಸಿಕ್ಕಿದೆ. ಮಾಜಿ ಸಿಎಂ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ, ಫಾರುಕ್ ಅಬ್ದುಲ್ಲಾ ನಾಯಕತ್ವದ ನ್ಯಾಷನಲ್ ಕಾನ್ಪರೆನ್ಸ್, ಪೀಪಲ್ಸ್ ಕಾನ್ಪರೆನ್ಸ್​ನ ಸಜ್ಜದ್ ಲೋನ್, ಕಾಂಗ್ರೆಸ್​ನ ಗುಲಾಂ ನಬೀ ಆಜಾದ್ ಸೇರಿ ಅನೇಕ ಮುಖಂಡರನ್ನು ಸಭೆಗೆ ಆಹ್ವಾನಿಸಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಮರುಸ್ಥಾಪನೆಗೊಳಿಸಬೇಕು ಎಂದು ಗುಪ್ಕರ್ ಮೈತ್ರಿಪಕ್ಷಗಳು ಒತ್ತಾಯಿಸುತ್ತಿದ್ದು, ಕೇಂದ್ರಾಡಳಿತ ಪ್ರದೇಶವಾಗಿ ವಿಂಗಡಿಸಿದ್ದನ್ನೂ ವಿರೋಧಿಸಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವ ಬಗ್ಗೆ ಕೇಂದ್ರ ಚಿಂತನೆ ನಡೆಸಿದೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ವಿಶೇಷ ಸ್ಥಾನಮಾನ ಮರುಸ್ಥಾಪನೆಗೊಳಿಸುವ ಉದ್ದೇಶ ಕೇಂದ್ರದಲ್ಲಿಲ್ಲ ಎನ್ನಲಾಗಿದೆ. ಅದಲ್ಲದೆ, ಕಣಿವೆಯಲ್ಲಿ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ, ಅದು ಪೂರ್ಣಗೊಂಡ ಕೂಡಲೇ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಲು ಕೇಂದ್ರ ಬಯಸಿದೆ. ಸದ್ಯ ಕೇಂದ್ರ ಸರ್ಕಾರ ಲೆಫ್ಟಿನೆಂಟ್ ಗವರ್ನರ್​ನ್ನು ನೇಮಿಸಿ ಅಲ್ಲಿ ಆಡಳಿತ ನಡೆಸುತ್ತಿದೆ. ಅನೇಕ ಅಭಿವೃದ್ಧಿ ಚಟುವಟಿಕೆಗಳಿಗೂ ವೇಗ ನೀಡಲಾಗಿದೆ.
2 ವರ್ಷ ಪೂರ್ಣ:ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿ, ಜಮ್ಮು-ಕಾಶ್ಮೀರ ಮತ್ತು ಲಡಾಖನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿ ಆಗಸ್ಟ್ 5ಕ್ಕೆ 2 ವರ್ಷ ಪೂರ್ಣಗೊಳ್ಳಲಿದೆ. ಕಳೆದೆರಡು ವರ್ಷಗಳಿಂದ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆದಿಲ್ಲ. 2020ರ ಅಂತ್ಯದಲ್ಲಿ ನಡೆದ ಡಿಡಿಸಿ ಚುನಾವಣೆಯಲ್ಲಿ (ಡಿಸ್ಟ್ರಿಕ್ಟ್ ಡೆವಲಪ್ಮೆಂಟ್ ಕೌನ್ಸಿಲ್) ಬಿಜೆಪಿ 75 ಸೀಟುಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಒಟ್ಟು 280 ಸೀಟುಗಳಿಗೆ ನಡೆದ ಚುನಾವಣೆಯಲ್ಲಿ ಗುಪ್ಕರ್ ಮೈತ್ರಿಗೆ (ಪಿಎಜಿಡಿ -ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲೆರೇಷನ್) 112 ಸೀಟುಗಳು ಬಂದಿದ್ದವು. ಇದರಲ್ಲಿ ನ್ಯಾಷನಲ್ ಕಾನ್ಪರೆನ್ಸ್ 67, ಪಿಡಿಪಿ ಮತ್ತು ಕಾಂಗ್ರೆಸ್ ತಲಾ 27 ಸೀಟುಗಳನ್ನು ಗೆದ್ದಿದ್ದವು. ರಾಷ್ಟ್ರಮಟ್ಟದಲ್ಲಿ ಪ್ರತಿಕೂಲ ಪರಿಣಾಮ ಬೀರುವ ಅಪಾಯದಿಂದಾಗಿ ಕಾಂಗ್ರೆಸ್ ಗುಪ್ಕರ್ ಮೈತ್ರಿಯ ಭಾಗವಾಗಿಲ್ಲ.
ನಿಲವು ಸಡಿಲ:ಮರುವಿಂಗಡಣೆ ಪ್ರಕ್ರಿಯೆಯಲ್ಲಿ ನೀವೂ ಪಾಲ್ಗೊಳ್ಳಿ ಎಂದು ಮರುವಿಂಗಡಣೆ ಆಯೋಗವು ಅಲ್ಲಿನ ರಾಜಕೀಯ ಪಕ್ಷಗಳಲ್ಲಿ ಕೇಳಿಕೊಂಡಿತ್ತು. ಅಲ್ಲದೆ ಐವರು ಸಂಸದರನ್ನು ಆಯೋಗದ ಸಹ-ಸದಸ್ಯರನ್ನಾಗಿ ನೇಮಿಸಲಾಗಿದೆ. ಆದರೆ, 2019ರ ಜಮ್ಮು- ಕಾಶ್ಮೀರ ಸಂರಚನೆ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ
ಕೋರ್ಟ್​ಗೆ ಅರ್ಜಿ ಸಲ್ಲಿಸಿರುವುದರಿಂದ ಗುಪ್ಕರ್ ಮೈತ್ರಿ ಪಕ್ಷಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದವು. ಕ್ಷೇತ್ರ ಮರುವಿಂಗಡಣೆ ಪೂರ್ಣಗೊಂಡಲ್ಲಿ ಇಲ್ಲಿನ ವಿಧಾನಸಭೆ ಕ್ಷೇತ್ರಗಳ ಸಂಖ್ಯೆ 107ರಿಂದ 114ಕ್ಕೇರಲಿದೆ. ಇದರಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ 24 ಸೀಟುಗಳೂ ಇವೆ. ಈಚಿನ ದಿನಗಳಲ್ಲಿ ಪಕ್ಷಗಳು ಮರುವಿಂಗಡಣೆ ಆಯೋಗ ವಿರೋಧಿಸುವ ನಿಲುವನ್ನು ಸಡಿಲಿಸಿವೆ. ಅಂದರೆ, ಚುನಾವಣೆ ಪ್ರಕ್ರಿಯೆ ಆರಂಭಿಸಲು ಕೇಂದ್ರಕ್ಕೆ ಸಹಕಾರ ನೀಡಲು ಸಿದ್ಧ ಎಂಬ ಪರೋಕ್ಷ ಸಂದೇಶ ರವಾನಿಸಿವೆ.
ಮುಖ್ಯವಾಗಿ ಪಿಡಿಪಿ ಮತ್ತು ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಮುಖಂಡರು ನಿಲುವನ್ನು ಸಡಿಲಿಸಲು ಕಾರಣ ಕುತೂಹಲಕರ. ಫಾರುಕ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಕುಟುಂಬದ ಮೇಲಿನ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ಇಬ್ಬರನ್ನೂ ವಿಚಾರಣೆಗೊಳಪಡಿಸಲಾಗಿದೆ. ಫಾರುಕ್ ಅಬ್ದುಲ್ಲಾ ಜಮ್ಮು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ವೇಳೆ ಸುಮಾರು 43 ಕೋಟಿ ರೂ. ಅವ್ಯವಹಾರ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಮೆಹಬೂಬಾ ಮುಫ್ತಿ ಕುಟುಂಬದ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಪಾಸ್​ಪೋರ್ಟ್ ವಶಪಡಿಸಿಕೊಳ್ಳಲಾಗಿದೆ. ಭ್ರಷ್ಟಾಚಾರ ತನಿಖೆಗಳಿಂದಾಗಿ ಅವರ ರಾಜಕೀಯ ನಿಲುವುಗಳೂ ಸಡಿಲಗೊಂಡಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪಕ್ಷಗಳ ನಿಲುವು:ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವ ಬಗ್ಗೆ ಕೇಂದ್ರ ಯಾವುದೇ ಸುಳಿವು ನೀಡಿಲ್ಲ. ಆದರೆ, ಈ ಸಾಧ್ಯತೆಯ ಸುದ್ದಿ ಹರಿದಾಡುತ್ತಿದೆ. ಗುಪ್ಕರ್ ಮೈತ್ರಿ ಪಕ್ಷಗಳು ಇದನ್ನು ಸ್ವಾಗತಿಸಿದರೂ, ವಿಶೇಷ ಸ್ಥಾನಮಾನವಿಲ್ಲದೆ ರಾಜ್ಯದ ಮಾನ್ಯತೆ ಬೇಕಿಲ್ಲ ಎಂಬ ವಾದವನ್ನು ಮುಂದಿಡುವ ಸಾಧ್ಯತೆ ಇದೆ.
ಕ್ಷೇತ್ರ ಮರುವಿಂಗಡಣೆ:ಜಮ್ಮು-ಕಾಶ್ಮೀರ ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಗೆ ಕೇಂದ್ರ ಮುಂದಾಗಿದೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಕ್ಷೇತ್ರ ಮರುವಿಂಗಡಣೆ ಆಯೋಗ ರಚನೆ ಮಾಡಲಾಗಿತ್ತು ಮತ್ತು ಈ ವರ್ಷದ ಮಾರ್ಚ್ ತಿಂಗಳಲ್ಲಿ ಆಯೋಗವನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಗಿತ್ತು. ಜೂನ್ 3ರಂದು ಜಂಟಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಎಲ್ಲಾ 20 ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಜಿಲ್ಲೆಗಳ ಭೌಗೋಳಿಕ ಮಾಹಿತಿ, ಆಡಳಿತಾತ್ಮಕ ಘಟಕಗಳ ಹಂಚಿಕೆ, ಜನಸಂಖ್ಯೆ ಅಧಿಕ/ಕಡಿಮೆ ಇರುವ ಪ್ರದೇಶಗಳು ಹಾಗೂ ವಲಸೆ ಜನಸಂಖ್ಯೆ ಕುರಿತ ಮಾಹಿತಿ ನೀಡಲು ತಿಳಿಸಿತ್ತು. ಹಾಗೆಯೇ ಜಿಲ್ಲೆಗಳ ಜನರ ರಾಜಕೀಯ ಆಶಯದ ಬಗ್ಗೆಯೂ ವಿವರಣೆ ನೀಡುವಂತೆ ನಿರ್ದೇಶಿಸಲಾಗಿತ್ತು. ಜೂನ್ 5ರಂದು ಜಿಲ್ಲಾಧಿಕಾರಿಗಳ ಕಚೇರಿಗಳು ಚುನಾವಣಾಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಂಡಿವೆ. ಈ ಎಲ್ಲಾ ವಿಷಯಗಳ ಬಗ್ಗೆ ಜೂ.24ರ ಸಭೆಯಲ್ಲಿ ಚರ್ಚೆಯಾಗಲಿದೆ.
ಬಿಜೆಪಿಯನ್ನು ದೂರವಿಡಲು ಯೋಜನೆ:ವಿಧಾನಸಭೆ ಚುನಾವಣೆಯಿಂದಷ್ಟೇ ಬಿಜೆಪಿಯನ್ನು ಆಡಳಿತದಿಂದ ದೂರವಿಡಬಹುದು ಎಂಬ ವಾಸ್ತವವೂ ಗುಪ್ಕರ್ ಮೈತ್ರಿಗೆ ಗೊತ್ತಿಲ್ಲದೇನಿಲ್ಲ. 2018ರ ಪಂಚಾಯತ್ ಚುನಾವಣೆಯನ್ನು ಪಿಡಿಪಿ ಮತ್ತು ನ್ಯಾಷನಲ್ ಕಾನ್ಪರೆನ್ಸ್ ಬಹಿಷ್ಕರಿಸಿದ್ದರಿಂದ ಬಿಜೆಪಿ ಮತ್ತು ಪಕ್ಷೇತರರು ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಹೀಗಾಗಿ ವಿಧಾನಸಭೆ ಚುನಾವಣೆ ಮೇಲೂ ನಿರಾಸಕ್ತಿ ತೋರಿದರೆ, ಅದರಿಂದ ಬಿಜೆಪಿಗೇ ಲಾಭವಾಗಲಿದೆ. ಹೀಗಾಗಿ, ಚುನಾವಣೆಗೆ ಪೂರಕ ಎನಿಸುವ ಕ್ರಮಗಳಿಗೆ ಸಹಕರಿಸಲು ಈ ಪಕ್ಷಗಳು ತೀರ್ವನಿಸಿವೆ ಎಂದು ಹೇಳಲಾಗುತ್ತಿದೆ.
ಗುಪ್ಕರ್ ಭಾಗಿ:ಜೂನ್ 14ರ ಸಭೆಯಲ್ಲಿ ಭಾಗವಹಿಸುವುದಾಗಿ ಗುಪ್ಕರ್ ಮೈತ್ರಿಪಕ್ಷಗಳು ತಿಳಿಸಿವೆ. ‘ಮೆಹಬೂಬಾ ಮುಫ್ತಿ, ಮೊಹಮದ್ ತಾರಿಗಾಮಿ ಸಾಹಿಬ್ ಮತ್ತು ನಾನು ಸಭೆಯಲ್ಲಿ ಪಾಲ್ಗೊಂಡು ನಮ್ಮ ನಿಲುವು ಮಂಡಿಸುತ್ತೇವೆ’ಎಂದು ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 9 =
Remember me
