ನವದೆಹಲಿ:ಲಡಾಖ್​ನಲ್ಲಿ ನಿರಂತರ ತಂಟೆ, ತಕರಾರು ನಡೆಸಿದ್ದ ಚೀನಾ ಸೇನೆಯನ್ನು ತಂತ್ರಗಾರಿಕೆ ಮೂಲಕ ಹಿಂದಡಿ ಇಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ ಭಾರತ ಇದೀಗ ಪಾಕಿಸ್ತಾನದ ಉಪಟಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುನ್ನಡೆ ಸಾಧಿಸಿದೆ.
ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆ (ಎಲ್​ಒಸಿ) ಉದ್ದಕ್ಕೂ ಗುಂಡಿನ ಚಕಮಕಿ ನಿಲ್ಲಿಸಲು ಮತ್ತು ಕದನವಿರಾಮ ಕುರಿತ ಎಲ್ಲ ಒಪ್ಪಂದವನ್ನು ಕಟ್ಟುನಿಟ್ಟಾಗಿ ಪಾಲಿಸಲು ಉಭಯ ರಾಷ್ಟ್ರಗಳು ಸಮ್ಮತಿಸಿದ್ದು, ಈ ಒಪ್ಪಂದ ಫೆ. 24ರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.
ಗಡಿಯಲ್ಲಿ ಸುಸ್ಥಿರ ಶಾಂತಿ ಸ್ಥಾಪನೆ ಮತ್ತು ಸೌಹಾರ್ದದ ವಾತಾವರಣ ನಿರ್ವಿುಸಲು ಪ್ರಮುಖ ಸಮಸ್ಯೆ ಮತ್ತು ಕಳವಳವನ್ನು ಬಗೆಹರಿಸಿಕೊಳ್ಳಬೇಕೆಂದು ಉಭಯ ದೇಶಗಳು ಬಯಸಿವೆ. ಈ ನಿಟ್ಟಿನಲ್ಲಿ ಶಾಂತಿಗೆ ಭಂಗ ತರುವಂತಹ ಮತ್ತು ಘರ್ಷಣೆಗೆ ಆಸ್ಪದ ನೀಡುವಂತಹ ಸನ್ನಿವೇಶವನ್ನು ದೂರ ಮಾಡವ ಸಲುವಾಗಿ ಕಟ್ಟುನಿಟ್ಟಾಗಿ ಕದನವಿರಾಮ ಕಾಯ್ದುಕೊಳ್ಳಲು 2 ದೇಶಗಳು ಒಪ್ಪಿವೆ ಎಂದು ಉಭಯ ದೇಶಗಳ ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕರು (ಡಿಜಿಎಂಒ)ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತದ ಡಿಜಿಎಂಒ ಲೆಫ್ಟಿನೆಂಟ್ ಜ.ಪರಮಜಿತ್ ಸಿಂಗ್ ಹಾಗೂಪಾಕ್​ನ ಡಿಜಿಎಂಒ ಮೇಜರ್ ಜ.ನೌಮನ್ ಜಕಾರಿಯಾ ಮಧ್ಯೆ ಹಾಟ್​ಲೈನ್ ದೂರವಾಣಿ ಮೂಲಕ ಮಾತುಕತೆ ನಡೆದಿದೆ.
ನೆಮ್ಮದಿಯ ಆಶಾಭಾವ:ಗಡಿಯಲ್ಲಿ ಗುಂಡಿನ ಚಕಮಕಿ ನಿಲ್ಲುವುದರಿಂದ ಉದ್ವಿಗ್ನತೆ ದೂರವಾಗಿ ಎಲ್​ಒಸಿ ಬಳಿ ಗ್ರಾಮಗಳಲ್ಲಿ ನೆಮ್ಮದಿ ನೆಲೆಸುತ್ತದೆ ಎಂಬ ಆಶಾಭಾವ ಇದೆ. ಇದರ ಹೊರತಾಗಿಯೂ ಜಮು-ಕಾಶ್ಮೀರದ ಎಲ್​ಒಸಿಯಲ್ಲಿ ಅಕ್ರಮ ಒಳನುಸುಳುವಿಕೆ ಇರುವ ಕಾರಣ ಮುಂಚೂಣಿ ಚೌಕಿಗಳಲ್ಲಿ ಸೈನಿಕರ ಸಂಖ್ಯೆ ತಗ್ಗಿಸುವ ಇರಾದೆ ಸರ್ಕಾರಕ್ಕೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಏನಿತ್ತು?
ಭಾರತ ಮತ್ತು ಪಾಕ್ ನಡುವೆ 2003ರಲ್ಲೇ ಎಲ್​ಒಸಿಯಲ್ಲಿ ಕದನವಿರಾಮದ ಒಪ್ಪಂದ ಏರ್ಪಟ್ಟಿತ್ತು. ಆದರೆ, ಇದು ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿರಲಿಲ್ಲ. ಪಾಕ್ ಕದನವಿರಾಮ ಉಲ್ಲಂಘನೆಗೆ ಭಾರತ ಪ್ರತ್ಯುತ್ತರ ನೀಡುತ್ತಿತ್ತು. ಈ ರೀತಿಯ ಗುಂಡಿನ ಚಕಮಕಿಯಿಂದ ಗಡಿ ಭಾಗದ ಗ್ರಾಮಗಳಲ್ಲಿ ಸಾವು-ನೋವಿನ ಜತೆಗೆ, ಆಸ್ತಿ ನಷ್ಟವೂ ಸಂಭವಿಸುತ್ತಿತ್ತು. ನಾಗರಿಕರಿಗೆ ಆಗುತ್ತಿರುವ ಈ ತೊಂದರೆಯನ್ನು ತಪ್ಪಿಸಲು ಈ ಒಪ್ಪಂದ ಮತ್ತೆ ಏರ್ಪಟ್ಟಿದೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ಜಂಟಿ ನಿರ್ಧಾರ
*ಗಂಭೀರ ಸವಾಲು ಎದುರಾದಾಗ ಅದನ್ನು ನಿಭಾಯಿಸಲು ಹಾಟ್​ಲೈನ್ ಸಂಪರ್ಕ, ಗಡಿ ಧ್ವಜಸಭೆ ಬಳಸಿಕೊಳ್ಳಲು ಉಭಯ ದೇಶಗಳು ಸಮ್ಮತಿಸಿವೆ.
ಭಾರತ ಕಾರ್ಯತಂತ್ರ
*ಲಡಾಖ್​ನಲ್ಲಿ ಭಾರತೀಯ ಯೋಧರ ಮೇಲೆ ದಾಳಿ ನಡೆಸಿದ್ದ ಚೀನಾವನ್ನು ವ್ಯೂಹಾತ್ಮಕ ಕಾರ್ಯತಂತ್ರದ ಮೂಲಕ ಮಣಿಸಿ, ಹಿಂದಡಿ ಇಡುವಂತೆ ಮಾಡುವ ಯೋಜನೆ ಯಶಸ್ವಿ
*ಯುದ್ಧದಂಥ ವಿಪರೀತ ಸನ್ನಿವೇಶಕ್ಕೆ ಎಡೆಮಾಡದೆ ಈ ಕಾರ್ಯದಲ್ಲಿ ಯಶಸ್ವಿಯಾದ ಭಾರತ
*ಪಾಕ್​ಗೆ ಭಾರತದ ಜತೆಗಿನ ಸಂಘರ್ಷ ಬೇಡವಾದರೂ ಕಾಶ್ಮೀರ ವಿಚಾರ ಜೀವಂತವಾಗಿಡಲು ಕದನ ವಿರಾಮದಂತಹ ಮಾರ್ಗ ಹಿಡಿಯುತ್ತದೆ. ಆದರೆ ಲಡಾಖ್​ನಲ್ಲಿ ಚೀನಾ ಹಿಂದಡಿ ಇಟ್ಟ ಬಳಿಕ ಪಾಕ್​ಗೆ ಬೇರೆ ಆಯ್ಕೆ ಇರಲಿಲ್ಲ
ಮೈಮರೆಯುವಂತಿಲ್ಲ
ಪಾಕ್ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ ಮಾತ್ರಕ್ಕೆ ಅದು ಸುಮ್ಮನಿರುತ್ತದೆ ಎಂದು ಭಾರತ ಮೈಮರೆಯುವಂತಿಲ್ಲ. ಇಂತಹ ಅನೇಕ ಒಪ್ಪಂದ ಏರ್ಪಟ್ಟ ಬಳಿಕವೂ ಪಾಕ್ ಮತ್ತೆ ಬಾಲ ಬಿಚ್ಚಿದ್ದಿದೆ. ಹೀಗಾಗಿ ಗಡಿಯಲ್ಲಿ ನಿಗಾ ಇಡುವ ಜತೆಗೆ ಪಾಕ್ ನಡೆಗಳ ಮೇಲೂ ಹದ್ದಿನಕಣ್ಣು ಇರಿಸುವುದು ಅನಿವಾರ್ಯ.
ದೋವಲ್ ಕಾರ್ಯತಂತ್ರ ಯಶಸ್ವಿ
ನರೇಂದ್ರ ಮೋದಿ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಸವಾಲುಗಳು ಎದುರಾದಾಗಲೆಲ್ಲ ನೆರವಿಗೆ ಧಾವಿಸುವ ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪಾತ್ರ ಈ ಶಾಂತಿ ಒಪ್ಪಂದದ ಹಿಂದೆಯೂ ಇದೆ. ಪಾಕ್​ನ ಭದ್ರತಾ ಸಲಹೆಗಾರ ಹಾಗೂ ಪ್ರಧಾನಿ ಇಮ್ರಾನ್ ಖಾನ್​ರ ವಿಶೇಷ ಸಹಾಯಕ ಮೊಯೀದ್ ಡಬ್ಲ್ಯೂ ಯುಸುಫ್ ಜತೆ ದೋವಲ್ ತಿಂಗಳ ಹಿಂದೆಯೇ ಶಾಂತಿಸ್ಥಾಪನೆ ಕುರಿತು ಚರ್ಚೆ ನಡೆಸುತ್ತಿದ್ದರು. ದೋವಲ್ ನಡೆಸಿದ ಮಾತುಕತೆಯ ವಿವರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಕೆಲ ಸಚಿವರಿಗಷ್ಟೇ ತಿಳಿದಿತ್ತು ಎಂದು ಮೂಲಗಳು ಹೇಳಿವೆ.
ಆ ಐದು ಸುಳಿವುಗಳು…
2. ಫೆ.5ರಂದು ಪಾಕ್ ಸೇನೆ ಕಾಶ್ಮೀರ ಏಕತಾ ದಿನ ಆಚರಿಸಿತು. ಇದು ಅಚ್ಚರಿಯ ನಡೆಯಾದರೂ ಇದರ ಹಿಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್​ರ ಗೌಪ್ಯ ಮಾತುಕತೆ ಕೆಲಸ ಮಾಡಿತ್ತು
3. ಫೆ. 2 ಮತ್ತು 5ರ ಬೆಳವಣಿಗೆಯ ನಂತರ ಗಡಿಯಲ್ಲಿ ಗುಂಡಿನ ಚಕಮಕಿ ಕಡಿಮೆ ಆಯಿತು. ಪಾಕಿಸ್ತಾನದ ಕಡೆಯಿಂದ ಮಾತುಕತೆಗೆ ಮುಂದಾಗುವ ಸುಳಿವು ವ್ಯಕ್ತವಾಗತೊಡಗಿತು.
4. ಕರೊನಾ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ ಕರೆದಿದ್ದ ಸಾರ್ಕ್ ದೇಶಗಳ ಸಭೆಗೆ ಪಾಕ್​ಗೂ ಆಹ್ವಾನ ನೀಡಲಾಗಿತ್ತು. ಇಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ವಿಶೇಷ ಸಹಾಯಕ ಡಾ.ಫೈಸಲ್ ಸುಲ್ತಾನ್ ಕಾಶ್ಮೀರ ವಿಷಯ ಪ್ರಸ್ತಾಪಿಸಲಿಲ್ಲ. ಸಾಮಾನ್ಯವಾಗಿ ಪ್ರತಿ ಅಂತಾರಾಷ್ಟ್ರೀಯ ಸಭೆಯಲ್ಲೂ ಪಾಕ್ ಕಾಶ್ಮೀರ ವಿಷಯವನ್ನು ಎತ್ತುತ್ತಿತ್ತು.
5. ಮಂಗಳವಾರ ಶ್ರೀಲಂಕಾಗೆ ಭೇಟಿ ನೀಡಿದ ಇಮ್ರಾನ್ ಖಾನ್​ರ ವಿಮಾನ ಭಾರತದ ವಾಯುಮಾರ್ಗದ ಮೂಲಕ ಸಂಚರಿಸಲು ಅವಕಾಶ ನೀಡಿದ್ದು ಸ್ನೇಹದ ದ್ಯೋತಕವಾಯಿತು. ಬಾಲಾಕೋಟ್ ಏರ್​ಸ್ಟ್ರೈಕ್ ನಂತರ ಭಾರತದ ಅತಿ ಗಣ್ಯರ ವಿಮಾನಕ್ಕೆ ಪಾಕ್ ತನ್ನ ವಾಯುಮಾರ್ಗದಲ್ಲಿ ಸಂಚರಿಸಲು ಅನುಮತಿ ನೀಡಿರಲಿಲ್ಲ. ಬುಧವಾರ ಕೊಲಂಬೊದಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್, ಭಾರತ ಹಾಗೂ ಪಾಕ್ ಪರಸ್ಪರ ಮಾತುಕತೆ ನಡೆಸುವ ಮೂಲಕ ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದೆಂದಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − twelve =
Remember me
