ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಪ್ರಜೆಗಳಿಗೆ ಎಲ್ಲ ಬಗೆಯ ಸ್ವಾತಂತ್ರ್ಯ ನೀಡಲಾಗಿದೆ. ಅಲ್ಲದೆ ಹಕ್ಕು ಮತ್ತು ಕರ್ತವ್ಯಗಳನ್ನು ದೇಶದ ನಾಗರಿಕರಿಗೆ ಸಂವಿಧಾನದ ಮೂಲಕ ಕಲ್ಪಿಸಲಾಗಿದೆ. ಹಾಗೆಯೇ ನಾವೆಲ್ಲ ನಾಗರಿಕರು ಹಕ್ಕುಗಳನ್ನು ಚಲಾಯಿಸಲು ಹಾಗೂ ಕ್ರಿಯಾತ್ಮಕವಾಗಿ ಪಡೆಯಲು ಏನೆಲ್ಲ ಪ್ರತಿಭಟನೆ, ಮುಷ್ಕರ, ವಾದ-ವಿವಾದಗಳ ಮೂಲಕ ಸಾಧಿಸಲು ಪ್ರಯತ್ನಿಸುತ್ತೇವೆ. ಆದರೆ ಅದೇ ಕರ್ತವ್ಯಗಳನ್ನು ನಿಭಾಯಿಸಲು ಅದೆಕೋ ತಾತ್ಸಾರ ಭಾವನೆ ಹಾಗೂ ಅದು ನಮಗೆ ಸಂಬಂಧಿಸಿದ್ದಲ್ಲ ಎಂದು ದೂರ ಇರಲು ಬಯಸುತ್ತೇವೆ.
ಇತ್ತೀಚೆಗೆ ಸಿಎಎ, ಎನ್​ಸಿಆರ್ ಹಾಗೂ ಎನ್​ಪಿಆರ್ ಕಾಯ್ದೆಗಳ ವಿರುದ್ಧ ಪ್ರತಿಭಟನೆಗಳು, ಮುಷ್ಕರಗಳು ದೇಶದ ನಾನಾ ಕಡೆ ನಿರಂತರವಾಗಿ ನಡೆಯುತ್ತಿವೆ. ಯಾವುದೇ ಕಾಯಿದೆ ಅಥವಾ ಸರ್ಕಾರದ ನಿರ್ಧಾರಗಳಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾದಾಗ ಚರ್ಚೆ, ಪ್ರತಿಭಟನೆ ಹಾಗೂ ಮುಷ್ಕರಗಳ ಮೂಲಕ ಸರ್ಕಾರದ ಗಮನ ಸೆಳೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರ ಬೆಳವಣಿಗೆ. ಅದರೆ ಈಗ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಹೆಚ್ಚಾಗಿ ದೇಶದ ವಿರುದ್ಧ ಕೆಲವು ಯುವ ಸಮುದಾಯದವರು ಮಾತನಾಡುತ್ತಿರುವುದು ಹಾಗೂ ವಿರೋಧಿ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ನಿರತವಾದ ಪಾಕಿಸ್ತಾನವನ್ನು ಹೊಗಳಿ ಏನು ಸಾರಲು ಹೊರಟಿದ್ದಾರೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.
ಅದರಲ್ಲೂ ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅಮೂಲ್ಯ ಲಿಯೋನಾ, ಶತ್ರುರಾಷ್ಟ್ರಕ್ಕೆ ಜೈಕಾರ ಹೇಳುವ ಮೂಲಕ ತನ್ನ ಮನಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ದರ್ಶಿಸಿದರು. ಅದೇ ದಾರಿಯಲ್ಲಿ ಆರ್ದ್ರಾ ಎನ್ನುವ ಯುವತಿ ಕೂಡ ಸಾಗಿ ಅವಳಿಗೆ ಬೆಂಬಲ ನೀಡಿದ್ದು ದುರದೃಷ್ಟಕರ. ಈ ಪ್ರಕರಣ ತನಿಖೆ ಹಾಗೂ ನ್ಯಾಯಾಂಗ ವಿಚಾರಣೆ ಹಂತದಲ್ಲಿರುವ ಕಾರಣ, ಅಂತಿಮ ತೀರ್ಪು ಏನು ಹೇಳುತ್ತದೆಯೋ ಕಾದು ನೋಡಬೇಕು. ಕೂಲಂಕಷ ತನಿಖೆಯಾಗಿ ನ್ಯಾಯಾಲಯ ತೀರ್ಪು ನೀಡಿದ ನಂತರ ಈ ಯುವಕರ ಉದ್ದೇಶಗಳು ಹಾಗೂ ಇವರಿಗೆ ಇರುವ ಬೆಂಬಲಿಗರ ವಿಷಯಗಳು ಬಯಲಾಗಲಿವೆ. ಇನ್ನು ಹುಬ್ಬಳ್ಳಿಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು ದೇಶವಿರೋಧಿ ಘೋಷಣೆ ಹಾಕಿದ ಘಟನೆ ಸಂಭವಿಸಿದೆ. ಹೀಗೆ ವಿರೋಧಿ ದೇಶದ ಜೈಕಾರದ ಹೇಳಿಕೆಗಳನ್ನು ಎಷ್ಟು ದಿನ ಸಹಿಸಲು ಸಾಧ್ಯ?
ಈ ಯುವಕ ಯುವತಿಯರು ಭಯೋತ್ಪಾದಕ ದೇಶದ ಬಗ್ಗೆ ಏಕೆ ಮಮಕಾರ ಭಾವ ಮೈಗೂಡಿಸಿಕೊಂಡಿದ್ದಾರೆ ಎನ್ನುವುದೇ ಸೋಜಿಗದ ಸಂಗತಿ. ನೆರೆಯ ಪಾಕಿಸ್ತಾನ ಪ್ರಜಾಪ್ರಭುತ್ವದ ಆಡಳಿತ ಅಳವಡಿಸಿಕೊಂಡರೂ ಸೇನಾ ಆಡಳಿತಕ್ಕೆ ಒಳಪಟ್ಟಿದ್ದೇ ಹೆಚ್ಚು. ಹೀಗಾಗಿ ಅಲ್ಲಿ ಮಿಲಿಟರಿ ಆಡಳಿತದ ಮೂಲಕ ಸೇನಾ ಮುಖ್ಯಸ್ಥರು ಆಡಳಿತಗಾರರಾಗಿದ್ದನ್ನು ಬಹಳಷ್ಟು ಬಾರಿ ಕಂಡಿದ್ದೇವೆ. ಅಲ್ಲದೆ ಉಗ್ರ ಚಟುವಟಿಕೆಗಳನ್ನು ಪೋಷಿಸಿಕೊಂಡು ಬಂದ ರಾಷ್ಟ್ರವೆಂದು ಇಡೀ ವಿಶ್ವಕ್ಕೇ ತಿಳಿದ ವಿಷಯವಾಗಿದೆ. ಹಾಗಾಗಿ ಆ ರಾಷ್ಟ್ರದ ಬಗ್ಗೆ ಮಮಕಾರ ಭಾವನೆ ಹೊಂದಿರುವ ಈ ಯುವಜನಾಂಗದ ಹೇಳಿಕೆಗಳು ಮತ್ತು ಅವರ ಮನಸ್ಥಿತಿಗೆ ಏನು ಹೇಳಬೇಕೋ? ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿಯೂ ವಿರೋಧಿರಾಷ್ಟ್ರದ ಬಗ್ಗೆ ಮಮಕಾರ ಹಾಗೂ ಹೊಗಳಿಕೆಯ ಪರ ಪೋಸ್ಟ್​ಗಳನ್ನು ಕಾಣುತ್ತಿದ್ದೇವೆ.
ಭಾರತವು ಜಗತ್ತಿನಲ್ಲಿಯೇ ಅತೀ ಹೆಚ್ಚು ಯುವಕರನ್ನು ಹೊಂದಿದ ರಾಷ್ಟ್ರವಾಗಿದೆ. ಈ ಯುವಜನಾಂಗವು ನಮಗೆ ದೊಡ್ದ ಕೊಡುಗೆ. ಆದರೆ ಈ ಯುವಶಕ್ತಿಯನ್ನು ರಾಷ್ಟ್ರದ ಹಿತಕ್ಕಾಗಿ ಬಳಸುವ ಕೆಲಸವಾಗಬೇಕು. ಅದು ಬಿಟ್ಟು ಅವರನ್ನು ದಾರಿ ತಪ್ಪಿಸುವ ಕೆಲಸವಾಗಬಾರದು. ಹಾಗೆಯೇ ನಮ್ಮ ದೇಶದಲ್ಲಿರುವ ಹಾಗೂ ಪ್ರಾದೇಶಿಕವಾಗಿರುವ ಸಮಸ್ಯೆಗಳಿಗೆ ಹೋರಾಟ, ಚರ್ಚೆ, ಸಭೆಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕೆ ವಿನಃ ವಿರೋಧಿ ರಾಷ್ಟ್ರದ ಬಗ್ಗೆ ಜೈಕಾರದ ಮೂಲಕ ಏನೂ ಸಾಧಿಸಲು ಸಾಧ್ಯವಿಲ್ಲ. ನಮ್ಮ ದೇಶದ ನೆಲ, ಜಲ ಸಂಪತ್ತು ಹೇರಳವಾಗಿದೆ. ಜನಸಂಖ್ಯೆಯೂ ಹೆಚ್ಚಾಗಿದೆ. ಉದ್ಯೋಗ, ವ್ಯವಹಾರಗಳಲ್ಲಿ ಯುವ ಸಮುದಾಯ ತೊಡಗಿಸಿಕೊಂಡು ವೈಯಕ್ತಿಕ ಹಾಗೂ ಕೌಟುಂಬಿಕ ಅಭಿವೃದ್ಧಿಯನ್ನು ಸಾಧಿಸಬೇಕು. ಇದರಿಂದ ರಾಷ್ಟ್ರದ ತಲಾ ಆದಾಯ ಹೆಚ್ಚಾಗಿ ಸಮೃದ್ಧ ರಾಷ್ಟ್ರವಾಗುತ್ತದೆ. ಅಲ್ಲದೆ ಕಾಲಕಾಲಂತರವಾಗಿ ಭಾರತ ಶಾಂತಿಪ್ರಿಯ ಹಾಗೂ ಏಕತೆಯಲ್ಲಿ ವಿವಿಧತೆಯ ಸಂದೇಶವನ್ನು ಜಗತ್ತಿಗೆ ನೀಡಿದ ದೇಶವಾಗಿದೆ. ಹಾಗಾಗಿ ಮುಂದಿನ ಪೀಳಿಗೆಯ ಜನರಿಗೆ ಈ ಸಂಸ್ಕಾರವನ್ನು ತಿಳಿಸುವ ಕೆಲಸವನ್ನು ಯುವ ಸಮುದಾಯ ಮಾಡುವಂತಾಗಲಿ.
| ಜೆ.ಸಿ.ಜಾಧವ್ ಗಂಗಾವತಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nine =
Remember me
