ಜಯಪ್ರಕಾಶ್ ನಾರಾಯಣ್ ಅವರು ಜೆಪಿ ಅಥವಾ ಲೋಕನಾಯಕ ಎಂದೇ ಚಿರಪರಿಚಿತರು. ಕಾಲದ ಅಗತ್ಯಕ್ಕೆ ತಕ್ಕಂತೆ ಚಳವಳಿಗಳನ್ನು ಕಟ್ಟಿದವರು. ತುರ್ತು ಪರಿಸ್ಥಿತಿ ವಿರುದ್ಧ ಎಲ್ಲ ಪಕ್ಷಗಳನ್ನು ಒಗ್ಗೂಡಿಸಿ ಹೋರಾಟ ಮಾಡಿದರು. 70ರ ದಶಕದಲ್ಲಿ ಸೂಚಿಗಲ್ಲಿನಂತೆ ದೇಶದ ಜನರನ್ನು ಆಕರ್ಷಿಸುತ್ತಿದ್ದರು. 1999ರಲ್ಲಿ ಭಾರತರತ್ನ ಗೌರವಕ್ಕೆ ಪಾತ್ರರಾದರು. ಜನ್ಮದಿನ ಹಿನ್ನೆಲೆಯಲ್ಲಿ ಅವರ ಕುರಿತ ಆತ್ಮೀಯ ಚಿತ್ರಣ ಇಲ್ಲಿದೆ.
ಪ್ರೊ. ಹನುಮಂತು, ಸಮಾಜವಾದಿ ಚಿಂತಕ, ನಿವೃತ್ತ ಪ್ರಾಧ್ಯಾಪಕ
ಸಮಾಜವಾದಿ ಸಿದ್ಧಾಂತದ ಶ್ರೇಷ್ಠ ನಾಯಕ ಜಯಪ್ರಕಾಶ್ ನಾರಾಯಣ್. ಸಮಾಜವಾದದ ಮೂಲತತ್ವದಲ್ಲಿ ಸಮಾಜ ನಿರ್ವಣದ ಕನಸು ಕಂಡು, ಅವರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. 1942 ರಲ್ಲಿ ಗಾಂಧೀಜಿ ನೇತೃತ್ವದಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದರು. ಆ ಸಂದರ್ಭದಲ್ಲಿ ಗಾಂಧಿ ಬಂಧನವಾದಾಗ ಇಡೀ ಚಳವಳಿಗೆ ನಾಯಕತ್ವ ನೀಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಬಹು ದೊಡ್ಡ ವಿಜಯ ಬಂದಿದ್ದು ಕ್ವಿಟ್ ಇಂಡಿಯಾದಲ್ಲಿ. ಅದಕ್ಕೆ ಒಂದು ರೀತಿಯಲ್ಲಿ ಜೆಪಿ ಅವರೇ ಕಾರಣಕರ್ತರು.
ಜೆಪಿ ಮಾರ್ಕ್ಸ್​ವಾದಿಯಾಗಿದ್ದರು. ಸಹಜವಾಗಿಯೇ ಮೊದಮೊದಲು ಸ್ವಾತಂತ್ರ್ಯ ಹೋರಾಟಕ್ಕೆ ಹಿಂಸೆ ಅನಿವಾರ್ಯವೆಂದು ನಂಬಿದ್ದರು. ಆದರೆ ಗಾಂಧೀಜಿ ಅವರಿಂದಾಗಿ ಅಹಿಂಸಾ ತತ್ವವನ್ನು ರೂಢಿಸಿಕೊಂಡರು.
ಜೆಪಿ ಮಾಡಿದ ಬಹುದೊಡ್ಡ ಕ್ರಾಂತಿ ಎಂದರೆ ಚಂಬಲ್ ಕಣಿವೆ ಡಕಾಯಿತರ ಮನಪರಿವರ್ತನೆ ಮಾಡಿದ್ದು. ತಾವೇ ಆ ಸ್ಥಳಕ್ಕೆ ಹೋಗಿ ಅವರ ಮನವೊಲಿಸಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಪರಿವರ್ತನೆಯಾಗುವಂತೆ ಮಾಡಿದರು; ಬುದ್ಧನು ಅಂಗುಲಿಮಾಲನನ್ನು ಪರಿವರ್ತನೆ ಮಾಡಿದಂತೆ.
ಸಮಾಜವಾದದ ಜಾರಿಗೆ ಸರ್ಕಾರ ಮಾತ್ರ ಸಾಕಾಗುವುದಿಲ್ಲ, ಮನವೊಲಿಕೆಯೂ ಬೇಕು ಎಂಬುದನ್ನು ಮನಗಂಡ ಜೆಪಿ ಅವರು ವಿನೋಬಾ ಭಾವೆಯವರ ಭೂದಾನ ಚಳವಳಿಯಲ್ಲಿ ತಾವು ದಾನ ಮಾಡುವ ಮೂಲಕ ಭಾಗಿಯಾದರು. ಭೂಮಿ ಹೊಂದುವಲ್ಲಿಯೂ ಸಮಾನತೆ ಇರಬೇಕೆಂದು ಅನೇಕ ಭೂ ಮಾಲೀಕರ ಮನವೊಲಿಸುವ ಮೂಲಕ ಬಡವರಿಗೆ ಭೂಮಿ ಹಂಚಿದರು. ಜೆಪಿ ಅಪಾರ ಅಧ್ಯಯನಶೀಲರು, ಬುದ್ಧಿಜೀವಿ, ಚಿಂತನಶೀಲರೂ ಹೌದು.
ಜೆಪಿ 1934ರಲ್ಲಿ ಎಸ್.ಎಂ. ಜೋಶಿ, ಎನ್.ಜಿ. ಗೋಡಿ, ಆಚಾರ್ಯ ನರೇಂದ್ರ ದೇವ, ಪುರುಷೋತ್ತಮ ತ್ರಿವಿಕ್ರಮದಾಸ್, ಮಿನೂ ಮಸಾನಿ, ಪಟವರ್ಧನ್, ಅಶೋಕ್ ಮೆಹ್ತಾ ಮೊದಲಾದವರ ಜತೆಗೆ ಕಾಂಗ್ರೆಸ್ ಸೋಷಿಯಲಿಸ್ಟ್ ಪಾರ್ಟಿ (ಸಿಎಸ್​ಪಿ) ಕಟ್ಟಿದರು. ಸಂಘಟನಾ ಚತುರರಾಗಿದ್ದ ಜೆಪಿ ದೊಡ್ಡ ದೊಡ್ಡ ಹೋರಾಟಗಳನ್ನು ಸಂಘಟಿಸಿದರು.
ಸ್ವಾತಂತ್ರ್ಯ ನಂತರ ಭಾಷಾವಾರು ಪ್ರಾಂತ್ಯಕ್ಕಾಗಿ ಸಮಾಜವಾದಿಗಳು ಹೋರಾಟದ ಚಿಂತನೆ ಮುಂದಿಟ್ಟಾಗ ಜೆಪಿ ಅದರ ನೇತೃತ್ವ ವಹಿಸಿದರು. ವಿಕೇಂದ್ರೀಕರಣದ ದೃಷ್ಟಿಯಿಂದ ದೊಡ್ಡ ರಾಜ್ಯಗಳಿಗಿಂತ ಸಣ್ಣ ರಾಜ್ಯಗಳು ಉತ್ತಮವೆಂದು ನಂಬಿ ಹೋರಾಟ ಸಹ ಮಾಡಿದರು.
ಇಂದಿರಾ ಗಾಂಧಿ ಕಾಲದಲ್ಲಿ ತಂದ ತುರ್ತು ಪರಿಸ್ಥಿತಿಯ ವಿರುದ್ಧ ಎಲ್ಲ ಪಕ್ಷಗಳನ್ನು ಒಗ್ಗೂಡಿಸಿ ವಿಜಯ ಸಾಧಿಸಿದ್ದು ಎರಡನೇ ಸ್ವಾತಂತ್ರ್ಯ ಹೋರಾಟವೆಂದರೆ ತಪ್ಪಲ್ಲ. ಜನಶಕ್ತಿಯನ್ನು ಒಗ್ಗೂಡಿಸಿದರೆ ಅದರಿಂದ ಜಯ ಸಾಧ್ಯವೆಂದು ಅವರು ನಂಬಿದ್ದರು.
ನಾನು ರಾಜಕೀಯ ಪಕ್ಷದ ಸದಸ್ಯನಲ್ಲ, ಆದರೆ ವಿದ್ಯಾರ್ಥಿದೆಸೆಯಲ್ಲಿ ಸಮಾಜವಾದಿ ಆಂದೋಲನದ ಕಡೆ ಒಲವಿದ್ದ ಪರಿಣಾಮ ಜೆಪಿ ವಿಚಾರಧಾರೆಗಳ ಬಗ್ಗೆ ಅಧ್ಯಯನ ಮಾಡಿದೆ. ಬಾಪೂ ಹೆದ್ದೂರಶೆಟ್ಟಿ ಗೆಳೆತನದಿಂದಾಗಿ ಈ ವಿಚಾರಧಾರೆ ಹೆಚ್ಚು ಆಕರ್ಷಿತವಾಯಿತು. ಇಂದಿಗೂ ಜೆಪಿ ನನಗೆ ಅಚ್ಚರಿಯಾಗಿಯೇ ಕಾಣುತ್ತಾರೆ.
ಬಿ.ಆರ್. ಪಾಟೀಲ್, ವಿಧಾನ ಪರಿಷತ್ ಮಾಜಿ ಉಪಸಭಾಪತಿ
ಗಾಂಧೀವಾದಿ, ಸಮಾಜವಾದಿ, ಸವೋದಯವಾದಿ ಹೀಗೆ ಅನೇಕ ರೀತಿಯಲ್ಲಿ ಜೆಪಿಯನ್ನು ಗುರುತಿಸಬಹುದಾಗಿದೆ. ಮೂಲತಃ ಅವರು ಕಾಂಗ್ರೆಸಿಗರು. ಆದರೆ ಮುಂದೆ ಲೋಹಿಯಾ, ನಂಬೂದರಿಪಾದ್ ಮೊದಲಾದವರೊಂದಿಗೆ ಸಿಎಸ್​ಪಿ ಪಕ್ಷ ಕಟ್ಟಿದರು. ಅಲ್ಲಿ ಸಮಾಜವಾದಿ ಚಿಂತನೆಗಳ ಆಧಾರದಲ್ಲಿ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರಗಳ ಮೇಲೆ ಒತ್ತಡ ಹಾಕಿ ಯಶಸ್ವಿಯಾಗುತ್ತಿದ್ದರು. ಜೆಪಿ ಯಾವತ್ತೂ ಸಾಮಾನ್ಯ ಜನರ ಪರವಾಗಿ ಹೋರಾಟ ಮಾಡುತ್ತಿದ್ದರು.
ತಮ್ಮ ಸಂಪುಟದಲ್ಲಿ ಉಪ ಪ್ರಧಾನಮಂತ್ರಿ ಆಗುವಂತೆ ನೆಹರೂ ಜೆಪಿಗೆ ಆಹ್ವಾನ ನೀಡಿದ್ದರು. ಆದರೆ ಜೆಪಿ ಯಾವತ್ತೂ ಅಧಿಕಾರ ಬಯಸಿದವರಲ್ಲ. ಆದ್ದರಿಂದ ಆಹ್ವಾನ ತಿರಸ್ಕರಿಸಿದರು. ಮನಪರಿವರ್ತನೆಯ ಮೂಲಕ ಏನನ್ನಾದರೂ ಸಾಧಿಸಬಹುದು ಎಂಬ ತತ್ವದಲ್ಲಿ ಅವರಿಗೆ ಅಚಲ ವಿಶ್ವಾಸ, ಚಂಬಲ್ ಕಣಿವೆ ವಿಚಾರದಲ್ಲಿ ಅದನ್ನು ಸಾಧಿಸಿ ತೋರಿಸಿದರು.
ಅನೇಕ ಚಳವಳಿಗಳ ನಾಯಕತ್ವ ಅವರನ್ನು ಹುಡುಕಿಕೊಂಡು ಬಂದಿತು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದ ನಂತರ ಬಿಹಾರದಲ್ಲಿ ಮಿತಿ ಮೀರಿದ್ದ ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿಗಳು ಹೋರಾಟ ರೂಪಿಸಿ ನಾಯಕತ್ವಕ್ಕಾಗಿ ಜೆಪಿ ಮೊರೆ ಹೋಗಿದ್ದರು. ಗುಜರಾತ್​ನಲ್ಲಿಯೂ ಇಂತಹ ಹೋರಾಟ ಮುನ್ನಡೆಸಿದರು. ರಾಜಶಕ್ತಿ ವಿರುದ್ಧ ಜನಶಕ್ತಿ ಕಟ್ಟಲು ಸಾಧ್ಯವಿದೆ, ಜನಶಕ್ತಿಯೇ ದೊಡ್ಡದು ಎಂಬುದನ್ನು ತೋರಿಸಿಕೊಟ್ಟವರು ಜೆಪಿ.
ಕಾಲಘಟ್ಟದಲ್ಲಿ ಬದಲಾವಣೆಗಳಾದಂತೆ ಅದಕ್ಕೆ ಹೊಂದಿಕೊಂಡರು. ಕ್ರಾಂತಿಕಾರಿಯಾಗಿದ್ದ ಜೆಪಿ ನಂತರದ ದಿನಗಳಲ್ಲಿ ಶಾಂತಿಮಂತ್ರ ಪಠಿಸಿದರು. ಸಮಾಜದಲ್ಲಿ ಅಶಾಂತಿ, ನಿರುದ್ಯೋಗ ಹೆಚ್ಚಾದಾಗ ರಾಜಕೀಯ ಬದಲಾವಣೆಗೆ ಅವರು ಮಾಡಿದ ಹೋರಾಟ ಜಾಗತಿಕವಾಗಿ ದಾಖಲಾಗಿದೆ. ಪ್ರಾಮಾಣಿಕತೆ, ನಿಷ್ಠೆ ಇದ್ದರೆ ಅಂತಹ ನಾಯಕತ್ವವನ್ನು ಜನ ಒಪು್ಪತ್ತಾರೆ ಎಂಬುದಕ್ಕೆ ಜೆಪಿ ಸಾಕ್ಷಿ. ಹಜಾರಿಭಾಗ್ ಕೇಂದ್ರ ಕಾರಾಗೃಹದಿಂದ ಗೋಡೆ ಜಿಗಿದು ಪರಾರಿಯಾಗಿದ್ದ ಸಂಗತಿ ಎಂತಹವರನ್ನೂ ರೋಮಾಂಚಿತರನ್ನಾಗಿ ಮಾಡುತ್ತದೆ.
ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆ ಬರಬೇಕೆಂದು ಜೆಪಿ ಹಂಬಲಿಸುತ್ತಿದ್ದರು. ವಿರೋಧ ಪಕ್ಷಗಳನ್ನು ಒಗ್ಗೂಡಿಸಿ ಪರ್ಯಾಯ ರಾಜಕೀಯದ ಕನಸು ಕಂಡಾಗ ಕೆಲವು ಸಂಘಟನೆಗಳು ಅವರಿಗೆ ಮೋಸ ಮಾಡಿದವು. ತಮ್ಮ ಸಂಘಟನೆಯನ್ನು ಜನತಾ ಪಕ್ಷದಲ್ಲಿ ವಿಲೀನ ಮಾಡುವುದಾಗಿ ಹೇಳಿದರೂ ನಂತರ ಮಾಡಲಿಲ್ಲ. ಅದು ಬಿಕ್ಕಟ್ಟಿಗೆ ಕಾರಣವಾಯಿತು. ಜನತಾ ಪಕ್ಷ ಕೇಂದ್ರ ಹಾಗೂ ಅನೇಕ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದರೂ ಸಂಪೂರ್ಣ ಕ್ರಾಂತಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಅದರಿಂದ ನಿರುದ್ಯೋಗ, ಬಡತನ ಜಾಸ್ತಿಯಾಯಿತು. ಮೌಲಿಕ ಶಿಕ್ಷಣ, ಉದ್ಯೋಗಾಧಾರಿತ ಶಿಕ್ಷಣ ಸಿಗಬೇಕೆಂಬ ಜೆಪಿ ಕನಸು ಸಹ ನನಸಾಗಲಿಲ್ಲ.
ಜೆಪಿ ಅವರಲ್ಲಿ ವೈಯಕ್ತಿಕ ದ್ವೇಷ ಇರಲಿಲ್ಲ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿದರೂ ಇಂದಿರಾ ಬಗ್ಗೆ ಗೌರವ ಭಾವನೆ ಹೊಂದಿದ್ದರು. ಸಮಾಜವಾದಿಗಳು ಸ್ವತಂತ್ರವಾಗಿ ಅಧಿಕಾರಕ್ಕೆ ಬರದಿದ್ದರೂ ಅವರ ಸಿದ್ಧಾಂತಗಳನ್ನು ದೇಶದಲ್ಲಿ ಅಧಿಕಾರಕ್ಕೆ ಬಂದ ಪ್ರತಿ ಸರ್ಕಾರಗಳು ಅನಿವಾರ್ಯವಾಗಿ ಅನುಷ್ಠಾನ ಮಾಡುವಂತೆ ಬುನಾದಿ ಹಾಕಿರುವುದು ಜೆಪಿ ಹೆಚ್ಚುಗಾರಿಕೆ. ಹೋರಾಟವೇ ಬದುಕಾಗಿದ್ದ ಜೆಪಿ ಇಂದು ಬದುಕಿದ್ದರೆ ಬಹುಶಃ ದೇಶದಲ್ಲಿ ಹೆಚ್ಚುತ್ತಿರುವ ಸಂಘರ್ಷ, ತ್ವೇಷಮಯ ವಾತಾವರಣ, ನಿರುದ್ಯೋಗ, ಬಡತನದ ವಿರುದ್ಧ ಹೋರಾಟ ಮಾಡುತ್ತಿದ್ದರೇನೋ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
