ಇಸ್ಲಾಮಾಬಾದ್:ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿರುವ ಪಾಕಿಸ್ತಾನಕ್ಕೆ ಈಗ ಮಿಡತೆಗಳ ಹಾವಳಿ ದೊಡ್ಡ ತಲೆನೋವಾಗಿದೆ. ಪಾಕ್​ನ ಪಂಜಾಬ್ ಪ್ರಾಂತ್ಯದಲ್ಲಿ ಮಿಡತೆಗಳ ದಾಳಿಯಿಂದ ಸಾವಿರಾರು ಎಕರೆ ಬೆಳೆ ನಾಶವಾಗಿದ್ದು, ರೈತರು ಆತಂಕಕ್ಕೆ ಸಿಲುಕಿದ್ದಾರೆ. ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಪ್ರಧಾನಿ ಇಮ್ರಾನ್ ಖಾನ್ ಶನಿವಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಕಳೆದ ವರ್ಷ ಜೂನ್​ನಲ್ಲಿ ಸಿಂಧ್ ಪ್ರಾಂತ್ಯದಲ್ಲಿ ಮಿಡತೆಗಳ ಹಾವಳಿ ಮೊದಲು ಶುರುವಾಗಿತ್ತು. ಆಗ ಸಾವಿರಾರು ಎಕರೆ ಬೆಳೆ ನಾಶ ಮಾಡಿದ್ದ ಮಿಡತೆಗಳ ಹಿಂಡು, ಸದ್ಯ ಪಂಜಾಬ್ ಪ್ರಾಂತ್ಯಕ್ಕೆ ಲಗ್ಗೆ ಇಟ್ಟಿದ್ದು, ಅಲ್ಲೂ ಸಾಕಷ್ಟು ಪ್ರಮಾಣದ ಬೆಳೆ ಹಾನಿಯುಂಟುಮಾಡಿವೆ.
ಪಂಜಾಬ್ ಪ್ರಾಂತ್ಯ ಕೃಷಿಯಲ್ಲಿ ಪ್ರಮುಖ ಸ್ಥಾನ ಹೊಂದಿರುವುದರಿಂದ, ಪಾಕ್ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಎರಡು ದಶಕಗಳಲ್ಲೇ ಮೊದಲ ಬಾರಿ ಪಾಕ್ ಮಿಡತೆಗಳ ಹಾವಳಿಯಿಂದಾಗಿ ತತ್ತರಿಸುತ್ತಿದೆ. ಮಿಡತೆಗಳ ಹಾವಳಿ ತಡೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಿ ಎಂದು ಇಮ್ರಾನ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಪಾಕ್ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಕ್ಕೆ ವಿಳಂಬ ಮಾಡಿರುವುದು ಹಾಗೂ ಸೂಕ್ತ ಹವಾಮಾನ ಇದ್ದ ಕಾರಣ ಮಿಡತೆಗಳ ಸಂತಾನೋತ್ಪತ್ತಿ ಪ್ರಮಾಣ ಹೆಚ್ಚಾಗಿದೆ. ಸಾಮಾನ್ಯವಾಗಿ ಮಿಡತೆಗಳ ಹಿಂಡು ಸ್ವಲ್ಪ ದಿನಗಳ ನಂತರ ಮರಳಿ ಮರುಭೂಮಿಗಳ ಕಡೆಗೆ ವಾಪಸ್ ಹೋಗುತ್ತದೆ.
ಆದರೆ ಈ ಬಾರಿ ಅವುಗಳಿಗೆ ಪಾಕ್​ನಲ್ಲಿ ಪೂರಕ ವಾತಾವರಣವಿರುವುದರಿಂದ ಅಲ್ಲಿಯೇ ಉಳಿದಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿವರ್ಷ ಸಿಂಧ್ ಮತ್ತು ಪಂಜಾಬ್ ಪ್ರಾತ್ಯಗಳವರೆಗೆ ದಾಳಿ ಇಡುವ ಮಿಡತೆಗಳ ಹಿಂಡು ಇದೇ ಮೊದಲ ಬಾರಿ ಖೈಬರ್ ಪಖ್ತುಂಖ್ವಾವರೆಗೆ ಪ್ರವೇಶಿಸಿವೆ.
ಯೆಮನ್, ಬಲೂಚಿಸ್ತಾನಗಳಿಂದ ಹಾವಳಿ
ಮಿಡತೆಗಳ ಹಿಂಡು ಬಲೂಚಿಸ್ತಾನ ಮತ್ತು ಯೆಮನ್ ಪ್ರಾಂತ್ಯಗಳ ಮರುಭೂಮಿ ಪ್ರದೇಶಗಳಿಂದ ಪಾಕಿಸ್ತಾನಕ್ಕೆ ವಲಸೆ ಬರುತ್ತದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಚಳಿಗಾಲದಲ್ಲಿ ಸಂತಾನೋತ್ಪತ್ತಿ ಮಾಡುವ ಮಿಡತೆಗಳು ನಂತರ ಭಾರತ ಸೇರಿ ಪೂರ್ವ ದೇಶಗಳ ಕಡೆಗೆ ಪ್ರಯಾಣಿಸುತ್ತವೆ.
ಈ ವೇಳೆ ಮಾರ್ಗ ಮಧ್ಯದ ಸಾವಿರಾರು ಎಕರೆ ಬೆಳೆಗಳು ಮಿಡತೆಗಳ ಹಾವಳಿಗೆ ಸಿಕ್ಕು ನಾಶವಾಗುತ್ತವೆ. ಈಗ ಮಿಡತೆಗಳ ಹಿಂಡು ಭಾರತ ಮತ್ತು ಪಾಕ್ ಗಡಿಯ ಸಮೀಪದಲ್ಲಿದ್ದು, ಭಾರತಕ್ಕೂ ಇವುಗಳು ದಾಳಿ ಇಡುವ ಸಾಧ್ಯತೆ ಇದೆ. ಅಲ್ಲದೇ ಈ ಬಾರಿ ಯೆಮನ್​ನಲ್ಲಿ ಮಳೆಗಾಲ ಉತ್ತಮವಾಗಿದ್ದರಿಂದ ಮಿಡತೆಗಳ ಪ್ರಮಾಣವೂ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ನಿಯಂತ್ರಣಕ್ಕೆ 730 ಕೋಟಿ ರೂಪಾಯಿ!
ಮಿಡತೆಗಳ ನಿಯಂತ್ರಣಕ್ಕಾಗಿ ಈಗಾಗಲೇ ಸರ್ಕಾರ ಸುಮಾರು 1 ಲಕ್ಷ ಹೆಕ್ಟೇರ್ ಭೂಮಿಯ ವೈಮಾನಿಕ ಸಮೀಕ್ಷೆ ನಡೆಸಿದ್ದು, ಪರಿಸ್ಥಿತಿ ನಿಭಾಯಿಸಲು ಹಲವು ಯೋಜನೆಗಳನ್ನು ಪಟ್ಟಿ ಮಾಡಿದೆ. ಇವುಗಳ ಅನುಷ್ಠಾನಕ್ಕೆ ಸುಮಾರು 730 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಪಾಕಿಸ್ತಾನದ ರಾಷ್ಟ್ರೀಯ ಆಹಾರ ಭದ್ರತಾ ಸಚಿವ ಮಖ್ದೂಮ್ ಖುಸ್ರೊ ಬಕ್ತಿಯಾರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 7 =
Remember me
