ರಾಘವ ಶರ್ಮ ನಿಡ್ಲೆ, ನವದೆಹಲಿಹಳೆಯ ಸಂಸತ್ ಭವನದಿಂದ ಹೊಸ ಸಂಸತ್ ಭವನಕ್ಕೆ ಕಾಲಿಡಲಾಗಿದೆ. ಕನ್ನಡಿಗರು ನೆನಪಿಟ್ಟುಕೊಳ್ಳಬಹುದಾದ ಹಲವು ಮೊದಲು/ವಿವಾದ/ಗದ್ದಲಗಳಿಗೆ ಹಳೆಯ ಸಂಸತ್ ಭವನ (ಸಂವಿಧಾನ ಸದನ) ಸಾಕ್ಷಿಯಾಗಿದೆ. ಕನ್ನಡಿಗರ ಮಟ್ಟಿಗೆ ದೇವೇಗೌಡರು ಸಂವಿಧಾನ ಸದನದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಅಂತಹ ಆಯ್ದ ಹಲವು ಘಟನೆಗಳ ಗುಚ್ಛ ಇಲ್ಲಿದೆ.
ಕರ್ನಾಟಕದ ಅನೇಕ ಸಂಸದರು ಇಂದು ಸಂಸತ್ತಲ್ಲಿ ಕನ್ನಡದಲ್ಲಿ ಮಾತಾಡಬಹುದು. ಆದರೆ ಮೇಲ್ಪಂಕ್ತಿ ಹಾಕಿದ್ದು ಜೆ.ಎಚ್. ಪಟೇಲ್. ಶಿವಮೊಗ್ಗ ಕ್ಷೇತ್ರದಿಂದ ಅತ್ಯಧಿಕ ಮತಗಳಿಂದ ಗೆದ್ದಿದ್ದ ಪಟೇಲರು, 1962ರಲ್ಲಿ ಉತ್ತರ ಭಾರತದ ಸಂಸದರ ಪ್ರಭಾವಳಿಗಳ ಮಧ್ಯೆ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿ ಗಮನಸೆಳೆದಿದ್ದರು. ಆ ಮೂಲಕ, ಕನ್ನಡದ ಧ್ವನಿಯನ್ನು ದೇಶದ ರಾಜಧಾನಿಯಲ್ಲಿ ಮೊಳಗಿಸಿದ್ದರು. ಅವರು ಕನ್ನಡದಲ್ಲಿ ಭಾಷಣ ಮಾಡಿದ್ದಕ್ಕೆ ಅನೇಕ ಸಂಸದರು ಆಕ್ಷೇಪ ವ್ಯಕ್ತಪಡಿಸಿದರೂ, ಅಂದು ಸ್ಪೀಕರ್ ಆಗಿದ್ದ ನೀಲಂ ಸಂಜೀವ ರೆಡ್ಡಿ, ಬೇರೆಯವರ ಆಕ್ಷೇಪಣೆಗೆ ಕಿವಿಗೊಡದೆ ನೀವು ಮಾತು ಮುಂದುವರಿಸಿ ಎಂದು ಪೋ›ತ್ಸಾಹಿಸಿದ್ದರು. ಪಟೇಲರು ಕನ್ನಡದಲ್ಲಿ ಮಾತಾಡಿದ ಮೊದಲಿಗ ಮಾತ್ರವಲ್ಲ, ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಿದ ಮೊದಲ ಸಂಸದ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಹೀಗಾಗಿ, ಪಟೇಲ್ ಅವರು ಕೇವಲ ಕನ್ನಡಿಗರಿಗೆ ಮಾತ್ರವಲ್ಲ, ಹಿಂದಿಯೇತರ ರಾಜ್ಯಗಳನ್ನು ಪ್ರತಿನಿಧಿಸುವ ಎಲ್ಲ ಸಂಸದರಿಗೂ ಮಾದರಿಯಾಗಿ ನಿಲ್ಲುತ್ತಾರೆ. ಈ ಘಟನೆ ಬಳಿಕ ಸ್ಪೀಕರ್ ಸಂಜೀವ ರೆಡ್ಡಿ ಅವರು, ಸಂಸದರು ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡಲು ಸ್ವತಂತ್ರರು ಎಂಬ ಅಧಿಕೃತ ಆದೇಶ ಹೊರಡಿಸಿದ್ದರು.
1991ರಲ್ಲಿ ಸಮಾಜವಾದಿ ಜನತಾ ಪಕ್ಷದ ನಾಯಕರಾಗಿದ್ದ ದೇವೇಗೌಡರು, ಅದೇ ವರ್ಷ ಹಾಸನ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. ನಂತರ 1994ರಲ್ಲಿ ಕರ್ನಾಟಕದಲ್ಲಿ ಜನತಾದಳ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಅವರು ಕರ್ನಾಟಕದ ಮುಖ್ಯಮಂತ್ರಿಯಾದರು. ಆದರೆ, 1996ರಲ್ಲಿ ಕೇಂದ್ರದಲ್ಲಿ ಸಂಯುಕ್ತ ರಂಗ ಮೈತ್ರಿಕೂಟ ಬಹುಮತ ಪಡೆದಿದ್ದರಿಂದ, ದೇವೇಗೌಡರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಬೇಕು ಎಂಬ ತೀರ್ವನವಾಗುತ್ತದೆ. ಎಡಪಕ್ಷಗಳು ಕೂಡ ಗೌಡರ ಹೆಸರಿಗೆ ಬೆಂಬಲ ಸೂಚಿಸಿದ್ದವು. ಕಾಂಗ್ರೆಸ್ ಪಕ್ಷ ಸಂಯುಕ್ತ ರಂಗಕ್ಕೆ ಬಾಹ್ಯ ಬೆಂಬಲ ನೀಡಿತ್ತು. ಆಗ ಕರ್ನಾಟಕದಲ್ಲಿ ಸಿಎಂ ಆಗಿದ್ದ ದೇವೇಗೌಡರು, ದೆಹಲಿಗೆ ಬಂದು ದೇಶದ ಪ್ರಧಾನಿಯಾಗುತ್ತಾರೆ. ನಂತರ ರಾಜ್ಯಸಭೆ ಸದಸ್ಯರಾಗಿ ನೇಮಕಗೊಳ್ಳುತ್ತಾರೆ. ಅಂದಿನ ಜನತಾದಳ ಸರ್ಕಾರದಲ್ಲಿ ಸಚಿವರಾಗಿದ್ದ ಲೀಲಾದೇವಿ ಆರ್. ಪ್ರಸಾದ್ ಅವರನ್ನು ರಾಜ್ಯಸಭೆಗೆ ಕಳುಹಿಸಲು ತೀರ್ಮಾನ ಆಗಿರುತ್ತದೆ. ಆದರೆ, ಸಚಿವ ಸ್ಥಾನ ಬಿಟ್ಟು ದೆಹಲಿಗೆ ಹೋಗಲು ಲೀಲಾದೇವಿ ಪ್ರಸಾದ್​ಗೆ ಮನಸ್ಸಿರಲಿಲ್ಲ. ಅದೇ ಹೊತ್ತಿಗೆ ದೇವೇಗೌಡರಿಗೆ ಪ್ರಧಾನಿ ಹುದ್ದೆ ಒಲಿದಿದ್ದರಿಂದ, ಅವರೇ ಜನತಾದಳದ ರಾಜ್ಯಸಭೆ ಸ್ಥಾನ ತುಂಬಿದ್ದರು.
ಕರ್ನಾಟಕದಲ್ಲಿ ಸಾಧಕ ಮಹಿಳೆಯರಿಗೆ ಕೊರತೆಯಿಲ್ಲದಿದ್ದರೂ ರಾಜಕೀಯ ಪಕ್ಷಗಳು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಹಿಂದೇಟು ಹಾಕಿದ ಪರಿಣಾಮವೇ ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಸಂಸತ್ತಿನಲ್ಲಿ ನೋಡುವ ಭಾಗ್ಯ ಕನ್ನಡಿಗರಿಗೆ ಸಿಕ್ಕಿಲ್ಲ. ಶಿಕ್ಷಕಿ, ವಕೀಲೆ, ಹೋರಾಟಗಾರ್ತಿಯಾಗಿದ್ದ ಸರೋಜಿನಿ ಬಿಂದೂರಾವ್ ಮಹಿಷಿ ಅವರು ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಮೊದಲ ಮಹಿಳೆ. ಸಜ್ಜನ ಹಾಗೂ ಕನ್ನಡದ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಹೊಂದಿದ್ದ ಮಹಿಷಿ ಅವರು ತಮ್ಮ ಸರೋಜಿನಿ ಮಹಿಷಿ ವರದಿಯಿಂದಲೇ ರಾಜ್ಯಾದ್ಯಂತ ಮನೆಮಾತಾಗಿದ್ದರು. ಧಾರವಾಡ ಉತ್ತರ ಲೋಕಸಭೆ ಕ್ಷೇತ್ರವನ್ನು 1962ರಿಂದ 1980ರ ತನಕ ಪ್ರತಿನಿಧಿಸಿದ್ದ ಅವರು, ವಿವಿಧ ಸಚಿವಾಲಯದ ರಾಜ್ಯ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ. 1983ರಲ್ಲಿ ಅವರು ಜನತಾದಳದಿಂದ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಉತ್ತಮ ಸಂಸದೀಯ ಪಟುವಾಗಿದ್ದ ಮಹಿಷಿ, ತಮ್ಮ ಕೊನೆಗಾಲದಲ್ಲಿ ದೆಹಲಿಗೆ ಅಂಟಿಕೊಂಡಿರುವ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಮನೆ ಮಾಡಿಕೊಂಡು ಏಕಾಂಗಿ ಜೀವನ ನಡೆಸಿದ್ದರು. ದಿಲ್ಲಿ ಕರ್ನಾಟಕ ಸಂಘದ ಚಟುವಟಿಕೆ ಸೇರಿದಂತೆ ದೇಶದ ರಾಜಧಾನಿಯಲ್ಲಿ ಕನ್ನಡ ಭಾಷೆಯನ್ನು ಪಸರಿಸಲು ಅವರು ನೀಡಿದ ಕೊಡುಗೆಯನ್ನು ಮರೆಯಲು ಸಾಧ್ಯವೇ ಇಲ್ಲ.
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗುತ್ತಿದ್ದ ಅನಂತಕುಮಾರ್ ಅವರನ್ನು ಪ್ರಧಾನಿ ಮೋದಿ ಸಂಸದೀಯ ವ್ಯವಹಾರಗಳ ಸಚಿವರನ್ನಾಗಿ ಮಾಡಿದ್ದರು. ದಿಲ್ಲಿಯಲ್ಲಿ ಕರ್ನಾಟಕದ ಬಹುದೊಡ್ಡ ದನಿಯಾಗಿದ್ದ ಅನಂತಕುಮಾರ್ ಸಂಸದೀಯ ಖಾತೆ ನಿಭಾಯಿಸಿದ ಮೊದಲ ಕನ್ನಡಿಗ ಎಂಬ ಕೀರ್ತಿಗೆ ಪಾತ್ರರಾದರು. ವಿಪಕ್ಷಗಳನ್ನು ಮ್ಯಾನೇಜ್ ಮಾಡುವ ಕಲೆ ಕರಗತ ಮಾಡಿಕೊಂಡಿದ್ದ ಅನಂತಕುಮಾರ್, ಕ್ಯಾನ್ಸರ್​ನಿಂದಾಗಿ ಮೃತಪಟ್ಟರು. ಅವರ ಸ್ಥಾನವನ್ನೀಗ ಧಾರವಾಡ ಸಂಸದ ಪ್ರಲ್ಹಾದ ಜೋಶಿ ತುಂಬಿದ್ದಾರೆ.
2008ರಲ್ಲಿ ಇಂಡೋ-ಅಮೆರಿಕ ಪರಮಾಣು ಒಪ್ಪಂದ ವಿರೋಧಿಸಿ ಎಡಪಕ್ಷಗಳು ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದವು. ಇದರಿಂದ ಯುಪಿಎ ಸಂಖ್ಯಾಬಲ ಕಡಿಮೆಯಾಗಿ, ಈ ಮೈತ್ರಿಕೂಟದಿಂದ ವಿಶ್ವಾಸಮತದ ಸವಾಲನ್ನು ಎದುರಿಸಿತ್ತು. ಮತದಾನದ ವೇಳೆ ಕರ್ನಾಟಕ ಬಿಜೆಪಿಯ ಮೂವರು ಮತ್ತು ಜೆಡಿಎಸ್​ನ ಒಬ್ಬ ಸಂಸದ ಯುಪಿಎ ಪರ ಮತ ಹಾಕಿ ಭಾರಿ ಅಚ್ಚರಿ ಮೂಡಿಸಿದ್ದರು. ಬಿಜೆಪಿ ಸಂಸದರಾದ ಮಂಜುನಾಥ್ ಕುನ್ನೂರು, ಟಿ. ಸಾಂಗ್ಲಿಯಾನಾ, ಮನೋರಮಾ ಮಧ್ವರಾಜ್ ಮತ್ತು ಜೆಡಿಎಸ್ ಸಂಸದ ಶಿವಣ್ಣ ಉಲ್ಟಾ ಹೊಡೆದು ಪಕ್ಷದ ವಿಪ್ ಉಲ್ಲಂಘಿಸಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ನಮ್ಮನ್ನು ಪಕ್ಷದಲ್ಲಿ ನಿರ್ಲಕ್ಷಿಸಿದ್ದರಿಂದ ಯುಪಿಎ ಪರ ಮತಹಾಕಿದೆವು ಎಂದು ಬಿಜೆಪಿ ಸಂಸದರು ವಾದಿಸಿದ್ದರೆ, ದೇವೇಗೌಡರ ಭಿನ್ನ ನಿಲುವಿನಿಂದಾಗಿ ನಾನು ಮಂತ್ರಿಯಾಗುವುದು ತಪ್ಪಿತು ಎಂದು ಶಿವಣ್ಣ ಹೇಳಿದ್ದರು. ಯುಪಿಎ ಪರ ಮತ ಹಾಕಬೇಕೆಂದು ಸಂಸದರಿಗೆ ಕಾಂಗ್ರೆಸ್ ಹಣದ ಆಮಿಷ ಒಡ್ಡಿತ್ತು ಎಂಬ ಆರೋಪಗಳೂ ಕೇಳಿ ಬಂದಿದ್ದವು.
ಉತ್ತರ ಪ್ರದೇಶ, ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು, ಬಿಹಾರ ಸೇರಿದಂತೆ ಹಲವು ರಾಜ್ಯಗಳ ಪ್ರತಿನಿಧಿಗಳು ಸಂಸತ್ತಿನಲ್ಲಿ ತಮ್ಮ ರಾಜ್ಯದ ಅಥವಾ ರಾಷ್ಟ್ರದ ಜ್ವಲಂತ ವಿಷಯಗಳ ಮೇಲೆ ಪರಿಣಾಮಕಾರಿ ವಿಚಾರ ಮಂಡನೆಗಳ ಮೂಲಕ ಗಮನಸೆಳೆದಿದ್ದಾರೆ/ಸೆಳೆಯುತ್ತಿದ್ದಾರೆ. ಆದರೆ, ಕರ್ನಾಟಕ ಈ ವಿಷಯದಲ್ಲಿ ಹಿಂದೆ ಬಿದ್ದಿರುವುದು ವಿಪರ್ಯಾಸ. ರಾಜ್ಯದ ಜ್ವಲಂತ ವಿಷಯಗಳ ಬಗ್ಗೆಯೂ ನಮ್ಮ ಸಂಸದರು ಸಂಸತ್ತಿನಲ್ಲಿ ಒಗ್ಗಟ್ಟಿನ ಧ್ವನಿ ಮೊಳಗಿಸಿದ ಉದಾಹರಣೆ ತೀರಾ ಕಡಿಮೆ. ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಆಯ್ಕೆಯಾಗುವ ಸಂಸದರೇ ಹೆಚ್ಚಿರುವುದರಿಂದ ಅವರು ತಮ್ಮ ಹೈಕಮಾಂಡ್​ಗೆ ಮುಜುಗರವನ್ನುಂಟುಮಾಡುವ ಯಾವುದೇ ವಿಷಯವನ್ನು ಕೈಗೆತ್ತಿಕೊಳ್ಳುವುದಿಲ್ಲ. ಎರಡನೆಯದಾಗಿ, ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಿಂದ ಆಯ್ಕೆಯಾಗುತ್ತಿರುವ ಬಹುಪಾಲು ಸಂಸದರಲ್ಲಿ ಒಂದೋ ವಿಷಯ ಜ್ಞಾನದ ಕೊರತೆಯಿರುತ್ತದೆ ಇಲ್ಲವೇ ಸಂಸತ್ತಿನಲ್ಲಿ ಮಾತನಾಡಲು ಬೇಕಾದ ಭಾಷಾ ಜ್ಞಾನ ಇರುವುದಿಲ್ಲ. ರಾಜ್ಯಸಭೆ ಚಿಂತಕರ ಚಾವಡಿ ಎಂದು ಗುರುತಿಸಿಕೊಂಡಿದ್ದರೂ, ಪಕ್ಷದಲ್ಲಿ ಸಂಘಟನೆಗಾಗಿ ಕೆಲಸ ಮಾಡಿದ್ದಾರೆ ಎಂಬ ಕಾರಣಕ್ಕೆ ರಾಷ್ಟ್ರೀಯ ವಿಷಯಗಳ ಬಗ್ಗೆ ಹಿಡಿತವಿಲ್ಲದವರನ್ನೂ ಈಗ ರಾಜ್ಯಸಭೆ ಸದಸ್ಯರಾಗಿ ಮಾಡುವ ಪರಿಪಾಠ ಬೆಳೆಯುತ್ತಿದೆ. ಇತ್ತೀಚಿಗೆ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾದ ಕೆಲವರು ಇದಕ್ಕೆ ತಾಜಾ ನಿದರ್ಶನ.
ನೆಲ-ಜಲ ವಿಷಯದಲ್ಲಿ ತಮಿಳುನಾಡು, ಆಂಧ್ರದಷ್ಟು ಕರ್ನಾಟಕದ ಸಂಸದರು (ದೇವೇಗೌಡರನ್ನು ಹೊರತುಪಡಿಸಿ) ಸಂಸತ್ತಿನಲ್ಲಿ ತಮ್ಮ ಧ್ವನಿ ಮೊಳಗಿಸಿಲ್ಲ. ಕಾವೇರಿ ಜಲ ಬಿಕ್ಕಟ್ಟಿನ ಎಲ್ಲ ಸಂದರ್ಭಗಳಲ್ಲೂ ಇತರ ಪಕ್ಷಗಳ ನೆರವನ್ನೂ ಕೇಳದೆ, ಲೋಕಸಭೆಯಲ್ಲಿ ತಮಿಳುನಾಡು ವಿರುದ್ಧ ತಮ್ಮ ಹರಿತ ಮಾತುಗಳ ಮೂಲಕ ದೇಶದ ಗಮನಸೆಳೆಯುತ್ತಿದ್ದರು. ಈಗ ಇಳಿ ವಯಸ್ಸಿನಲ್ಲೂ ಅವರು ಹುಮ್ಮಸ್ಸು ಕಳೆದುಕೊಂಡಿಲ್ಲ. ಹಳೆ ಸಂಸತ್ತಿನಲ್ಲಿ ನಡೆದ ಕೊನೆ ದಿನದ ಕಲಾಪದಲ್ಲೂ ಕಾವೇರಿ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಿ, ಕೊನೆ ಉಸಿರಿನವರೆಗೂ ನದಿ ನೀರಿಗಾಗಿ ಹೋರಾಡುತ್ತೇನೆ ಎಂಬ ಪ್ರಖರ ಸಂದೇಶ ರವಾನಿಸಿದರು. ರಾಜ್ಯಗಳು ಹೀಗೆ ಕಿತ್ತಾಡಿಕೊಳ್ಳುವ ಬದಲು, ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ವಾಸ್ತವ ಸ್ಥಿತಿ ಅರ್ಥಮಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬ ಸಲಹೆಯನ್ನೇನೋ ಗೌಡರು ನೀಡಿದ್ದಾರೆ. ಆದರೆ, ಇದನ್ನು ಸಿದ್ದರಾಮಯ್ಯ ಮತ್ತು ಎಂಕೆ ಸ್ಟಾಲಿನ್ ಕೇಳುತ್ತಾರಾ?
1952ರಲ್ಲಿ ನಡೆದ ದೇಶದ ಮೊದಲ ಸಾರ್ವತ್ರಿಕ ಚುನಾವಣೆ ನಂತರ ಅಸ್ತಿತ್ವಕ್ಕೆ ಬಂದ ಭಾರತೀಯ ಸಂಸತ್ತಿನ ರಾಜ್ಯಸಭೆಯ ಮೊದಲ ಉಪಸಭಾಪತಿಯಾಗಿ ನೇಮಕಗೊಂಡಿದ್ದು ಕರ್ನಾಟಕ ಮೂಲದ ಎಸ್.ವಿ. ಕೃಷ್ಣಮೂರ್ತಿ ರಾವ್. ಸಂವಿಧಾನ ಸಭೆಯ ಸದಸ್ಯರಾಗಿದ್ದ ಕೃಷ್ಣಮೂರ್ತಿ ರಾವ್ ಸ್ವಾತಂತ್ರೋತ್ತರದಲ್ಲಿ ದೆಹಲಿಯಲ್ಲಿ ಕನ್ನಡ ಕಹಳೆ ಮೊಳಗಿಸಿದವರಲ್ಲಿ ಪ್ರಮುಖರು. 1952ರಿಂದ 1962ರ ತನಕ ರಾಜ್ಯಸಭೆ ಉಪಸಭಾಪತಿಯಾಗಿದ್ದ ಅವರು, 1962ರಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದರು. ನಂತರ 1967ರ ತನಕ ಲೋಕಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು. 1959ರಲ್ಲಿ ದಿಲ್ಲಿ ಕನ್ನಡ ಶಾಲೆ ಸ್ಥಾಪಿಸಿದ್ದು ಇದೇ ಕೃಷ್ಣಮೂರ್ತಿ ರಾವ್. ಆ ದಿನಗಳಲ್ಲಿ ಕೃಷ್ಣಮೂರ್ತಿ ರಾವ್ ಹಾಗೂ ಸಂವಿಧಾನ ಸಭೆಯ ಇತರೆ ಸದಸ್ಯರಾಗಿದ್ದ ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ಕೆಸಿ ರೆಡ್ಡಿ ಅವರ ದಿಲ್ಲಿಯ ಅಧಿಕೃತ ಬಂಗಳೆಗಳಲ್ಲೇ ಕನ್ನಡ ಪರ ಚಟುವಟಿಕೆಗಳು ನಡೆಯುತ್ತಿದ್ದವು.
1991ರಲ್ಲಿ ಮಹಾರಾಷ್ಟ್ರ ಮೂಲದ ಶಿವರಾಜ್ ಪಾಟೀಲ್ ಅವರು ಸ್ಪೀಕರ್ ಆಗಿದ್ದರೆ ಕರ್ನಾಟಕ ಮೂಲದ ಸಿದ್ದನಂಜಪ್ಪ ಮಲ್ಲಿಕಾರ್ಜುನಯ್ಯ ಲೋಕಸಭೆ ಡೆಪ್ಯುಟಿ ಸ್ಪೀಕರ್ ಆಗಿ ನೇಮಕಗೊಂಡಿದ್ದರು. ಮೂಲತಃ ಕರ್ನಾಟಕದ ತುಮಕೂರಿನವರಾಗಿದ್ದ ಮಲ್ಲಿಕಾರ್ಜುನಯ್ಯ, ಅದೇ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಶಿವರಾಜ್ ಪಾಟೀಲ್ ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದವರಾಗಿದ್ದರಿಂದ ಕನ್ನಡ ಕಲಿತಿದ್ದರು. ಪ್ರಸ್ತುತ ಕೇಂದ್ರ ಸಂಸದೀಯ ಸಚಿವರು ಮತ್ತು ರಾಜ್ಯಸಭೆಯ ವಿಪಕ್ಷ ನಾಯಕ ಇಬ್ಬರೂ ಕನ್ನಡಿಗರು ಎನ್ನುವುದು ಗಮನಾರ್ಹ.

ಮಾಜಿ ಪ್ರಧಾನಿ ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಪರಿಣಾಮ 1977ರ ಲೋಕಸಭೆ ಚುನಾವಣೆಯಲ್ಲಿ ರಾಯ್ ಬರೇಲಿ ಕ್ಷೇತ್ರದ ಮತದಾರರು ಅವರನ್ನು ಸೋಲಿಸಿದ್ದರು. ಮತ್ತೆ ಲೋಕಸಭೆಗೆ ಸ್ಪರ್ಧಿಸಲು ಇಂದಿರಾ ಗಾಂಧಿ ಆಯ್ಕೆ ಮಾಡಿಕೊಂಡಿದ್ದು ಚಿಕ್ಕಮಗಳೂರು ಕ್ಷೇತ್ರ. ಎದುರಾಳಿ ಅಭ್ಯರ್ಥಿ ವೀರೇಂದ್ರ ಪಾಟೀಲ್ ವಿರುದ್ಧ 77,333 ಮತಗಳ ಅಂತರದಿಂದ ಇಂದಿರಾ ಗೆದ್ದರು. ಎರಡಕ್ಕಿಂತ ಕಡಿಮೆ ವರ್ಷ ಈ ಕ್ಷೇತ್ರದ ಪ್ರತಿನಿಧಿಯಾಗಿದ್ದ ಇಂದಿರಾ, ಕ್ಷೇತ್ರಕ್ಕೆ ವಿಶೇಷ ಕೊಡುಗೆಯೇನೂ ನೀಡಲಿಲ್ಲ. ಜಿಲ್ಲೆಗೆ ಸಾಮಾನ್ಯ ಆಸ್ಪತ್ರೆ, ರೈಲ್ವೆ ನಿಲ್ದಾಣದ ಭರವಸೆ ನೀಡಿದರೂ ಈಡೇರಿಸಲಿಲ್ಲ. 2014ರಲ್ಲಿ ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾದ ಮೇಲೆ ರೈಲ್ವೆ ಸ್ಟೇಷನ್ ಕನಸು ನಿಜವಾಯ್ತು.
2014ರ ಫೆಬ್ರವರಿ ತಿಂಗಳಲ್ಲಿ ಅಂದಿನ ಯುಪಿಎ ಸರ್ಕಾರ ಸಮ್ಮತಿ ಸೂಚಿಸಿ, ಲೋಕಸಭೆಯಲ್ಲಿ ಆಂಧ್ರಪ್ರದೇಶ ಪುನರ್ ಸಂಘಟನೆ ವಿಧೇಯಕ ಮಂಡನೆಗೆ ಮುಂದಾಗಿತ್ತು. ಗಲಾಟೆ ಎಬ್ಬಿಸಲು ತೆಲಂಗಾಣ ವಿರೋಧಿ ಸಂಸದರು ತಯಾರಾಗಿ ಬಂದಿದ್ದರು. ಈ ಬಗ್ಗೆ ಪೂರ್ವ ಮಾಹಿತಿ ಇದ್ದ ಡಿ.ಕೆ ಸುರೇಶ್, ಧ್ರುವನಾರಾಯಣ, ಮಹಮ್ಮದ್ ಅಜರುದ್ದೀನ್ ಸೇರಿದಂತೆ ಹಲವು ಸಂಸದರು ಗೃಹ ಸಚಿವ ಸುಶೀಲ್ ಶಿಂಧೆ ಸುತ್ತ ಮಾನವ ಸರಪಳಿ ರೂಪಿಸಿದ್ದರು. ವಿಧೇಯಕ ಮಂಡನೆಯಾಗುತ್ತಿದ್ದಂತೆ ಸಂಸದರು ಗಲಾಟೆ ಎಬ್ಬಿಸಿದರು. ಪೆಪ್ಪರ್ ಸ್ಪ್ರೇ ಮಾಡಿದ ರಾಜಗೋಪಾಲ್ ಅವರ ಎರಡೂ ಕೈಗಳನ್ನು ಹಿಡಿದೆಳೆದ ಡಿ.ಕೆ. ಸುರೇಶ್ ಅವರು ಸುಶೀಲ್ ಕುಮಾರ್ ಶಿಂಧೆ ಮತ್ತು ಸ್ಪೀಕರ್ ಮೀರಾ ಕುಮಾರ್ ಮೇಲೆ ಸ್ಪ್ರೇ ಬೀಳದಂತೆ ನೋಡಿಕೊಂಡರು. ಆ ದಿನದ ಮಟ್ಟಿಗೆ ಇಬ್ಬರು ಕಾಂಗ್ರೆಸ್​ನ ಹಿರಿಯಾಳುಗಳು ಆಸ್ಪತ್ರೆ ಸೇರದಂತೆ ನೋಡಿಕೊಳ್ಳುವಲ್ಲಿ ಡಿಕೆ ಸುರೇಶ್ ಯಶಸ್ವಿಯಾಗಿದ್ದರು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + fifteen =
Remember me
