ಕೇಂದ್ರ ಸರ್ಕಾರದ ವಿರುದ್ಧದ ಅನುದಾನ ತಾರತಮ್ಯ ಆರೋಪ- ಪ್ರತ್ಯಾರೋಪಗಳು ತಾರಕಕ್ಕೇರಿವೆ. ಒಂದೆಡೆ, ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಪ್ರತಿಭಟನೆಗೆ ಮುಂದಾಗಿದ್ದರೆ, ಇನ್ನೊಂದೆಡೆ, ರಾಜ್ಯದ್ದು ರಾಜಕೀಯಪ್ರೇರಿತ ಆರೋಪ ಎಂದು ಕೇಂದ್ರವೂ ಟೀಕಿಸಿದೆ. ತೆರಿಗೆ ಪಾಲು ಕುಸಿಯಲು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಬಿಜೆಪಿ ಪ್ರತ್ಯಾರೋಪ ಮಾಡಿದೆ.
ಬೆಂಗಳೂರು:ಕೇಂದ್ರ ಸರ್ಕಾರದಿಂದ ಐದು ವರ್ಷದಲ್ಲಿ ಬರಬೇಕಾಗಿದ್ದ 1,87,867 ಕೋಟಿ ರೂ. ತೆರಿಗೆ ಪಾಲು ಪಡೆಯಲು ದೆಹಲಿಯಲ್ಲಿ ಫೆ.7 ರಂದು ಪ್ರತಿಭಟನೆ ನಡೆಸುತ್ತಿದ್ದೇವೆಯೇ ಹೊರತು, ಇದು ರಾಜಕೀಯ ಪ್ರತಿಭಟನೆ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಆರ್ಥಿಕ ತಾರತಮ್ಯ ಕುರಿತಂತೆ ವಿಧಾನಸೌಧದಲ್ಲಿ ಸುದೀರ್ಘ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ರಾಜ್ಯದಿಂದ ಕೇಂದ್ರಕ್ಕೆ ವಾರ್ಷಿಕ 4.30 ಲಕ್ಷ ಕೋಟಿ ರೂ. ತೆರಿಗೆ, ಸರ್​ಚಾರ್ಜ್, ಸೆಸ್ ರೂಪದಲ್ಲಿ ಆದಾಯ ಕ್ರೋಢೀಕರಣವಾಗುತ್ತಿದೆ. ಅದರಲ್ಲಿ ಶೇ.12ರಷ್ಟನ್ನು ರಾಜ್ಯಕ್ಕೆ ಮರಳಿಸಲಾಗುತ್ತಿದ್ದು, ಐದು ವರ್ಷದಲ್ಲಿ ಅಂದಾಜು 1,87,867 ಕೋಟಿ ರೂ. ನಷ್ಟವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ನ್ಯಾಯ ಒದಗಿಸಿಕೊಡಲಿದೆ ಎಂದು ಇಲ್ಲಿಯವರೆಗೂ ತಾಳ್ಮೆಯಿಂದ ಕಾಯುತ್ತಿದ್ದೆವು. ಕಳೆದ ಸಾಲಿನ ಬಜೆಟ್​ನಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂದು ಕಾದಿದ್ದೆವು. ಆದರೆ ಇದುವರೆಗೂ ಅನ್ಯಾಯ ಸರಿಪಡಿಸಿಲ್ಲ. ಇದರ ವಿರುದ್ಧ ಧ್ವನಿ ಎತ್ತಲೇಬೇಕಾಗಿದೆ. ಹೋರಾಟಕ್ಕೆ ಜತೆ ನೀಡಲು ಪಕ್ಷಭೇದ ಮರೆತು ಆಹ್ವಾನ ನೀಡಿದ್ದೇವೆ. ಕನ್ನಡಿಗರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ. ಕೇಂದ್ರದ ಕಣ್ಣು ತೆರೆಸಲು ಹೋರಾಡುತ್ತಿದ್ದೇವೆ ಎಂದರು.
ನಿರಂತರ ಅನ್ಯಾಯ:ಭದ್ರಾ ಯೋಜನೆಗೆ 5300 ಕೋಟಿ ರೂ.ಗಳನ್ನು ಕಳೆದ ಬಜೆಟ್​ನಲ್ಲಿ ಘೊಷಿಸಲಾಗಿತ್ತು. ಈವರೆಗೆ ಒಂದು ರೂಪಾಯಿಯೂ ಬಿಡುಗಡೆ ಮಾಡಿಲ್ಲ. ಬರಗಾಲ ಪರಿಹಾರದ ಹಣವೂ ಇಲ್ಲ. 150 ಮಾನವ ದಿನಗಳಿಗೆ ಕೂಲಿ ಕೊಡಲು ಕೂಡ ಅನುಮತಿ ನೀಡಿಲ್ಲ. ಕೇಂದ್ರ ಸರ್ಕಾರದ ಇಂಥ ತಾರತಮ್ಯ ಧೋರಣೆ, ಹಣಕಾಸು ಹಂಚಿಕೆಯ ತಾರತಮ್ಯದ ಬಗ್ಗೆ ದೇಶದ ಜನರ ಗಮನ ಸೆಳೆಯಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲ ಶಾಸಕರು, ಮೇಲ್ಮನೆ ಸದಸ್ಯರು ಭಾಗವಹಿಸುತ್ತಿದ್ದಾರೆ ಎಂದರು.
ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ನಷ್ಟ:14ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆಯ ಪಾಲು ಶೇ 4.71 ಇದ್ದದ್ದು, 15ನೇ ಹಣಕಾಸು ಆಯೋಗದಲ್ಲಿ ಶೇ.3.64ಕ್ಕೆ ಇಳಿಕೆಯಾಯಿತು. ಅಂದರೆ ಶೇ.1.07 ಕಡಿಮೆಯಾಗಿದೆ. ಅದರಿಂದ 4 ವರ್ಷಗಳಲ್ಲಿ 45,000 ಕೋಟಿ ರೂ. ರಾಜ್ಯಕ್ಕೆ ಕಡಿತವಾಗಿದೆ. ಇದು ಕೇವಲ ನಗದು ಹಂಚಿಕೆಯೊಂದರಲ್ಲೇ ಆಗಿರುವ ಅನ್ಯಾಯ. ಅಂದಾಜಿನ ಪ್ರಕಾರ ಈ ವರ್ಷ ರಾಜ್ಯಕ್ಕೆ ನಗದು ಹಂಚಿಕೆಯಲ್ಲಿ 62,098 ಕೋಟಿ ರೂ.ಗಳು ಕಡಿಮೆಯಾಗಲಿದೆ ಎಂದರು.
73,593 ಕೋಟಿ ರೂ. ತೆರಿಗೆ ಪಾಲು ಕಡಿಮೆ:ಹಣಕಾಸು ಆಯೋಗ ನಗದು ಹಂಚಿಕೆ ಮಾಡುವಾಗ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು 5,495 ಕೋಟಿ ರೂ.ಗಳ ವಿಶೇಷ ಅನುದಾನಕ್ಕೆ ಶಿಫಾರಸು ಮಾಡಿತ್ತು. ಈ ಹಣವೂ ಬರಲಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ತಿರಸ್ಕರಿಸಿದರು. ಅಂತಿಮ ವರದಿಯಲ್ಲಿ 3,000 ಕೋಟಿ ರೂ. ಫೆರಿಫೆರಲ್ ರಿಂಗ್ ರೋಡ್ ಹಾಗೂ ಕೆರೆಗಳ ಅಭಿವೃದ್ಧಿಗೆ 3,000 ಕೋಟಿ ಸೇರಿ 6,000 ಕೋಟಿ ರೂ. ಹೆಚ್ಚುವರಿಯಾಗಿ ಕೊಡಲು ಶಿಫಾರಸು ಮಾಡಲಾಯಿತು. ಈ ಹಣವೂ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2020-21 ಹಾಗೂ 2021-22ನೇ ಸಾಲಿಗೆ ವಿಶೇಷ ಅನುದಾನ ಕೊಡದೆ ರಾಜ್ಯಕ್ಕೆ 11,495 ಕೋಟಿ ರೂ.ಗಳು ನಷ್ಟವಾಗಿದೆ. ಒಟ್ಟಾರೆ 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಪಾಲಿನಲ್ಲಿ 73,593 ಕೋಟಿ ರೂ.ಗಳು ಕಡಿಮೆಯಾಯಿತು ಎಂದು ವಿವರಿಸಿದರು.
ಜಿಎಸ್​ಟಿಯಲ್ಲೂ ರಾಜ್ಯಕ್ಕೆ ಅನ್ಯಾಯ:ಜಿಎಸ್​ಟಿ ಜಾರಿಗೆ ಬಂದಾಗ ರಾಜ್ಯದ ತೆರಿಗೆ ಬೆಳವಣಿಗೆ ದರ ಶೇ.15 ಇತ್ತು. ಇದರಿಂದ ತೆರಿಗೆ, ಕೇಂದ್ರದ ಅನುದಾನವೂ ಹೆಚ್ಚಾಗುತ್ತದೆ ಎಂದು ಕೇಂದ್ರ ತಿಳಿಸಿತ್ತು. ತೆರಿಗೆ ನಷ್ಟಕ್ಕೆ ಪರಿಹಾರವಾಗಿ ನೀಡುತ್ತಿದ್ದ ಮೊತ್ತವನ್ನು 2022ರ ಜೂನ್​ಗೆ ನಿಲ್ಲಿಸಿದ್ದಾರೆ. ರಾಜ್ಯಕ್ಕೆ ಜಿಎಸ್​ಟಿಯಲ್ಲಿ ಅನ್ಯಾಯವಾಗುತ್ತಲೇ ಇದೆ ಎಂದು ಹೇಳಿದರು.
ರಾಜ್ಯದಿಂದ ಪ್ರತಿವರ್ಷ ಕೇಂದ್ರಕ್ಕೆ 4,30,000 ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ. ತೆರಿಗೆ ಸಂಗ್ರಹಣೆಯಲ್ಲಿ ಮಹಾರಾಷ್ಟ್ರ ಬಿಟ್ಟರೆ ರಾಜ್ಯ ಎರಡನೇ ಸ್ಥಾನದಲ್ಲಿದೆ. ನಮಗೆ ಈ ವರ್ಷ ತೆರಿಗೆ ಪಾಲಿನಲ್ಲಿ 37,252 ಕೋಟಿ, ಕೇಂದ್ರ ಪುರಸ್ಕೃತ ಯೋಜನೆಯಲ್ಲಿ 13,005 ಕೋಟಿ ಸೇರಿ ಕೇವಲ 50,257 ಕೋಟಿ ರೂ. ರಾಜ್ಯಕ್ಕೆ ಬಂದಿದೆ. ರಾಜ್ಯಕ್ಕೆ ಇದು ಭೀಕರ ಅನ್ಯಾಯ ಅಲ್ಲವೇ ಎಂದು ಪ್ರಶ್ನಿಸಿದರು. ರಾಜ್ಯದಿಂದ 100 ರೂ. ಕೇಂದ್ರಕ್ಕೆ ಹೋದರೆ ಅದರಲ್ಲಿ ನಮಗೆ 12- 13 ರೂ.ಗಳು ಮಾತ್ರ ವಾಪಸ್ ಬರುತ್ತಿದೆ. ಉಳಿದದ್ದು ಕೇಂದ್ರ ಸರ್ಕಾರವವೇ ಇಟ್ಟುಕೊಳ್ಳುತ್ತಿದೆ ಎಂದು ವಿವರಿಸಿದರು.
2017-18ರಲ್ಲಿ ಕೇಂದ್ರದ ಬಜೆಟ್ ಗಾತ್ರ -ಠಿ;21,46,735 ಕೋಟಿ ಇತ್ತು. ಆಗ ರಾಜ್ಯಕ್ಕೆ -ಠಿ;31,908 ಕೋಟಿ, ಗ್ರಾಂಟ್ಸ್ ಹಾಗೂ ನಗದು ಹಂಚಿಕೆ -ಠಿ;16,072 ಕೋಟಿ ಸೇರಿ -ಠಿ;47,990 ಕೋಟಿ, 2018-19 ರಲ್ಲಿ ಕೇಂದ್ರ ಬಜೆಟ್ ಗಾತ್ರ -ಠಿ;24,42,213 ಕೋಟಿಗೆ ವೃದ್ಧಿಸಿತು. ಆಗ ನಗದು ಹಂಚಿಕೆ ಸಿಕ್ಕಿದ್ದು 36,215 ಕೋಟಿ. ಇಲ್ಲಿ -ಠಿ;2,000 ಕೋಟಿ ಕಡಿಮೆ ಆಯಿತು. 2023-24 ಸಾಲಿನಲ್ಲಿ -ಠಿ;45,03,097 ಕೋಟಿ ಕೇಂದ್ರ ಬಜೆಟ್ ಆಗಿದ್ದು, ರಾಜ್ಯಕ್ಕೆ 50,257 ಕೋಟಿ ಮಾತ್ರ ಸಿಗುವ ಅಂದಾಜಿದೆ. ಡೆವಲ್ಯೂಷನ್ 2.2 ಯಿಂದ 2024-25ಕ್ಕೆ 1.23ಕ್ಕೆ ಇಳಿದಿದೆ. ಇದರಿಂದಾಗಿ ರಾಜ್ಯಕ್ಕೆ ಆಗುವ ಅನ್ಯಾಯದ ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ತಿಳಿಸಿದರು.
ತೆರಿಗೆ ಪಾಲು ದುಪ್ಪಟ್ಟಾಗಬೇಕಿತ್ತು:ಸೆಸ್, ಸರ್ ಚಾರ್ಜ್ ಮೂಲಕ ಕೇಂದ್ರ ವಸೂಲಿ ಮಾಡುವ ತೆರಿಗೆಯಲ್ಲಿ ರಾಜ್ಯಗಳಿಗೆ ನಯಾ ಪೈಸೆ ಸಿಗುತ್ತಿಲ್ಲ. ಆದ್ದರಿಂದ 16ನೇ ಹಣಕಾಸು ಆಯೋಗದ ಮುಂದೆ ಸೆಸ್ ಹಾಗೂ ಸರ್​ಚಾರ್ಜ್​ನಲ್ಲೂ ಪಾಲು ಕೊಡಲೇಬೇಕು ಎಂದು ಒತ್ತಾಯಿಸುತ್ತೇವೆ ಎಂದು ಸಿಎಂ ಹೇಳಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ಶಾಸಕ ಅಪ್ಪಾಜಿ ನಾಡಗೌಡ, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಉಪಸ್ಥಿತರಿದ್ದರು.
ದೂರುವುದನ್ನು ನಿಲ್ಲಿಸಿ:ರಾಜಸ್ವ ಸ್ವೀಕೃತಿ ಗುರಿ ಕಡಿಮೆಯಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುವುದನ್ನು ಬಿಟ್ಟು ಕೇಂದ್ರದ ವಿರುದ್ಧ ದೂರುತ್ತಿದೆ. ಡಿಸೆಂಬರ್ ಅಂತ್ಯಕ್ಕೆ 2,38,000 ತೆರಿಗೆ ಸಂಗ್ರಹ ಗುರಿ ಇತ್ತು. ಆದರೆ, 1.68 ಲಕ್ಷ ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಶೇ.67ರಷ್ಟು ಮಾತ್ರ ಪ್ರಗತಿಯಾಗಿದೆ. ನಮ್ಮ ಸರ್ಕಾರ ಇದ್ದಾಗ ಡಿಸೆಂಬರ್ ಅಂತ್ಯಕ್ಕೆ ಶೇ.82ರಷ್ಟು ಗುರಿ ಸಾಧನೆಯಾಗಿತ್ತು. ನಿಮ್ಮದೇ ಸರ್ಕಾರದ ಗುರಿ ತಲುಪಲು ನಿಮಗೆ ಸಾಧ್ಯವಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.
ತೆರಿಗೆ ಪಾಲು ಕುಸಿತಕ್ಕೆ ಸಿದ್ದರಾಮಯ್ಯ ಕಾರಣ :ಬೆಂಗಳೂರು: ಹದಿನೈದನೇ ಹಣಕಾಸಿನ ಶಿಫಾರಸಿನಲ್ಲಿ ರಾಜ್ಯ ಸರ್ಕಾರದ ಪಾಲು ಶೇ.3.6 ಗೆ ಇಳಿಯಲು ನೇರವಾಗಿ ಸಿದ್ದರಾಮಯ್ಯ ಸರ್ಕಾರವೇ ಕಾರಣ. ಏಕೆಂದರೆ 15ನೇ ಹಣಕಾಸಿನ ವರದಿ ವೇಳೆ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇತ್ತು. ರಾಜ್ಯದ ಆರ್ಥಿಕ ಸ್ಥಿತಿಯನ್ನು ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಿಕೊಡಲು ಸೋತಿದ್ದರಿಂದ ಹಿನ್ನಡೆ ಆಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಆರೋಪಿಸಿದ್ದಾರೆ. 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಎನ್​ಡಿಎ ಸರ್ಕಾರ ಈಗಾಗಲೇ -ಠಿ;1,16,828 ಕೋಟಿ ನೀಡಿದೆ. ಆಯೋಗದ ಅವಧಿ 2026ರವರೆಗೆ ಇದ್ದು ಒಟ್ಟು 2.5 ಲಕ್ಷ ಕೋಟಿ ರೂ.ಗಳಿಗೂ ಮೀರಿ ತೆರಿಗೆ ಹಂಚಿಕೆ ಬರಲಿದೆ. ಇದು ಯುಪಿಎ ಸರ್ಕಾರ ಇದ್ದಾಗ 14ನೇ ಹಣಕಾಸಿನ ಶಿಫಾರಸ್ಸಿಗಿಂತ ಅತ್ಯಧಿಕವಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಗ್ಯಾರಂಟಿಗಳ ವಿರುದ್ಧ ನಿರ್ಮಲಾ ಪ್ರಹಾರ:ನವದೆಹಲಿ: ಕೇಂದ್ರ ಸರ್ಕಾರ ಬಿಜೆಪಿಯೇತರ ಆಡಳಿತದ ರಾಜ್ಯಗಳಿಗೆ ಮೀಸಲಾದ ಹಣ ತಡೆಹಿಡಿಯುತ್ತಿದೆ ಎಂಬ ಆರೋಪಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ತಿರುಗೇಟು ನೀಡಿದ್ದಾರೆ.
ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡುತ್ತಿಲ್ಲ ಎಂಬ ಕರ್ನಾಟಕದ ಆರೋಪವನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸಚಿವೆ ನಿರ್ಮಲಾ, ಇದು ರಾಜಕೀಯಪ್ರೇರಿತ ಆರೋಪ. ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಅನುದಾನ ಹಂಚಿಕೆ ನಡೆಯುತ್ತಿದೆ. ನಮ್ಮ ವ್ಯವಸ್ಥೆ ಉತ್ತಮವಾಗಿದೆ. ರಾಜ್ಯದ ಅನುದಾನ ತಡೆಹಿಡಿಯಲು ಸಾಧ್ಯವಿಲ್ಲ. ರಾಜಕೀಯಪ್ರೇರಿತ ಆರೋಪದ ಬಗ್ಗೆ ವಿಷಾದವಿದೆ. ಕೇಂದ್ರ ಸರ್ಕಾರವು ಹಣಕಾಸು ಆಯೋಗದ ಶಿಫಾರಸುಗಳನ್ನು ತಿದ್ದಿ, ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ. ನಿಯಮಗಳನ್ನು ಬದಲಾಯಿಸುವ ಹಕ್ಕು ಹಣಕಾಸು ಸಚಿವಾಲಯಕ್ಕೆ ಇಲ್ಲ. ನಿಯಮವನ್ನು ಶೇ. 100ರಷ್ಟು ಪಾಲನೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಗ್ಯಾರಂಟಿಗಳ ವಿರುದ್ಧ ನಿರ್ಮಲಾ ಪ್ರಹಾರ:ಆರು ತಿಂಗಳ ಹಿಂದಿನವರೆಗೆ ಎಲ್ಲವೂ ಸರಿ ಇತ್ತು. ಈಗ ಏನು ತಪ್ಪಾಗಿದೆ? ಹಣವನ್ನು ನೀವು ಮಾಡಬಾರದ ವಸ್ತುಗಳಿಗೆ ಖರ್ಚು ಮಾಡಿದ್ದೀರಿ ಎಂದು ಗ್ಯಾರಂಟಿ ಯೋಜನೆಗಳ ವಿರುದ್ಧ ಸಚಿವೆ ನಿರ್ಮಲಾ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ರಾಜ್ಯಗಳು ಯಾವುದೇ ಕ್ಷೇತ್ರಕ್ಕೆ ಬೇಕಾದರೂ ಖರ್ಚು ಮಾಡಲಿ. ಆದರೆ, ನಂತರ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಬಾರದು. ರಾಜ್ಯ ಬಜೆಟ್​ನಿಂದ ಭರಿಸಲಾಗದಷ್ಟು ವೆಚ್ಚಗಳು ನಡೆಯುತ್ತಿದ್ದರೆ, ಅದಕ್ಕೆ ನಾನು ಜವಾಬ್ದಾರಳಲ್ಲ. ದಯವಿಟ್ಟು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದರು. ಹಣ ಬಿಡುಗಡೆ ಬಗ್ಗೆ ಅಸಮಾಧಾನ ಇದ್ದರೆ ಹಣಕಾಸು ಆಯೋಗದೊಂದಿಗೆ ಮಾತನಾಡಿ. ನಿಮ್ಮ ಅಗತ್ಯಗಳು, ಅವಶ್ಯಕತೆಗಳು ಮತ್ತು ಸ್ಥಾನಮಾನಗಳನ್ನು ತಿಳಿಸಿ. ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿರುವುದರಿಂದ ಅದೇ ನಿರ್ಧಾರ ತೆಗೆದುಕೊಳ್ಳಲಿ ಎಂದು ಹಣಕಾಸು ಸಚಿವರು ಹೇಳಿದರು.
ಕರ್ನಾಟಕದ ಉಪಮುಖ್ಯಮಂತ್ರಿಗಳು ನನ್ನನ್ನು ಭೇಟಿಯಾಗಿ ಸಮಸ್ಯೆಗಳನ್ನು ತಿಳಿಸಿದ್ದಾರೆ. ನಾನು ಅವರಿಗೆ ವಾಸ್ತವಿಕ ಸಂಗತಿಯನ್ನು ಹೇಳಿದ್ದೇನೆ. ಹಣಕಾಸು ಆಯೋಗದ ಪ್ರಕಾರವೇ ಎಲ್ಲವೂ ನಡೆದಿದೆ. ಹಣಕಾಸು ಆಯೋಗದ ಶಿಫಾರಸುಗಳೊಂದಿಗೆ ಆಟವಾಡಲು ಸಚಿವಾಲಯಕ್ಕೆ ಅಧಿಕಾರ ಇಲ್ಲ. ದಯವಿಟ್ಟು ಹಣಕಾಸು ಆಯೋಗದೊಂದಿಗೆ ಮಾತನಾಡಿ.
– ನಿರ್ಮಲಾ ಸೀತಾರಾಮನ್, ಕೇಂದ್ರ ವಿತ್ತ ಸಚಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
