ಬೆಂಗಳೂರು:ಮೇಲ್ಮನೆ ಚುನಾವಣೆಯಲ್ಲಿ ಪಕ್ಷ ನಿರೀಕ್ಷಿತ ಸಾಧನೆ ಮಾಡದಿರುವ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಬಿಜೆಪಿಯಲ್ಲಿ ಈಗ ಸಾಮೂಹಿಕ ನಾಯಕತ್ವದ ಜಪ ಆರಂಭವಾಗಿದೆ. ಬಿಜೆಪಿ 14 ಸ್ಥಾನಗಳ ನಿರೀಕ್ಷೆಯಲ್ಲಿತ್ತು. ಆದರೆ ನಿರೀಕ್ಷೆ ಹುಸಿಯಾಗಿರುವುದು ಪಕ್ಷದಲ್ಲಿ ನಾನಾ ಚರ್ಚೆಗಳಿಗೆ ವೇದಿಕೆ ಕಲ್ಪಿಸಿದೆ. ಕೆಲ ಮುಖಂಡರು ಬಹಿರಂಗವಾಗಿಯೇ ಮಾತನಾಡಲಾರಂಭಿಸಿದ್ದಾರೆ.
ಹಾನಗಲ್ ಕ್ಷೇತ್ರದ ಸೋಲಿನ ನಂತರ ಮೇಲ್ಮನೆಯ ಸೋಲು ಪಕ್ಷಕ್ಕೆ ಸಹಿಸಲಾರದ ಪೆಟ್ಟು ನೀಡಿದೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆದ ನಂತರ ಲಿಂಗಾಯತ ಮತಬ್ಯಾಂಕ್ ಚದುರಿದೆಯೇ ಎಂಬ ಆತಂಕ ಪಕ್ಷದ ಮುಖಂಡರನ್ನು ಕಾಡುತ್ತಿದೆ. ಮೇಲ್ಮನೆ ಚುನಾವಣೆಯಲ್ಲಿ ಸೋತ ಹಾಗೂ ಗೆದ್ದ ಕ್ಷೇತ್ರಗಳಲ್ಲಿ ಪಡೆದಿರುವ ಮತಗಳನ್ನು ಗಮನಿಸಿದ ನಂತರ ಈ ಅನುಮಾನ ಮೂಡಿದೆ. ಆದ್ದರಿಂದಲೇ ಸಾಮೂಹಿಕ ನಾಯಕತ್ವದ ಜಪ ಆರಂಭವಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚಿನ ರಾಜ್ಯ ಭೇಟಿಯ ಸಂದರ್ಭದಲ್ಲಿ ಹೇಳಿದ್ದರು. ಆ ಹೇಳಿಕೆ ಬಂದ ಸಂದರ್ಭದಲ್ಲಿಯೇ ಅನೇಕ ರಾಜ್ಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು.
ಮುಖಂಡರ ಮಾತಿನ ಪೀಠಿಕೆ:ಯಾವಾಗ ಎರಡು ಚುನಾವಣೆ ಫಲಿತಾಂಶ ನಿರೀಕ್ಷೆಯನ್ನು ಹುಸಿಗೊಳಿಸಿದೆಯೋ ಈಗ ಒಬ್ಬೊಬ್ಬರೇ ಮಾತನಾಡಲಾರಂಭಿಸಿದ್ದಾರೆ. ಮುಂದಿನ ಚುನಾವಣೆಗೆ ಬೊಮ್ಮಾಯಿ ನಾಯಕತ್ವವಲ್ಲ ಸಾಮೂಹಿಕ ನಾಯಕತ್ವ ಎಂದು ಸ್ವತಃ ಯಡಿಯೂರಪ್ಪ ಅವರೇ ಹೇಳಿರುವುದು ಪಕ್ಷದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ಪಕ್ಷದಲ್ಲಿ ಯಾವತ್ತೂ ಒಬ್ಬರ ನೇತೃತ್ವ ಇರುವುದಿಲ್ಲ, ಸಾಮೂಹಿಕ ನಾಯಕತ್ವ ಇರುತ್ತದೆ ಎಂದೇ ಮುಖಂಡರು ಹೇಳುತ್ತಾರೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪಕ್ಷದ ಸೋಲಿನ ಬಗ್ಗೆ ಗಂಭೀರ ಚರ್ಚೆ ನಡೆಯುವ ಅಗತ್ಯತೆಯನ್ನು ಫಲಿತಾಂಶ ಬಂದ ದಿನವೇ ವ್ಯಕ್ತಪಡಿಸಿದ್ದರು. ಸಚಿವ ಕೆ.ಎಸ್. ಈಶ್ವರಪ್ಪ ಅವರಂತೂ ವಲಸಿಗರು ಬಿಜೆಪಿಗೆ ವರ್ಕೌಟ್ ಆಗಿಲ್ಲವೆಂದು ನೇರವಾಗಿಯೇ ಹೇಳಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಅನೇಕ ಶಾಸಕರು ಸರ್ಕಾರದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವೆಲ್ಲವೂ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಬಹಿರಂಗಗೊಳಿಸಿದೆ. ಮುಂದಿನ ದಿನಗಳಲ್ಲಿ ಪಕ್ಷದೊಳಗೆ ಇನ್ನಷ್ಟು ಚರ್ಚೆಯಾಗಲಿದೆ ಎಂದು ಪಕ್ಷದ ಮೂಲಗಳೇ ಹೇಳಿವೆ.
ಇದುವರೆಗೂ ಯಾವುದೇ ಫಲಿತಾಂಶ ಬಂದಾಗಲೂ ಪಕ್ಷ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಂಡ ಉದಾಹರಣೆ ಇಲ್ಲ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮುಂದಿನ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಗಂಭೀರವಾಗಿ ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಹೆಸರು ಬಹಿರಂಗಕ್ಕೆ ಒಪ್ಪದ ಪಕ್ಷದ ಹಿರಿಯ ಮುಖಂಡರೊಬ್ಬರ ಪ್ರಕಾರ, ಪಕ್ಷದ ಕಾರ್ಯಕರ್ತರ ನಿರೀಕ್ಷೆಗೆ ತಕ್ಕಂತೆ ಸರ್ಕಾರ ನಡೆಯುತ್ತಿಲ್ಲ. ಅಭಿವೃದ್ಧಿ ಕಾರ್ಯಗಳು ಕಣ್ಣಿಗೆ ಕಾಣುತ್ತಿಲ್ಲ. ಬಿಜೆಪಿಯ ಕಾರ್ಯಕ್ರಮಗಳೆಂದು ಹೇಳಿಕೊಳ್ಳಲು ಯಾವುದೇ ಯೋಜನೆಗಳು ಇನ್ನೂ ಪ್ರಕಟವಾಗಿಲ್ಲ. ಈ ರೀತಿಯಾದರೆ ಸಂಘಟನೆ ಕಷ್ಟವೆಂಬ ಅಭಿಪ್ರಾಯವನ್ನು ವರಿಷ್ಠರ ಗಮನಕ್ಕೆ ತರಲಾಗಿದೆ ಎಂದು ಹೇಳುತ್ತಾರೆ.
ಗುಜರಾತ್ ಮಾದರಿ:ಪಕ್ಷದಲ್ಲಂತೂ ಗುಜರಾತ್ ಮಾದರಿ ಎಂಬ ಮಾತು ಈಗ ಹೆಚ್ಚಾಗಿ ಕೇಳಿ ಬರುತ್ತಿದೆ. ಅಲ್ಲಿ ಮುಖ್ಯಮಂತ್ರಿ ಸೇರಿ ಇಡೀ ಸಂಪುಟದ ರಾಜೀನಾಮೆ ಪಡೆದು ಹೊಸದಾಗಿ ಸರ್ಕಾರ ರಚನೆ ಮಾಡಲಾಗಿದೆ. ರೂಪಾನಿ ಸಂಪುಟದಲ್ಲಿದ್ದ ಒಬ್ಬರಿಗೆ ಮಾತ್ರ ಹೊಸ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ರಾಜ್ಯದಲ್ಲಿಯೂ ಅದೇ ಮಾದರಿ ಬರಬಹುದೆಂದು ಬಿಜೆಪಿ ಕಾರ್ಯಕರ್ತರೆ ಹೇಳುತ್ತಿದ್ದಾರೆ. ಆದರೆ ಅನೇಕ ಮುಖಂಡರು ನಾಯಕತ್ವ ಬದಲಾವಣೆ ಇಲ್ಲ. ಆದರೆ ಸಂಪುಟದಲ್ಲಿ ಅಮೂಲಾಗ್ರ ಬದಲಾವಣೆ ಆಗುತ್ತದೆ. ನಿಗಮ ಮತ್ತು ಮಂಡಳಿಗಳ ಪುನಾರಚನೆ ಆಗುತ್ತದೆ ಎಂದು ಸ್ಪಷ್ಟಪಡಿಸುತ್ತಾರೆ. ಅಂದರೆ ನಡೆಯುತ್ತಿರುವ ಬೆಳವಣಿಗೆಗಳು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದಕ್ಕೆ ಮುಂದಿನ ಬೆಳವಣಿಗೆಗಳೇ ಉತ್ತರ ನೀಡುತ್ತವೆ.
ಬೆಳಗಾವಿ:ಸುವರ್ಣ ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಹಸ್ಯ ಮಾತುಕತೆ ನಡೆಸಿರುವುದು ಬಿಜೆಪಿ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ವಿಧಾನಸಭೆ ಕಲಾಪಕ್ಕೆ ಹೋಗುವ ಮುನ್ನ ನೇರ ಬೊಮ್ಮಾಯಿ ಕೊಠಡಿಗೆ ಧಾವಿಸಿದ ಯಡಿಯೂರಪ್ಪ ಎರಡು ಸದನಗಳ ಕಾರ್ಯಕಲಾಪ, ಪ್ರತಿಪಕ್ಷ ಪ್ರಸ್ತಾಪಿಸಬಹುದಾದ ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರೆಂದು ಮೂಲಗಳು ಹೇಳಿವೆ. ಸದನದಲ್ಲಿ ಮೂಲ-ವಲಸಿಗ ಎಂಬ ಬೇಧವಿಲ್ಲದೆ ಒಗ್ಗಟ್ಟಿನಿಂದ ಪ್ರತಿಪಕ್ಷಗಳನ್ನು ಎದುರಿಸಲು ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಲಹೆ ನೀಡಿದರೆಂದು ಹೇಳಲಾಗಿದೆ.
ಯಾವುದೇ ಸಚಿವ ಹಾಗೂ ಶಾಸಕರ ವಿರುದ್ಧ ವೈಯಕ್ತಿಕ ಆರೋಪ ಕೇಳಿಬಂದರೂ ಸಮರ್ಥನೆ ನೀಡಲು ಎಲ್ಲರಿಗೂ ಸೂಚಿಸಬೇಕು ಎಂದು ಬೊಮ್ಮಾಯಿ ಅವರಿಗೆ ಬಿಎಸ್​ವೈ ಅವರು ಸಚಿವ ಬಸವರಾಜು ಪ್ರಕರಣದಲ್ಲಿ ಸಲಹೆ ನೀಡಿದ್ದಾರೆ. ಈ ಗುಪ್ತ ಮಾತುಕತೆಗೆ ಮುನ್ನ ಬೇರೊಂದು ಸ್ಥಳದಲ್ಲಿ ಬಿಎಸ್​ವೈ ಅವರನ್ನು ಸಚಿವರಾದ ಬೈರತಿ ಬಸವರಾಜ ಹಾಗೂ ಮುನಿರತ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
ನಂತರವೇ ಬೊಮ್ಮಾಯಿ ಅವರ ಕೊಠಡಿಯಲ್ಲಿ ಬಿಎಸ್​ವೈ ಮಾತುಕತೆ ನಡೆಸಿ, ಎಲ್ಲರೂ ಸೇರಿಕೊಂಡು ಸದನ ಎದುರಿಸಲು ಸಚಿವ- ಶಾಸಕರಿಗೆ ಸೂಚಿಸಬೇಕು ಎಂದು ಸಲಹೆ ನೀಡಿದ್ದಾರೆ. ಹಲವು ಸಚಿವರು ಹಾಗೂ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಶಾಸಕರಲ್ಲಿರುವ ಅಸಮಾಧಾನದ ವಿಷಯವು ಇದೇ ವೇಳೆ ಚರ್ಚೆಯಾಯಿತು ಎಂದು ಮೂಲಗಳು ತಿಳಿಸಿವೆ.
ಅಜ್ಜಿಯೊಂದಿಗೆ ಫ್ಲ್ಯಾಟ್​ ನೋಡಲು ಹೋಗಿದ್ದ 2 ವರ್ಷದ ಬಾಲಕ ಐದನೇ ಮಹಡಿಯಿಂದ ಬಿದ್ದು ಸಾವು!

ಅಂದು ನಿಧಿ ಸುಬ್ಬಯ್ಯ, ಇಂದು ಆವಂತಿಕಾ ಶೆಟ್ಟಿ; ಇಬ್ಬರದ್ದೂ ಬಹುತೇಕ ಒಂದೇ ಥರ ಬೇಸರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
