|ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಮಕ್ಕಳು ಹಾಗೂ ಪಾಲಕರ ಮಿಲನದ ಭಾವುಕ ಕ್ಷಣಕ್ಕೆ ಭಾನುವಾರ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಾಕ್ಷಿಯಾಯಿತು. ಯೂಕ್ರೇನ್​ನಲ್ಲಿದ್ದ ಕರ್ನಾಟಕದ 30 ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದು, ಅದರಲ್ಲಿ 12 ವಿದ್ಯಾರ್ಥಿಗಳು ಭಾನುವಾರ ಬೆಳಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಯೂಕ್ರೇನ್ ರಣಾಂಗಣದಲ್ಲಿ ಮಕ್ಕಳು ಜೀವಂತವಾಗಿ ಉಳಿಯುತ್ತಾರೋ ಇಲ್ಲವೋ ಎಂಬ ಆತಂಕಕ್ಕೀಡಾಗಿದ್ದ ಪಾಲಕರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ಮಕ್ಕಳನ್ನು ಕಣ್ಣೆದುರು ಕಂಡು ಕಣ್ಣಾಲಿಗಳು ತೇವಗೊಂಡವು. ಬಂದೊಡನೆ ತಬ್ಬಿಕೊಂಡ ದೃಶ್ಯ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಜನರನ್ನು ಕೆಲಕಾಲ ಮೂಕರನ್ನಾಗಿಸಿತು. ಪಾಲಕರನ್ನು ಕಂಡು ಉಕ್ಕಿಬರುತ್ತಿದ್ದ ಆನಂದಬಾಷ್ಪವನ್ನು ತೋರಿಸಿಕೊಳ್ಳದೆ ಕೆಲಕಾಲ ಮೌನವಾಗಿದ್ದ ಮಕ್ಕಳು ಸಂತಸದ ನಗೆ ಬೀರಿದರು.
ಮಕ್ಕಳು ನಮ್ಮ ಮನೆಗೆ ಬಂದರು:ನಮ್ಮ ಮಕ್ಕಳು ನಮ್ಮ ಮನೆಗೆ ಬಂದಿದ್ದಾರೆ, ಇದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ. ಹಂತ-ಹಂತವಾಗಿ ಯೂಕ್ರೇನ್​ನಲ್ಲಿರುವ ಎಲ್ಲ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು, ಯಾರೂ ಆತಂಕಪಡಬೇಕಿಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇದಕ್ಕೆ ಬದ್ಧವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಮೊದಲ ತಂಡವಾಗಿ 12 ವಿದ್ಯಾರ್ಥಿಗಳನ್ನು ಮುಂಬೈ ವಿಮಾನ ನಿಲ್ದಾಣದಿಂದ ಕರೆತರಲಾಗಿದೆ. ದೇಶಕ್ಕೆ ಬಂದಿಳಿಯುವ ರಾಜ್ಯದವರನ್ನು ಆಯಾ ವಿಮಾನ ನಿಲ್ದಾಣಗಳಿಂದ ಸರ್ಕಾರದ ವತಿಯಿಂದ ಉಚಿತ ಟಿಕೆಟ್ ಕೊಡಿಸಿ ಕರೆತರಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯಕ್ಕೆ ಮರಳಿದ 30 ವಿದ್ಯಾರ್ಥಿಗಳು:ರಷ್ಯಾ ಆಕ್ರಮಣದಿಂದ ತತ್ತರಿಸಿರುವ ಯುದ್ಧಪೀಡಿತ ಯೂಕ್ರೇನ್​ನಲ್ಲಿ ಸಿಲುಕಿದ್ದ 30 ಮಂದಿ ಕರ್ನಾಟಕದ ವಿದ್ಯಾರ್ಥಿಗಳು ರಾಜ್ಯಕ್ಕೆ ಸುರಕ್ಷಿತವಾಗಿ ಮರಳುತ್ತಿದ್ದು, ಇನ್ನೂ ಹಲವು ವಿದ್ಯಾರ್ಥಿಗಳನ್ನು ಹಂತ-ಹಂತವಾಗಿ ಏರ್​ಲಿಫ್ಟ್ ಮಾಡಲಾಗುತ್ತಿದೆ. ವಿದ್ಯಾಭ್ಯಾಸ ಕ್ಕೆಂದು ಯೂಕ್ರೇನ್​ಗೆ ತೆರಳಿದ್ದ ಕರ್ನಾಟಕ ವಿದ್ಯಾರ್ಥಿಗಳ ಪೈಕಿ ಮೊದಲನೇ ಬ್ಯಾಚ್​ನಲ್ಲಿ 12 ಮಂದಿ ಭಾನುವಾರ ಬೆಳಗ್ಗೆ ಕೆಐಎ ವಿಮಾನ ನಿಲ್ದಾಣಕ್ಕೆ ಬಂದಿಳಿದರೆ, 2ನೇ ಬ್ಯಾಚ್​ನಲ್ಲಿ 5 ಮಂದಿ ರಾತ್ರಿ 8.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಉಳಿದ 13 ಮಂದಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ 10.50ಕ್ಕೆ ಹೊರಟು ತಡರಾತ್ರಿ 1.30ಕ್ಕೆ ಬೆಂಗಳೂರು ತಲುಪಲಿದ್ದಾರೆ. ಯೂಕ್ರೇನ್​ನಲ್ಲಿ ಸಿಲುಕಿದ್ದ ರಾಜ್ಯದ 30 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಏರ್​ಲಿಫ್ಟ್ ಮೂಲಕ ದೇಶಕ್ಕೆ ಕರೆತರಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕದ ಹಲವು ವಿದ್ಯಾರ್ಥಿಗಳು ಇನ್ನೂ ಯೂಕ್ರೇನ್​ನಲ್ಲಿ ಸಿಲುಕಿಕೊಂಡಿದ್ದು, ಹಂತ – ಹಂತವಾಗಿ ಏರ್​ಲಿಫ್ಟ್ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ಕರೆತರಲಾಗುತ್ತಿದೆ. ಅಲ್ಲಿಂದ ವಿದ್ಯಾರ್ಥಿಗಳನ್ನು ದೆಹಲಿಯ ಕರ್ನಾಟಕ ಭವನಕ್ಕೆ ಕರೆದೊಯ್ದು ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ದೆಹಲಿಯಿಂದ- ಬೆಂಗಳೂರಿಗೆ ವಿಮಾನದ ಟಿಕೆಟ್ ಕಾಯ್ದಿರಿಸಿ ಹಂತ-ಹಂತವಾಗಿ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಕಳುಹಿಸಲಾಗುತ್ತಿದೆ.
ತಾಯ್ನಾಡು ಸ್ಪರ್ಶಿಸಿದ ವಿದ್ಯಾರ್ಥಿಗಳು:ಯೂಕ್ರೇನ್​ನ ಪಶ್ಚಿಮ ಭಾಗದ ಚರ್ನೆವೆಸ್ಟ್ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ರಾಜ್ಯದ 12 ವಿದ್ಯಾರ್ಥಿಗಳ ಮೊದಲ ತಂಡವನ್ನು ಹೊತ್ತ ವಿಮಾನ ಭಾನುವಾರ ಮುಂಜಾನೆ 8.45 ಕ್ಕೆ ಅಂತಾರಾಷ್ಟ್ರೀಯ ವಿಮಾನಕ್ಕೆ ಬಂದಿಳಿಯಿತು. ಮಕ್ಕಳ ಸ್ವಾಗತಕ್ಕೆ ದಾವಣಗೆರೆ, ಚಿತ್ರದುರ್ಗ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಪಾಲಕರು, ಸ್ನೇಹಿತರು ಹಾಗೂ ಬಂಧುಗಳು ಕಾಯುತ್ತಿದ್ದರು. 9 ಗಂಟೆಗೆ ಕಂದಾಯ ಸಚಿವ ಆರ್. ಅಶೋಕ್ ವಿದ್ಯಾರ್ಥಿಗಳ ತಂಡವನ್ನು ಕರೆತಂದು ಪಾಲಕರಿಗೊಪ್ಪಿಸಿದರು. ಆ ವೇಳೆ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಅವರೂ ಜತೆಗಿದ್ದರು. ಪಾಲಕರನ್ನು ಎದುರುಗೊಳ್ಳುವ ಮುನ್ನ ಎಲ್ಲರೂ ರಾಷ್ಟ್ರ ಧ್ವಜ ಪ್ರದರ್ಶಿಸಿ ಭಾರತಾಂಬೆಗೆ ಜೈಕಾರ ಹಾಕಿದರು.
406 ಮಂದಿಯ ಹೆಸರು ನೋಂದಣಿ:ಯೂಕ್ರೇನ್​ನಲ್ಲಿ ಸಿಲುಕಿರುವ ಕರ್ನಾಟಕದ 406 ಮಂದಿ ಸಹಾಯವಾಣಿಗೆ ಕರೆಮಾಡಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ ಬೆಂಗಳೂರು ನಗರದವರು 135 ಮಂದಿಯಿದ್ದರೆ, ದ.ಕನ್ನಡ, ವಿಜಾಪುರ, ಬೆಂ.ಗ್ರಾಮಾಂತರ ತಲಾ 18, ಮೈಸೂರು 28, ಬಾಗಲಕೋಟೆ 23, ತುಮಕೂರು17, ರಾಯಚೂರು15, ಕೊಡಗು, ಹಾಸನ ತಲಾ 12, ಹಾವೇರಿ 10, ಕೋಲಾರ, ದಾವಣಗೆರೆ ತಲಾ 9, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ತಲಾ 8, ಉಡುಪಿ 7, ಬಿದರ್, ಬಳ್ಳಾರಿ ತಲಾ 6, ಶಿವಮುಗ್ಗ, ಕಲ್ಬುರ್ಗಿ, ಧಾರವಾಢ, ಚಿತ್ರದುರ್ಗ, ಚಾಮರಾಜನಗರ ತಲಾ 4, ಮಂಡ್ಯ, ಕೊಪ್ಪಳ ತಲಾ3, ರಾಮನಗರ, ಉತ್ತರ ಕನ್ನಡ, ಗದಗದ ತಲಾ 2 ಮಂದಿ ಹೆಸರನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ.
ಭಾರತ ಮಾತೆಗೆ ಜೈಕಾರ ಹಾಕಿ ಸಂಭ್ರಮಿಸಿದ ವಿದ್ಯಾರ್ಥಿಗಳು:ನಾವು ಕನ್ನಡಿಗರು ಎನ್ನುವುದಕ್ಕಿಂತ ನಾವೆಲ್ಲ ಭಾರತೀಯರು ಎನ್ನಲು ಹೆಮ್ಮೆ ಎನಿಸುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವಿನಿಂದ ನಾವು ಸುರಕ್ಷಿತವಾಗಿ ಬಂದಿದ್ದೇವೆ. ನಮ್ಮಂತೆ ಮಿಕ್ಕ ಎಲ್ಲರೂ ಸುರಕ್ಷಿತವಾಗಿ ಬರಬೇಕೆಂಬುದು ನನ್ನ ಪ್ರಾರ್ಥನೆ. ನಮ್ಮ ದೇಶದ ಬಗ್ಗೆ ನಂಬಿಕೆ ಇತ್ತು. ಆದ್ದರಿಂದ ನಾವು ಸೇಫ್.
|ಇಂಚರ ವಿದ್ಯಾರ್ಥಿನಿಕನಕಪುರ
ಆತಂಕದ ನಡುವೆ ಸತತ 28 ತಾಸು ಪ್ರಯಾಣ!:ಯೂಕ್ರೇನ್​ನಲ್ಲಿರುವ ವೈದ್ಯಕೀಯ ವಿದ್ಯಾರ್ಥಿನಿ ಚಿತ್ರದುರ್ಗದ ಟಿ.ಸುನೇಹಾ ತನ್ನ ಸಹಪಾಠಿ ರಚನಾ ಅವರೊಂದಿಗೆ ಭಾನುವಾರ ಬೆಳಗಿನ ಜಾವ 3 ಗಂಟೆಯ ಹೊತ್ತಿಗೆ ಹಂಗೇರಿ ಗಡಿ ತಲುಪಿದ್ದಾರೆ. ಭಾರತಕ್ಕೆ ಹಿಂತಿರುಗಲು ಸಾಧ್ಯವಾಗದೇ ಕಿಯೆವ್ ವಿಮಾನ ನಿಲ್ದಾಣದಿಂದ 80 ಕಿ.ಮೀ. ದೂರದ ನಗರವೊಂದರಲ್ಲಿ ಪರಿಚಯಸ್ಥರ ಮನೆಯಲ್ಲಿ ಆಶ್ರಯ ಪಡೆದಿದ್ದ ಸುನೇಹಾ, ಶುಕ್ರವಾರ ರಾತ್ರಿ 9 ಗಂಟೆಗೆ ಕಾರಿನಲ್ಲಿ ಸತತ 28 ತಾಸು, 1000 ಕ್ಕೂ ಹೆಚ್ಚು ಕಿ.ಮೀ. ದೂರ ಪ್ರಯಾಣಿಸಿ ಹಂಗೇರಿ ಗಡಿ ತಲುಪಿದ್ದಾರೆ.
ಯುದ್ದದ ಮುನ್ಸೂಚನೆ ಇದ್ದರೂ ಯೂಕ್ರೇನ್ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಆಗಲೇ ನಮ್ಮ ಮಕ್ಕಳನ್ನು ಕಳುಹಿಸಿಕೊಡಬಹುದಿತ್ತು. ಈಗ ನೋಡಿ ಪರಿಸ್ಥಿತಿ ಹೇಗಿದೆ. ನನ್ನ ಮಗ ಇನ್ನೂ ಬಂದಿಲ್ಲ, ಯಾವಾಗ ಬರುತ್ತಾನೆ ಎಂಬ ಮಾಹಿತಿಯೂ ಇಲ್ಲ. ಇಲ್ಲಿ ನಾವು ಹೇಗೆ ಇರೋದು. ನನ್ನ ಮಗ ಬಂದಿಲ್ಲ. ಆದರೂ ಬಂದಿರುವ ಇನ್ನಿತರ ಮಕ್ಕಳನ್ನು ಕಾಣಲು ಬಂದಿದ್ದೇವೆ.
| ಚೌಡಯ್ಯ ಶೀಲಾದಂಪತಿ
ಮೀನುಗಾರಿಕೆ ನಡೆಸುತ್ತಿದವರ ಮೇಲೆ ಸಮುದ್ರದ ಮಧ್ಯೆ ನೌಕಾದಳ ಸಿಬ್ಬಂದಿ ಹಲ್ಲೆ..?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − three =
Remember me
