ಬೆಂಗಳೂರು:ಮತ್ತೆ ಭುಗಿಲೆದ್ದಿರುವ ಕಾವೇರಿ ವಿವಾದ ವಿಚಾರದಲ್ಲಿ ಮೇಲುಗೈ ಸಾಧಿಸಲು ಸಂಕಷ್ಟ ಪರಿಹಾರ ಸೂತ್ರ, ಸಮರ್ಥ ಕಾನೂನು ಸಮರ ನಡೆಸಲು ಸರ್ವಪಕ್ಷ ಸಭೆ ಒತ್ತು ನೀಡಿ, ಸರ್ಕಾರಕ್ಕೆ ಸಹಕಾರದ ಧೈರ್ಯ ತುಂಬಿದೆ.
ಕಾವೇರಿ, ಮೇಕೆದಾಟು ಮತ್ತು ಮಹದಾಯಿ ಜಲ ವಿವಾದಗಳ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಸರ್ವಪಕ್ಷ ಸಭೆ ನಡೆಯಿತು.
ಆರಂಭದಲ್ಲಿ ಸರ್ಕಾರ ಪ್ರಸ್ತಾವನೆ ಹಾಗೂ ವಸ್ತುಸ್ಥಿತಿ ಮುಂದಿಟ್ಟರೆ, ತಮಿಳುನಾಡಿಗೆ ದೊಡ್ಡ ಪ್ರಮಾಣದಲ್ಲಿ ನೀರು ಹರಿಸಿದ್ದಕ್ಕೆ ಪ್ರತಿಪಕ್ಷಗಳ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಈ ವಿಷಯದಲ್ಲಿ ಸರ್ಕಾರ ವಿಳಂಬ ನಿಲುವು ಹಾಗೂ ಎಡವಿತೆಂದೇ ತಿವಿದರು. ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನೀರಾವರಿ ಸಭೆಯನ್ನೇ ಕರೆದಿಲ್ಲ. ಐಸಿಸಿ ಸಭೆಯಲ್ಲಿ ಕರ್ನಾಟಕದ ರೈತರಿಗೆ ರಾಗಿ ಬೆಳೆಯಿರಿ, ಹುರುಳಿ ಬೆಳೆಯಿರಿ ಎಂದು ಹೇಳಿ ತಮಿಳುನಾಡು ರೈತರಿಗೆ ನೀರು ಕೊಟ್ಟಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.
ಪ್ರತಿಯಾಗಿ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡು ರಾಜ್ಯದ ಹಿತ ಕಾಪಾಡುವಲ್ಲಿ ಯಾವುದೇ ರಾಜೀ ಇಲ್ಲ ಎಂದು ಸ್ಪಷ್ಟಪಡಿಸಿತು. ಜತೆಗೆ ಪ್ರಧಾನಿ ನರೇಂದ್ರ ಮೋದಿ ಬಳಿಗೆ ನಿಯೋಗ ಹೋಗೋಣ ಎಂದು ಸರ್ಕಾರ ಪ್ರಸ್ತಾಪಿಸಿದೆ. ಇದಕ್ಕೆ ಪ್ರತಿಪಕ್ಷ ನಾಯಕರು ಪ್ರತಿಕ್ರಿಯಿಸಿಲ್ಲ, ಎರಡು ಕೋರಿಕೆಗಳು ನ್ಯಾಯಾಲಯದಲ್ಲಿರುವಾಗ ಪ್ರಧಾನಿ ಮಧ್ಯ ಪ್ರವೇಶ ಹೇಗೆ ಎಂಬುದು ಬಿಜೆಪಿ ನಾಯಕರ ವಾದವಾಗಿದೆ.
ಈ ವೇಳೆ ನಾಡು, ನುಡಿ, ನೀರಿನ ವಿಷಯದಲ್ಲಿ ಜನರ ಹಿತ ಕಾಪಾಡುವ ಸರ್ಕಾರದ ಕ್ರಮಗಳಿಗೆ ನಾವು ಬೆನ್ನಿಗೆ ನಿಲ್ಲುವುದಾಗಿ ಪ್ರತಿಪಕ್ಷದ ಪ್ರಮುಖ ನಾಯಕರು ಅಭಯ ನೀಡಿದರು. ಜತೆಗೆ ತಮ್ಮ ಅನುಭವಗಳನ್ನು ಹಂಚಿಕೊಂಡು ಸರ್ಕಾರ ಮುಂದೆ ಯಾವ ರೀತಿ ಹೆಜ್ಜೆ ಇಟ್ಟರೆ ಅನುಕೂಲ ಎಂದು ಸಲಹೆ ನೀಡಿದರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದ ಗೌಡ, ವೀರಪ್ಪ ಮೊಯ್ಲಿ, ಜಗದೀಶ್ ಶೆಟ್ಟರ್ ಅವರು ಸರ್ಕಾರಕ್ಕೆ ಮಾರ್ಗದರ್ಶನ ಮಾಡಿದ್ದು ವಿಶೇಷವಾಗಿತ್ತು. ಸಂಸದರಾದ ಸುಮಲತಾ, ಜಗ್ಗೇಶ್, ಮುನಿಸ್ವಾಮಿ, ಜಿ.ಎಂ. ಸಿದ್ದೇಶ್ವರ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ತೇಜಸ್ವಿ ಸೂರ್ಯ, ಡಿ.ಕೆ ಸುರೇಶ್ ಮೊದಲಾದವರು ರಾಜ್ಯದ ಕಾನೂನು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಸಂಕಷ್ಟ ಸೂತ್ರಕ್ಕೆ ಒತ್ತಾಸೆ:ಕಾವೇರಿ ನೀರು ಹಂಚಿಕೆಗೆ ನ್ಯಾಯಪೀಠ ಸೂಚಿಸಿದೆ, ನಿರ್ವಹಣೆಗೆ ಸಮಿತಿ ಇದೆ. ಆದರೆ, ಮಳೆ ಕೊರತೆಯಾಗಿ ಸಂಕಷ್ಟ ಪರಿಸ್ಥಿತಿ ಎದಯರಾದರಲ ಯಾವ ರಿಯಿತಿ ನಿವ್ವಹಣಲ ಮಾಡಬೇಕೆಂಬ ಬಗ್ಗೆ ಸೂತ್ರ ಇಲ್ಲವಾಗಿದೆ. ಈ ಸೂತ್ರ ಮೊದಲು ಅಳವಡಿಕೆಯಾಗಲಿ ಎಂಬುದು ಸಭೆಯಲ್ಲಿ ಬಹು ಮಂದಿಯ ಆಶಯವಾಗಿತ್ತು. ನ್ಯಾಯಾಲಯದಲ್ಲೂ ಈ ಅಂಶ ಪ್ರಸ್ತಾಪಿಸಲು ಪ್ರಾಧಾನ್ಯತೆ ನೀಡಬೇಕೆಂದು ಒತ್ತಾಯಿಸಿದರು.
2. ಕರ್ನಾಟಕ ಮತ್ತು ಕೇರಳದ ಕಾವೇರಿ ಕಣಿವೆಯ ಪ್ರದೇಶದಲ್ಲಿ ನೈಋತ್ಯ ಮಾನ್ಸೂನ್ ವೈಫಲ್ಯದಿಂದಾಗಿ 2023-24ರ ಜಲ ವರ್ಷವು ಸಂಕಷ್ಟದ ವರ್ಷವಾಗಿದೆ
3. ಕಾವೇರಿ ನೀರು ನಿಯಂತ್ರಣ ಸಮಿತಿಯು ಸಭೆಯಲ್ಲಿ ಜೂನ್​ವರೆಗಿನ ಮಳೆಯ ಕೊರತೆಯನ್ನು ಮಾತ್ರ ಗಮನಿಸಿದೆ.
4. ಸಮಿತಿಯು ಆಗಸ್ಟ್ 10 ರಂದು 15,000 ಕ್ಯೂಸೆಕ್ ನೀರು ಬಿಡಲು ಸೂಚಿಸಿತು. ಇದನ್ನು ರಾಜ್ಯ ಬಲವಾಗಿ ವಿರೋಧಿಸಿದ್ದು, ನೀರಿನ ಪ್ರಮಾಣ 10,000 ಕ್ಯೂಸೆಕ್​ಗೆ ಇಳಿಕೆ ಮಾಡಿತು.
5. ರಾಜ್ಯವನ್ನು ಪ್ರತಿನಿಧಿಸುವ ಅಧಿಕಾರಿ ಮತ್ತು ವಕೀಲರ ತಂಡ ವಾಸ್ತವ ಸ್ಥಿತಿಯನ್ನು ಸಮರ್ಥವಾಗಿ ಪ್ರಾಧಿಕಾರದ ಮುಂದೆ, ನಿಯಂತ್ರಣ ಸಮಿತಿ ಮುಂದೆ ಮಂಡಿಸಿದೆ.
6. ನಾವು ಸಮರ್ಥ ವಾದ ಮಂಡಿಸಿದ್ದರಿಂದಲೇ ತಮಿಳುನಾಡಿನ ಬೇಡಿಕೆಗಿಂತ ಕಡಿಮೆ ನೀರು ಬಿಡಲು ಆದೇಶವಾಯಿತು. ಇಲ್ಲವಾಗಿದ್ದರೆ ಆದೇಶದಲ್ಲಿನ ನೀರಿನ ಪ್ರಮಾಣ ಇನ್ನೂ ಹೆಚ್ಚಿರುತ್ತಿತ್ತು.
ನಾಡಿನ ರೈತರ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ರಾಜಕೀಯವೂ ಇಲ್ಲ. ರಾಜಿಯೂ ಇಲ್ಲ. ಐದಾರು ವರ್ಷಗಳಿಗೊಮ್ಮೆ ಮಳೆಯ ಕೊರತೆಯಿಂದಾಗಿ ತಮಿಳು ನಾಡಿಗೆ ಕಾವೇರಿ ನೀರು ಬಿಡಲು ಸಂಕಷ್ಟ ಎದುರಾಗುತ್ತದೆ.
| ಸಿದ್ದರಾಮಯ್ಯ, ಮುಖ್ಯಮಂತ್ರಿ
ತಮಿಳುನಾಡಿಗೆ ನೀರನ್ನು ಬಿಟ್ಟು ಇದೀಗ ಸರ್ವ ಪಕ್ಷ ಸಭೆ ಕರೆದಿರುವುದು ಸರಿಯಲ್ಲ. 26ರಂದು ಸುಪ್ರೀಂಕೋರ್ಟ್ ನಲ್ಲಿ ಸಮರ್ಥವಾಗಿ ರಾಜ್ಯದ ಪರವಾಗಿ ವಾದ ಮಂಡನೆ ಮಾಡಬೇಕು. ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲವೆಂದು ಮನದಟ್ಟು ಮಾಡಿಕೊಡಬೇಕು.
| ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ
ಬೆಂಗಳೂರು:ಕೃಷ್ಣಾ ಮೇಲ್ದಂಡೆ ಯೋಜನೆ ಸಂಬಂಧ ಅಧಿಸೂಚನೆ ಆಗಿಲ್ಲ, ಮೇಕೆದಾಟು, ಮಹದಾಯಿ ಸೇರಿ ಎಲ್ಲ ನೀರಾವರಿ ಯೋಜನೆಗಳ ಬಗ್ಗೆ ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವರ ಭೇಟಿ ಮಾಡಿ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಲು ಪ್ರಸ್ತಾಪಿಸಿದ್ದೇವೆ. ಎಲ್ಲ ಜಲ ವಿವಾದಗಳಲ್ಲಿ ಕೇಂದ್ರ ಸರ್ಕಾರವೂ ಪ್ರತಿವಾದಿ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಸರ್ವಪಕ್ಷ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ಯೋಜನೆಗೆ ಅರಣ್ಯ, ಪರಿಸರ ತೀರುವಳಿ ಸಿಕ್ಕಿಲ್ಲ. ಕೃಷ್ಣಾ ಮೇಲ್ದಂಡೆಗೆ ಅಧಿಸೂಚನೆ ಹೊರಡಿಸಬೇಕಿದೆ. ಎಲ್ಲವನ್ನೂ ಕೇಂದ್ರದ ಗಮನಕ್ಕೆ ತರಬೇಕಿದೆ. ಸರ್ವಪಕ್ಷ ನಿಯೋಗ ಒಯ್ಯಲು ರ್ಚಚಿಸಿದ್ದೇವೆ ಎಂದರು. ಕಾವೇರಿ ಜಲವಿವಾದ ಬಗ್ಗೆ, ಮೇಕೆದಾಟು, ಮಹದಾಯಿ ಯೋಜನೆಗಳ ಬಗ್ಗೆ ಒಟ್ಟಾರೆ ಜಲವಿವಾದಗಳ ಬಗ್ಗೆ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ನ್ಯಾಯಾಧಿಕರಣ ಅಥವಾ ಸುಪ್ರಿಂಕೋರ್ಟ್​ನಲ್ಲಿ ಸಂಕಷ್ಟ ಸೂತ್ರ ಆಗಿಲ್ಲ, ಇದಾಗಬೇಕು. ಮೇಕೆದಾಟು ಸಮತೋಲನ ಜಲಾಶಯ ಕಟ್ಟಬೇಕು. ಸಂಕಷ್ಟ ಬಂದಾಗ 67 ಟಿಎಂಸಿ ಮೇಕೆದಾಟುವಿನಲ್ಲಿ ಇರುವುದರಿಂದ ಅವರಿಗೂ ನೀರು ಕೊಡಬಹುದು. ಜಲ ಆಯೋಗ ಹೇಳಿದಂತೆ ಡಿಪಿಆರ್ ಸಲ್ಲಿಸಿದ್ದೇವೆ. 21ರಂದು ನಾಟ್ ಮೇಂಟೇನೇಬಲ್ ಅನ್ನೋದು ನಮ್ ವಾದ ಇತ್ತು. ಹೀಗಾಗಿ ತ್ರಿಸದಸ್ಯ ಪೀಠ ಆಗಿದೆ. ವಾರಾಂತ್ಯದಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ. ಸಮರ್ಥ ವಾದ ಮಾಡಬೇಕು. ಅವರ ಅರ್ಜಿ ವಜಾ ಆಗುವಂತೆ ಮಾಡಬೇಕು. ಕರ್ನಾಟಕದ ಹಿತ ಕಾಪಾಡಲು ಅಗತ್ಯ ಕ್ರಮ ತಗಬೇಕು ಅಂತ ಸೂಚಿಸಿದ್ದೇವೆ ಎಂದು ವಿವರಿಸಿದರು.
ಕಾವೇರಿ ನೀರಿನ ವಿಚಾರವಾಗಿ ನಮ್ಮ ರಾಜ್ಯದ ಹಿತವನ್ನು ಕಾಪಾಡಲು ಕಾಂಗ್ರೆಸ್ ಸರ್ಕಾರ ಸದಾ ಬದ್ಧವಾಗಿದೆ, ಜತೆಗೆ ಸುಪ್ರೀಂಕೋರ್ಟ್ ಏನು ಹೇಳುತ್ತದೆಯೋ ಅದನ್ನು ಗೌರವಿಸುತ್ತೇವೆ. ಪ್ರಸ್ತುತ ಶೇ.40 ನೀರು ಕಡಿಮೆ ಇದೆ. ಒಳಹರಿವು ಸಹ ತೀವ್ರ ಕುಸಿತ ಕಂಡಿದೆ.
| ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ
ಸಭೆಗೆ ಬಾರದ ಸಚಿವರು:ಸರ್ವಪಕ್ಷ ಸಭೆಗೆ ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಯಾವೊಬ್ಬ ಸಚಿವರೂ ಬಂದಿರಲಿಲ್ಲ. ಈ ಹಿಂದೆ ಅನಂತ ಕುಮಾರ್ ಕೇಂದ್ರದ ಸಚಿವರಾಗಿದ್ದಾಗ ರಾಜ್ಯದ ವಿಷಯಗಳ ಸರ್ವಪಕ್ಷ ಸಭೆಯಲ್ಲಿ ಹಾಜರಿದ್ದು ಸಭೆಯ ಮಹತ್ವ ಹೆಚ್ಚಿಸುತ್ತಿದ್ದರು, ಈ ಬಾರಿ ಯಾವುದೇ ಸಚಿವರು ಬರಲಿಲ್ಲ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ನಡೆದಿದೆ.
ಬೆಂಗಳೂರು:ರಾಜ್ಯ, ರೈತರು ಹಾಗೂ ಜಲರಕ್ಷಣೆಗೆ ಬದ್ಧತೆಯನ್ನು ರಾಜ್ಯ ಸರ್ಕಾರ ಸಾರುತ್ತಾ, ಮೂರು ಪ್ರಮುಖ ಜಲ ವಿವಾದಗಳ ವಸ್ತುಸ್ಥಿತಿಯನ್ನು ಸರ್ವಪಕ್ಷಗಳ ಸಭೆ ಮುಂದೆ ಬುಧವಾರ ಮಂಡಿಸಿದೆ. ಕಾವೇರಿ, ಮೇಕೆದಾಟು, ಮಹದಾಯಿ ಹಾಗೂ ಕೃಷ್ಣಾ ಎರಡನೇ ನ್ಯಾಯಾಧಿಕರಣದ ಐತೀರ್ಪಿನ ತಕರಾರುಗಳ ಹಂತ, ಕಾನೂನು ಹೋರಾಟ, ಸರ್ಕಾರದ ಪ್ರಯತ್ನಗಳನ್ನು ವಿವರಿಸಿದೆ.
ಮುಂಗಾರು ಹಂಗಾಮಿನಲ್ಲಿ ಶೇ.42 ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಇದರಿಂದಾಗಿ ತಮಿಳುನಾಡು ಬೇಡಿಕೆಯಂತೆ ನೀರು ಪೂರೈಕೆ ಕಷ್ಟಸಾಧ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ.
ಕಾವೇರಿ ಜಲ ನಿಯಂತ್ರಣ ಸಮಿತಿ ಶಿಫಾರಸು ಪ್ರಕಾರ 12-8-2023ರಿಂದ 15 ದಿನಗಳವರೆಗೆ ಒಟ್ಟಾರೆ 2.25 ಲಕ್ಷ ಕ್ಯೂಸೆಕ್ ನೀರನ್ನು ಬಿಳಿಗುಂಡ್ಲು (ಜಲ ಮಾಪನ ಕೇಂದ್ರ)ನಲ್ಲಿ ಖಚಿತಪಡಿಸಬೇಕಾಗಿತ್ತು. ಆದರೆ ಪ್ರಾಧಿಕಾರದ ಸಭೆಯಲ್ಲಿ ರಾಜ್ಯವು ಬಲವಾದ ಆಕ್ಷೇಪಣೆ ಮಂಡಿಸಿ, ಪರಿಣಾಮಕಾರಿ ವಾದ ಮಾಡಿದೆ. ಹೀಗಾಗಿ ಹರಿಸಬೇಕಾದ ನೀರಿನ ಪ್ರಮಾಣದಲ್ಲಿ 75 ಸಾವಿರ ಕ್ಯೂಸೆಕ್ ನಷ್ಟು ಪ್ರಾಧಿಕಾರ ಕಡಿಮೆ ಮಾಡಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಬಿಳಿಗುಂಡ್ಲುವಿನಲ್ಲಿ 15 ದಿನಗಳವರೆಗೆ 10 ಸಾವಿರ ಕ್ಯೂಸೆಕ್​ನಂತೆ ನೀರಿನ ಪ್ರಮಾಣ ಖಚಿತಪಡಿಸಲು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಆ.11ರಂದು ನಿರ್ದೇಶಿಸಿದ್ದು, ಇದನ್ನು ಪುನರ್ ಪರಿಶೀಲಿಸಲು ರಾಜ್ಯ ಸರ್ಕಾರ ವಿನಂತಿಸಿದೆ ಎಂಬ ಮಾಹಿತಿ ಹಂಚಿಕೊಂಡಿದೆ.
ಕಾವೇರಿ ನ್ಯಾಯಾಧಿಕರಣ, ಸುಪ್ರೀಂ ಕೋರ್ಟ್ ಪರಿಷ್ಕೃತ ತೀರ್ಪಿನ ಪ್ರಕಾರ ಸಾಮಾನ್ಯ ವರ್ಷಗಳಲ್ಲಿ ಪ್ರತಿ ತಿಂಗಳು ನೀರು ಪೂರೈಕೆ ಪ್ರಮಾಣವನ್ನು ನಿಗದಿಪಡಿಸಿದೆ. ಜೂನ್​ನಲ್ಲಿ 9.19 ಟಿಎಂಸಿ, ಜುಲೈನಲ್ಲಿ 31.24, ಆಗಸ್ಟ್​ನಲ್ಲಿ 45.95 ಟಿಎಂಸಿ ನೀರಿನ ಪ್ರಮಾಣವನ್ನು ಬಿಳಿಗುಂಡ್ಲುವಿನಲ್ಲಿ ಖಚಿತಪಡಿಸಬೇಕಾಗಿದೆ. ಜೂನ್​ನಲ್ಲಿ 2.833 ಟಿಎಂಸಿ, ಜುಲೈನಲ್ಲಿ 8.748, ಆಗಸ್ಟ್ 20ರವರೆಗೆ 12.475 ಟಿಎಂಸಿ ನೀರು ಖಚಿತಪಡಿಸಿದೆ.
ಮೇಕೆದಾಟು ಪರ ಪ್ರತಿಪಾದನೆ:ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣ ಯೋಜನೆಯು ಸಂಕಷ್ಟ ಕಾಲದಲ್ಲಿ ತಮಿಳುನಾಡಿಗೆ ಪರಿಹಾರ, 400 ಮೆಗಾ ವಾಟ್ ವಿದ್ಯುತ್ ಉತ್ಪಾದನೆ, ಬೆಂಗಳೂರಿಗೆ 4.75 ಟಿಎಂಸಿ ನೀರು, ಮಾಸಿಕವಾರು ನೀರು ನಿಯಂತ್ರಣ ಉದ್ದೇಶವಿದೆ. ಕೇಂದ್ರ ಜಲ ಆಯೋಗದ ಅನುಮತಿ ದೊರೆತ ನಂತರ 9 ಸಾವಿರ ಕೋಟಿ ರೂ. ಅಂದಾಜಿನ ವಿಸõತ ಯೋಜನಾ ವರದಿ ಸಲ್ಲಿಕೆಯಾಗಿದೆ. ಈ ವಿಷಯದಲ್ಲೂ ತಮಿಳುನಾಡು ತಕರಾರು ತೆಗೆದು ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಮೇಕೆದಾಟು ಯೋಜನೆ ವಿಷಯ ರ್ಚಚಿಸಬಹುದು, ಅಭಿಪ್ರಾಯನೀಡಬಹುದು ಎಂದು ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಅಭಿಪ್ರಾಯ ನೀಡಿದ್ದಾರೆ. ಆದರೂ ತಮಿಳುನಾಡು ತಗಾದೆಯಿಂದಾಗಿ ಪ್ರಾಧಿಕಾರ ಸಭೆಯಲ್ಲಿ ಈ ವಿಷಯದ ಚರ್ಚೆ ಮುಂದೂಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅಫಿಡವಿಟ್ ಸಲ್ಲಿಸಿ, ರಾಜ್ಯದೊಳಗೆ ಮೇಕೆದಾಟು ಯೋಜನೆ ಮೇಲೆ ತಮಿಳುನಾಡಿಗೆ ಯಾವುದೇ ಹಕ್ಕಿಲ್ಲವೆಂದು ಪ್ರತಿಪಾದಿಸಿದೆ.
ಡಿಪಿಆರ್ ತಯಾರಿಕೆಗೆ ಸಂಬಂಧಿಸಿದ ನಂತರದ ಘಟನೆಗಳ ದಾಖಲೆಗಳ ಕುರಿತು ಮತ್ತೊಂದು ಅಫಿಡವಿಟ್ ಸಲ್ಲಿಸಲಾಗಿದೆ. ಮಧ್ಯಂತರ ಅರ್ಜಿಗಳಿಗೆ ಪ್ರತ್ಯುತ್ತರವಾಗಿ 2022ರ ಜು.19ರಂದು ಪೂರಕ ಅಫಿಡವಿಟ್ ಅನ್ನು ಸವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿದೆ. ಅಲ್ಲದೆ, ಈ ಪ್ರಕರಣದ ಶೀಘ್ರ ವಿಚಾರಣೆಗಾಗಿ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್​ಗೆ ಕೋರಬೇಕು ಎಂದು 2023ರ ಜು.3ರಂದು ನಡೆದ ಸಭೆ ಅಧ್ಯಕ್ಷತೆವಹಿಸಿದ್ದ ಸಿಎಂ ಸೂಚಿಸಿದ್ದಾರೆ.
ಕೇಂದ್ರ ಇಲಾಖೆ ತೀರುವಳಿ ಬಾಕಿ:ಮಹದಾಯಿ ಕಣಿವೆಯಡಿ ಬರುವ ಕಳಸಾ-ಬಂಡೂರಿ ತಿರುವು ನಾಲಾ ಯೋಜನೆಗಳು ಹುಬ್ಬಳ್ಳಿ- ಧಾರವಾಡ ನಗರಗಳು, ಕುಂದಗೋಳ ಪಟ್ಟಣ, ಮಾರ್ಗಮಧ್ಯದ ಗ್ರಾಮಗಳ ಕುಡಿಯುವ ನೀರಿನ ಬೇಡಿಕೆ ಸರಿದೂಗಿಸುವುದಾಗಿದೆ. ಮಹದಾಯಿ ಜಲವಿವಾದ ನ್ಯಾಯಾಧಿಕರಣದ ಅಂತಿಮ ಆದೇಶದಂತೆ ರಾಜ್ಯಕ್ಕೆ 13.42 ಟಿಎಂಸಿ ನೀರು ಹಂಚಿಕೆಯಾಗಿದೆ. ಈ ಪೈಕಿ ಕಳಸಾ ನಾಲಾ 1.72, ಬಂಡೂರಿ ನಾಲಾದಿಂದ 2.18 ಟಿಎಂಸಿ ಕುಡಿಯುವುದಕ್ಕೆ ಬಳಸಲು ಉದ್ದೇಶಿಸಿದೆ. ನ್ಯಾಯಾಧಿಕರಣದ ನಿರ್ದೇಶನದಂತೆ ಪ್ರಸ್ಥಾಪಿತ ಯೋಜನೆಗಳ ವಿಸõತ ಯೋಜನಾ ವರದಿಗೆ ತೀರುವಳಿ ಪಡೆಯುವ ಪ್ರಯತ್ನ ಪ್ರಗತಿಯಲ್ಲಿದೆ. ಕೇಂದ್ರ ಜಲ ಆಯೋಗವು ಪರಿಷ್ಕೃತ ಯೋಜನಾ ವರದಿಗಳಿಗೆ ತೀರುವಳಿ ನೀಡಿದ್ದು, ನ್ಯಾಯಾಧಿಕರಣದ ತೀರ್ಪು ಅಧಿಸೂಚನೆ ಹೊರಬಿದ್ದಿದೆ. ಕಳಸಾ ನಾಲಾ 995.30 ಕೋಟಿ ರೂ., ಬಂಡೂರಿ ನಾಲಾ 764.70 ಕೋಟಿ ರೂ. ಅಂದಾಜು ಗಾತ್ರ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಳಸಾ ನಾಲಾ ಯೋಜನೆಯಡಿ 26.922 ಹೆಕ್ಟೇರ್, ಬಂಡೂರ ನಾಲಾ ಯೋಜನೆಗೆ 22.50 ಹೆಕ್ಟೇರ್ ಅರಣ್ಯ ಪ್ರದೇಶದ ತೀರುವಳಿ ಬೇಕಿದೆ. ಕೇಂದ್ರ ಅರಣ್ಯ, ಪರಿಸರ ಇಲಾಖೆ ಮುಂದೆ ಪ್ರಸ್ತಾವನೆ ಅನುಮೋದನೆಗೆ ಕಾದು ಕುಳಿತಿದೆ.
ಒಂದೇ ಒಂದು ಲೈವ್​; ಚಂದ್ರನಲ್ಲಿಗೆ ಜಿಗಿಯಿತು ‘ಇಸ್ರೋ’ ಸಬ್​ಸ್ಕ್ರೈಬರ್ಸ್​ ಸಂಖ್ಯೆ

ಯಶಸ್ವಿಯಾದ ಚಂದ್ರಯಾನ-3 ಲ್ಯಾಂಡರ್; ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶ ಭಾರತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 6 =
Remember me
