ನವದೆಹಲಿ:ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ತಿಹಾರ್ ಜೈಲಿನಿಂದ ಮಧ್ಯಂತರ ಜಾಮೀನಿನ ಮೇರೆಗೆ ಹೊರಬಂದು ಎರಡು ದಿನ ಕಳೆಯುವಷ್ಟರಲ್ಲಿ ಹತ್ತು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಮಾತ್ರವಲ್ಲ, ‘ಕೇಜ್ರಿವಾಲ್ ಗ್ಯಾರಂಟಿಯೋ-ಮೋದಿ ಗ್ಯಾರಂಟಿಯೋ.. ಆಯ್ಕೆ ನಿಮ್ಮದು’ ಎಂದು ಜನರ ಮುಂದಿಟ್ಟಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣಾ ಪ್ರಚಾರ ಗ್ಯಾರಂಟಿ ಸಂಘರ್ಷವಾಗಿ ಮುಂದುವರಿದಿದೆ. ಕೆಲವು ದಿನಗಳ ಹಿಂದೆ ರ್ಯಾಲಿಯಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ, ‘ಮೋದಿ ಗ್ಯಾರಂಟಿಯೋ-ಚೀನೀ ಗ್ಯಾರಂಟಿಯೋ?’ ಎಂಬ ಆಯ್ಕೆಯನ್ನು ಜನರ ಮುಂದಿಟ್ಟಿದ್ದರು.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಭಾನುವಾರ ಆಪ್ ಪಕ್ಷದ ಹತ್ತು ಭರವಸೆಗಳನ್ನು ಘೋಷಿಸಿದ್ದು, ಬಿಜೆಪಿ ಯಾವಾಗಲೂ ಗ್ಯಾರಂಟಿ ಈಡೇರಿಸುವಲ್ಲಿ ವಿಫಲಗೊಂಡಿದೆ, ಆದರೆ ತಮ್ಮ ಗ್ಯಾರಂಟಿ ಸಾಬೀತಾಗಿರುವಂಥದ್ದು ಎಂದು ವಾಗ್ದಾಳಿ ನಡೆಸಿದ್ದಾರೆ. ಜತೆಗೆ, ಮೋದಿ ಮುಂದಿನ ವರ್ಷ ನಿವೃತ್ತರಾಗಲಿದ್ದು, ಆ ಬಳಿಕ ಗ್ಯಾರಂಟಿ ಯಾರು ಈಡೇರಿಸುತ್ತಾರೆ ಎಂಬುದು ಸ್ಪಷ್ಟವಿಲ್ಲ. ಹೀಗಾಗಿ ಯಾವ ಗ್ಯಾರಂಟಿ ಆರಿಸಿಕೊಳ್ಳಬೇಕು ಎಂಬುದು ಜನರಿಗೇ ಬಿಟ್ಟಿದ್ದು ಎನ್ನುವ ಮೂಲಕ ಅವರು ತಮ್ಮ ಹತ್ತು ಗ್ಯಾರಂಟಿಗಳ ಮಾಹಿತಿ ನೀಡಿದರು.
ದೇಶಾದ್ಯಂತ 24 ಗಂಟೆ ವಿದ್ಯುಚ್ಛಕ್ತಿ ನೀಡುವುದು ನಮ್ಮ ಮೊದಲ ಗ್ಯಾರಂಟಿ. ದೇಶ 3 ಲಕ್ಷ ಮೆವಾ ವಿದ್ಯುಚ್ಛಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದರೂ ಬಳಕೆ ಆಗುತ್ತಿರುವುದು 2 ಲಕ್ಷ ಮೆವಾ ಮಾತ್ರ. ದೇಶದಲ್ಲಿನ ಬೇಡಿಕೆಗಿಂತಲೂ ಹೆಚ್ಚಿನ ವಿದ್ಯುತ್ ಉತ್ಪಾದಿಸಲು ಸಾಧ್ಯವಿದೆ. ಅದನ್ನು ದೆಹಲಿ-ಪಂಜಾಬ್​ನಲ್ಲಿ ನಾವು ಮಾಡಿ ತೋರಿಸಿದ್ದು, ಅಧಿಕಾರಕ್ಕೆ ಬಂದರೆ ದೇಶಾದ್ಯಂತ ವಿಸ್ತರಿಸಲಿದ್ದೇವೆ. ಅಲ್ಲದೆ, ಎಲ್ಲ ಬಡವರಿಗೂ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಿದ್ದು, ಅದಕ್ಕೆ 1.25 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ ಎಂದರು.
ಎಲ್ಲರಿಗೂ ಉತ್ತಮ ಶಿಕ್ಷಣ ಉಚಿತವಾಗಿ ನೀಡುವುದು ಎರಡನೇ ಗ್ಯಾರಂಟಿ. ಅದಕ್ಕಾಗಿ ಸರ್ಕಾರಿ ಶಾಲೆಗಳನ್ನು ನವೀಕರಿಸಬೇಕಾಗಿದ್ದು, ಅದಕ್ಕಾಗಿ 5 ಲಕ್ಷ ಕೋಟಿ ರೂ. ಬೇಕಾಗುತ್ತದೆ. ಇದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ 2.5 ಲಕ್ಷ ಕೋಟಿ ರೂ.ನಂತೆ ಭರಿಸಬಹುದು ಎಂಬ ಲೆಕ್ಕಾಚಾರ ನೀಡಿದರು.
ಉತ್ತಮ ಆರೋಗ್ಯ ವ್ಯವಸ್ಥೆ ನಮ್ಮ ಮೂರನೇ ಗ್ಯಾರಂಟಿ ಎಂದ ಕೇಜ್ರಿವಾಲ್, ಮೊಹಲ್ಲಾ ಕ್ಲಿನಿಕ್ ಎಲ್ಲ ಗ್ರಾಮ-ಪ್ರದೇಶಗಳಲ್ಲಿ ತೆರೆಯಲಾಗುವುದು, ಜಿಲ್ಲಾ ಆಸ್ಪತ್ರೆಗಳನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗುವುದು. ದೇಶದ ಪ್ರತಿ ವ್ಯಕ್ತಿಗೂ ಉಚಿತ ಶಿಕ್ಷಣ ನೀಡಲಾಗುವುದು. ಚಿಕಿತ್ಸೆಯನ್ನು ದೊಡ್ಡ ಹಗರಣವಾಗಿರುವ ವಿಮೆ ಆಧಾರಿತವಾಗಿ ನೀಡುವುದಿಲ್ಲ, ಉತ್ತಮ ಆರೋಗ್ಯ ಮೂಲಸೌಕರ್ಯಕ್ಕಾಗಿ 5 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು ಎಂದರು.
ಭಾರತದ ನೆಲವನ್ನು ಚೀನಾದ ಹಿಡಿತದಿಂದ ಪಾರು ಮಾಡುವುದು, ಅಗ್ನಿವೀರ್ ಸ್ಕೀಮ್ ವಾಪಸ್ ಪಡೆಯುವುದು, ಸ್ವಾಮಿನಾಥನ್ ವರದಿ ಅನ್ವಯ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸುವುದು, ದೇಶದ ಯುವಜನತೆಗಾಗಿ 2 ಕೋಟಿ ಉದ್ಯೋಗ ಸೃಷ್ಟಿ, ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ, ವ್ಯಾಪಾರ-ಉದ್ಯಮಕ್ಕೆ ಮುಕ್ತ ವಾತಾವರಣ ನೀಡುವುದು ಇನ್ನಿತರ ಭರವಸೆಗಳು ಎಂದು ಅವರು ತಿಳಿಸಿದರು. ‘ನೀವು ಪ್ರಧಾನಿ ಹುದ್ದೆಯ ಆಕಾಂಕ್ಷಿಯೇ?’ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಕೇಜ್ರಿವಾಲ್ ‘ಇಲ್ಲ’ ಎಂದುತ್ತರಿಸಿದರು.
ಶಾಸಕರ ಜತೆ ಸಿಎಂ ಸಭೆ
ಸಿಎಂ ಅರವಿಂದ ಕೇಜ್ರಿವಾಲ್ ಭಾನುವಾರ ತಮ್ಮ ಪಕ್ಷದ ಶಾಸಕರ ಜತೆ ಸಭೆ ನಡೆಸಿದ್ದು, ಜೈಲಿನಿಂದ ಹೊರ ಬಂದ ಬಳಿಕದ ಮೊದಲ ಸಭೆ ಇದಾಗಿದೆ. ಈ ವೇಳೆ ಓಕ್ಲಾ ಶಾಸಕ ಅಮಾನತುಲ್ಲಾ ಖಾನ್ ಗೈರಾಗಿರುವುದು ಗಮನ ಸೆಳೆದಿದೆ. ಖಾನ್ ಹಾಗೂ ಆತನ ಪುತ್ರ ಅನಾಸ್ ಅಹ್ಮದ್ ನೊಯ್ಡಾ ಸೆಕ್ಟರ್ 95ರ ಪೆಟ್ರೋಲ್ ಬಂಕ್​ವೊಂದರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿದ್ದಾರೆ. ಎಫ್​ಐಆರ್ ದಾಖಲಾಗಿದ್ದು, ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?

ಇದಕ್ಕೆಲ್ಲಾ ನನಗೆ ಕ್ಯಾಮರಾ ಬೇಕಿಲ್ಲ… ವಿಚ್ಛೇದನದ ಬಗ್ಗೆ ಕಡೆಗೂ ಮೌನ ಮುರಿದ ನಟಿ ಸಂಜೀದಾ ಶೇಖ್

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:fourteen − 9 =
Remember me
