|ರಾಘವ ಶರ್ಮ ನಿಡ್ಲೆನವದೆಹಲಿ
ತಮಿಳುನಾಡಿನ ತಿರುವನಂತಪುರದಿಂದ ಕಾಶ್ಮೀರದವರೆಗೆ 6 ತಿಂಗಳ ಕಾಲ ರಾಹುಲ್ ಗಾಂಧಿ ನಾಯಕತ್ವದ ಭಾರತ ಜೋಡೋ ಪಾದಯಾತ್ರೆಗೆ ಸಕಲ ತಯಾರಿಗಳು ನಡೆಯುತ್ತಿರುವ ಮಧ್ಯೆ ಆ.21ರಿಂದ ಪಕ್ಷದ ಅಧ್ಯಕ್ಷ ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳುತ್ತಿದೆ. ಆದರೆ, ಅಧ್ಯಕ್ಷರಾಗಲು ರಾಹುಲ್ ಗಾಂಧಿ ನಿರುತ್ಸಾಹ ತೋರುತ್ತಿರುವುದು ಬೆಂಬಲಿಗ ವರ್ಗಕ್ಕೆ ತಲೆನೋವಾಗಿದೆ. ಹೀಗಾಗಿ ಕೈ ನಾಯಕತ್ವಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ಕೇಳಿಬರುತ್ತಿದೆ.
ಕಾಂಗ್ರೆಸ್ ಪಕ್ಷವನ್ನು ಗಾಂಧಿ ಪರಿವಾರವೇ ಮುನ್ನಡೆಸಬೇಕು, ಇಲ್ಲವಾದಲ್ಲಿ ಪಕ್ಷ ಹೋಳಾಗಲಿದೆ ಎಂಬ ಭಯದಿಂದಲೇ ರಾಷ್ಟ್ರ ಹಾಗೂ ರಾಜ್ಯಮಟ್ಟದ ಅನೇಕ ನಾಯಕರು ರಾಹುಲ್ ಮತ್ತೆ ಅಧ್ಯಕ್ಷರಾಗಬೇಕು ಎಂದು ಬಯಸುತ್ತಿದ್ದಾರೆ. ಅನಾರೋಗ್ಯದಿಂದಾಗಿ ಸೋನಿಯಾ ಗಾಂಧಿ ಈ ಹುದ್ದೆಯಲ್ಲಿ ಮುಂದುವರಿಯಲು ಅಸಕ್ತಿ ತೋರುತ್ತಿಲ್ಲ ಎಂದು ಹೇಳಲಾಗಿದೆ. ರಾಹುಲ್ ಅಲ್ಲದಿದ್ದರೆ, ಪ್ರಿಯಾಂಕಾ ಗಾಂಧಿಯವರಿಗೆ ಈ ಹುದ್ದೆ ನೀಡಬೇಕು ಎಂಬ ಪ್ರತಿಪಾದನೆಯಿದ್ದರೂ, ಅವರು ಉಸ್ತುವಾರಿ ವಹಿಸಿದ್ದ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯ ಸೋಲುಂಡ ಉದಾಹರಣೆ ಕಣ್ಣಮುಂದಿದೆ.
ಗಾಂಧಿ ಪರಿವಾರದವರೇ ಪಕ್ಷದ ಸಾರಥ್ಯ ವಹಿಸಿದರೆ ಎದುರಾಳಿಗಳು ಗಾಂಧಿ ಪರಿವಾರದ ವಂಶಪಾರಂಪರ್ಯ ರಾಜಕಾರಣ ಮತ್ತೆ ಮುಂದುವರಿದಿದೆ ಎಂದು ಗುರಿ ಮಾಡುತ್ತಾರೆ. ಆಗ ಮತ್ತದೇ ಮುಜುಗರ ಎದುರಿಸಬೇಕಾಗುತ್ತದೆ. ಹೀಗಾಗಿ ಮೂರನೇ ವ್ಯಕ್ತಿ ಅಧ್ಯಕ್ಷರಾಗಬಹುದು ಎನ್ನುವುದು ರಾಹುಲ್ ವಾದ ಎಂಬ ಮಾತುಗಳಿವೆ. ಆದರೆ, ಗಾಂಧಿ ಕುಟುಂಬದಿಂದ ಹೊರತಾದ ವ್ಯಕ್ತಿಗೆ ಪಕ್ಷದಲ್ಲಿ ಒಮ್ಮತಾಭಿಪ್ರಾಯವಿಲ್ಲ. ಒಂದು ವೇಳೆ ರಾಹುಲ್ ಅಧ್ಯಕ್ಷರಾಗದಿದ್ದರೆ, ರಾಹುಲ್ ಮಾತನ್ನು ಕೇಳುವ ವ್ಯಕ್ತಿಯೇ ಈ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಎಐಸಿಸಿ ಕೇಂದ್ರ ಕಚೇರಿಯಲ್ಲಿ ಕೇಳುತ್ತಿವೆ. ಈ ಕಾರಣಕ್ಕಾಗಿ ಗಾಂಧಿ ಪರಿವಾರಕ್ಕೆ ನಿಷ್ಠರಾಗಿರುವ ರಾಜ್ಯಸಭೆ ಸದಸ್ಯ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೆಸರು ಚರ್ಚೆಯಲ್ಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತರೂ, ಸೋನಿಯಾ ಗಾಂಧಿ ಖರ್ಗೆಯವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿ, ಮತ್ತೆ ದೆಹಲಿಗೆ ಕರೆ ತಂದರು. ಖರ್ಗೆ ದಲಿತ ಸಮುದಾಯಕ್ಕೆ ಸೇರಿರುವುದರಿಂದ ಜಾತಿ ಸಮೀಕರಣದಲ್ಲೂ ಪಕ್ಷಕ್ಕೆ ಅನುಕೂಲವಾಗಬಹುದು ಎನ್ನಲಾಗಿದೆ.
1998ರ ನಂತರ ಕಾಂಗ್ರೆಸ್​ನಲ್ಲಿ ಗಾಂಧಿ ಕುಟುಂಬದಿಂದ ಹೊರತಾದ ವ್ಯಕ್ತಿ ಅಧ್ಯಕ್ಷ ಹುದ್ದೆಗೇರಿಲ್ಲ. ಪಕ್ಷವನ್ನು ಒಗ್ಗೂಡಿಸುವಲ್ಲಿ ಮತ್ತು ಒಗ್ಗಟ್ಟು ಕಾಯ್ದುಕೊಳ್ಳುವಲ್ಲಿ ಹಾಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಯಶಸ್ವಿಯಾಗಿದ್ದಾರೆ. ಆದರೆ, ಸೋನಿಯಾ ಆಡಳಿತ ಕಾರ್ಯಶೈಲಿಗೆ ಹೊಂದಿಕೊಂಡ ಪಕ್ಷದ ಹಿರಿಯಾಳುಗಳಲ್ಲಿ ಅನೇಕರು ರಾಹುಲ್ ಮತ್ತು ಪ್ರಿಯಾಂಕಾರನ್ನು ನೆಚ್ಚಿಕೊಂಡಿಲ್ಲ. ಜಿ-23 ಬಂಡಾಯ ಗುಂಪು ಹುಟ್ಟಿಕೊಂಡದ್ದು ಕೂಡ ಈ ಕಾರಣಕ್ಕಾಗಿಯೇ. ವಾಸ್ತವದಲ್ಲಿ, ಜಿ-23 ಗುಂಪಿನಲ್ಲಿರುವ ಬಹುತೇಕರು ಜನಪ್ರಿಯರೂ ಅಲ್ಲ, ದೊಡ್ಡ ಪ್ರಮಾಣದಲ್ಲಿ ಮತಬ್ಯಾಂಕ್​ನ್ನು ಪಕ್ಷದ ಕಡೆ ಸೆಳೆಯುವ ತಾಕತ್ತು ಕೂಡ ಇಲ್ಲ. ಹಾಗಂತ, ರಾಹುಲ್ ಗಾಂಧಿ ಪರ ಜನಾಭಿಪ್ರಾಯ ಇದೆ ಎಂದೇನಲ್ಲ. ಮತದಾರರು ಇನ್ನೂ ಅವರ ಮೇಲೆ ವಿಶ್ವಾಸವಿರಿಸಿಲ್ಲ ಎನ್ನುವುದಕ್ಕೆ ಚುನಾವಣಾ ಫಲಿತಾಂಶಗಳೇ ನಿದರ್ಶನ.
ಸ್ವಜನಪಕ್ಷಪಾತ ವಿರೋಧ:ಮುಂಬರುವ ಲೋಕಸಭೆ ಚುನಾವಣೆಗೆ ಪರಿವಾರವಿರೋಧ ವಾದವೇ ಬಿಜೆಪಿಯ ಪ್ರಮುಖ ಚುನಾವಣಾ ವಿಷಯವಾಗಲಿದೆ. ಇದರ ಸ್ಪಷ್ಟ ಮುನ್ಸೂಚನೆ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಕೆಂಪುಕೋಟೆ ಭಾಷಣದಲ್ಲೇ ಸಿಕ್ಕಿದೆ. ಪರಿವಾರವಾದ, ಸ್ವಜನಪಕ್ಷಪಾತ ಮತ್ತು ಅದರಿಂದುಂಟಾಗುವ ಭ್ರಷ್ಟಾಚಾರದ ವಿರುದ್ಧ ಪ್ರಧಾನಿ ಕೆಂಡ ಕಾರಿದ್ದರು. ಬಿಜೆಪಿ ವರಿಷ್ಠರು ವ್ಯವಸ್ಥಿತವಾಗಿ ಕುಟುಂಬ ರಾಜಕಾರಣ ವಿರೋಧಿಸುವ ನಿಲುವನ್ನು ದೇಶಾದ್ಯಂತ ತೇಲಿಬಿಡುತ್ತಿದ್ದಾರೆ ಮತ್ತು ಎದುರಾಳಿಗಳ ಜತೆಗೆ ಸ್ಪಪಕ್ಷೀಯರಿಗೂ ಕಟು ಸಂದೇಶ ರವಾನಿಸುತ್ತಿದ್ದಾರೆ. ಹೀಗಿದ್ದಾಗ, 24 ವರ್ಷಗಳ ಬಳಿಕವೂ ಗಾಂಧಿ ಪರಿವಾರದ ವ್ಯಕ್ತಿಯೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೇರಿದರೆ ಬಿಜೆಪಿಗೆ ನಾವೇ ಅಸ್ತ್ರ ನೀಡಿದಂತಾಗುತ್ತದೆ ಎಂದೂ ರಾಹುಲ್ ಯೋಚಿಸಿದಂತಿದೆ.
ಸಂಸದರಿಗೂ ಬೇಸರ:ಈಚಿನ ದಿನಗಳಲ್ಲಿ ಬೆಲೆ ಏರಿಕೆ, ನಿರುದ್ಯೋಗ, ತನಿಖಾ ಸಂಸ್ಥೆಗಳ ದುರ್ಬಳಕೆ ಸೇರಿ ಅನೇಕ ಜ್ವಲಂತ ವಿಚಾರಗಳನ್ನಿಟ್ಟುಕೊಂಡು ರಾಹುಲ್ ಅಥವಾ ಪ್ರಿಯಾಂಕಾ ನೇತೃತ್ವದಲ್ಲೇ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ರಾಹುಲ್ ಅಥವಾ ಪ್ರಿಯಾಂಕಾ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿಲ್ಲ ಎಂಬುದು ಬಿಟ್ಟರೆ ಬಹುಪಾಲು ನಿರ್ಧಾರಗಳು ಅವರಿಬ್ಬರ ಸೂಚನೆಯಂತೆಯೇ ತೆಗೆದುಕೊಳ್ಳ ಲಾಗುತ್ತಿದೆ. ತೆರೆಯ ಹಿಂದಿನಿಂದ ತೀರ್ಮಾನ ತೆಗೆದುಕೊಳ್ಳುವ ಬದಲು ಮುಂದೆ ನಿಂತು ಪಕ್ಷ ಮುನ್ನಡೆಸಬೇಕು. ಪಾದಯಾತ್ರೆಗೆ ಮುನ್ನವೇ ರಾಹುಲ್ ಅಧ್ಯಕ್ಷರಾದರೆ, ಈ ಹೋರಾಟಕ್ಕೆ ಮತ್ತಷ್ಟು ಬಲ ಬರುತ್ತದೆ. ಆದರೆ, ಕೆಲವೊಮ್ಮೆ ಅವರ ಯೋಚನಾ ಲಹರಿ ಅರ್ಥವಾಗುವುದಿಲ್ಲ. ಮಹತ್ವದ್ದೇನೋ ನಡೆಯುತ್ತಿದೆ ಎಂದಾಗ ಹಠಾತ್ತನೇ ವಿದೇಶಕ್ಕೆ ಹಾರಿರುತ್ತಾರೆ ಎಂದು ಕಾಂಗ್ರೆಸ್ ಸಂಸದರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.
ವಿಪಕ್ಷಗಳಿಗೂ ಬೇಕಿಲ್ಲ:ರಾಹುಲ್ ಬೆಂಬಲಿಸುತ್ತಿರುವ ಕಾಂಗ್ರೆಸ್ಸಿ ಗರಿಗೆ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ನೋಡಬೇಕೆಂಬ ಆಶಯವಿರಬಹುದು. ಆದರೆ, ಬಹುಪಾಲು ವಿಪಕ್ಷ ನಾಯಕರು ರಾಹುಲ್​ರನ್ನು ಗಂಭೀರ ರಾಜಕಾರಣಿ ಎಂದು ಈಗಲೂ ಪರಿಗಣಿಸಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ತಂತ್ರ ರೂಪಿಸುವ ಅಥವಾ ದೇಶಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗಳಾದಾಗಲೂ ಈ ನಾಯಕರು ಸೋನಿಯಾ ಗಾಂಧಿ ಜತೆಗೇ ಸಮಾಲೋಚಿಸಲು ಮುಂದಾಗುತ್ತಾರೆ. ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿ, ಹೊಸ ಸಂಚಲನ ಸೃಷ್ಟಿಸಿದಲ್ಲಿ ಈ ಮನಸ್ಥಿತಿ ಬದಲಾಗಲೂಬಹುದು. ಆದರೆ, ರಾಹುಲ್ ಸದ್ಯಕ್ಕೆ ಅಂತಹ ಜವಾಬ್ದಾರಿಯೇ ಬೇಡ ಎನ್ನುತ್ತಿದ್ದಾರೆ.
ಕೋವಿಡ್ ಟೈಮ್​ನಲ್ಲಿ ಕೂಡ ಐದು ರೂಪಾಯಿಯನ್ನೂ ಬಿಡದ ಅನಿರುದ್ಧ್: ನಿರ್ದೇಶಕನ ಆರೋಪ

ವಿಚಾರಣೆಗಾಗಿ ಕೋರ್ಟ್​ಗೆಂದು ಬಂದಿದ್ದ ಪಾತಕಿ ಪ್ರೇಯಸಿ ಜತೆ ಸರಸಕ್ಕಿಳಿದ!; ಲಾಡ್ಜ್​ ಮೇಲೆ ಪೊಲೀಸರ ದಾಳಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 6 =
Remember me
