| ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ವನಸಂಪತ್ತು ವೃದ್ಧಿಸಲು ಈ ಹಿಂದೆ ಕೋಟಿ ವೃಕ್ಷ ಆಂದೋಲನ ನಡೆಸಿದ್ದ ಸರ್ಕಾರ ಅದೇ ಮಾದರಿಯಲ್ಲಿಯೇ ಮೀನುಗಾರಿಕಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಕೋಟಿ ಮತ್ಸ್ಯ ಆಂದೋಲನ ಯೋಜನೆ ರೂಪಿಸಿ ರಾಜ್ಯಾದ್ಯಂತ ಅನುಷ್ಠಾನಕ್ಕೆ ಮುಂದಾಗಿದೆ. ಕೃಷಿ ಹಾಗೂ ಮೀನುಗಾರಿಕೆ ಇಲಾಖೆ ಜಂಟಿ ಸಹಯೋಗದಲ್ಲಿ ಯೋಜನೆ ಕೈಗೆತ್ತಿಕೊಂಡಿದ್ದು, ಎಲ್ಲ ಜಿಲ್ಲೆಗಳಲ್ಲಿ ಪ್ರಸಕ್ತ ವರ್ಷದಿಂದಲೇ ಆಂದೋಲನಕ್ಕೆ ಚಾಲನೆ ದೊರೆಯಲಿದೆ.
ಈ ಹಿಂದೆ ಸರ್ಕಾರ ಕೃಷಿ ಹೊಂಡಗಳಲ್ಲಿ ಮೀನು ಸಾಕಣೆಗೆ ಸಾಕಷ್ಟು ಪ್ರೋತ್ಸಾಹ ನೀಡಿತ್ತು. ಇದರಲ್ಲಿ ಭಾಗಶಃ ರೈತರು ಯಶ ಕಂಡಿದ್ದರು. ಇದನ್ನು ಮತ್ತಷ್ಟು ಉತ್ತೇಜಿಸಲು ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿಹೊಂಡ, ನಾಲಾ ಬದುಗಳು, ಕೆರೆ-ಕುಂಟೆ ಸೇರಿ ವಿವಿಧ ಜಲಮೂಲಗಳಲ್ಲಿ ಮೀನು ಉತ್ಪಾದನೆಗೆ ಯೋಜನೆ ರೂಪಿಸಿದೆೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅಮೃತ ಸರೋವರಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲು ಆದೇಶ ಹೊರಡಿಸಿದೆ.
ಎಲ್ಲ ಜಿಲ್ಲೆಗಳಲ್ಲಿ ಅನುಷ್ಠಾನ:ಕೃಷಿ ಇಲಾಖೆ ಜಂಟಿ ನಿರ್ದೇಶಕರ ಸುತ್ತೋಲೆಯಂತೆ ಆಯಾ ಜಿಲ್ಲೆಯ ಯೋಜನಾ ಪ್ರದೇಶದಲ್ಲಿರುವ ಕೃಷಿ ಹೊಂಡಗಳಲ್ಲಿ ಹಾಗೂ ಅಮೃತ ಸರೋವರಗಳಲ್ಲಿ ಪ್ರಸ್ತುತ ವರ್ಷದಿಂದಲೇ ಆರಂಭಿಸಲು ಸೂಚಿಸಲಾಗಿದೆ. ಆಯಾ ಜಿಲ್ಲೆಯ ಮೀನುಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಮೀನುಗಳನ್ನು ಪಡೆದು ಯೋಜನೆ ಅನುಷ್ಠಾನಕ್ಕೆ ಮುಂದಾಗುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
ನೀರಿನ ಲಭ್ಯತೆ ಖಾತ್ರಿ:ಕನಿಷ್ಠ ಆರು ತಿಂಗಳು ನೀರಿನ ಲಭ್ಯತೆ ಖಾತ್ರಿ ಇರುವ ಕೃಷಿ ಹೊಂಡಗಳನ್ನು ಪಟ್ಟಿ ಮಾಡಿ ಜಿಲ್ಲಾ ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಮೂಲಕ ಪ್ರತಿ ಹೊಂಡಕ್ಕೆ 500 ಮೀನು ಮರಿಗಳನ್ನು ಉಚಿತವಾಗಿ ವಿತರಿಸಲು ಸೂಚಿಸಿದೆ. ಅದೇ ರೀತಿ ಯೋಜನಾ ಪ್ರದೇಶದ ಅಮೃತ ಸರೋವರಗಳಿಗೆ ಜಿಲ್ಲಾ ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಮೂಲಕ 5 ಸಾವಿರ ಮೀನು ಮರಿಗಳನ್ನು ವಿತರಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕೂ ಮುನ್ನ ತಾಂತ್ರಿಕ ಸಲಹೆ ಪಡೆಯುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ತಗಲುವ ವೆಚ್ಚವನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಉತ್ಪಾದನಾ ಪದ್ಧತಿ ಚಟುವಟಿಕೆಯಡಿ ಭರಿಸಲು ಸೂಚನೆ ನೀಡಲಾಗಿದೆ.
ಅಧಿಕಾರಿ ನೇಮಕ:ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರತಿ ಜಿಲ್ಲೆಗೆ ಓರ್ವ ಅಧಿಕಾರಿಯನ್ನು ನಿಯೋಜಿಸಲಾಗುತ್ತದೆ. ಈಗಾಗಲೆ ಸರ್ಕಾರ ಮೀನುಖಾದ್ಯ ಉತ್ತೇಜನಕ್ಕೆ ಒತ್ತು ನೀಡಿದ್ದು, ಗರಿಷ್ಠ ಪ್ರಮಾಣದಲ್ಲಿ ಮೀನು ಉತ್ಪಾದನೆಗೆ ಈ ಯೋಜನೆ ಸಹಕಾರಿಯಾಗಲಿದೆ. ಕಡಿಮೆ ಬಂಡವಾಳದಲ್ಲಿ ಗರಿಷ್ಠ ಲಾಭ ತಂದುಕೊಡುವ ಉದ್ಯಮ ಎನಿಸಿರುವ ಮೀನುಗಾರಿಕೆ ಕ್ಷೇತ್ರದಲ್ಲಿ ರೈತಾಪಿ ವರ್ಗವನ್ನು ಹೆಚ್ಚು ತೊಡಗಿಸಿಕೊಳ್ಳಲು ಪ್ರೇರೇಪಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೀನು ಉತ್ಪಾದನೆಯನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಲು ಕೋಟಿ ಮತ್ಸ್ಯ ಆಂದೋಲನ ಕಾರ್ಯಕ್ರಮ ರೂಪಿಸಲಾಗಿದೆ. ಈ ಯೋಜನೆ ಪ್ರಸಕ್ತ ವರ್ಷದಿಂದಲೇ ಜಾರಿಯಾಗಲಿದೆ. ಪ್ರಮುಖವಾಗಿ ಕೃಷಿ ಹೊಂಡ ಹಾಗೂ ಅಮೃತ ಸರೋವರಗಳ ಮೂಲಕ ಮೀನು ಉತ್ಪಾದನೆಗೆ ಕ್ರಮಕೈಗೊಳ್ಳಲು ಯೋಜನೆ ರೂಪಿಸಲಾಗಿದೆ.
| ನಾಗರಾಜ್, ಉಪನಿರ್ದೇಶಕ ಮೀನುಗಾರಿಕೆ ಇಲಾಖೆ, ಬೆಂ.ಗ್ರಾಮಾಂತರ

ಸಿದ್ದರಾಮಯ್ಯ ಕುರಿತು ಹನಿಗವಿಯ ವರ್ಷದ ಹಿಂದಿನ ತಮಾಷೆ ನಿಜವಾಯಿತು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − four =
Remember me
