ನವದೆಹಲಿ:ದೇಶೀಯವಾಗಿ ಅಭಿವೃದ್ಧಿ ಪಡಿಸಲಾದ ಕೊವ್ಯಾಕ್ಸಿನ್ ಲಸಿಕೆ ಕೋವಿಡ್ ಸೋಂಕಿನ ವಿರುದ್ಧ ಶೇ. 77.8 ಪರಿಣಾಮಕಾರಿ ಆಗಿದೆ ಎಂದು ಸರ್ಕಾರಿ ವೈದ್ಯ ಸಂಶೋಧನಾ ಸಂಸ್ಥೆ ಮತ್ತು ಈ ಲಸಿಕೆಯನ್ನು ಉತ್ಪಾದಿಸುತ್ತಿರುವ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ ಹೇಳಿದೆ. ಡೆಲ್ಟಾ ಪ್ರಭೇದದ ವಿರುದ್ಧ ಶೇ. 65.2ರಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ ಎಂದೂ ಹೇಳಿದೆ.
ಈ ಅಧ್ಯಯನ ವರದಿ ಲ್ಯಾನ್ಸೆಟ್ ಜರ್ನಲ್​ನಲ್ಲಿ ಪ್ರಕಟವಾಗಿದೆ. ಕೊವ್ಯಾಕ್ಸಿನ್ ಲಸಿಕೆಯ ಎರಡೂ ಡೋಸ್ ಪಡೆದ ಎರಡು ವಾರದ ನಂತರ ಅದು ದೇಹದಲ್ಲಿ ಪ್ರತಿಕಾಯಗಳನ್ನು ಹೆಚ್ಚಿಸಲು ಆರಂಭಿಸುತ್ತದೆ. ಈ ಲಸಿಕೆ ಪಡೆದವರಲ್ಲಿ ಗಂಭೀರವಾದ ಅಡ್ಡಿಪರಿಣಾಮ ಅಥವಾ ಸಾವು ಸಂಭವಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
2020ರ ನವೆಂಬರ್ ನಿಂದ ಕಳೆದ ಮೇ ವರೆಗೆ 18ರಿಂದ 97 ವರ್ಷದೊಳಗಿನ 24,419 ಜನರ ಮೇಲೆ ಈ ಲಸಿಕೆಯ ಪರಿಣಾಮ ಕತ್ವದ ಬಗ್ಗೆ ಅಧ್ಯಯನ ನಡೆಸಲಾಗಿದೆ. ಭಾರತ್ ಬಯೋಟೆಕ್ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಈ ಅಧ್ಯಯನ ನಡೆಸಿದೆ ಎಂದು ಲ್ಯಾನ್ಸೆಟ್ ತಿಳಿಸಿದೆ. ವಾರದ ಹಿಂದೆಯಷ್ಟೆ ಕೊವ್ಯಾಕ್ಸಿನ್ ಲಸಿಕೆಗೆ ಡಬ್ಲ್ಯೂಎಚ್​ಒ ಮಾನ್ಯತೆ ನೀಡಿದೆ. ಈ ಲಸಿಕೆಯನ್ನು ಇತರ ಲಸಿಕೆಗಳಿಗೆ ಅನುಸರಿಸಿದ ಮಾನದಂಡದಂತೆಯೇ ಪರಿಗಣಿಸಲಾಯಿತು. ಹೆಚ್ಚು ವರಿ ಮಾನದಂಡಗಳನ್ನು ಅನುಸರಿಸಿಲ್ಲ ಎಂದು ಡಬ್ಲ್ಯೂಎಚ್​ಒ ಹೇಳಿದೆ. ಲಸಿಕೆಗೆ ಮಾನ್ಯತೆ ನೀಡುವುದು ತಡವಾದ ಕಾರಣ ವಿಪರೀತ ಪರಿಶೀಲನೆಯನ್ನು ಭಾರತ್ ಬಯೋಟೆಕ್​ನ ಮುಖ್ಯಸ್ಥ ಡಾ.ಕೃಷ್ಣ ಎಲ್ಲಾ ಪ್ರಶ್ನಿಸಿದ್ದರು. ಸೌದಿ ಅರೇಬಿಯಾಕ್ಕೆ ಆಗಮಿಸುವವರಲ್ಲಿ ಕೊವಿಶೀಲ್ಡ್ ಲಸಿಕೆ ಪಡೆದವರಿಗೆ ಕ್ವಾರಂಟೈನ್ ಇರುವುದಿಲ್ಲ ಎಂದು ಸ್ಥಳೀಯ ಆಡಳಿತ ತಿಳಿಸಿದೆ.
ದೈನಿಕ ಕೇಸ್ ಶೇ. 4.3 ಇಳಿಕೆ:ದೇಶದಲ್ಲಿ ಶುಕ್ರವಾರ 12,516 ಹೊಸ ಪ್ರಕರಣಗಳು ವರದಿಯಾಗಿವೆ. ಗುರುವಾರಕ್ಕಿಂತ ಶೇ. 4.3ರಷ್ಟು ದೈನಿಕ ಪ್ರಕರಣ ಇಳಿಕೆ ಕಂಡಿದೆ. 24 ತಾಸಿನಲ್ಲಿ 501 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ 419 ಸಾವು ಕೇರಳದಲ್ಲಿ ಸಂಭವಿಸಿದೆ. ಈ ರಾಜ್ಯದಲ್ಲಿ 7,224 ಹೊಸ ದೈನಿಕ ಪ್ರಕರಣಗಳು ಕಂಡು ಬಂದಿವೆ. ದೇಶದಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳು ಶೇ. 0.40ಕ್ಕೆ ಇಳಿಕೆಯಾಗಿದೆ. 267 ದಿನಗಳಲ್ಲೆ ಅತ್ಯಂತ ಕಡಿಮೆ ಪ್ರಮಾಣ ಇದಾಗಿದೆ. ನಿತ್ಯದ ಪಾಸಿಟಿವಿಟಿ ದರ ಶೇ. 1.07 ಇದೆ. ಶುಕ್ರವಾರ ಸಂಜೆಗೆ ಕೊನೆಗೊಂಡಂತೆ 110.79 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಬೀಜಿಂಗ್​ನಲ್ಲಿ ನಿರ್ಬಂಧ:ಚೀನಾದ ರಾಜಧಾನಿ ಬೀಜಿಂಗ್​ನಲ್ಲಿ 17 ತಿಂಗಳ ನಂತರ ಕರೊನಾ ಸೋಂಕು ಉಲ್ಬಣಿಸಿದ್ದು, ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಲಾಗಿದೆ. ಖಾಸಗಿ ಸಂಸ್ಥೆಗಳು ಸಮ್ಮೇಳನವನ್ನು ರದ್ದು ಮಾಡಬೇಕು, ಅಗತ್ಯವಿದ್ದರೆ ಆನ್​ಲೈನ್ ಮೂಲಕ ಇಂಥ ಚಟುವಟಿಕೆ ನಡೆಸಬಹುದು. ಜನರು ಹೆಚ್ಚಾಗಿ ಸೇರುವುದನ್ನು ತಡೆಯಲು ನಿರ್ಬಂಧ ಅಗತ್ಯ ಎಂದು ಆಡಳಿತ ಹೇಳಿದೆ. ಬೀಜಿಂಗ್​ನಲ್ಲಿ ಗುರುವಾರ ಏಳು ಹೊಸ ಪ್ರಕರಣಗಳು ಕಂಡು ಬಂದಿವೆ. ಎರಡನೇ ಅಲೆ ವೇಳೆ ಬೀಜಿಂಗ್​ನಲ್ಲಿ 45 ಪ್ರಕರಣಗಳು ವ್ಯಕ್ತವಾಗಿದ್ದವು. ಮಕ್ಕಳ ಬಟ್ಟೆ ವಿತರಿಸುವ ಸೇವೆಯ ಮೂಲಕ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಚೀನಾದ ಆಡಳಿತ ಶಂಕಿಸಿದೆ. ಹಬ್ಬಗಳ ಸಾಲಿನಲ್ಲಿ ಆನ್​ಲೈನ್ ಮೂಲಕ ಬಟ್ಟೆ ಖರೀದಿ ಹೆಚ್ಚಿದ್ದು, ಪಾರ್ಸೆಲ್​ಗಳ ಮೂಲಕ ಸೋಂಕು ಹೆಚ್ಚುವ ಶಂಕೆಯನ್ನು ವ್ಯಕ್ತಪಡಿಸಿದೆ.
ತೆಲಂಗಾಣದಲ್ಲಿ ಸ್ಮಾರಕ:ಕರೊನಾ ಸೋಂಕಿನಿಂದ ಮೃತಪಟ್ಟವರಿಗಾಗಿ ದೇಶದಲ್ಲೆ ಮೊದಲ ಸ್ಮಾರಕ ತೆಲಂಗಾಣದಲ್ಲಿ ಉದ್ಘಾಟನೆ ಆಗಿದೆ. ರಾಜಣ್ಣ-ಸಿರ್ಸಿಲಾ ಜಿಲ್ಲೆಯ ರಾಜಣ್ಣಪೇಟೆಯಲ್ಲಿ ಈ ಸ್ಮಾರಕವನ್ನು ನಿರ್ವಿುಸಲಾಗಿದೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಸಮೂಹ ’ಮದದ್’ ಹೆಸರಿನಲ್ಲಿ ಈ ಸ್ಮಾರಕವನ್ನು ನಿರ್ಮಾಣ ಮಾಡಿದೆ.
ದೆಹಲಿಯಲ್ಲಿ ಮನೆ ಮನೆಗೆ ಲಸಿಕೆ:ದೆಹಲಿಯಲ್ಲಿ ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುತ್ತಿದ್ದು, ಪ್ರತಿ ದಿನ 10 ವಯಸ್ಕರಲ್ಲಿ 9 ಮಂದಿಗೆ ಚುಚ್ಚುಮದ್ದು ಕೊಡಲಾಗುತ್ತಿದೆ. ಈ ಅಭಿಯಾನದಲ್ಲಿ ಒಂದು ಸಾರಿಯೂ ಲಸಿಕೆ ಪಡೆಯದ 17.50 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ.
ಸೋಂಕಿನ ಲಕ್ಷಣದಲ್ಲಿ ಬದಲಾವಣೆ:ಎರಡನೇ ಅಲೆಯಲ್ಲಿ ಇದ್ದಂತೆ ಈಗ ಕರೊನಾ ಸೋಂಕಿನ ಲಕ್ಷಣ ಇಲ್ಲ. ಅದು ಬದಲಾಗಿದೆ. ಜತೆಗೆ ರೋಗದ ತೀವ್ರತೆಯೂ ಕಡಿಮೆ ಆಗಿದೆ ಎಂದು ಕೋಲ್ಕತ್ತದ ವೈದ್ಯರು ಹೇಳಿದ್ದಾರೆ. ಹಾಗಂತ ಮೂರನೇ ಅಲೆ ಕಂಡುಬರುವುದಿಲ್ಲ ಎನ್ನಲಾಗದು. ಮೈಮರೆಯದೆ ಎಚ್ಚರಿಕೆ ವಹಿಸಿದರೆ ಮಾತ್ರ ಮೂರನೇ ಅಲೆಯನ್ನು ತಡೆಯಬಹುದು ಎಂದಿದ್ದಾರೆ. ಈಗ ಲಸಿಕೆ ಅಭಿಯಾನ ಚುರುಕಾಗಿರುವುದರಿಂದ ಎರಡೂ ಡೋಸ್ ಪಡೆದವರಲ್ಲಿ ಸೋಂಕಿನ ಚಿಹ್ನೆಗಳು ಕಾಣುತ್ತಿಲ್ಲ. ಹೀಗಾಗಿ ಸರ್ವೆ ಸಾಮಾನ್ಯವಾಗಿ ವೈದ್ಯರು ಕಡಿಮೆ ಸೋಂಕಿನ ಲಕ್ಷಣವನ್ನು ದಾಖಲಿಸುತ್ತಿಲ್ಲ. ಆದರೆ ಇದನ್ನು ಉಪೇಕ್ಷಿಸಬಾರದು ಎಂದು ಹೇಳಿದ್ದಾರೆ.
ಜರ್ಮನಿಯಲ್ಲಿ 4ನೇ ಅಲೆ:ಜರ್ಮನಿಯಲ್ಲಿ 4ನೇ ಅಲೆ ಶುರುವಾ ಗಿದ್ದು, ಲಸಿಕೆ ಪಡೆಯದವರು ಕೂಡಲೇ ಚುಚ್ಚುಮದ್ದು ಪಡೆಯುವಂತೆ ಚಾನ್ಸಲರ್ ಏಂಜೆಲಾ ಮರ್ಕೆಲ್ ಮನವಿ ಮಾಡಿದ್ದಾರೆ. ಗುರುವಾರ ದೇಶದಲ್ಲಿ 50,200 ಪ್ರಕರಣಗಳು ವರದಿ ಆಗಿದ್ದವು. ಯುರೋಪ್​ನ ಅನೇಕ ದೇಶಗಳಲ್ಲೂ ಸೋಂಕು ಹೆಚ್ಚಳವಾಗಿದೆ.
ನೆದರ್​ಲೆಂಡ್ಸ್​ನಲ್ಲಿ ಭಾಗಶಃ ಲಾಕ್​ಡೌನ್:ಯುರೋಪ್ ದೇಶಗಳಲ್ಲಿ ಸೋಂಕು ಹೆಚ್ಚುತ್ತಿರುವ ಕಾರಣ ಶುಕ್ರವಾರದಿಂದ ಅನ್ವಯವಾಗುವಂತೆ ಭಾಗಶಃ ಲಾಕ್​ಡೌನ್​ನ್ನು ಡಚ್ ಸರ್ಕಾರ ನಿರ್ಧರಿಸಿದೆೆ. ಬಾರ್, ರೆಸ್ಟೋರೆಂಟ್, ಸ್ಪೋರ್ಟ್ಸ್ ಕ್ಲಬ್, ಅತ್ಯಾವಶ್ಯಕವಲ್ಲದ ಸೇವೆಗಳನ್ನು ಸಂಜೆ 7ರ ನಂತರ ಸ್ಥಗಿತ ಗೊಳಿಸುವಂತೆ ಸೂಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
