‘ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅನುಮೋದನೆ ಪಡೆದಿರುವುದು ಭಾರತದ ಸಂಸದೀಯ ಪಯಣದಲ್ಲಿ ಒಂದು ಸುವರ್ಣ ಕ್ಷಣವಾಗಿದೆ. ಈ ಮಸೂದೆ ದೇಶದ ಜನರಲ್ಲಿ ಹೊಸ ವಿಶ್ವಾಸ ಮೂಡಿಸಲಿದೆ’- ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ (ನಾರಿಶಕ್ತಿ ವಂದನ ಅಧಿನಿಯಮ) ಸಮ್ಮತಿಯ ಮುದ್ರೆ ಪಡೆಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಉದ್ಗರಿಸಿದ್ದು ಹೀಗೆ. ಇದರೊಂದಿಗೆ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ. 33 ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡುವ ಬಹುದಿನಗಳ ಕನಸು ನನಸಾಗುವತ್ತ ಪ್ರಮುಖ ಹೆಜ್ಜೆಯನ್ನು ಇರಿಸಿದಂತಾಯಿತು. ಈ ಮುಂಚೆ, ದೇವೇಗೌಡರು ಪ್ರಧಾನಿಯಾಗಿದ್ದಾಗ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿತ್ತಾದರೂ ಉಭಯ ಸದನಗಳ ಅನುಮೋದನೆ ಪಡೆಯುವುದು ಸಾಧ್ಯವಾಗಿರಲಿಲ್ಲ. ಈಗ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಕಡೆ ಒಪ್ಪಿಗೆ ಸಿಕ್ಕಿದ್ದು, ರಾಷ್ಟ್ರಪತಿಗಳು ಅಂಕಿತ ಹಾಕಿದ ನಂತರ ಕಾಯ್ದೆಯಾಗಲಿದೆ.
ನಿಜವಾಗಿಯೂ ಇದೊಂದು ಐತಿಹಾಸಿಕ ಹೆಜ್ಜೆಯೇ ಸರಿ. ಇತರ ಕೆಲ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸದ್ಯ ಶಾಸನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಪ್ರಮಾಣ ಕಡಿಮೆ ಇದೆ ಎಂಬುದು ನಿಜ. ಆದರೆ, ಪ್ರಜಾತಂತ್ರದ ಬೇರುಮಟ್ಟವಾದ ಪಂಚಾಯಿತಿ ವ್ಯವಸ್ಥೆಯಲ್ಲಿ ಶೇ. 50ರವರೆಗೂ ಮಹಿಳಾ ಮೀಸಲಾತಿ ಇರುವುದು ಉಪೇಕ್ಷಿಸುವ ವಿಷಯವಲ್ಲ. ಈ ಮೀಸಲಾತಿ ಪ್ರಮಾಣದಲ್ಲಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಇದೆ. ಒಟ್ಟಾರೆ, ದೇಶದ 31 ಲಕ್ಷ ಪಂಚಾಯಿತಿ ಪ್ರತಿನಿಧಿಗಳಲ್ಲಿ ಮಹಿಳೆಯರು ಅಂದಾಜು 14 ಲಕ್ಷದಷ್ಟಿದ್ದಾರೆ.
ಕೇಂದ್ರೀಯ ಚುನಾವಣಾ ಆಯೋಗದ ವರದಿಯ ಪ್ರಕಾರ, 2022ರ ಜನವರಿ ಹೊತ್ತಿಗೆ ದೇಶದ ಮತದಾರರ ಸಂಖ್ಯೆ 95.1 ಕೋಟಿಯಷ್ಟಿತ್ತು. ಒಂದು ಆಸಕ್ತಿಕರ ವಿಷಯವೆಂದರೆ, 2019ರ ಲೋಕಸಭಾ ಚುನಾವಣೆ ಹೊತ್ತಿಗೆ ಮಹಿಳೆಯರ ಸಂಖ್ಯೆ 43.8 ಕೋಟಿ ಇದ್ದುದು, 2022ರ ಜನವರಿ ವೇಳೆಗೆ ಶೇ. 5.1 ರಷ್ಟು ಹೆಚ್ಚಳ ಕಂಡು 46.1 ಕೋಟಿಗೆ ತಲುಪಿತ್ತು. ಇದೇ ಸಮಯದಲ್ಲಿ ಪುರುಷ ಮತದಾರರ ಸಂಖ್ಯೆ 47.3 ಕೋಟಿ ಇದ್ದುದು ಶೇ. 3.6 ಹೆಚ್ಚಳದೊಂದಿಗೆ 49 ಕೋಟಿಗೆ ಏರಿತ್ತು. 2019 ರ ಲೋಕಸಭಾ ಚುನಾವಣೆಯಲ್ಲಿ ಪುರುಷರಿಗಿಂತ (ಶೇ. 67.01 ಮತದಾನ ಪ್ರಮಾಣ) ಮಹಿಳೆಯರು ತುಸು ಹೆಚ್ಚು (ಶೇ.67.18 ಮತದಾನ ಪ್ರಮಾಣ) ಮತದಾನ ಸರಾಸರಿ ಹೊಂದಿದ್ದರು ಎಂದು ವಿಶ್ಲೇಷಣಾ ವರದಿಗಳು ಹೇಳುತ್ತವೆ. ಹಾಗಿದ್ದ ಮೇಲೆ, ಮಹಿಳೆಯರನ್ನು ಸೆಳೆಯಲು ರಾಜಕೀಯ ಪಕ್ಷಗಳು ಬಗೆಬಗೆ ತಂತ್ರೋಪಾಯಗಳನ್ನು ಅನುಸರಿಸುವುದರಲ್ಲಿ ಅಚ್ಚರಿ ಅಥವಾ ಅಸಹಜವಾದುದೇನಿದೆ, ಅಲ್ಲವೆ? ಮಹಿಳೆಯರ ಮನಗೆದ್ದರೆ ಗದ್ದುಗೆ ಏರುವುದು ಸುಲಭ ಎಂಬುದು ರಾಜಕೀಯ ನಾಯಕರ ಸರಳ- ಸಹಜ ಲೆಕ್ಕಾಚಾರ.
ಮೋದಿ ಪರವಾಗಿ ಹೆಚ್ಚು ಮಹಿಳೆಯರು ಮತ ಚಲಾಯಿಸುತ್ತಾರೆ ಎಂದು ಫಲಿತಾಂಶ ಆಧಾರಿತ ವಿಶ್ಲೇಷಣೆಗಳನ್ನು ಆಧರಿಸಿ ರಾಜಕೀಯ ಪಂಡಿತರು ತಿಳಿಸುತ್ತಾರೆ.
ಮೋದಿ ಅಧಿಕಾರಕ್ಕೆ ಬಂದ ನಂತರ ಮಹಿಳಾಪರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಗೊತ್ತೇ ಇದೆ. ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಸಿಲಿಂಡರ್ ಒದಗಿಸುವ ಉಜ್ವಲ ಯೋಜನೆಯಂತೂ ಅನೇಕ ಬಗೆಗಳಲ್ಲಿ ಮಹಿಳೆಯರಿಗೆ ನೆರವಾಯಿತು. ಒಲೆಯೆದುರು ಹೊಗೆಯೂದುವ ತ್ರಾಸನ್ನು ಇದು ಇಲ್ಲವಾಗಿಸಿತು. ಇನ್ನೊಂದೆಡೆ, ದಿಢೀರ್ ತ್ರಿವಳಿ ತಲಾಖ್ ರದ್ದುಪಡಿಸುವ ಕಾನೂನು ತಂದಿದ್ದು ಕ್ರಾಂತಿಕಾರಿ ಎನಿಸಿತಲ್ಲದೆ, ಮೋದಿಯವರಂತಹ ಧಾಡಸಿ ನಾಯಕ ಮಾತ್ರ ಇಂತಹ ನಿರ್ಣಯ ಕೈಗೊಳ್ಳಲು ಸಾಧ್ಯ ಎಂಬ ಉದ್ಗಾರ ಸಹ ಕೇಳಿಬಂತು. ಈ ಕಾಯ್ದೆ ತಂದ ಪರಿಣಾಮ ಮುಸ್ಲಿಮ್ ಮಹಿಳೆಯರ ವೋಟು ಕೂಡ ಮೋದಿಗೆ ಅರ್ಥಾತ್ ಬಿಜೆಪಿಗೆ ಕೆಲ ಪ್ರಮಾಣದಲ್ಲಿ ದಕ್ಕಿತು ಎಂಬ ವಿಶ್ಲೇಷಣೆ ಇದೆ. ಸಾಧಾರಣವಾಗಿ ಇದು ಅನೂಹ್ಯವಾದ ಸಂಗತಿ. ನಾಯಕನೊಬ್ಬ ತಮ್ಮ ಪರವಾಗಿ ಸಂವೇದನೆ ಹೊಂದಿದ್ದಾನೆ ಎಂಬ ಭಾವನೆ ಈ ಪಲ್ಲಟಕ್ಕೆ ಕಾರಣವಾಗಿರಬಹುದು. ಹೆಣ್ಣುಮಕ್ಕಳ ರಕ್ಷಣೆ ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಬೇಟಿ ಬಚಾವೊ ಬೇಟಿ ಫಡಾವೊ ಯೋಜನೆ ಸಹ ಮೋದಿ ಸರ್ಕಾರದ ಸ್ತ್ರೀ ಸಂವೇದನೆಯ ದ್ಯೋತಕವಾಗಿ ಬಿಂಬಿತವಾಯಿತು. ಹಾಗಂತ ಮೋದಿ ಕೇವಲ ಮಹಿಳಾ ಮತಗಳ ಮೇಲೆ ಕಣ್ಣಿಟ್ಟು ಹೀಗೆ ಆಲೋಚಿಸಿದರು- ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರು ಹೊರತು ನಿಜವಾದ ಕಳಕಳಿಯಿಂದಲ್ಲ ಎಂದು ಕೆಲವರು ಹೇಳುವುದನ್ನು ಒಪ್ಪಲಾಗದು.
ಹೀಗೆ ಷರಾ ಬರೆದಲ್ಲಿ, ಮೋದಿಯವರ ಅಥವಾ ಅವರ ಸರ್ಕಾರದ ಸ್ತ್ರೀಪರ ಧೋರಣೆಯನ್ನು ಅನುಮಾನಿಸಿದಂತಾಗುತ್ತದೆ. ಈ ಯೋಜನೆಗಳನ್ನು ಜಾರಿಗೆ ತಂದ ಉಪಫಲವಾಗಿ (ಬೈ ಪ್ರಾಡಕ್ಟ್) ರಾಜಕೀಯ ಫಸಲು ದೊರೆಯಿತು ಎಂದು ಹೇಳುವುದು ಹೆಚ್ಚು ಸೂಕ್ತ. ಯೋಜನೆಯ ಉಪಫಲದ ಬಗ್ಗೆ ಆಲೋಚಿಸುವುದನ್ನು ಅಥವಾ ಮುಂಗಾಣುವುದನ್ನು ತಪ್ಪು ಎಂದು ಹೇಳಲಾಗದು.
ಹಾಗೆ ನೋಡಿದರೆ, ಮಹಿಳೆಯರು ಬೇರೆ ಬೇರೆ ರಂಗಗಳಲ್ಲಿ ದಾಪುಗಾಲು ಇಡುತ್ತ ನಡೆಯತೊಡಗಿರುವುದು ಹೊಸ ವಿದ್ಯಮಾನವೇನಲ್ಲ. ಅದರಲ್ಲೂ ‘ಜ್ಞಾನ ಜಗತ್ತು’ ಪರಿಕಲ್ಪನೆ ಬಂದ ನಂತರವಂತೂ ಹೀಗೆ ಚೌಕಟ್ಟಿನ ಹಂಗನ್ನು ಮೀರಿ ಸಾಧನೆಯ ಹಾದಿ ಕ್ರಮಿಸುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿಯೇ ಸಾಂಪ್ರದಾಯಿಕವಾಗಿ ಮಹಿಳೆಯರ ಕ್ಷೇತ್ರವಲ್ಲ ಎನಿಸಿಕೊಂಡ ರಂಗಗಳಲ್ಲಿ ಸಹ ಸೈ ಎನಿಸಿಕೊಂಡವರು ಅಪಾರ. ಸುಮ್ಮನೆ ಕುತೂಹಲಕ್ಕೆ ನೋಡಿದರೆ ವಿವಿಧ ರಂಗಗಳಲ್ಲಿ ಸ್ತ್ರೀ ಹಾಜರಿ ಕುರಿತು ಕಂಡುಬರುವ ಚಿತ್ರಣ ಇದು: 2023ರಲ್ಲಿ ನಿಫ್ಟಿ 500 ಕಂಪನಿಗಳ ಆಡಳಿತ ಮಂಡಳಿ ಗಳಲ್ಲಿ ಮಹಿಳೆಯರ ಪ್ರಮಾಣ ಶೇ. 18ರಷ್ಟಿದೆ. ನ್ಯಾಯಾಂಗ ತೆಗೆದುಕೊಂಡರೆ- ಸವೋಚ್ಚ ನ್ಯಾಯಾಲಯದ ಪೂರ್ಣ ಸಂಖ್ಯಾ ಬಲವಾದ 34 ಅನ್ನು ಪರಿಗಣಿಸಿದರೆ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಮೂರು. ಇದು ಈ ವರ್ಷದ ಆಗಸ್ಟ್ ಸಮಯದ ಮಾಹಿತಿ. ದೇಶದ ಒಟ್ಟು 21 ಲಕ್ಷ ಪೊಲೀಸ್ ಬಲದಲ್ಲಿ ಮಹಿಳೆಯರು ಶೇ. 11 ರಷ್ಟು ಇದ್ದಾರೆ. ಭಾರತೀಯ ಭೂಸೇನೆಯಲ್ಲಿ, 2023ರ ಹೊತ್ತಿಗೆ ಮಹಿಳಾ ಅಧಿಕಾರಿಗಳ ಸಂಖ್ಯೆ 6993. ನೌಕಾಪಡೆಯಲ್ಲಿ 748. ಭಾರತೀಯ ವಾಯುಸೇನೆಯಲ್ಲಿ 1636 ಮಹಿಳಾ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ತಂತ್ರಜ್ಞಾನ ಉದ್ಯಮಗಳಲ್ಲಿ ಮಹಿಳಾ ಉದ್ಯೋಗಿಗಳ ಪ್ರಮಾಣ ಶೇ. 34 ರಷ್ಟು ಇರುವುದು ಗಮನಾರ್ಹ. ಕೃಷಿ ಹೊರತುಪಡಿಸಿ ಈ ಉದ್ಯಮದಲ್ಲಿ ಮಹಿಳೆಯರ ಭಾಗವಹಿಸುವಿಕೆ ಜಾಸ್ತಿ ಇದೆ. ಉನ್ನತ ಶಿಕ್ಷಣದ ಅವಕಾಶದ ಫಲ ಇದು. ಲಾಗಾಯ್ತಿನಿಂದಲೂ ಕೃಷಿ ವಲಯವು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದು, ಅಂದಾಜು ಶೇ. 62ರಷ್ಟು ಮಹಿಳೆಯರು ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಹಲವು ಪ್ರತಿಕೂಲ ಪರಿಸ್ಥಿತಿಗಳು, ಹವಾಮಾನ ಏರುಪೇರು, ಬೆಲೆ ಅನಿಶ್ಚಿತತೆ ಇತ್ಯಾದಿ ಸಮಸ್ಯೆಗಳ ನಡುವೆಯೂ ನಮ್ಮ ದೇಶದಲ್ಲಿ ಕೃಷಿ ಇಷ್ಟಾದರೂ ನಳನಳಿಸಲು ಇದು ಸಹ ಒಂದು ಪ್ರಮುಖ ಕಾರಣವಿರಬಹುದೇನೊ. ಮಳೆ-ಚಳಿ-ಬಿಸಿಲು ಲೆಕ್ಕಿಸದೆ ಹೊಲದಲ್ಲಿ ದುಡಿಯುವ ಮಾತೆಯರು ತಮ್ಮ ಮನೆ ಮಾತ್ರವಲ್ಲ, ಒಟ್ಟಾರೆಯಾಗಿ ದೇಶದ ಪ್ರಗತಿಗೂ ತಮ್ಮದೇ ಆದ ಕೊಡುಗೆ ನೀಡುತ್ತಿರುವುದನ್ನು ನಾವು ಮರೆಯುವಂತಿಲ್ಲ.
ನಮ್ಮ ದೇಶದ ರಾಜ್ಯಗಳ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ತೆಗೆದುಕೊಂಡರೆ ಶೇ. 15 ರ ಮೂಲಕ ತ್ರಿಪುರ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನ ಛತ್ತೀಸಗಢ. ಅಲ್ಲಿ ಶಾಸಕಿಯರ ಪ್ರಮಾಣ ಶೇ. 14.4 ಇದೆ. ಹಾಲಿ ದೇಶದಲ್ಲಿ ಏಕೈಕ ಮಹಿಳಾ ಮುಖ್ಯಮಂತ್ರಿ ಇರುವ ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿ ಸದ್ಯ ವಿಧಾನಸಭೆ ಪ್ರವೇಶಿಸಿದ ಮಹಿಳೆಯರ ಪ್ರಮಾಣ ಶೇ. 13.6. ನಮ್ಮ ಕರ್ನಾಟಕದಲ್ಲಿ ಈ ಪ್ರಮಾಣ ಹಾಲಿ ಶೇ. 4.5 ಇದೆ. ಈ ಅಂಕಿಅಂಶವನ್ನು ಎದುರಿಗಿಟ್ಟುಕೊಂಡೇ ತೃಣಮೂಲ ಕಾಂಗ್ರೆಸ್ ನಾಯಕರೊಬ್ಬರು ’ನಮ್ಮ ಸಮಾನರಾರಿಹರು’ ಎಂದು ಬೆನ್ನು ತಟ್ಟಿಕೊಂಡಿದ್ದು. ಎಷ್ಟೆಂದರೂ ಆ ಪಕ್ಷಕ್ಕೆ ಗಟ್ಟಿಗಿತ್ತಿ ಮಮತಾ ಬ್ಯಾನರ್ಜಿ ನೇತೃತ್ವವಲ್ಲವೆ!
2021ರಲ್ಲಿ ಮಮತಾ ಬ್ಯಾನರ್ಜಿ ಪಕ್ಷ ಅಧಿಕಾರಕ್ಕೆ ಏರುವಲ್ಲಿ ಮಹಿಳಾ ಕೇಂದ್ರಿತ ಯೋಜನೆಗಳ ಪಾತ್ರವೂ ಮಹತ್ವದ್ದಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಬಿಹಾರದಲ್ಲಿ ನಿತೀಶ್ ಕುಮಾರ್ ಸಹ, ಪಾನ ನಿಷೇಧದ ಭರವಸೆ ಮೂಲಕ ಮಹಿಳಾ ಮತಗಳನ್ನು ಬಾಚಿಕೊಂಡಿದ್ದರು.
ಕರ್ನಾಟಕ ದಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆ ನೀಡುವ ಮೂಲಕ ಕಾಂಗ್ರೆಸ್ ಮಹಿಳೆಯರನ್ನು ಆಕರ್ಷಿಸಿದ್ದು ಸುಳ್ಳಲ್ಲ. ಹಾಗಂತ ಎಲ್ಲ ಬಾರಿಯೂ ಈ ಪ್ಲಾನ್ ಯಶಸ್ಸು ತರುತ್ತದೆ ಎಂದೇನಿಲ್ಲ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಶೇ. 40 ಟಿಕೆಟ್ ನೀಡುವ ಮೂಲಕ ದೊಡ್ಡ ಲಾಭ ಎತ್ತುವ ಭರ್ಜರಿ ಯೋಜನೆ ರೂಪಿಸಿತ್ತು. ಮುಖ್ಯವಾಗಿ ಪ್ರಿಯಾಂಕಾ ಗಾಂಧಿ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದರು. ಉತ್ತರ ಪ್ರದೇಶದಂತಹ ಪ್ರಮುಖ ರಾಜ್ಯದಲ್ಲಿ ಹೆಚ್ಚು ಸ್ಥಾನ ಗಳಿಸುವುದು ಕಾಂಗ್ರೆಸ್​ಗೆ ದೇಶಾದ್ಯಂತ ಟಾನಿಕ್ ಆಗಬಹುದಿತ್ತು. ಆದರೆ, ಅಂದುಕೊಂಡಷ್ಟು ಮತಬೇಟೆ ಸಾಧ್ಯವಾಗಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರಭಾವದ ಎದುರು ಕಾಂಗ್ರೆಸ್ ಲೆಕ್ಕಾಚಾರ ಬುಡಮೇಲಾಯಿತು.
ಇತರ ಕೆಲ ದೇಶಗಳ ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯ ಹೇಗಿದೆ ಎಂಬುದು ಕುತೂಹಲಕರ. ಹೆಚ್ಚು ಪ್ರಮಾಣದ ಪ್ರಾತಿನಿಧ್ಯ ಇರುವ ಕೆಲ ದೇಶಗಳು: ಸ್ವೀಡನ್​ನಲ್ಲಿ ಶೇ. 46.4, ನಾರ್ವೆಯಲ್ಲಿ ಶೇ. 46.1, ಚೀನಾದಲ್ಲಿ ಶೇ. 26.25, ಜರ್ಮನಿಯಲ್ಲಿ ಶೇ. 35, ಅಮೆರಿಕದಲ್ಲಿ ಶೇ. 28.8, ಯುನೈಟೆಡ್ ಕಿಂಗ್ಡಮ್ಲ್ಲಿ ಶೇ. 34.5, ದಕ್ಷಿಣ ಆಫ್ರಿಕಾ ದಲ್ಲಿ ಶೇ. 45.4. ಭಾರತದಲ್ಲಿ 1990ರ ಹೊತ್ತಿಗೆ ಶೇ. 5ರಷ್ಟಿದ್ದ ಮಹಿಳಾ ಸಂಸದರ ಪ್ರಮಾಣ 2023ರ ವೇಳೆಗೆ ಶೇ. 15ಕ್ಕೆ ಏರಿಕೆ ಕಂಡಿದೆ.
ಮಹಿಳಾ ಮೀಸಲಾತಿ ಮಸೂದೆಗೆ ಸಂಸತ್ತಿನ ಅನುಮೋದನೆ ದೊರೆತಿದೆ ಎಂದಾಕ್ಷಣ ನಾಳೆಯೇ ಜಾರಿಗೆ ಬಂದು, ಲೋಕಸಭೆಯಲ್ಲಿ ಮಹಿಳಾ ಸಂಸದರ ಸಂಖ್ಯೆ 181ಕ್ಕೆ ಹೆಚ್ಚಳವಾಗಿಬಿಡುತ್ತದೆ ಎಂದೇನಿಲ್ಲ. ಜನಗಣತಿ ನಡೆದು, ಕ್ಷೇತ್ರ ಪುನರ್ವಿಂಗಡಣೆ ಬಳಿಕವಷ್ಟೇ ಶೇ.33 ಮೀಸಲಾತಿ ಜಾರಿಗೆ ಬರುತ್ತದೆ. ಆ ಲೆಕ್ಕದಲ್ಲಿ 2029ರ ಚುನಾವಣೆಯ ಹೊತ್ತಿಗೆ ಇದು ಸಾಕಾರವಾಗಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ತಕ್ಷಣ ಇದನ್ನು ಜಾರಿಗೆ ತರಬೇಕು; ಮೀಸಲಾತಿ ಹೆಸರಿನಲ್ಲಿ ರಾಜಕೀಯ ಲೆಕ್ಕ ಸಲ್ಲದು ಎಂದು ವಿಪಕ್ಷಗಳು ಮೋದಿಯತ್ತ ಬಾಣ ಬಿಟ್ಟಿವೆ. ಇದೇನೆ ಇದ್ದರೂ, ಇಂತಹದೊಂದು ಉಪಕ್ರಮವೇ ಮಹಿಳೆಯರಲ್ಲಿ ಹೊಸ ಜೋಷ್ ಮೂಡಿಸಬಲ್ಲದು ಮತ್ತು ಆಡಳಿತದ ಏಣಿ ಏರುವ ಅವರ ಕನಸಿಗೆ ರೆಕ್ಕೆ ಹಚ್ಚಬಲ್ಲದು.
ಕೊನೇ ಮಾತು: ಕೆಲ ಮಹಿಳಾ ಜನಪ್ರತಿನಿಧಿಗಳ ಹೆಸರಿನಲ್ಲಿ ಅವರ ಕುಟುಂಬ ಸದಸ್ಯರೇ ಆಡಳಿತ ಮಾಡುತ್ತಾರೆ; ದರ್ಬಾರು ನಡೆಸುತ್ತಾರೆ ಎಂಬ ಆಕ್ಷೇಪದ ದನಿ ಬಹಳ ಕಾಲದಿಂದ ಇದೆ. ಈ ರೀತಿಯ ಪುಕಾರಿಗೆ ಆಸ್ಪದವೇ ಇಲ್ಲದಂತೆ ಆಡಳಿತ ಸಾಮರ್ಥ್ಯ- ಚಾಕಚಕ್ಯತೆ ಪ್ರದರ್ಶಿಸುವ ಹೊಣೆಗಾರಿಕೆ ಮಹಿಳೆಯರದೇ ಆಗಿದೆ. ಆ ಸವಾಲನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಆಶಿಸೋಣ… ಹಾಗೇ ಪ್ರತಿನಿಧಿಗಳ ಸಂಖ್ಯೆ ಹೆಚ್ಚಳವು, ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದಲೂ ನೆರವಾಗಲಿ.
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)
22ರ ಯುವಕ ಗಣೇಶೋತ್ಸವದಲ್ಲಿ ಕುಣಿಯುತ್ತ ಕುಸಿದು ಬಿದ್ದು ಸಾವು; ಹಠಾತ್ ಹೃದಯಾಘಾತಕ್ಕೆ ಮತ್ತೊಂದು ಬಲಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 11 =
Remember me
