ನವದೆಹಲಿ:ಪೂರ್ವ ಲಡಾಖ್​ನ ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣ ದಂಡೆಯಲ್ಲಿ ಕಳೆದ ಶನಿವಾರ ಮತ್ತು ಸೋಮವಾರ ಚೀನಾ ಸೇನೆಯ ಉದ್ದಟತನದ ನಂತರ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಉಭಯ ದೇಶಗಳು ಹೆಚ್ಚುವರಿ ತುಕಡಿ, ಯುದ್ಧ ಸಾಮಗ್ರಿಗಳನ್ನು ಜಮಾವಣೆ ಮಾಡುತ್ತಿವೆ.
ಭಾರತ ಮತ್ತು ಚೀನಾ ಸೇನೆಗಳು ಕೆಲವು ನೂರು ಮೀಟರ್ ಸನಿಹದಲ್ಲಿ (ಫೈರಿಂಗ್ ರೇಂಜ್) ಮುಖಾಮುಖಿಯಾಗಿ ನಿಂತಿವೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಸರೋವರದ ದಕ್ಷಿಣ ದಂಡೆಯ ಎಲ್ಲ ಆಯಕಟ್ಟಿನ ಸ್ಥಳಗಳು ಭಾರತದ ಹಿಡಿತದಲ್ಲಿದ್ದು, ಸರಹದ್ದುಗಳು ಸುರಕ್ಷಿತವಾಗಿವೆ ಎಂದು ಸೇನೆ ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಲಡಾಖ್ ಗಡಿಯಲ್ಲಿ ಬಿಕ್ಕಟ್ಟು ಉಲ್ಬಣದ ಹಿನ್ನೆಲೆಯಲ್ಲಿ ಈಶಾನ್ಯ ಹಿಮಾಲಯ ಶ್ರೇಣಿಯ ಸಿಕ್ಕಿಂ, ಅರುಣಾಚಲ ಪ್ರದೇಶದ ಎಲ್​ಎಸಿ ಬಳಿಯಲ್ಲೂ ಸೇನಾ ಜಮಾವಣೆಯನ್ನು ಭಾರತ ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ. ಚೀನಾ ಸೇನೆಯು ಶನಿವಾರ ರಾತ್ರೋರಾತ್ರಿ ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣ ದಂಡೆಗೆ ಮುತ್ತಿಗೆ ಹಾಕಲು ಯತ್ನಿಸಿತ್ತು. ಆದರೆ, ಈ ಪ್ರಯತ್ನವನ್ನು ಭಾರತದ ಸೇನೆ ವಿಫಲಗೊಳಿಸಿತು. ನಂತರ ಸೋಮವಾರ ಕೂಡ ಇಂತಹ ಮತ್ತೊಂದು ಪ್ರಯತ್ನವನ್ನು ಮಾಡಿತು. ಭಾರತದ ಯೋಧರು ಇದನ್ನೂ ತಡೆದರು. ಸರೋವರದ ಎತ್ತರದ ದಿಣ್ಣೆಗಳನ್ನು ವಶಪಡಿಸಿಕೊಳ್ಳುವುದು ಚೀನಾ ಸೇನೆ ಹುನ್ನಾರವಾಗಿತ್ತು. ಇದಕ್ಕಾಗಿ ಅತ್ಯಾಧುನಿಕ ಕ್ಯಾಮರಾ, ನಿಗಾ ಸಲಕರಣೆ, ಯುದ್ಧ ಟ್ಯಾಂಕ್ ಮತ್ತು ಆಯುಧದ ವಾಹನಗಳನ್ನು ತಂದಿತ್ತು. ಆದರೆ, ಚೀನಾದ ಅತ್ಯಾಧುನಿಕ ಸಲಕರಣೆಗಳ ನಿಗಾಕ್ಕೆ ಸಿಗದ ಭಾರತದ ಸೇನೆ, ಮೊದಲೇ ದಿಣ್ಣೆಗಳಲ್ಲಿ ಬೀಡು ಬಿಟ್ಟಿತ್ತು. ಇದರಿಂದ ಚೀನಾ ಸೇನೆ ಕಕ್ಕಾಬಿಕ್ಕಿಯಾಯಿತು.
ಕಟ್ಟೆಚ್ಚರ ವಹಿಸುವಂತೆ ಗೃಹ ಸಚಿವಾಲಯ ಸೂಚನೆ
ಕೇಂದ್ರ ಗೃಹ ಸಚಿವಾಲಯ ಕೂಡ ಅರೆಸೇನಾ ಪಡೆಗಳಿಗೆ ಜಾಗೃತವಾಗಿರುವಂತೆ ಆದೇಶಿಸಿದೆ. ಚೀನಾ, ನೇಪಾಳ, ಭೂತಾನ್ ಗಡಿಯಲ್ಲಿರುವ ಅರೆಸೇನಾ ಪಡೆಗಳು ಕಟ್ಟೆಚ್ಚರದಿಂದ ಇರಬೇಕು ಎಂದು ಸೂಚಿಸಿದೆ. ಈ ಗಡಿಗಳಲ್ಲಿ ಭಾರತ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಮತ್ತು ಸಶಸ್ತ್ರ ಸೀಮಾಬಲ (ಎಸ್​ಎಸ್​ಬಿ) ತುಕಡಿಗಳು ರಕ್ಷಣೆ ಹೊಣೆ ಹೊತ್ತಿವೆ.
ತಕ್ಕ ಪ್ರತ್ಯುತ್ತರ ನೀಡಲು ರಾಜನಾಥ್ ಸೂಚನೆ
ಪ್ಯಾಂಗಾಂಗ್ ತ್ಸೊ ಸರೋವರದ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಮಂಗಳವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಚೀನಾದ ಸೇನೆಯಂತೆಯೇ ಭಾರತದ ಸೇನೆಯೂ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಬೇಕು. ಚೀನಾ ಮತ್ತೆ ತಂಟೆ ತೆಗೆದರೆ ತಕ್ಕ ಪ್ರತ್ಯುತ್ತರ ನೀಡಬೇಕು. ಸೂಕ್ಷ್ಮ ಸರಹದ್ದು ಪ್ರದೇಶದಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಬೇಕು ಎಂಬ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಪೂರ್ವ ಲಡಾಖ್ ಗಡಿಯಲ್ಲಿ ಸ್ಥಿತಿಗತಿ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮೂರು ಪಡೆಗಳ ಪ್ರಧಾನ ದಂಡನಾಯಕ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಭೂ, ವಾಯುಪಡೆ ಮುಖ್ಯಸ್ಥರಾದ ಜನರಲ್ ನರಾವಣೆ, ಆರ್.ಕೆ.ಎಸ್.ಬಧೌರಿಯಾ ಇನ್ನಿತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಭಾರತದ ಯೋಧ ಮೃತಪಟ್ಟಿಲ್ಲ
ಚೀನಾದ ಪಶ್ಚಿಮ ಗಡಿಯನ್ನು ಭಾರತ ಸೇನೆಯೇ ಉಲ್ಲಂಘಿಸಿದೆ ಎಂದು ಚೀನಾ ಪುನರುಚ್ಚರಿಸಿದೆ. ಭಾರತ ಆಕ್ರಮಣಕಾರಿಯಾಗಿ ವರ್ತಿಸಿದ್ದರೂ ನಮ್ಮ ಸೇನೆ ಸಂಯಮದಿಂದ ವರ್ತಿಸಿ ಘರ್ಷಣೆಗೆ ಆಸ್ಪದ ನೀಡಿಲ್ಲ. ಹೀಗಾಗಿ ಭಾರತದ ಯಾವುದೇ ಯೋಧ ಸಾವನ್ನಪ್ಪಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನಿಯಿಂಗ್ ತಿಳಿಸಿದ್ದಾರೆ. ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಒಂದು ದೇಶದ ಹೊಣೆ ಮಾತ್ರವಲ್ಲ. ಎರಡೂ ದೇಶಗಳು ಇದನ್ನು ಪಾಲಿಸಬೇಕು. ಈ ವಿಚಾರದಲ್ಲಿ ಭಾರತ ಹಿಂದಿನ ಒಪ್ಪಂದದಂತೆ ನಡೆಯಬೇಕು ಎಂದಿದ್ದಾರೆ. ಪ್ಯಾಂಗಾಂಗ್ ತ್ಸೊ ಸರೋವರದ ಕಾಲಾ ಟಾಪ್ ಮತ್ತು ಥಾಕುಂಕ್ ಹೈಟ್ಸ್ ಪ್ರದೇಶದಲ್ಲಿ ಚೀನಾ ಸೇನೆಯನ್ನು ಹಿಮ್ಮೆಟ್ಟಿಸುವಾಗ ಸಿಖ್ ಲೈಟ್ ಇನ್ಪೆಂಟ್ರಿಯ ವಿಶೇಷ ಕಾರ್ಯಾಚರಣೆ ಘಟಕದ ಓರ್ವ ಯೋಧ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಚೀನಾ ವಕ್ತಾರೆ ಈ ಸ್ಪಷ್ಟನೆ ನೀಡಿದ್ದಾರೆ.
3ನೇ ಸುತ್ತಿನ ಸಭೆ
ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತದ ಭಾಗದಲ್ಲಿರುವ ಚುಶುಲ್​ನಲ್ಲಿ ಉಭಯ ಸೇನೆಗಳ ಬ್ರಿಗೇಡ್ ಕಮಾಂಡರ್​ಗಳ ಮಧ್ಯೆ ಬುಧವಾರ 3ನೇ ಸುತ್ತಿನ ಮಾತುಕತೆ ನಡೆದಿದೆ. ಸೋಮವಾರ ಮತ್ತು ಮಂಗಳವಾರ ತಲಾ ಆರು ತಾಸು ನಡೆದ ಚರ್ಚೆ ಫಲಪ್ರದವಾಗಲಿಲ್ಲ. ಹೀಗಾಗಿ ಬುಧವಾರ 3ನೇ ಸುತ್ತಿನ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:fourteen + two =
Remember me
