ನವದೆಹಲಿ:ಕರ್ನಾಟಕದಲ್ಲಿ ಭೂಸ್ವಾಧೀನ ವಿಳಂಬ ಮತ್ತು ಅರಣ್ಯ ಪ್ರದೇಶದ ಮಾರ್ಗದಲ್ಲಿ ನಿರ್ಮಾಣ ಕಾರ್ಯಕ್ಕೆ ಅಗತ್ಯ ಅನುಮತಿ ಸಕಾಲಕ್ಕೆ ದೊರೆಯದಿರುವುದರಿಂದ ರಸ್ತೆ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ ಎಂದು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿ ತಿಳಿಸಿದರು. ಬಿಜೆಪಿಯ ಕೆ.ಸಿ.ರಾಮಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2020-21ರಲ್ಲಿ 671 ಕಿ.ಮೀ., 2019-20ರಲ್ಲಿ 777 ಕಿ.ಮೀ. ಮತ್ತು 2018-19ರಲ್ಲಿ 1,038 ಕಿ.ಮೀ. ರಸ್ತೆ ನಿರ್ಮಾಣ ಆಗಿದೆ ಎಂದರು.
ಸುರಕ್ಷತೆಗಾಗಿ ಹೊಸ ನಿಯಮ:ದೇಶಾದ್ಯಂತ 2020ರಲ್ಲಿ 13,022 ಜನರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಕಾರುಗಳಲ್ಲಿ ಏರ್ ಬ್ಯಾಗ್ ಕೆಲಸ ಮಾಡಿದ್ದರೆ ಈ ಪ್ರಾಣಗಳು ಉಳಿದುಬಿಡುತ್ತಿದ್ದವು. ಪ್ರತಿ ವರ್ಷ 5 ಲಕ್ಷ ಅಪಘಾತಗಳಾಗುತ್ತಿದ್ದು, 1.5 ಲಕ್ಷ ಸಾವು ಸಂಭವಿಸುತ್ತಿದೆ. ಇದೇ ಕಾರಣಕ್ಕೆ ವಾಹನ ಬಳಕೆದಾರರ ಸುರಕ್ಷೆತಗಾಗಿಯೇ ಹೊಸ ವಾಹನ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಇದು ಅವರ ಸುರಕ್ಷತೆಯನ್ನು ಖಾತರಿಪಡಿಸುತ್ತದೆ. ಅಕ್ಟೋಬರ್ 1ರಿಂದ ಹೊಸ ನಿಯಮ ಚಾಲ್ತಿಗೆ ಬರಲಿದೆ. ಪ್ರಸ್ತಾವಿತ ಎಲ್ಲ ವಾಹನಗಳಲ್ಲಿ ಆರು ಏರ್ ಬ್ಯಾಗ್ ಇರಬೇಕಾದ್ದು ಅವಶ್ಯ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಗೆ ಬುಧವಾರ ತಿಳಿಸಿದರು.
ರಾಷ್ಟ್ರೀಯ ಯೋಜನೆಯಾಗಿ ಘೊಷಿಸಲು ಒತ್ತಾಯ:ಕೃಷ್ಣಾ ಮೇಲ್ದಂಡೆ ಮತ್ತು ಕಳಸಾ ಬಂಡೂರಿ ಯೋಜನೆಗಳನ್ನು ಶೀಘ್ರವೇ ರಾಷ್ಟ್ರೀಯ ಯೋಜನೆಗಳೆಂದು ಘೊಷಿಸಬೇಕು ಎಂದು ರಾಜ್ಯಸಭೆಯ ಕಾಂಗ್ರೆಸ್​ನ ಸದಸ್ಯ ಜಿ.ಸಿ. ಚಂದ್ರಶೇಖರ್ ಒತ್ತಾಯಿಸಿ ದರು. ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡರೆ ಸುಮಾರು 5.90 ಲಕ್ಷ ಹೆಕ್ಟೆರ್ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಉತ್ತರ ಕರ್ನಾಟಕ ಭಾಗದ 7 ಜಿಲ್ಲೆಗಳ ರೈತರಿಗೆ ನೆರವಾಗಲಿದೆ. ಮಲಪ್ರಭಾ ನದಿ ಜತೆಗೆ ಮಹದಾಯಿ ನದಿ ಜೋಡಿಸುವ ಕಳಸಾ ಬಂಡೂರಿ ಯೋಜನೆಯಿಂದ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಸಿಕ್ಕಂತಾಗಲಿದೆ ಎಂದರು. ಕೇಂದ್ರದ ಉದ್ದೇಶಿತ ಕೃಷ್ಣಾ -ಪಾಲಾರ್ ನದಿ ಜೋಡಣೆ ಯೋಜನೆ ಜಾರಿಗೆ ಕ್ರಮ ಕೈಗೊಂಡು, ಕರ್ನಾಟಕಕ್ಕೆ ಅಗತ್ಯ ಪ್ರಮಾಣದ ನೀರನ್ನು ಹಂಚಿಕೆ ಮಾಡಬೇಕು ಎಂದೂ ತಿಳಿಸಿದರು. ಸೋಷಿಯಲ್ ಮೀಡಿಯಾ ಬಳಕೆದಾರರ ವೆರಿಫಿಕೇಷನ್ ಕಡ್ಡಾಯಗೊಳಿಸುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಕೇಂದ್ರ ಎಲೆಕ್ಟ್ರಾನಿಕ್ ಆಂಡ್ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸಂಸತ್​ಗೆ ತಿಳಿಸಿದರು.
72 ಸಂಸದರಿಗೆ ಬೀಳ್ಕೊಡುಗೆ:ನಿವೃತ್ತರಾಗುತ್ತಿರುವ 72 ಸಂಸದರಿಗೆ ರಾಜ್ಯಸಭೆಯಲ್ಲಿ ಬೀಳ್ಕೊ ಡುಗೆ ನೀಡಲಾಯಿತು. ಈ ಪೈಕಿ 7 ಮಂದಿ ನಾಮ ನಿರ್ದೇಶಿತ ಸದಸ್ಯರಲ್ಲಿ ಎಂ.ಸಿ. ಮೇರಿ ಕೋಮ್ ಕಾಂಗ್ರೆಸ್​ನ ಆನಂದ್ ಶರ್ವ, ಎ.ಕೆ.ಆಂಟನಿ, ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಸೇರಿದ್ದಾರೆ.
ಹಿರಿಯ ನಾಗರಿಕರಿಗೆ ರೈಲ್ವೆ ವಿನಾಯಿತಿ ಇಲ್ಲ:ರೈಲುಗಳಲ್ಲಿ ಹಿರಿಯ ನಾಗರಿಕರಿಗೆ ನೀಡಲಾಗಿದ್ದ ದರ ವಿನಾಯಿತಿಯನ್ನು 2020ರ ಮಾರ್ಚ್​ನಲ್ಲಿ ರೈಲ್ವೆ ಸಚಿವಾಲಯ ಹಿಂಪಡೆದಿತ್ತು. ಇದನ್ನು ಮತ್ತೆ ನೀಡುವ ಯಾವುದೇ ಪ್ರಸ್ತಾವನೆ ಇಲ್ಲ. 2020ರ ಮಾರ್ಚ್ 20ರಿಂದ 2021ರ ಮಾರ್ಚ್ 31ರ ಮಧ್ಯೆ 1.87 ಕೋಟಿ ಹಿರಿಯ ನಾಗರಿಕರು ರೈಲು ಪ್ರಯಾಣ ಮಾಡಿದ್ದಾರೆ. 2021 ಏಪ್ರಿಲ್ 1ರಿಂದ 2022 ಫೆಬ್ರವರಿ ನಡುವೆ 4.74 ಕೋಟಿ ಹಿರಿಯ ನಾಗರಿಕರು ರೈಲು ಸೇವೆ ಪಡೆದಿದ್ದಾರೆ. 2019 -20ರಲ್ಲಿ ಹಿರಿಯ ನಾಗರಿಕರ ವಿನಾಯಿತಿ ಕಾರಣ ರೈಲ್ವೆಗೆ 1,667 ಕೋಟಿ ರೂಪಾಯಿ ಆದಾಯ ನಷ್ಟ ಉಂಟಾಗಿತ್ತು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಗೆ ಬುಧವಾರ ತಿಳಿಸಿದರು.
ಸಿವಿಲ್ ಸರ್ವೀಸ್ ಎಕ್ಸಾಂ ನಿಯಮ ಬದಲಿಲ್ಲ:ನಾಗರಿಕ ಸೇವಾ ಪರೀಕ್ಷೆಯ ಹಾಲಿ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಪರೀಕ್ಷಾ ಆಕಾಂಕ್ಷಿಗಳಿಗೆ ಹೆಚ್ಚುವರಿ ಅವಕಾಶ ನೀಡಲಾಗದು. ಈಗ ಇರುವ ಮಿತಿಯನ್ನು ಹೆಚ್ಚಿಸುವುದು ಕೂಡ ಸಾಧ್ಯವಿಲ್ಲ ಎಂದು ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ. ಸಂಸದೀಯ ಸಮಿತಿಯು ಕೋವಿಡ್ ಕಾರಣ ನೀಡಿ ಹೆಚ್ಚುವರಿ ಅವಕಾಶ ನೀಡಬೇಕು ಎಂದು ಮಾರ್ಚ್ 24ರಂದು ಶಿಫಾರಸು ಮಾಡಿತ್ತು.
ಒಆರ್​ಒಪಿ ವಿಚಾರದಲ್ಲಿ ರಾಜಕೀಯ:ಒನ್ ರ್ಯಾಂಕ್ ಒನ್ ಪೆನ್ಶನ್ (ಒಆರ್​ಒಪಿ) ವಿಚಾರದಲ್ಲಿ ಬಿಜೆಪಿ ಸರ್ಕಾರ ರಾಜಕೀಯ ಮಾಡುತ್ತಿದೆ. ಸಶಸ್ತ್ರ ಪಡೆಯ ನಿವೃತ್ತರಿಗೆ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಒಆರ್​ಒಪಿ ವಿರುದ್ಧ ಅಭಿಪ್ರಾಯವನ್ನು ಸರ್ಕಾರ ಸುಪ್ರೀಂ ಕೋರ್ಟ್​ಗೆ ನೀಡಿದೆ ಎಂದು ಲೋಕಸಭೆಯ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಟೀಕಿಸಿದರು.
ಕೃಷಿ ಉತ್ಪನ್ನ ರಫ್ತು 25% ಹೆಚ್ಚಳ:ಪ್ರಸಕ್ತ ಹಣಕಾಸು ವರ್ಷದ ಆರಂಭದ 10 ತಿಂಗಳಲ್ಲಿ ಕೃಷಿ ಉತ್ಪನ್ನ ರಫ್ತು ಪ್ರಮಾಣ ಶೇಕಡ 25.14% ಹೆಚ್ಚಾಗಿದ್ದು, 40.87 ಶತಕೋಟಿ ಡಾಲರ್ ತಲುಪಿದೆ. ಹಿಂದಿನ ವರ್ಷ ಇದು 32.66 ಶತಕೋಟಿ ಡಾಲರ್ ಇತ್ತು ಎಂದು ವಾಣಿಜ್ಯ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಸಿಂಗ್ ಪಟೇಲ್ ಲೋಕಸಭೆಗೆ ತಿಳಿಸಿದರು.
ಎಫ್​ಸಿಇವಿನಲ್ಲಿ ಸಂಸತ್​ಗೆ ಬಂದ ಗಡ್ಕರಿ:ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಹೆಚ್ಚಿನ ಉತ್ತೇಜನ ನೀಡತೊಡಗಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ ಟೊಯೊಟಾ ಮಿರೈ ಕಾರಿನಲ್ಲಿ ಆಗಮಿಸಿ ಗಮನಸೆಳೆದರು. ಇದನ್ನು ಅವರು ಕೂ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಜಲಜನಕ ಆಧಾರಿತ ಫ್ಯೂಯೆಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ (ಎಫ್​ಸಿಇವಿ)ನಲ್ಲಿ ಮೂರು ಹೈಡ್ರೋಜನ್ ಟ್ಯಾಂಕ್​ಗಳಿವೆ. ಅಂದಾಜು ಐದೇ ನಿಮಿಷದಲ್ಲಿ ಇಂಧನ ಮರುಭರ್ತಿ ಮಾಡುವುದಕ್ಕೂ ಸಾಧ್ಯವಿದೆ. 1.24kWh ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಇದರಲ್ಲಿದೆ. 182 ಎಚ್​ಪಿ ಎಲೆಕ್ಟ್ರಿಕ್ ಮೋಟಾರನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ. ಟೊಯೊಟಾ ಮಿರೈನಂತೆ ಹೋಂಡಾದ ಕ್ಲಾರಿಟಿ, ಹ್ಯುಂಡೈನ ನೆಕ್ಸೋ ಕೂಡ ಹೈಡ್ರೋಜನ್ ಗ್ಯಾಸ್ ಅನ್ನು ಇಂಧನವಾಗಿ ಬಳಸುತ್ತದೆ.
ದೇಶದ ಮೊದಲ ಎಫ್​ಸಿಇವಿ:ಟೊಯೊಟಾ ಮಿರೈ ದೇಶದ ಮೊದಲ ಗ್ರೀನ್ ಹೈಡ್ರೋಜನ್ ಕಾರು. ವಾಹನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಇದು ಮುನ್ನುಡಿ ಬರೆಯಲಿದೆ. ಆತ್ಮನಿರ್ಭರ ಭಾರತಕ್ಕೆ ಪೂರಕ ವಿದ್ಯಮಾನಗಳು ನಡೆಯುತ್ತಿವೆ. ಈ ಯೋಜನೆಗಾಗಿ ಸರ್ಕಾರ 3,000 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.
ಪರೀಕ್ಷಾ ಯಶಸ್ಸಿಗೆ ಸಿದ್ಧತಾ ಸೂತ್ರ; ಇಲ್ಲಿವೆ ಕೆಲವು ಟಿಪ್ಸ್..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − one =
Remember me
