|ರಾಘವ ಶರ್ಮ ನಿಡ್ಲೆನವದೆಹಲಿ
ವಿವಾಹದ ನೆಪದಲ್ಲಿ ದಬ್ಬಾಳಿಕೆ, ವಂಚನೆ ಮತ್ತು ಪ್ರಲೋಭನೆಯಿಂದ ಧಾರ್ವಿುಕ ಮತಾಂತರ ಮಾಡುವುದರ ವಿರುದ್ಧದ ಕರಡು ಸುಗ್ರೀವಾಜ್ಞೆಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಮತ್ತು ಅದಕ್ಕೆ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅಂಕಿತ ಹಾಕಿರುವುದು ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಬೆಂಬಲಿಗರು ಮತ್ತು ಹಿಂದೂ ಸಂಘಟನೆಗಳು ಈ ಕ್ರಮ ಸ್ವಾಗತಿಸಿದ್ದರೆ, ವಿವಾಹ, ಪ್ರೀತಿ ವಿಷಯದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಹಾನಿಮಾಡುವ ಅಪಾಯಕಾರಿ ಕಾನೂನನ್ನು ಅಮಾನ್ಯಗೊಳಿಸಬೇಕು ಎಂದು ಕಾಂಗ್ರೆಸ್, ಎಡಪಕ್ಷಗಳು ಒತ್ತಾಯಿಸುತ್ತಿವೆ.
ಈ ಪ್ರಸ್ತಾವಿತ ಕಾನೂನನ್ನು ಸಾರ್ವಜನಿಕ ವಲಯದಲ್ಲಿ ‘ಲವ್ ಜಿಹಾದ್ ಕಾನೂನು’ ಎಂದು ಕರೆಯಲಾಗುತ್ತಿದೆ. ಹಾಗಂತ, ಸುಗ್ರೀವಾಜ್ಞೆಯಲ್ಲಿ ‘ಲವ್ ಜಿಹಾದ್’ ಎಂಬ ಪದ ಬಳಕೆಯಾಗಿಲ್ಲ. ಅನ್ಯಧರ್ವಿುಯರನ್ನು ಪ್ರೇಮಿಸಿ ವಿವಾಹವಾಗಲು ಧಾರ್ವಿುಕ ಮತಾಂತರವಾಗುವುದನ್ನು ಬಿಜೆಪಿ ನಾಯಕರು ‘ಲವ್ ಜಿಹಾದ್’ ಎಂದು ಹೇಳುತ್ತಿದ್ದಾರೆ ಮತ್ತು ಈ ಲವ್ ಜಿಹಾದ್​ನ್ನು ತಡೆಯಲು ಕಾನೂನು ರಚನೆ ಮಾಡಲಾಗಿದೆ. ಹಿಂದೂ-ಮುಸ್ಲಿಂ ಧರ್ವಿುಯರ ನಡುವಿನ ಹಲವು ವಿವಾಹಗಳು ದುರಂತ ಅಂತ್ಯ ಕಾಣುತ್ತಿರುವುದೂ ‘ಲವ್ ಜಿಹಾದ್’ ಶಬ್ದದ ಬಳಕೆಗೆ ಪ್ರೇರೇಪಣೆಯಾಗಿದೆ. ಇಂಥದ್ದೊಂದು ಪದವನ್ನು ಕೇಂದ್ರ ಸರ್ಕಾರ ಕೂಡ ಗುರುತಿಸಿಲ್ಲ ಎಂಬುದನ್ನು ಗಮನಿಸಬಹುದು. ಲವ್ ಜಿಹಾದ್ ಎಂಬುದಕ್ಕೆ ಕೇಂದ್ರದ ವ್ಯಾಖ್ಯಾನವೇನು ಎಂದು ಕಳೆದ ಫೆಬ್ರವರಿಯಲ್ಲಿ ಸಂಸತ್ತಿ ನಲ್ಲಿ ಕೇಳಲಾಗಿದ್ದ ಪ್ರಶ್ನೆಗೆ, ‘ಈ ಪದಕ್ಕೆ ಯಾವುದೇ ವ್ಯಾಖ್ಯಾನವಿಲ್ಲ ಮತ್ತು ಅಂಥ ಯಾವುದೇ ಕೇಸುಗಳನ್ನು ತನಿಖಾ ಏಜೆನ್ಸಿಗಳು ವರದಿ ಮಾಡಿಲ್ಲ’ ಎಂದು ತಿಳಿಸಲಾಗಿತ್ತು.
ಒಟ್ಟಿನಲ್ಲಿ, ಮದುವೆ ಹೆಸರಲ್ಲಿ ಮತಾಂತರಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ಜಾರಿಗೊಳಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರದ ಮಹತ್ವದ ಹೆಜ್ಜೆಯಿಟ್ಟಿದೆ. ಬಿಜೆಪಿ ಆಡಳಿತವಿರುವ ಕರ್ನಾಟಕ, ಮಧ್ಯಪ್ರದೇಶ, ಹರ್ಯಾಣ ಸೇರಿ ವಿವಿಧ ರಾಜ್ಯಗಳ ಸರ್ಕಾರಗಳು ಈ ಕಾನೂನನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ.
ಶಿಕ್ಷೆ ಪ್ರಮಾಣವೇನು?:ಅಂತರ್ ಧರ್ವಿುಯ ಸಂಬಂಧಗಳನ್ನು ನಿಯಂತ್ರಿಸುವ ಈ ಕಾನೂನಿ ನಡಿಯಲ್ಲಿ ತಪ್ಪಿತಸ್ಥರಿಗೆ ಗರಿಷ್ಠ 10 ವರ್ಷಗಳ ಶಿಕ್ಷೆಯಿರಲಿದೆ. ಕನಿಷ್ಠ ಎಂದರೆ 1ರಿಂದ 5 ವರ್ಷಗಳ ಜೈಲು ಶಿಕ್ಷೆಯಿರಲಿದ್ದು, ಕನಿಷ್ಠ 15 ಸಾವಿರ ರೂ., ಗರಿಷ್ಠ 50 ಸಾವಿರ ರೂ. ದಂಡ ವಿಧಿಸುವ ಪ್ರಸ್ತಾಪವಿದೆ. ಒಂದುವೇಳೆ ಬಲವಂತದ ಮತಾಂತರಕ್ಕೆ ಒಳಗಾಗುವ ಯುವತಿ ಅಪ್ರಾಪ್ತೆ ಅಥವಾ ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದ್ದರೆ ತಪ್ಪಿತಸ್ಥರಿಗೆ 3ರಿಂದ 10 ವರ್ಷಗಳ ಜೈಲುಶಿಕ್ಷೆಯಿರಲಿದೆ. ಇಂಥ ಪ್ರಕರಣದಲ್ಲಿ ಶಂಕಿತ ಆರೋಪಿಯನ್ನು ಪೊಲೀಸರು ವಾರಂಟ್ ಇಲ್ಲದೆ ಬಂಧಿಸಬಹುದು. ಸಾಮೂಹಿಕ ಅಕ್ರಮ ಮತಾಂತರಕ್ಕೆ ಸಂಸ್ಥೆಗಳು ಪ್ರೇರೇಪಿಸಿದಲ್ಲಿ, ಅಂಥ ಸಂಸ್ಥೆಗಳ ನೋಂದಣಿ ರದ್ದಾಗಲಿದೆ. ಬಲವಂತದ ಮತಾಂತರಕ್ಕೆ ಒಳಗಾಗುವ ಯುವತಿಯರಿಗೆ ಜಿಲ್ಲಾ ನ್ಯಾಯಾಲಯಗಳು ಗರಿಷ್ಠ 5 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಬೇಕೆಂದು ನಿರ್ದೇಶಿಸಲಾಗಿದೆ. ಮತಾಂತರಕ್ಕೆಂದೇ ಯುವತಿಯನ್ನು ಮದುವೆಯಾಗಿದ್ದರೆ, ಆ ಮದುವೆ ಅನೂರ್ಜಿತಗೊಳ್ಳಲಿದೆ. ವ್ಯಕ್ತಿಯೊಬ್ಬ ತನ್ನ ಧರ್ಮ ಬದಲಾಯಿಸಬೇಕೆಂಬ ಚಿಂತನೆ ನಡೆಸಿದ್ದರೆ, ಆತ ತನ್ನ ಯೋಜಿತ ಮತಾಂತರಕ್ಕೆ 2 ತಿಂಗಳಿಗೆ ಮುನ್ನ ಕಾನೂನುಬದ್ಧವಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಕರಡು ಸುಗ್ರೀವಾಜ್ಞೆಯಲ್ಲಿರುವ ಈ ಅಂಶವನ್ನು ಉಲ್ಲಂಘಿಸುವ ವ್ಯಕ್ತಿಗೆ 6 ತಿಂಗಳಿಂದ 3 ವರ್ಷಗಳ ಜೈಲುಶಿಕ್ಷೆ ಮತ್ತು ಕನಿಷ್ಠ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ಈ ಕಾನೂನು ತಂದಿದ್ದೇಕೆ?:ಅನೇಕ ಭಾಷಣಗಳಲ್ಲಿ ಯೋಗಿ ಆದಿತ್ಯನಾಥ ಲವ್ ಜಿಹಾದ್ ಪ್ರಕರಣಗಳನ್ನು ಪ್ರಸ್ತಾಪಿಸಿ, ಅನ್ಯಧರ್ವಿುಯರ ‘ಕೃತ್ಯ’ ಖಂಡಿಸಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಕಾನೂನು ತರುವ ಭರವಸೆಯನ್ನೂ ಅಧಿಕಾರಕ್ಕೆ ಬಂದ ಬೆನ್ನಲೇ ನೀಡಿದ್ದರು. 2019ರಲ್ಲಿ ಉತ್ತರ ಪ್ರದೇಶದ ಕಾನೂನು ಆಯೋಗ ತನ್ನ ವರದಿಯಲ್ಲಿ, ‘ಅಕ್ರಮ ಮಾರ್ಗದ ಮುಖೇನ ಹಿಂದೂ ಯುವತಿಯರನ್ನು ಬಲವಂತದ ಮತಾಂತರಕ್ಕೊಳಪಡಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಕಾನೂನು ರೂಪಿಸಬೇಕಿದೆ’ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ, ಕಳೆದ ಅಕ್ಟೋಬರ್​ನಲ್ಲಿ ಅಲಹಾಬಾದ್ ಹೈಕೋರ್ಟ್​ನ ಏಕಸದಸ್ಯ ಪೀಠವು, ಕೇವಲ ಮದುವೆಯಾಗುವುದಕ್ಕೋಸ್ಕರ ಒತ್ತಾಯದ ಮತಾಂತರ ಮಾಡುವುದನ್ನು ತಪು್ಪ ಎಂದು ಹೇಳಿತ್ತು. ಆದರೆ, ಹಿಂದೂ ಪುತ್ರಿಯನ್ನು ಮದುವೆಯಾದ ಮುಸ್ಲಿಂ ವ್ಯಕ್ತಿ ವಿರುದ್ಧ ಯುವತಿಯ ಹೆತ್ತವರು ದಾಖಲಿಸಿದ್ದ ಪ್ರಕರಣವೊಂದರಲ್ಲಿ ಹೈಕೋರ್ಟ್​ನ ವಿಭಾಗೀಯ ಪೀಠವು ಹೆತ್ತವರ ಅರ್ಜಿಯನ್ನು ವಜಾಗೊಳಿಸಿ, ‘ಪುರುಷ ಅಥವಾ ಸ್ತ್ರೀ ಯಾವುದೇ ಜಾತಿ, ಧರ್ಮಕ್ಕೆ ಸೇರಿರಲಿ, ಪರಸ್ಪರ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಸ್ವತಂತ್ರರು. ಇದು ಅವರ ಸಾಂವಿಧಾನಿಕ ಹಕ್ಕು ಕೂಡ ಹೌದು’ ಎಂದು ಅಭಿಪ್ರಾಯಪಟ್ಟಿತು. ಕೆಲ ದಿನಗಳ ಹಿಂದಷ್ಟೇ ಈ ತೀರ್ಪು ನೀಡಿದ್ದ ಹೈಕೋರ್ಟ್, ವಿವಾಹಕ್ಕೋಸ್ಕರ ಮತಾಂತರವಾಗುವುದು ತಪು್ಪ ಎಂದು ಸಾರಿರುವ ಇದೇ ನ್ಯಾಯಾಲಯದ ಹಿಂದಿನ 2 ತೀರ್ಪಗಳು ಉತ್ತಮ ಕಾನೂನಿಗೆ ಅಡಿಪಾಯ ಹಾಕಿಲ್ಲ ಎಂಬ ಅಭಿಪ್ರಾಯವನ್ನೂ ಹೊರಹಾಕಿದೆ. ಹೀಗಾಗಿ, ಬಲವಂತದ ಮತಾಂತರ ತಡೆಗೆ ಕಾನೂನು ಇದ್ದರೂ, ತಾನು ಬಲವಂತದ ಮತಾಂತರಕ್ಕೆ ಒಳಗಾಗಿದ್ದೇನೆ ಎಂದು ಯುವತಿ ನೀಡುವ ಹೇಳಿಕೆಯೇ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗುತ್ತದೆ. ಯಾವುದೋ ಸಂಘಟನೆ ಅಥವಾ ಸಂಸ್ಥೆಗಳು ಯುವತಿ ಮೇಲೆ ಅನ್ಯಾಯ ಎಸಗಲಾಗಿದೆ ಎಂದು ಆರೋಪಿಸಿದರೂ, ಯುವತಿ ತನ್ನ ಮೇಲಾದ ದೌರ್ಜನ್ಯ ಅಥವಾ ಅನ್ಯಾಯ ಒಪ್ಪಿಕೊಳ್ಳದಿದ್ದರೆ ಆ ಪ್ರಕರಣ ನ್ಯಾಯಾಂಗದ ಅಂಗಳದಲ್ಲಿ ಬಿದ್ದುಹೋಗಲಿದೆ. ಒಂದುವೇಳೆ ಯುವತಿಯನ್ನು ಗಂಡಿನ ಕಡೆಯವರು ಬೆದರಿಸಿ ಆಕೆಯಿಂದ ‘ತನ್ನ ಮೇಲೆ ಅನ್ಯಾಯ ಆಗಿಲ್ಲ’ ಎಂಬ ಹೇಳಿಕೆ ಕೊಡಿಸಿದ ಸಂದರ್ಭದಲ್ಲಿ, ಪೊಲೀಸರು ಅದನ್ನು ಸಾಕ್ಷಿ ಸಮೇತವಾಗಿ ‘ಸುಳ್ಳು’ ಎಂಬುದಾಗಿ ಸಾಬೀತುಪಡಿಸಬೇಕಾಗುತ್ತದೆ.
ಮನಃಸಾಕ್ಷಿ ಸ್ವಾತಂತ್ರ್ಯಕ್ಕೆ ವ್ಯತಿರಿಕ್ತ: ಸಂವಿಧಾನದ ಪರಿಚ್ಛೇದ 25 ಎಲ್ಲ ಧರ್ಮದ ಪ್ರಜೆಗಳಿಗೂ ಧಾರ್ವಿುಕ ಸ್ವಾತಂತ್ರ್ಯ (freedom of religion) ಹಾಗೂ ಮನಃಸಾಕ್ಷಿಯ ಸ್ವಾತಂತ್ರ್ಯಗಳ (freedom of conscience) ಭರವಸೆ ನೀಡುತ್ತದೆ. ಈ ರೀತಿಯ ಧಾರ್ವಿುಕ ಸ್ವಾತಂತ್ರ್ಯ ತನ್ನ ಧರ್ಮ ಪ್ರತಿಪಾದನೆ ಹಾಗೂ ಪ್ರಚಾರ ಮಾಡುವುದಕ್ಕೆ ಲಭ್ಯವೇ ಹೊರತು ಮತ್ತೊಂದು ಧರ್ಮದವರನ್ನು ತನ್ನ ಧರ್ಮಕ್ಕೆ ಮತಾಂತರಗೊಳಿಸಲು ಸುತಾರಾಂ ಲಭ್ಯವಿಲ್ಲ ಎಂದು ಸುಪ್ರೀಂಕೋರ್ಟ್ 1977ರಲ್ಲಿ ಇತ್ಯರ್ಥವಾದ ರೆವ್. ಸ್ಟಾನಿಸ್ಲಾಸ್ ಪ್ರಕರಣದಲ್ಲಿ ಸ್ಪಷ್ಟವಾಗಿ ತೀರ್ಪು ನೀಡಿದೆ. ಸಂವಿಧಾನ ರಚನೆ ಸಭೆಯಲ್ಲಿಯೂ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಧಾರ್ವಿುಕ ಸ್ವಾತಂತ್ರ್ಯದ ಭರವಸೆ ಕೊಡುವಾಗ ಮತಾಂತರದ ವಿರುದ್ಧದ ಭರವಸೆಯನ್ನೂ ಸೇರಿಸಬೇಕು ಎಂದು ಚರ್ಚೆಯಾಗಿತ್ತು. ಬಲವಂತದ ಮತಾಂತರ ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳಿಗೆ ವ್ಯತಿರಿಕ್ತವೆಂಬುದು ಜಗಜ್ಜಾಹೀರಾದ ಸತ್ಯವೆಂದು ಗುರುತಿಸಿ ಮತಾಂತರದ ಬಗ್ಗೆ ಸಂವಿಧಾನದಲ್ಲಿ ಪ್ರಸ್ತಾಪ ಮಾಡಲಿಲ್ಲ. ಇದೇ ಸೂತ್ರವನ್ನು ನ್ಯಾಯಾಲಯ ಎತ್ತಿಹಿಡಿದಿದೆ ಎಂಬುದನ್ನು ಗಮನಿಸಬೇಕು. ಒಂದು ಧರ್ಮವನ್ನು ಅನುಸರಿಸುವ ವ್ಯಕ್ತಿಯನ್ನು ಬಲವಂತವಾಗಿ ಮತ್ತೊಂದು ಧರ್ಮಕ್ಕೆ ಮತಾಂತರಗೊಳಿಸಿದರೆ ಆ ವ್ಯಕ್ತಿಯ ಮನಃಸಾಕ್ಷಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ. ಹಾಗೆಯೇ ಸಂವಿಧಾನದ ಅಡಿಯಲ್ಲಿ ಧಾರ್ವಿುಕ ಸ್ವಾತಂತ್ರ್ಯ ಸಾಮಾಜಿಕ ಕ್ರಮಬದ್ಧತೆಗೆ ಒಳಪಟ್ಟಿದೆ.

ಬಲವಂತದ ಮತಾಂತರಗಳಿಂದ ಸಮಾಜದಲ್ಲಿ ಅಲ್ಲೋಲಕಲ್ಲೋಲ ಉಂಟಾಗುವುದು ಸಹಜ ಎಂದು ನ್ಯಾಯಾಲಯಗಳು ಅನೇಕ ಬಾರಿ ವಿಮಶಿಸಿ ತೀರ್ಪಿತ್ತಿವೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಜಾರಿಗೊಳಿಸಿರುವ ಮತಾಂತರ ತಡೆ ಸುಗ್ರೀವಾಜ್ಞೆಯನ್ನು ಅವಲೋಕಿಸಿದರೆ ಅಚ್ಚರಿಕಾರಕ ಹೊಸ ವಿಷಯ ಯಾವುದೂ ಕಂಡುಬರುವುದಿಲ್ಲ. ಆದರೆ, ವೃತ್ತಿಜೀವನದಲ್ಲಿ ನನ್ನ ಅನುಭವಕ್ಕೆ ಬಂದಿರುವ ವಿಷಯವೊಂದನ್ನು ಪ್ರಸ್ತಾಪಿಸಿದರೆ ಸದರಿ ಕಾನೂನಿನ ಮಹತ್ವ ಏನೆಂಬುದು ಮನದಟ್ಟಾಗುತ್ತದೆ. ಜಾರ್ಖಂಡ್ ರಾಜ್ಯದಲ್ಲಿ ಓರ್ವ ಪ್ರತಿಭಾವಂತ ಹಿಂದೂ ಮಹಿಳಾ ಕ್ರೀಡಾಪಟುವನ್ನು ಮುಸ್ಲಿಂ ಯುವಕ ತನ್ನ ಧರ್ಮದ ಬಗ್ಗೆ ಸುಳ್ಳು ಮಾಹಿತಿ ನೀಡಿ ವಿವಾಹವಾಗಿ ನಂತರ ಆಕೆಯನ್ನೂ ತನ್ನ ಧರ್ಮಕ್ಕೆ ಮತಾಂತರವಾಗುವಂತೆ ಬಲವಂತಪಡಿಸಿದ ಪ್ರಕರಣ ನನ್ನ ಬಳಿ ಬಂದಿತ್ತು. ಈಗ ಉತ್ತರ ಪ್ರದೇಶ ಜಾರಿ ಮಾಡಿರುವ ಸುಗ್ರೀವಾಜ್ಞೆ ಇಂತಹ ದುರ್ಘಟನೆಗಳನ್ನು ತಡೆಗಟ್ಟಲು ಸಹಾಯಕ. ಬಹಳಷ್ಟು ರಾಜ್ಯಗಳಲ್ಲಿ ಇಂಥ ಕಾನೂನುಗಳು ಜಾರಿಯಲ್ಲಿವೆ ಹಾಗೂ ನ್ಯಾಯಾಲಯಗಳು ಕೂಡ ಆ ಕಾನೂನುಗಳನ್ನು ಊರ್ಜಿತವೆಂದು ಎತ್ತಿಹಿಡಿದಿವೆ. ಉತ್ತರ ಪ್ರದೇಶದ ಕಾನೂನು ಒಂದು ಸಮಗ್ರವಾದ ಕಾನೂನು. ಹಣ ಇತ್ಯಾದಿ ಆಮಿಷಗಳಷ್ಟೇ ಅಲ್ಲದೇ ಮಾನಸಿಕವಾಗಿ ಪ್ರಭಾವ ಬೀರಿ ಮತಾಂತರಗೊಳಿಸುವುದನ್ನೂ ಈ ಕಾನೂನು ಕಠಿಣವಾಗಿ ಶಿಕ್ಷಿಸುತ್ತದೆ. ಕೇವಲ ವಿವಾಹದ ಕಾರಣಕ್ಕಾಗಿ ಮತಾಂತರಗೊಳಿಸುವುದು ಅಥವಾ ಮತಾಂತರಗೊಳ್ಳುವುದ ರಿಂದ ಆಗುವ ಅನಾಹುತಗಳನ್ನು ವಿಶೇಷವಾಗಿ ಪ್ರಸ್ತಾಪಿ ಸುವ ಅವಶ್ಯವಿಲ್ಲ. ಸದರಿ ಕಾನೂನಿನಲ್ಲಿ ವಿವಾಹದ ಕಾರಣಕ್ಕಾಗಿಯೂ ಮತಾಂತರಗೊಳ್ಳಬೇಕಾದರೆ ಜಿಲ್ಲಾ ದಂಡಾಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ಮತಾಂತರಗೊಂಡ ನಂತರ ಕಾನೂನುರೀತ್ಯಾ ಘೋಷಣೆ ಕೊಡಬೇಕು. ದುರುದ್ದೇಶಗಳಿಗೆ ಅಥವಾ ಶೋಷಣೆಗೋಸ್ಕರ ಮತಾಂತರಗೊಳಿಸಿದರೆ ಅದರ ಬಗ್ಗೆ ದೂರು ಸಲ್ಲಿಸಲು ಹಾಗೆ ಮತಾಂತರಗೊಳಿಸಲ್ಪಟ್ಟ ವ್ಯಕ್ತಿಯ ಕುಟುಂಬ ಹಾಗೂ ಸಂಬಂಧಿಕರಿಗೆ ಅವಕಾಶವಿದೆ. ಇವೆಲ್ಲವನ್ನೂ ಗಮನಿಸಿದರೆ ಉತ್ತರ ಪ್ರದೇಶ ಸರ್ಕಾರದ ಮತಾಂತರ ತಡೆ ಸುಗ್ರೀವಾಜ್ಞೆ ಸ್ವಾಗತಾರ್ಹ ಎಂಬುದರಲ್ಲಿ ಸಂಶಯವಿಲ್ಲ.
|ರಾಘವೇಂದ್ರ ಶ್ರೀವತ್ಸಸುಪ್ರೀಂಕೋರ್ಟ್ ವಕೀಲರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 2 =
Remember me
