|ರಾಘವ ಶರ್ಮ ನಿಡ್ಲೆನವದೆಹಲಿ
ಮಹಾದಾಯಿ ಮತ್ತು ಮಲಪ್ರಭಾ ನದಿ ಜೋಡಣೆಗೆ ಸಂಬಂಧಿಸಿ ಕರ್ನಾಟಕ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಸಿಂಗ್ ಪಟೇಲ್ ಸಂಸತ್​ಗೆ ತಿಳಿಸಿದ್ದಾರೆ. ನದಿ ಜೋಡಣೆ ಕುರಿತು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕೇಳಿದ್ದ ಪ್ರಶ್ನೆಗೆ ಜಲಶಕ್ತಿ ಸಚಿವಾಲಯ ಈ ಉತ್ತರ ನೀಡಿದೆ.
ರಾಜ್ಯ ಸರ್ಕಾರ ಕಳಸಾ-ಬಂಡೂರಿ ಯೋಜನೆ ಪ್ರಾರಂಭಿಸಲು ಯಾವುದೇ ವಿಶೇಷ ಪ್ರಸ್ತಾವನೆ ಸಲ್ಲಿಸಿಲ್ಲ ಮತ್ತು ಮಲಪ್ರಭಾ-ಮಹದಾಯಿ ನದಿ ಜೋಡಣೆ ವಿಚಾರ ಕೂಡ ಸದ್ಯಕ್ಕೆ ಕೇಂದ್ರ ಸರ್ಕಾರದ ಮುಂದಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಪ್ರಜ್ವಲ್ ರೇವಣ್ಣ ಟ್ವೀಟ್ ಮಾಡಿದ್ದು, ಈ ಬಗ್ಗೆ ಹೋರಾಟ ಮಾಡುವುದಾಗಿಯೂ ತಿಳಿಸಿದ್ದಾರೆ. ಈ ಬೆಳವಣಿಗೆ ಮಹದಾಯಿ ಕಣಿವೆ ಭಾಗದ ಜನರಲ್ಲಿ ಗೊಂದಲ ಸೃಷ್ಟಿಸಿದ್ದು, ರಾಜ್ಯ ಸರ್ಕಾರ ಕಣ್ಣಾಮುಚ್ಚಾಲೆ ಆಡುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಆದರೆ, ಕಳಸಾ-ಬಂಡೂರಿ ಯೋಜನೆ ಪ್ರಸ್ತಾವನೆ ವರ್ಷದ ಹಿಂದೆಯೇ ಸಲ್ಲಿಕೆಯಾಗಿರುವುದು ವಾಸ್ತವ.
ವಾಸ್ತವ ಸ್ಥಿತಿ ಏನು?:ಮಹದಾಯಿಯಿಂದ ರಾಜ್ಯದ ಮಲಪ್ರಭಾ ನದಿಗೆ ಕಳಸಾ-ಬಂಡೂರಿ ನಾಲೆ ಮೂಲಕ ನೀರು ತಿರುಗಿಸುವುದು ರಾಜ್ಯದ ಉದ್ದೇಶ ಮತ್ತು ಇದಕ್ಕೆ ಮಹದಾಯಿ ನ್ಯಾಯಾಧಿಕರಣ ಕೂಡ ಅನುಮತಿ ನೀಡಿದೆ. ಆದರೆ, ಪರಿಸರ ಮತ್ತು ಅರಣ್ಯ ಇಲಾಖೆ ಸಮ್ಮತಿ ಸಿಗಬೇಕಿದೆ. ಈ ಕುರಿತ ಪತ್ರ ವ್ಯವಹಾರಗಳು ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ನಡೆಯುತ್ತಿವೆ. ‘ಕಳಸಾ-ಬಂಡೂರಿ ನಾಲೆ ಮೂಲಕ ನೀರು ತಿರುಗಿಸುವ ಯೋಜನೆ ಕೇಂದ್ರದ ರಾಷ್ಟ್ರೀಯ ನದಿ ಜೋಡಣೆ ಯೋಜನೆ ವ್ಯಾಪ್ತಿಯಲ್ಲಿ ಬರುವುದಿಲ್ಲ. ಬಹುಶಃ ಈ ಕಾರಣಕ್ಕಾಗಿ ಜಲಶಕ್ತಿ ಸಚಿವಾಲಯ ನದಿ ಜೋಡಣೆಯ ಪ್ರಸ್ತಾಪವೇ ನಮ್ಮ ಮುಂದಿಲ್ಲ ಎಂದು ಹೇಳಿರಬಹುದು. ಸಂಸದರು ಪ್ರಶ್ನೆ ಕೇಳಿದ ರೀತಿಯಲ್ಲಿ ತಾಂತ್ರಿಕ ದೋಷವಿದೆ’ ಎಂದು ರಾಜ್ಯ ಜಲವ್ಯಾಜ್ಯ ಕಾನೂನು ತಂಡದ ವಕೀಲರೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.
ಕಳೆದ ಆಗಸ್ಟ್​ನಲ್ಲಿ ಪ್ರಸ್ತಾವನೆ:ಕೇಂದ್ರ ಸರ್ಕಾರ ಮಹದಾಯಿ ನ್ಯಾಯಾಧಿಕರಣದ ಐತೀರ್ಪಿನ ಅಧಿಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಳಸಾ-ಬಂಡೂರಿ ನೀರು ತಿರುಗಿಸುವಿಕೆ ಯೋಜನೆಯ ‘ಪೂರ್ವ ಕಾರ್ಯಸಾಧ್ಯತಾ ವರದಿ’ಯನ್ನು ಕಳೆದ ಆಗಸ್ಟ್ 22ರಂದು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಸಲ್ಲಿಸಿದೆ. ಈ ವರದಿ ಕುರಿತು ಜಲಶಕ್ತಿ ಇಲಾಖೆ ಕೆಲ ಸ್ಪಷ್ಟೀಕರಣ ಕೇಳಿದ್ದು, ಅದಕ್ಕೆ ರಾಜ್ಯದ ಯೋಜನಾಧಿಕಾರಿಗಳು ಉತ್ತರಗಳನ್ನೂ ನೀಡುತ್ತಿದ್ದಾರೆ. 10 ದಿನಗಳ ಹಿಂದೆ ಯೋಜನಾಧಿಕಾರಿಗಳು ದೆಹಲಿಗೆ ಬಂದು ಯೋಜನೆಗೆ ಸಂಬಂಧಿಸಿದ ಕೆಲ ತಾಂತ್ರಿಕ ಮಾಹಿತಿಯನ್ನೂ ಜಲಶಕ್ತಿ ಇಲಾಖೆಯೊಂದಿಗೆ ಹಂಚಿಕೊಂಡಿ ದ್ದಾರೆ. ‘ಕುಡಿಯುವ ಉದ್ದೇಶಕ್ಕಾಗಿ ಮಾತ್ರ ನದಿ ನೀರನ್ನು ಕಳಸಾ-ಬಂಡೂರಾ ನಾಲೆಗಳ ಮೂಲಕ ತಿರುಗಿಸಲಾಗುತ್ತಿದೆ. ನದಿ ಜೋಡಣೆ ಎಂದರೆ ಅಲ್ಲಿ ನೀರಾವರಿ ಮತ್ತಿತರ ಕೆಲಸಗಳಿಗೂ ನೀರನ್ನು ಬಳಸಿಕೊಳ್ಳಬಹುದು’ ಎಂದು ಹಿರಿಯ ಯೋಜನಾಧಿಕಾರಿ ಯೊಬ್ಬರು ‘ವಿಜಯವಾಣಿ’ಗೆ ಸ್ಪಷ್ಟನೆ ನೀಡಿದ್ದಾರೆ.
ಮುಂಗಾರಿನಲ್ಲಿ ಮಾತ್ರ:ರಾಜ್ಯವು ಕಳಸಾ-ಬಂಡೂರಿ ನಾಲೆಯಿಂದ ವರ್ಷಪೂರ್ತಿ ನೀರು ತಿರುಗಿಸುವುದಿಲ್ಲ. ಕೇವಲ ಜೂನ್-ನವೆಂಬರ್ ನಡುವಿನ ಅವಧಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದಾಗ 2 ನಾಲೆಗಳ ಮೂಲಕ ಮಲಪ್ರಭಾ ಜಲಾಶಯಕ್ಕೆ ಹರಿಸಲಾಗುತ್ತದೆ. ಕಳಸಾದಿಂದ 1.72 ಟಿಎಂಸಿ ಮತ್ತು ಬಂಡೂರಾದಿಂದ 2.18 ಟಿಎಂಸಿ ನೀರು (ಒಟ್ಟು 3.9 ಟಿಎಂಸಿ) ತಿರುಗಿಸಲು ರಾಜ್ಯ ಉದ್ದೇಶಿಸಿದೆ ಮತ್ತು ನ್ಯಾಯಾಧಿಕರಣದ ಐತೀರ್ಪಿನಲ್ಲೂ ಇದು ದಾಖಲಾಗಿದೆ. ಕೇಂದ್ರದ ಬಳಿ ಇರುವ ಕಾರ್ಯಸಾಧ್ಯತಾ ವರದಿಯಲ್ಲೂ ಈ ಅಂಶಗಳು ಅಡಕವಾಗಿವೆ.
ರಾಜ್ಯದ ವ್ಯಾಪ್ತಿಯಲ್ಲೇ ಇದೆ:ನದಿ ನೀರು ಸಮುದ್ರ ಸೇರಿ ವ್ಯರ್ಥವಾಗುವ ಬದಲು ಮಹದಾಯಿಗೆ ಸೇರುವ ಮುನ್ನವೇ, ಕರ್ನಾಟಕ ಭೂಭಾಗದ ವ್ಯಾಪ್ತಿಯಲ್ಲಿರುವ ಕಳಸಾ-ಬಂಡೂರಿ ನಾಲೆಗಳಿಂದ ಮಲಪ್ರಭಾಕ್ಕೆ ನೀರು ಹರಿಸಲಾಗುತ್ತದೆ. ಅಂದರೆ, ಮಹದಾಯಿ ಸೇರುವ ಮುನ್ನವೇ ಆ ನೀರನ್ನು ಮಲಪ್ರಭಾಕ್ಕೆ ತಿರುಗಿಸಬೇಕು ಎಂದು ಯೋಜನೆ ರೂಪಿಸಿ ದ್ದೇವೆ. ಹೀಗಾಗಿ ಇಲ್ಲಿ ನದಿ ಜೋಡಣೆ ಪದಬಳಕೆಯೇ ಅಪ್ರಸ್ತುತ. ನಮ್ಮ ಪ್ರಸ್ತಾವನೆಯಲ್ಲೂ ನದಿ ಜೋಡಣೆ ಪದ ಬಳಕೆ ಮಾಡಿಲ್ಲ. ನೀರು ತಿರುಗಿಸುವಿಕೆ ಎಂದಷ್ಟೇ ಬರೆದಿದ್ದೇವೆ ಎಂದು ಯೋಜನಾಧಿಕಾರಿ ವಿವರಿಸಿದ್ದಾರೆ.
ಕಳಸಾ ಬಂಡೂರಿ ಯೋಜನೆ ಬೇರೆ, ಕೇಂದ್ರದ ನದಿ ಜೋಡಣೆ ಯೋಜನೆ ಬೇರೆ. ನನ್ನ ಪ್ರಕಾರ, ಈ ಪ್ರಶ್ನೆಯೇ ತಪ್ಪು. ಇದನ್ನು ಕೇಳುವ ಮುನ್ನ ನನ್ನನ್ನು ಸಂರ್ಪಸಿದ್ದರೆ, ವಿವರಣೆ ನೀಡುತ್ತಿದ್ದೆ ಅಥವಾ ಮಾಜಿ ಪ್ರಧಾನಿ ದೇವೇಗೌಡರನ್ನು ಸಂಪರ್ಕಿಸಿದ್ದರೆ ಅವರೇ ಈ ರೀತಿ ಪ್ರಶ್ನೆ ಕೇಳಬೇಡ ಎಂದು ಸಲಹೆ ನೀಡುತ್ತಿದ್ದರು.
|ಶಿವಕುಮಾರ್ ಉದಾಸಿಹಾವೇರಿ ಸಂಸದ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 4 =
Remember me
