ನವದೆಹಲಿ:ಭಾರತೀಯ ಜೀವ ವಿಮಾ ನಿಗಮದ (ಎಲ್​ಐಸಿ) ಆರಂಭಿಕ ಷೇರು ಮಾರಾಟದಲ್ಲಿ (ಐಪಿಒ) ಶೇ. 20ರವರೆಗೂ ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಸ್ವಯಂಚಾಲಿತ ಮಾರ್ಗವನ್ನು ಮುಕ್ತಗೊಳಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ನಿರ್ಧಾರದಿಂದ ಮುಂದಿನ ತಿಂಗಳು ನಡೆಯಲಿರುವ ಬಹುನಿರೀಕ್ಷಿತ ಎಲ್​ಐಸಿ ಐಪಿಒ ವಹಿವಾಟಿನಲ್ಲಿ ವಿದೇಶಿ ಹೂಡಿಕೆದಾರರು ಸರಾಗವಾಗಿ ಭಾಗವಹಿಸಬಹುದಾಗಿದೆ.
ಪ್ರಸ್ತುತದ ಎಫ್​ಡಿಐ ನೀತಿಯಲ್ಲಿ ಎಲ್​ಐಸಿಯಲ್ಲಿ ವಿದೇಶಿ ಬಂಡವಾಳ ಆಕರದ ಬಗ್ಗೆ ನಿಖರವಾಗಿ ಯಾವ ಉಲ್ಲೇಖವೂ ಇರಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಈ ತೊಡಕನ್ನು ನಿವಾರಿಸಲು ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಎಲ್​ಐಸಿ ಶಾಸನಾತ್ಮಕವಾಗಿ (1956 ಎಲ್​ಐಸಿ ಕಾಯ್ದೆ) ಸ್ಥಾಪಿತವಾದ ವಿಮಾ ಸಂಸ್ಥೆಯಾದ ಕಾರಣ ಇಂಥದೊಂದು ನಿರ್ಣಯ ಅವಶ್ಯಕವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಸಂಪುಟದ ಈ ತೀರ್ಮಾನದ ಮೂಲಕ ಎಲ್​ಐಸಿಯಲ್ಲಿ ಸಾರ್ವಜನಿಕ ಬಂಡವಾಳ ಕ್ರೋಡಿಕರಣಕ್ಕೆ ಮತ್ತು ಷೇರುಪೇಟೆಯಲ್ಲಿ ಎಲ್​ಐಸಿ ಷೇರನ್ನು ಪಟ್ಟಿ ಮಾಡಲು ಅನುಮೋದನೆ ಸಿಕ್ಕಂತಾಗಿದೆ ಎಂದು ಮೂಲಗಳು ಹೇಳಿವೆ.ಸರ್ಕಾರಿ ಸ್ವಾಮ್ಯದ ಇನ್ನಿತರ ಸಂಸ್ಥೆಗಳಲ್ಲಿ ಸ್ವಯಂ ಚಾಲಿತ ಮಾರ್ಗದಲ್ಲಿ ಶೇ. 20ರವರೆಗೆ ವಿದೇಶಿ ಬಂಡವಾಳ ಸಂಗ್ರಹಿಸಲು ಎ್​ಡಿಐ ನೀತಿಯಲ್ಲಿ ಅವಕಾಶ ಇದೆ. ಈಗ ಇದನ್ನೇ ಎಲ್​ಐಸಿಗೂ ಅನ್ವಯ ಮಾಡಲಾಗಿದೆ.
ಎಲ್​ಐಸಿ ಐಪಿಒ ಮಾರಾಟ ಪ್ರಕ್ರಿಯೆಗೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಫೆ. 13ರಂದು ಕರಡು ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಶೇ. 5ರಷ್ಟು ಷೇರುಗಳನ್ನು (ಅಂದಾಜು 63 ಸಾವಿರ ಕೋಟಿ ರೂಪಾಯಿ) ಮಾರಾಟ ಮಾಡಬಹುದು ಎಂದು ಅಭಿಪ್ರಾಯಪಟ್ಟಿದೆ. ಇದರಂತೆ 31.60 ಕೋಟಿ ಷೇರುಗಳ ವಿಕ್ರಯಕ್ಕೆ ಸೆಬಿ ಶಿಫಾರಸು ಮಾಡಿದೆ. ಎಲ್​ಐಸಿ ಉದ್ಯೋಗಿಗಳು ಮತ್ತು ಪಾಲಿಸಿದಾರರಿಗೆ ಷೇರು ಮೀಸಲು ಹಾಗೂ ರಿಯಾಯಿತಿ ದರದಲ್ಲಿ ಷೇರು ಲಭ್ಯವಾಗಲಿವೆ.
ಆಯುಷ್ಮಾನ್​ ಭಾರತ್​ ರಾಷ್ಟ್ರವ್ಯಾಪಿ ಜಾರಿಆಯುಷ್ಮಾನ್​ ಭಾರತ್​ ಡಿಜಿಟಲ್​ ಮಿಷನ್​ (ಎಬಿಡಿಎಂ) ರಾಷ್ಟ್ರವ್ಯಾಪಿ ಜಾರಿ ಮಾಡಲು ಕೇಂದ್ರ ಸಂಪುಟ ಶನಿವಾರ ಸಮ್ಮತಿಸಿದೆ. ಐದು ವರ್ಷದವರೆಗೆ 1,600 ಕೋಟಿ ರೂಪಾಯಿ ಬಜೆಟ್​ ಅನುದಾನವನ್ನು ಒಳಗೊಂಡ ಯೋಜನೆ ಇದಾಗಿದ್ದು, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್​ಎಚ್​ಎ) ಇದನ್ನು ಜಾರಿ ಮಾಡಲಿದೆ. ನಾಗರಿಕರು ಆಯುಷ್ಮಾನ್​ ಭಾರತ್​ ಆರೋಗ್ಯ ಖಾತೆಯನ್ನು ಎಬಿಡಿಎಂ ಅಡ್ಡಿಯಲ್ಲಿ ರಚಿಸಿಕೊಳ್ಳಬಹುದಾಗಿದೆ. ಈ ಸಂಖ್ಯೆಗೆ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಡಿಜಿಟಲ್​ ದಾಖಲೆಯನ್ನು ಸಂಯೋಜನೆಗೊಳಿಸಬಹುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಈ ರೀತಿಯ ಡೇಟಾ ವೇದಿಕೆಯಿಂದ ಆರೋಗ್ಯ ಸೇವೆ ಸುಧಾರಿಸುತ್ತದೆ. ಪ್ರತಿ ಸಾರಿಯೂ ದಾಖಲೆಗಳನ್ನು ಭೌತಿಕವಾಗಿ ತರುವ ತಾಪತ್ರಯ ತಪ್ಪುತ್ತದೆ.
ಯೂಕ್ರೇನ್​ ಕುರಿತು ಚರ್ಚೆಯುದ್ಧ ಪೀಡಿತ ಯೂಕ್ರೇನ್​ನಿಂದ ಭಾರತೀಯರನ್ನು ಕರೆತರುವ ಪ್ರಯತ್ನದ ಬಗ್ಗೆ ಸಚಿವ ಸಂಪುಟ ಸಭೆಗೆ ಮಾಹಿತಿ ನೀಡಲಾಯಿತು. ವಿಶೇಷ ವಿಮಾನಗಳು ಕಾರ್ಯಾಚರಣೆ ನಡೆಸಿ ಭಾರತೀಯರನ್ನು ಕರೆತರುತ್ತಿದೆ. ಯೂಕ್ರೇನ್​ ಮಾತ್ರಲ್ಲದೆ ನೆರೆಯ ರೊಮೆನಿಯಾ, ಹೆಂಗೇರಿ, ಪೋಲೆಂಡ್​ಗೆ ಗಡಿ ದಾಟಿ ಹೋಗಿರುವವರನ್ನು ಕರೆತರಲಾಗುತ್ತಿದೆ. ರೊಮೆನಿಯಾದಿಂದ ಇಂದು ಮುಂಬೈಗೆ ವಿಮಾನ ಆಗಮಿಸಿದೆ ಎಂಬ ಮಾಹಿತಿಯನ್ನು ನೀಡಲಾಯಿತು. ಭದ್ರತೆ ಕುರಿತ ಸಂಪುಟ ಉಪಸಮಿತಿ ಕೂಡ ಯೂಕ್ರೇನ್​ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದೆ.
ಕಲ್ಲಿದ್ದಲು ಇ-ಹರಾಜಿಗೆ ಏಕ ಗವಾಕ್ಷಿಕಲ್ಲಿದ್ದಲು ಗಣಿಗಳನ್ನು ಇ-ಹರಾಜಿನ ಮೂಲಕ ನಡೆಸುವ ಏಕಗವಾಕ್ಷಿ (ವಿಂಡೋ) ಯೋಜನೆ ಆರಂಭಿಸಲು ಸಂಪುಟ ಅನುಮೋದನೆ ನೀಡಿದೆ. ಈ ಹಿಂದೆ ಇವುಗಳನ್ನು ವಲಯವಾರು ನಿರ್ದಿಷ್ಟ ಗಣಿಯನ್ನು ಹರಾಜು ಮಾಡಲಾಗುತ್ತಿತ್ತು. ಏಕ ಗವಾಕ್ಷಿ ಇ-ಹರಾಜಿನಿಂದ ಪ್ರಕ್ರಿಯೆ ಸುಗಮವಾಗುತ್ತದೆ. ಅಕ್ರಮಗಳಿಗೆ ಕಡಿವಾಣ ಬೀಳುತ್ತದೆ ಎಂದು ಸರ್ಕಾರ ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + nineteen =
Remember me
