|ರಾಘವ ಶರ್ಮ ನಿಡ್ಲೆಫಿರೋಜ್​ಪುರ (ಪಂಜಾಬ್)
ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಆಟಗಾರರಾಗಿ ಹೊರ ಹೊಮ್ಮಲು ಆಮ್ ಆದ್ಮಿ ಪಾರ್ಟಿ ಮತ್ತು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಕಾರ್ಯತಂತ್ರಗಳನ್ನು ರೂಪಿಸುತ್ತಿರುವ ಮಧ್ಯೆ ಪಂಜಾಬ್​ನಲ್ಲಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಹೆಣಗಾಡುತ್ತಿದೆ. ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆಡಳಿತ ವೈಫಲ್ಯ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಬಂಡಾಯ, ಹಿಂದು ಸಿಖ್ ಸಮಾಜದ ಪ್ರಮುಖ ನಾಯಕ ಸುನೀಲ್ ಜಾಖರ್ ಅಸಮಾಧಾನ..ಹೀಗೆ ಗುಂಪುಗಾರಿಕೆ, ಕಿತ್ತಾಟಗಳಿಂದ ಸುಸ್ತಾಗಿರುವ ಪಕ್ಷ ದಲಿತ ಸಿಖ್ ಸಮುದಾಯದ ಸಿಎಂ ಅಭ್ಯರ್ಥಿ ಚರಣ್​ಜಿತ್ ಚನ್ನಿ ಯವರನ್ನು ಪಕ್ಷದ ಮುಖವಾಗಿಟ್ಟುಕೊಂಡು ಆಮ್ ಆದ್ಮಿ ಪಾರ್ಟಿ, ಶಿರೋಮಣಿ ಅಕಾಲಿದಳ, ಬಿಜೆಪಿ-ಪಂಜಾಬ್ ಲೋಕಕಾಂಗ್ರೆಸ್ ಮೈತ್ರಿ ವಿರುದ್ಧ ಸೆಣಸಾಡುತ್ತಿದೆ. ಪಕ್ಷದ ಒಳಜಗಳಗಳೇ ಆಪ್ ಮರುಸಂಘಟನೆಗೆ ಸಾಕಷ್ಟು ನೆರವಾಗಿದೆ ಎಂಬುದನ್ನು ಕಾಂಗ್ರೆಸ್ ಕಾರ್ಯಕರ್ತರೇ ಒಪ್ಪಿಕೊಳ್ಳುತ್ತಾರೆ.
ಅಮರಿಂದರ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ ‘ಕ್ಯಾಪ್ಟನ್​ಗೆ ಅನ್ಯಾಯವಾಯಿತು’ ಎಂದು ಬಿಂಬಿಸಲಾಗಿತ್ತು. ಆದರೆ, ಮುಖ್ಯಮಂತ್ರಿಯಾದವನು ಜನರ ಮಧ್ಯೆ ಇರಬೇಕೆ ವಿನಃ ರಾಜಮಹಲ್​ನಲ್ಲಲ್ಲ. ಮುಖ್ಯಮಂತ್ರಿಯನ್ನು ಮತದಾರ ಕಣ್ಣಾರೆ ನೋಡಬೇಕೆ ವಿನಃ ಟಿವಿ ಅಥವಾ ಸಾಮಾಜಿಕ ಮಾಧ್ಯಮದಲ್ಲಲ್ಲ. ಡ್ರಗ್ ಮಾಫಿಯಾಗೆ ಪೂರ್ಣ ಕಡಿವಾಣ ಹಾಕುವುದಾಗಲೀ, ಸಿಖ್ ಪವಿತ್ರಗ್ರಂಥ ಅಪವಿತ್ರಗೊಳಿಸಿದ ಪ್ರಕರಣದಲ್ಲಿ ಅಕಾಲಿದಳದ ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದಾಗಲೀ ಅಥವಾ ಕರೊನಾ ಕಾಲದಲ್ಲಿ ಜನರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವುದಾಗಲೀ ಕ್ಯಾಪ್ಟನ್​ರಿಂದ ಸಾಧ್ಯವಾಗಲಿಲ್ಲ ಎಂದು ಪಂಜಾಬ್ ಜನರೇ ಹೇಳುತ್ತಾರೆ. ಅದಾಗಲೇ, ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸಿಧು, ಬಂಡಾಯದ ಕಹಳೆ ಮೊಳಗಿಸಿ ಕ್ಯಾಪ್ಟನ್​ರನ್ನು ಪಕ್ಷ ಬಿಡುವಂತೆಯೇ ಮಾಡಿಬಿಟ್ಟರು. ಒಂದರ್ಥದಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಕೂಡ ಇದನ್ನು ಬಯಸಿದ್ದರು. ‘ಅಮರಿಂದರ್ ಸಿಂಗ್ ಹೊಸ ಪಕ್ಷ ಸ್ಥಾಪಿಸಿದ್ದರಿಂದ ಅವರ ಬೆಂಬಲಿಗ ವರ್ಗವೂ ಕಾಂಗ್ರೆಸ್​ನಿಂದ ದೂರಾಗಿದೆ. ಕ್ಯಾಪ್ಟನ್ ಕೆಲಸ ಮಾಡಿದ್ದಾರೋ ಇಲ್ಲವೋ, ಆದರೆ ಅವರನ್ನು ಇಷ್ಟೊಂದು ಹೀನಾಯವಾಗಿ ನಡೆಸಿಕೊಳ್ಳುವ ಬದಲು ಸೋನಿಯಾ ಗಾಂಧಿ ಮಧ್ಯಸ್ಥಿಕೆಯಲ್ಲಿ ಗೌರವದಿಂದ ನಡೆಸಿಕೊಳ್ಳಬೇಕಿತ್ತು. 2017ರಲ್ಲಿ ಕ್ಯಾಪ್ಟನ್ ಕಾರಣದಿಂದ ಪಕ್ಷ ಅಧಿಕಾರಕ್ಕೆ ಬಂತೇ ವಿನಃ ರಾಹುಲ್ ಗಾಂಧಿ ನಾಯಕತ್ವದಿಂದಲ್ಲ’ ಎನ್ನುವುದು ಪಟಿಯಾಲ ಗ್ರಾಮೀಣ ಕ್ಷೇತ್ರದ ಶರಣ್ ದೀಪ್ ಸಿಂಗ್ ಅನಿಸಿಕೆ. ಈ ಮಧ್ಯೆ ಕ್ಯಾಪ್ಟನ್​ರನ್ನು ಹೊರದಬ್ಬಿದರೂ, ಸಿಧು ಬಯಸಿದ್ದು ಪ್ರಾಪ್ತಿಯಾಗಿಲ್ಲ. ಸಿಎಂ ಅಭ್ಯರ್ಥಿ ಮಾಡಲಿಲ್ಲ ಎಂಬ ಆಕ್ರೋಶ, ಸಿಟ್ಟು ದಟ್ಟವಾಗಿದೆ. ಹೀಗಾಗಿ, ಅಸ್ಪಷ್ಟ ಜನಾದೇಶ ನಿರ್ವಣವಾದಲ್ಲಿ ಸಿಧು ಮತ್ತು ಬೆಂಬಲಿಗರು ಆಪ್​ಗೆ ಬೆಂಬಲ ನೀಡಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಫಿರೋಜ್​ಪುರ ಜಿಲ್ಲೆಯ ಯುವಕ ಸನ್ನಿ ಸಿಂಗ್.
ಪ್ರಿಯಾಂಕಾ ಗಾಂಧಿ ಧುರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ ಕ್ಷೇತ್ರದ ಹಾಲಿ ಶಾಸಕ ದಲ್ವೀರ್ ಸಿಂಗ್ ಗೋಲ್ಡಿಯವರ ಪತ್ನಿ, ‘ಸಿಧು ಮಾತನಾಡಬೇಕು’ ಎಂದು ಕೇಳಿಕೊಂಡರು. ಆಪ್ ಸಿಎಂ ಅಭ್ಯರ್ಥಿ ಭಗವಂತ ಸಿಂಗ್ ಮಾನ್ ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ, ಸಿಧು ಮಾತನಾಡಲಾರೆ ಎಂದು ಹಿಂದೇಟು ಹಾಕಿದರು. ಇದು ಭಾರೀ ಚರ್ಚೆಗೆ ಗ್ರಾಸವಾಯಿತು. ವಾಸ್ತವದಲ್ಲಿ, ಆಮ್ ಆದ್ಮಿ ಪಾರ್ಟಿ ವಿರುದ್ಧ ಸಿಧು ಧ್ವನಿಯೇರಿಸಿಯೇ ಇಲ್ಲ. ಆಪ್ ಬಗ್ಗೆ ಸಿಧುವಿಗೆ ಈಗಲೂ ಮೃದುಧೋರಣೆಯಿದೆ ಎನ್ನುತ್ತಾರೆ ಸ್ಥಳೀಯರು. ಚುನಾವಣೆ ಹೊಸ್ತಿನಲ್ಲಿ ಮಾಜಿ ಕೇಂದ್ರ ಸಚಿವ ಅಶ್ವನಿ ಕುಮಾರ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದೂ ಕಾಂಗ್ರೆಸ್ ಆಂತರಿಕ ಬಿಕ್ಕಟ್ಟಿನ ಸಂಕೇತ.
ಹಾಗೆ ನೋಡಿದರೆ, ಚುನಾವಣಾ ಸಮರಕಣದಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಂಡಿರುವುದೇ ದಲಿತ ಸಿಖ್ ಸಮುದಾಯದ ಚರಣ್​ಜಿತ್ ಚನ್ನಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರಿಂದ. ಅಧಿಕಾರಾವಧಿಯ ಕೊನೆಯ 111 ದಿನಗಳಲ್ಲಿ ಮಿತಿಯಲ್ಲಿ ಹಲವಾರು ಜನಸ್ನೇಹಿ ಕೆಲಸ ಮಾಡಿದ್ದೇನೆ ಎನ್ನುವ ಚನ್ನಿಗೆ ‘ಸಿಧು ಆಟಾಟೋಪ’ಗಳು ನಿದ್ದೆಗೆಡಿಸಿದರೂ, ವೈಯಕ್ತಿಕ ವಿವಾದಗಳಲ್ಲಿ ಸಿಲುಕಿಕೊಳ್ಳಲಿಲ್ಲ. ಚನ್ನಿ ಸೋದರ ಸಂಬಂಧಿ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ಮಾಡಿ 10 ಕೋಟಿ ರೂ., ಚಿನ್ನ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡರೂ, ಅಕ್ರಮದಲ್ಲಿ ಚನ್ನಿ ಪಾಲುದಾರಿಕೆ ಬಗ್ಗೆ ಸದ್ಯಕ್ಕೆ ಯಾವುದೇ ದಾಖಲೆಗಳು ಬೆಳಕಿಗೆ ಬಂದಿಲ್ಲ. ಚನ್ನಿ ಬಾಲ್ಯದಲ್ಲಿ ಟೆಂಟ್ ಬಾಯ್, ವಿವಾಹ ಸಮಾರಂಭಗಳಲ್ಲಿ ಟೇಬಲ್​ಗಳನ್ನು ಸೆಟ್ ಮಾಡುವ ಕೆಲಸಗಳನ್ನು ಮಾಡಿದ್ದರೂ, ಈಗ 100 ಕೋಟಿ ರೂ.ಗಿಂತಲೂ ಹೆಚ್ಚು ಆಸ್ತಿಯ ಒಡೆಯ. ಚುನಾವಣೆ ಕಣದಲ್ಲಿ ‘ನಾನೇ ರಿಯಲ್ ಆಮ್ ಆದ್ಮಿ’ ಎಂದು ಚನ್ನಿ ಬಿಂಬಿಸಿಕೊಳ್ಳುತ್ತಿದ್ದರೂ, ಇಂಥಾ ಮಾತುಗಳು ಜನಾಕರ್ಷಣೆ ಗಳಿಸಿದಂತೆ ಕಾಣುತ್ತಿಲ್ಲ.
ರಾಜ್ಯದ ಬರ್ನಾಲಾ ಜಿಲ್ಲೆಯ ಬಧೌರ್ ಮೀಸಲು ಕ್ಷೇತ್ರದ ನಿದರ್ಶನವನ್ನೇ ನೋಡಿ. ರೂಪ್​ನಗರ ಜಿಲ್ಲೆಯ ಚಮ್ೌರ್ ಸಾಹಿಬ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುತ್ತಿದ್ದ ಚನ್ನಿ ಈ ಬಾರಿ ಬಧೌರ್​ನಿಂದಲೂ ಸ್ಪರ್ಧಿಸುತ್ತಿದ್ದಾರೆ. ಚನ್ನಿ ವಿರುದ್ಧದ ಆಪ್ ಅಭ್ಯರ್ಥಿ ಲಾಭ್ ಸಿಂಗ್ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದಾರೆ. ಆದರೆ, ಕುಟುಂಬಕ್ಕೆ ಈಗಲೂ ಬಡತನ ಬಾಧಿಸುತ್ತಿದೆ. ಲಾಭ್ ಸಿಂಗ್ ತಾಯಿಗೆ ಗ್ರಾಮದ ಖಾಸಗಿ ಶಾಲೆಯಲ್ಲಿ ಕಸ ಗುಡಿಸುವ ಕೆಲಸ. ತಂದೆ ಕೃಷಿ ಜಮೀನುಗಳು ಅಥವಾ ಕಟ್ಟಡ ನಿರ್ವಣದ ಕೂಲಿ ಕೆಲಸ ಮಾಡುತ್ತಿದ್ದರು. ಲಾಭ್ ಸಿಂಗ್ ಮೊಬೈಲ್ ರಿಪೇರಿ ಶಾಪ್ ಇತ್ತು. ಈಗ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾರೆ. ತಮ್ಮ ಬಳಿ 75 ಸಾವಿರ ರೂ. ನಗದು, 2014ರ ಬೈಕ್ ಮತ್ತು 2 ಕೊಠಡಿಯ ಮನೆ ಇದೆ ಎಂದು ಲಾಭ್ ಸಿಂಗ್ ನಾಮಪತ್ರ ಸಲ್ಲಿಕೆ ವೇಳೆ ಮಾಹಿತಿ ನೀಡಿದ್ದಾರೆ. ಚನ್ನಿ ರವಿದಾಸಿ ದಲಿತ ಸಮಾಜದವರಾಗಿದ್ದರೆ, ಲಾಭ್ ಸಿಂಗ್ ಹರಿಜನರ ವ್ಯಾಪ್ತಿಗೆ ಬರುತ್ತಾರೆ. ‘ಪಂಜಾಬ್​ನಲ್ಲಿ ಹರಿಜನರು ಜಾಸ್ತಿ. ಆದರೆ, ಆಪ್​ನ್ನು ಜಾತಿ, ಧರ್ಮದ ಮೇಲೆ ಯಾರೂ ನೋಡುತ್ತಿಲ್ಲ. ಸಿಎಂ ಚನ್ನಿ ಸೋಲುತ್ತಾರೆ’ ಎನ್ನುವುದು ಬಧೌರ್ ನಿವಾಸಿ ತ್ರಿಲೋಚನ್ ಸಿಂಗ್ ಖಚಿತ ನುಡಿ.
ಬಧೌರ್ ಅಕಾಲಿದಳದ ಭದ್ರಕೋಟೆಯಾಗಿತ್ತು. ಕಳೆದ ಚುನಾವಣೆಯಲ್ಲಿ ಆಮ್ ಆದ್ಮಿ ಅಭ್ಯರ್ಥಿ ಪಿರ್ಮಲ್ ಸಿಂಗ್ ಧೌಲಾ 26,800 ಮತಗಳ ಭಾರೀ ಅಂತರದಿಂದ ಗೆದ್ದಿದ್ದರು. ಪಿರ್ಮಲ್ ಸಿಂಗ್ ಈ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಸೇರಿದರೂ ಸಿಎಂ ಚನ್ನಿ ಸ್ಪರ್ಧಿಸಲು ತೀರ್ವನಿಸಿದ್ದರಿಂದ ಟಿಕೆಟ್ ಕೈತಪ್ಪಿದೆ. ರಾಜ್ಯದಲ್ಲಿ ಶೇ.32-35ರಷ್ಟು ದಲಿತ ಸಿಖ್ಖರಿದ್ದಾರೆ. ಚನ್ನಿ ನಾಯಕತ್ವದಿಂದಾಗಿ ಕಾಂಗ್ರೆಸ್ ಬಹುವಾಗಿ ನಂಬಿಕೊಂಡಿರುವುದು ಇದೇ ಮತಬ್ಯಾಂಕನ್ನೇ. ಜಾಟ್ ಸಿಖ್ ಸಮುದಾಯದ ನವಜೋತ್ ಸಿಧುವನ್ನು ಸಿಎಂ ಅಭ್ಯರ್ಥಿಯನ್ನಾಗಿ ಮಾಡಿದ್ದರೆ ದಲಿತ ಸಿಖ್ ಮತಬ್ಯಾಂಕ್ ಆಮ್ ಆದ್ಮಿ ಪಾರ್ಟಿ ಕಡೆ ಹೊರಳಬಹುದು ಎಂದೇ ಕಾಂಗ್ರೆಸ್ ಹೈಕಮಾಂಡ್ ಸಿಧು ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳಲಿಲ್ಲ. ‘ಸಿಧು ಸೀರಿಯಸ್ ರಾಜಕಾರಣಿಯಲ್ಲ. ಮಾತು, ವ್ಯಂಗ್ಯ, ಶಾಯರಿಗಳ ಮೂಲಕ ಅವರು ಜನಸಮೂಹವನ್ನು ಆಕರ್ಷಿಸಬಹುದು. ಆದರೆ, ರಾಜನೀತಿಯೇ ಬೇರೆ, ಶಾಯರಿಯೇ ಬೇರೆ. ಆದರೆ ದಿಲ್ಲಿಯಲ್ಲಿ ಕೂತವರಿಗೆ ಇದು ಅರ್ಥವಾಗಲೇ ಇಲ್ಲ’ ಎಂದು ಬಠಿಂಡಾದಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಬಂದಿದ್ದ ಹರ್ಯಾಣ ಮೂಲದ ಕಾಂಗ್ರೆಸ್ ಕಾರ್ಯಕರ್ತರು ಬೇಸರ ತೋಡಿಕೊಂಡರು.
ಸಿಎಂ ಚನ್ನಿ ಬಧೌರ್ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆಯಾದಲ್ಲಿಂದ ರಾಜಿಂದರ್ ಪಾಲ್ ಶರ್ಮ ಮಿನಿ ಟೆಂಪೋ ಮೂಲಕ ಕ್ಷೇತ್ರದ ಹತ್ತಾರು ಗ್ರಾಮಗಳಿಗೆ ತೆರಳಿ ಸಿಎಂ ಚನ್ನಿಗೆ ಮತಹಾಕಿ ಎಂಬ ಧ್ವನಿವರ್ಧಕ ಪ್ಲೇ ಮಾಡುತ್ತಾ, ಎಲ್​ಇಡಿ ಸ್ಕ್ರೀನ್​ಗಳಲ್ಲಿ ಚನ್ನಿ ವಿಡಿಯೋಗಳನ್ನು ಪ್ರದರ್ಶಿಸುತ್ತಾ ಪ್ರಚಾರ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಅವರು ಕಾಂಗ್ರೆಸ್ ಕಾರ್ಯಕರ್ತರಲ್ಲ. ಕಾಂಗ್ರೆಸ್ ಪರ ಪ್ರಚಾರ ಮಾಡಲು ಅವರ ವಾಹನಕ್ಕೆ ಗುತ್ತಿಗೆ ನೀಡಲಾಗಿದೆ. ‘ಇದು ನನ್ನ ಕೆಲಸವಷ್ಟೇ. ನನಗೂ ರಾಜ್ಯದಲ್ಲಿ ಬದಲಾವಣೆ ಬೇಕೆಂದು ಅನಿಸಿದೆ. ಬಧೌರ್​ನಲ್ಲಿ 2017ರಿಂದ ಆಪ್​ನದ್ದೇ ಹವಾ. ಆದರೆ, ಚನ್ನಿ ಪ್ರವೇಶದಿಂದ ಫೈಟ್ 50:50 ಇದೆ. ದಲಿತ ಮತಗಳೆಲ್ಲವೂ ಕಾಂಗ್ರೆಸ್​ಗೆ ಬಿದ್ದರೆ ಮಾತ್ರ ಚನ್ನಿ ಗೆಲ್ಲಬಹುದು. ಇಲ್ಲವಾದಲ್ಲಿ, ಲಾಭ್ ಸಿಂಗ್​ಗೇ ಲಾಭ’ ಎನ್ನುತ್ತಾರೆ ರಾಜಿಂದರ್.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
