ಬೆಂಗಳೂರು:ದೇಶಾದ್ಯಂತ ಜನಜೀವನ ಅಸ್ತವ್ಯಸ್ತಗೊಳಿಸಿರುವ ಕರೊನಾ ರಾಜ್ಯದ ಸೈಬರ್ ಕಳ್ಳರ ಪಾಲಿಗೆ ವರದಾನವಾಗಿದೆ. ಸಾರ್ವಜನಿಕರು ತಮ್ಮ ದೈನಂದಿನ ವ್ಯವಹಾರ ಸ್ಥಗಿತಗೊಳಿಸಿ ತಾತ್ಕಾಲಿಕವಾಗಿ ಮನೆಯಲ್ಲಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರೀಗ ಕೈಚಳಕ ಆರಂಭಿಸಿದ್ದಾರೆ. ಪುಲಕೇಶಿನಗರದಲ್ಲಿ ನಿವೃತ್ತ ಏರ್​ಫೋರ್ಸ್ ಅಧಿಕಾರಿಯೊಬ್ಬರಿಗೆ ಸ್ನೇಹಿತನ ಹೆಸರಿನಲ್ಲಿ ನಕಲಿ ಇ-ಮೇಲ್ ಐಡಿ ಮೂಲಕ ಸಂದೇಶ ಕಳಿಸಿ 1 ಲಕ್ಷ ರೂ. ವಂಚಿಸಿದರೆ, ಎಚ್​ಎಸ್​ಆರ್ ಲೇಔಟ್​ನಲ್ಲಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಮದ್ಯದ ಆಸೆ ಹುಟ್ಟಿಸಿ ಖಾತೆಯಲ್ಲಿದ್ದ 17 ಸಾವಿರ ರೂ. ಎಗರಿಸಿದ್ದಾರೆ.
ಇ-ಮೇಲ್ ಹ್ಯಾಕ್: ಕುಕ್​ಟೌನ್ ನಿವಾಸಿ ಬರ್​ಟ್ರೆನ್ಡ್ ಜೋಸೆಫ್ (77) ವಾಯುಪಡೆಯ ನಿವೃತ್ತ ಅಧಿಕಾರಿಯಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ಸ್ನೇಹಿತ ಕರ್ನಲ್ ಕೃಪಾಲ್ ಸಿಂಗ್ ಮೆಹ್ತಾ ಸಹ ನಿವೃತ್ತ ಏರ್​ಫೋರ್ಸ್ ಅಧಿಕಾರಿಯಾಗಿದ್ದು, ಇಬ್ಬರೂ ಉತ್ತಮ ಒಡನಾಟ ಹೊಂದಿದ್ದರು. ಮಾ.12ರಂದು ಮೆಹ್ತಾ ಹೆಸರಿನಲ್ಲಿ ಜೋಸೆಫ್​ಗೆ ‘ವಿವಾಹ ವಾರ್ಷಿಕೋತ್ಸವದ ಡಿನ್ನರ್ ಪಾರ್ಟಿಗೆ ಬನ್ನಿ’ ಎಂದು ಇ-ಮೇಲ್ ಸಂದೇಶ ಬಂದಿತ್ತು. ಕೆಲ ಹೊತ್ತಿನ ಬಳಿಕ ಮತ್ತೆ ಅದೇ ಇ-ಮೇಲ್​ನಿಂದ ಮತ್ತೊಂದು ಸಂದೇಶ ಬಂದಿತ್ತು. ‘ಸದ್ಯ ತಾನು ಪತ್ನಿ ಜತೆ ಟರ್ಕಿಯ ಶಿಪ್​ವೊಂದರಲ್ಲಿದ್ದೇನೆ.
ವಿವಾಹ ವಾರ್ಷಿಕೋತ್ಸವ ಪ್ರಯುಕ್ತ ದೆಹಲಿಯಲ್ಲಿರುವ ಮನೆಯನ್ನು ನವೀಕರಣ ಮಾಡಲಾಗುತ್ತಿದೆ. ಗುತ್ತಿಗೆದಾರನಿಗೆ ತುರ್ತು 1 ಲಕ್ಷ ರೂ. ನೀಡಬೇಕಾಗಿದ್ದು, ತುರ್ತಾಗಿ ಹಣ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಕೋರಲಾಗಿತ್ತು. ಇದನ್ನು ನಂಬಿದ ಜೋಸೆಫ್ ಇ-ಮೇಲ್​ನಲ್ಲಿ ಸೂಚಿಸಲಾದ ಬ್ಯಾಂಕ್ ಖಾತೆಗೆ 1 ಲಕ್ಷ ರೂ. ಜಮೆ ಮಾಡಿದ್ದರು. ಇದಾದ ಬಳಿಕ ಜೋಸೆಫ್ ಸ್ನೇಹಿತ ಮೆಹ್ತಾಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದಾಗ, ತಾನು ಹಣ ಕೇಳಿಲ್ಲ, ಅಲ್ಲದೆ, ಈ ಇ-ಮೇಲ್ ತನ್ನದಲ್ಲ ಎಂದಿದ್ದರು. ಆಗ ಸೈಬರ್ ಕಳ್ಳರು ಹಣ ಲಪಟಾಯಿಸಿದ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪುಲಕೇಶಿನಗರ ಪೊಲೀಸರು ತನಿಖೆ ನಡೆಸಿದ್ದಾರೆ.
ಕಳ್ಳರಿಗೂ ಮದ್ಯ ಮೋಹ
ಮದ್ಯಕ್ಕೆ ಬಾರಿ ಬೇಡಿಕೆಯಿರುವುದನ್ನು ಅರಿತಿರುವ ಕಳ್ಳರೀಗ ಚಿನ್ನಾಭರಣದ ಬದಲು ಮದ್ಯ ಕದಿಯಲು ಮುಂದಾಗಿದ್ದಾರೆ. ಪುಲಕೇಶಿನಗರದ ವೀಲರ್ ರಸ್ತೆಯಲ್ಲಿ ವಾಸಿಸುತ್ತಿದ್ದ ತುಳಸಿದಾಸ್ ಚಬ್ಲಾ ದಂಪತಿ ಸ್ಪೇನ್​ಗೆ ಹೋಗಿರುವುದನ್ನು ಖಚಿತಪಡಿಸಿಕೊಂಡ ಕಳ್ಳರು ಮಾ.30ರಂದು ಅವರ ಮನೆಗೆ ನುಗ್ಗಿ ಕಬೋರ್ಡ್​ನಲ್ಲಿ ಇಟ್ಟಿದ್ದ ಬೆಲೆಬಾಳುವ 10 ಲಿಕ್ಕರ್ ಬಾಟಲಿ ದೋಚಿದ್ದಾರೆ. ಮಾ.2ರಂದು ತುಳಸಿದಾಸ್ ಸಂಬಂಧಿ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ಮದ್ಯದಾಸೆಗೆ ಆನ್​ಲೈನ್ ಹಳ್ಳಕ್ಕೆ ಬಿದ್ದ
ಮತ್ತೊಂದು ಪ್ರಕರಣದಲ್ಲಿ ಆಡುಗೋಡಿ ನಿವಾಸಿ ಖಾಸಗಿ ಕಂಪನಿ ಉದ್ಯೋಗಿ ರಾಮಕೃಷ್ಣಯ್ಯ ಏ.7ರಂದು ಫೇಸ್​ಬುಕ್ ಪರಿಶೀಲಿಸುತ್ತಿದ್ದಾಗ ಮಧುಲೋಕದ ಮೂಲಕ ಆನ್​ಲೈನ್​ನಲ್ಲೇ ಮದ್ಯಪಾನ ಸಿಗುವ ಜಾಹೀರಾತು ಕಂಡಿತ್ತು. ಕರೊನಾ ಹಿನ್ನೆಲೆಯಲ್ಲಿ ಎಲ್ಲೂ ಮದ್ಯ ಸಿಗದ ಕಾರಣ, ಜಾಹೀರಾತಿನಲ್ಲಿದ್ದ ಮೊಬೈಲ್ ನಂಬರ್​ಗೆ ಕರೆ ಮಾಡಿದ್ದರು. ಆಗ ಹಿಂದಿಯಲ್ಲಿ ಮಾತನಾಡಿದ್ದ ಅಪರಿಚಿತ ವ್ಯಕ್ತಿ ಫೋನ್ ಪೇ ಮೂಲಕ ತಾನು ಹೇಳಿದ ನಂಬರ್​ಗೆ 2,400 ರೂ. ಜಮೆ ಮಾಡಿದರೆ ನೀವು ಕೇಳಿದ ಮದ್ಯವನ್ನು ತಂದುಕೊಡುವುದಾಗಿ ತಿಳಿಸಿದ್ದ. ಈತನ ಮಾತಿಗೆ ಮರುಳಾದ ದೂರುದಾರರು ಹಣ ಜಮೆ ಮಾಡಿದ್ದರು. ಇದಾದ ಕೆಲ ಹೊತ್ತಲ್ಲಿ ಮತ್ತೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ನಿಮ್ಮ ನಂಬರ್ ರಿಜಿಸ್ಟರ್ ಆಗಿಲ್ಲ. ನಾನು ಕಳಿಸುವ ಲಿಂಕ್​ನ್ನು ಕ್ಲಿಕ್ ಮಾಡಿದರೆ, ರಿಜಿಸ್ಟರ್ ಆಗುತ್ತದೆ ಎಂದು ತಿಳಿಸಿದ್ದ. ಅದರಂತೆ ಆರೋಪಿ ಕಳಿಸಿದ ಲಿಂಕ್ ಕ್ಲಿಕ್ ಮಾಡಿದ ಕೂಡಲೇ ದೂರುದಾರರ ಬ್ಯಾಂಕ್ ಖಾತೆಯಲ್ಲಿದ್ದ 17,390 ರೂ. ಕಡಿತಗೊಂಡಿದೆ. ಆಗ್ನೇಯ ವಿಭಾಗದ ಪೊಲೀಸರು ಕಳ್ಳರಿಗೆ ಶೋಧ ನಡೆಸುತ್ತಿದ್ದಾರೆ.
ಅವಿನಾಶ ಮೂಡಂಬಿಕಾನ
ಕಣ್ಮರೆಯಾಗಿದ್ದ ನಿಜಾಮುದ್ದೀನ್ ಮರ್ಕಾಜ್ ಮುಖ್ಯಸ್ಥ ಮೌಲಾನಾ ಸಾದ್​ ಪತ್ತೆ: ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 12 =
Remember me
