ನವದೆಹಲಿ:‘ಪ್ರತಿ ಹೃದಯವೂ ಬೆಳಗುತ್ತಿದೆ. ಇಡೀ ದೇಶಕ್ಕೆ ಇದು ಭಾವನಾತ್ಮಕ ಕ್ಷಣ. ಸುದೀರ್ಘ ಕಾಯುವಿಕೆ ಈಗ ಅಂತ್ಯವಾಗಿದೆ. ತಮ್ಮ ಜೀವಿತಾವಧಿಯಲ್ಲಿ ಇಂಥದ್ದೊಂದು ಕ್ಷಣಕ್ಕೆ ಸಾಕ್ಷಿಯಾಗುತ್ತೇವೆ ಎಂದು ಕೋಟ್ಯಂತರ ಮಂದಿಗೆ ಅನಿಸಿರಲಿಲ್ಲ. ಹಲವಾರು ವರ್ಷಗಳಿಂದ ನಮ್ಮ ರಾಮಲಲ್ಲಾ (ಬಾಲರಾಮ) ಸಣ್ಣ ಟೆಂಟ್​ನಲ್ಲಿ ನೆಲೆಸಬೇಕಾಗಿತ್ತು. ಇನ್ನುಮುಂದೆ ಆತ ರಾಮಭಕ್ತರು ನಿರ್ಮಾಣ ಮಾಡುತ್ತಿರುವ ಭವ್ಯ ಮಂದಿರದೊಳಗೆ ವಿರಾಜಮಾನಗೊಳ್ಳಲಿದ್ದಾನೆ…’
ಅಯೋಧ್ಯೆಯಲ್ಲಿ ಮಂದಿರ ನಿರ್ವಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಮುಖ್ಯವೇದಿಕೆಯಿಂದ ಪ್ರಧಾನಿ ನರೇಂದ್ರ ಮೋದಿ ಆಡಿದ ಮಾತುಗಳಿವು. ‘ಸಿಯಾವರ ರಾಮಚಂದ್ರ ಕೀ ಜೈ’ ಮತ್ತು ‘ಜೈ ಶ್ರೀರಾಮ್ ಘೊಷವಾಕ್ಯಗಳ ಮೂಲಕ ಭಾಷಣ ಆರಂಭಿಸಿದ ಮೋದಿ, ಇದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ರಾಮ ಎಲ್ಲರ ಆಸ್ತಿ. ರಾಮ ಎಲ್ಲರಲ್ಲೂ ನೆಲೆಸಿದ್ದಾನೆ, ಎಲ್ಲೆಲ್ಲೂ ಇದ್ದಾನೆ. ಭಾರತದೊಂದಿಗೆ ಬೆರೆತ ಪ್ರತಿಯೊಂದರಲ್ಲೂ ರಾಮನಿದ್ದಾನೆ. ನಿಜಾರ್ಥದಲ್ಲಿ ಇಂದು ರಾಮ ಜನ್ಮಭೂಮಿಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು. ‘ಆಗಸ್ಟ್ 15 ಸ್ವಾತಂತ್ರ್ಯ ದಿನದಂತೆ, ಆಗಸ್ಟ್ 5 ಕೂಡ ಕೋಟ್ಯಂತರ ಭಾರತೀಯರಿಗೆ ಮಹತ್ವದ ದಿನ. ರಾಮನ ದೇವಾಲಯ ನಿರ್ವಣದ ಉದ್ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಭಕ್ತರಿಗೆ ಇದು ಐತಿಹಾಸಿಕ ದಿನ. ಶ್ರೀರಾಮನ ಅದ್ಭುತ ಶಕ್ತಿಯನ್ನು ನೋಡಿ – ಕಟ್ಟಡಗಳು ನಾಶವಾದವು, ಅವನ ಅಸ್ತಿತ್ವವನ್ನೇ ನಿಮೂಲ ಮಾಡುವ ಹಲವು ಪ್ರಯತ್ನಗಳು ನಡೆದವು, ಆದರೆ ರಾಮ ಮಾತ್ರ ಈಗಲೂ ನಮ್ಮ ಮನಸ್ಸಿನಲ್ಲಿ ವಿರಾಜಮಾನನಾಗಿದ್ದಾನೆ. ಅವನು ನಮ್ಮ ಸಂಸ್ಕೃತಿಯ ಪ್ರತೀಕ’ ಎಂದು ಮೋದಿ ಪ್ರತಿಪಾದಿಸಿದರು.
ದೇವಾಲಯದ ನಿರ್ವಣದ ನಂತರ ಅಯೋಧ್ಯೆಯ ಭವ್ಯತೆ ಹೆಚ್ಚಾಗುವುದಲ್ಲದೆ, ಆರ್ಥಿಕವಾಗಿಯೂ ಸಂಪೂರ್ಣ ಬದಲಾಗಲಿದೆ. ರಾಮ ಮತ್ತು ಜಾನಕಿ ದರ್ಶನ ಪಡೆಯಲು ಜಗತ್ತಿನೆಲ್ಲೆಡೆಯಿಂದ ಜನರು ಬರಲಿದ್ದಾರೆ. ಮಂದಿರ ನಿರ್ವಣದೊಂದಿಗೆ, ಹೊಸ ಇತಿಹಾಸ ಬರೆಯುವುದರ ಜತೆಗೆ ಪುನರಾವರ್ತನೆಯಾಗುತ್ತಿದೆ. ಅಂಬಿಗರು, ಬುಡಕಟ್ಟು ಜನಾಂಗದವರು ರಾಮನಿಗೆ ಸಹಾಯ ಮಾಡಿದಂತೆ, ಗೋವರ್ಧನ ಪರ್ವತವನ್ನು ಮೇಲಕ್ಕೆತ್ತಲು ಮಕ್ಕಳು ಶ್ರೀಕೃಷ್ಣನಿಗೆ ನೆರವಾದ ರೀತಿ, ಎಲ್ಲರ ಪರಿಶ್ರಮದಿಂದಾಗಿ ಈ ದೇವಾಲಯ ನಿರ್ಮಾಣ ಪೂರ್ಣಗೊಳ್ಳಲಿದೆ. ಈ ಪವಿತ್ರ ದಿನವು ಕೋಟ್ಯಂತರ ಭಕ್ತರ ಸಂಕಲ್ಪದ ಸತ್ಯಕ್ಕೆ ಪುರಾವೆಯಾಗಿದೆ. ನ್ಯಾಯಯುತ ಭಾರತದ ಸತ್ಯ, ಅಹಿಂಸೆ, ನಂಬಿಕೆ ಮತ್ತು ತ್ಯಾಗಕ್ಕೆ ಅನನ್ಯ ಕೊಡುಗೆಯಾಗಿದೆ ಎಂದು ಬಣ್ಣಿಸಿದರು. ‘ರಾಮ ಸಾಮಾಜಿಕ ಸಾಮರಸ್ಯವನ್ನು ತನ್ನ ಆಳ್ವಿಕೆಯ ಮೂಲಾಧಾರವಾಗಿಸಿದ್ದ. ಗುರು ವಸಿಷ್ಠರಿಂದ ಶಿಕ್ಷಣ, ಶಬರಿಯಿಂದ ಮಾತೃತ್ವದ ಗುಣ ಸಿಕ್ಕಿತು. ಹನುಮಂತ ಮತ್ತು ವನವಾಸಿ ಸಹೋದರರ ಸಹಕಾರ ಸಿಕ್ಕಿತು. ರಾಮ ತನ್ನ ಪ್ರಜೆಗಳ ವಿಶ್ವಾಸ ಗಳಿಸಿದ. ಜೈ ಶ್ರೀರಾಮ್ ಘೊಷಣೆ ರಾಮನ ನಗರದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತಿದೆ. ದೇಶದ ಎಲ್ಲ ನಾಗರಿಕರಿಗೆ, ವಿಶ್ವದಾದ್ಯಂತ ಇರುವ ಭಾರತೀಯರಿಗೆ ಹಾಗೂ ರಾಮನ ಭಕ್ತರಿಗೆ ನಾನು ಕೃತಜ್ಞತೆಯನ್ನು ಅರ್ಪಿಸುತ್ತೇನೆ. ರಾಮ ಮರ್ಯಾದಾ ಪುರುಷೋತ್ತಮನಾಗಿದ್ದ’ ಎಂದು ಮೋದಿ ಹೇಳಿದರು. ‘ಕರೊನಾ ಮಹಾಮಾರಿಯ ಈ ಸಂದರ್ಭದಲ್ಲಿ ನಾವು ಮಾಸ್ಕ್ ಧರಿಸಿ, ಎರಡು ಗಜ ಅಂತರ ಕಾಯ್ದುಕೊಳ್ಳೋಣ’ ಎಂದು ಎಚ್ಚರಿಸಿ ಭಾಷಣ ಪೂರ್ಣಗೊಳಿಸಿದರು.
2021 ಆಗಸ್ಟ್ 5ಕ್ಕೆ ಏನು?
ಆಗಸ್ಟ್ 5 ದಿನಾಂಕ ಈಗ ಭಾರಿ ಚರ್ಚೆಯಲ್ಲಿದೆ. ಕಳೆದ ವರ್ಷ ಇದೇ ದಿನ ಕಾಶ್ಮೀರದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಈ ವರ್ಷ ಆ. 5ರಂದು ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆಸಲಾಗಿದೆ. ಮುಂದಿನ ವರ್ಷ ಈ ದಿನಾಂಕದಂದು ಮೋದಿ ಸರ್ಕಾರ ಯಾವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಿದೆ ಎಂಬ ಕುತೂಹಲ ಜನರಲ್ಲಿ ಮೂಡಿದೆ. ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಹಾಗೂ ರಾಮ ಮಂದಿರ ನಿರ್ಮಾಣ ವಿಚಾರ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಪ್ರಸ್ತಾಪ ಮಾಡಲಾಗಿತ್ತು. ಅದು ಈಗ ಈಡೇರಿದೆ. ದೇಶಾದ್ಯಂತ ಏಕರೂಪ ನಾಗರಿಕ ನೀತಿ ಸಂಹಿತೆ ಜಾರಿ ಕುರಿತ ಪ್ರಕರಣ ಇನ್ನೂ ಸುಪ್ರೀಂಕೋರ್ಟ್​ನಲ್ಲಿ ಬಾಕಿ ಇದೆ. ಮುಂದಿನ ವರ್ಷ ಆ. 5ರಂದು ಈ ಬಗ್ಗೆ ಸರ್ಕಾರ ಐತಿಹಾಸಿಕ ನಿರ್ಣಯ ಕೈಗೊಳ್ಳಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ಭಾವುಕರಾದ ಸಿಎಂ ಯೋಗಿ
ಮಂದಿರ ನಿರ್ವಣದಿಂದಾಗಿ ಉತ್ತರ ಪ್ರದೇಶದ ಅವಧ್​ಪುರಿಯ ಭೂಮಿ ಸಮೃದ್ಧವಾಗಲಿದೆ ಎಂದು ಸಿಎಂ ಯೋಗಿ ಆದಿತ್ಯನಾಥ ಅಭಿಪ್ರಾಯಪಟ್ಟಿದ್ದಾರೆ. ಪ್ರಾಸ್ತಾವಿಕ ಭಾಷಣ ಮಾಡಿದ ಅವರು, ನಮ್ಮೆಲ್ಲರಿಗೂ ಇದು ಉತ್ಸಾಹ, ಮನಸೋಲ್ಲಾಸದಿಂದ ತುಂಬಿದ ದಿನವಾಗಿದೆ. ದೇವಾಲಯದ ಕನಸು ನನಸಾಗುತ್ತಿದೆ ಎನ್ನುತ್ತಾ ಭಾವುಕರಾದರು. ಇಲ್ಲಿ ಮಂದಿರ ನಿರ್ವಣದ ಕನಸು ಕಂಡು ಅನೇಕ ತಲೆಮಾರುಗಳೇ ಕಳೆದವು. ನಾವು ಬರೀ ಜಗಳವಾಡುತ್ತಲೇ ಇದ್ದೆವು. ಆದರೆ ಪ್ರಧಾನಿಯವರ ದೂರದೃಷ್ಟಿ ಚಿಂತನೆಯಿಂದಾಗಿ ಇಂದು ಕನಸು ನನಸಾಗುತ್ತಿದೆ. 5 ಶತಮಾನಗಳ ಹಿಂದಿನ ಸಂಕಲ್ಪ ಪ್ರಜಾಪ್ರಭುತ್ವದ ಮಾದರಿಯಲ್ಲೇ ಸಾಕಾರಗೊಳ್ಳುತ್ತಿದೆ. ಈ ಕ್ಷಣಕ್ಕಾಗಿ ಎಷ್ಟೋ ಮಂದಿ ತಮ್ಮ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ ಎಂದು ಸ್ಮರಿಸಿದರು. ಪ್ರಧಾನಿ ಮೋದಿಯವರನ್ನು ಅಯೋಧ್ಯೆಯ ಹೆಲಿಪ್ಯಾಡ್​ನಲ್ಲಿ ಸ್ವಾಗತಿಸಿದ ಯೋಗಿ, ಮೂರು ಗಂಟೆಗಳ ಕಾರ್ಯಕ್ರಮದುದ್ದಕ್ಕೂ ಪ್ರಧಾನಿಯವರಿಗೆ ಸಾಥ್ ನೀಡಿದ್ದರು.
ವೇದಿಕೆಯಲ್ಲಿದ್ದವರು
ಕಾರ್ಯಕ್ರಮದಲ್ಲಿದ್ದ ಪ್ರಮುಖರು
ಮೋದಿ ಮಾತು
# ರಾಮ ಮಂದಿರವು ದೇಶದ ಸಂಪ್ರದಾಯ, ಭಕ್ತಿ, ರಾಷ್ಟ್ರೀಯ ಭಾವದ ಪ್ರತೀಕ. ಕೋಟ್ಯಂತರ ಜನರ ಸಾಮೂಹಿಕ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಭವಿಷ್ಯದ ಪೀಳಿಗೆಯಲ್ಲಿ ಸ್ಪೂರ್ತಿ ತುಂಬಲಿದೆ, ಭಗವಾನ್ ರಾಮನೇ ಹೇಳಿದಂತೆ ಬಲಿಷ್ಠ, ಪ್ರಬಲ ರಾಷ್ಟ್ರದಿಂದ ಮಾತ್ರ ಶಾಂತಿ ನಿರ್ಮಾಣ ಮಾಡಲು ಸಾಧ್ಯ.
# ದಲಿತರು, ಆದಿವಾಸಿಗಳು ಹಾಗೂ ಸಮಾಜದ ಎಲ್ಲ ವರ್ಗಗಳ ಮಂದಿ ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯ ಹೋರಾಟಕ್ಕೆ ಸಾಥ್ ಕೊಟ್ಟರು. ಅದೇ ರೀತಿ, ದೇಶವಾಸಿಗಳ ಬೆಂಬಲದಿಂದಲೇ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಗೊಂಡಿದೆ
#ಭಗವಾನ್ ರಾಮನಿಂದ ಸ್ಪೂರ್ತಿ ಪಡೆಯಲು ಸಾಧ್ಯವಾಗದ ಯಾವುದೇ ಅಂಶಗಳಿಲ್ಲ. ರಾಮನ ಮೌಲ್ಯಗಳನ್ನು ಪ್ರತಿಬಿಂಬಿಸದ ರಾಷ್ಟ್ರೀಯ ಭಾವನೆ ಇಲ್ಲ. ರಾಮ ಐಕ್ಯತೆಯ ಸಂಕೇತ. ಭಾರತದ ನಂಬಿಕೆಯು ರಾಮನ ಪ್ರತಿಫಲನವನ್ನು ಹೊಂದಿದೆ. ಭಾರತದ ಆದರ್ಶಗಳಲ್ಲಿ ರಾಮನ ನೆರಳಿದೆ.
30ನೇ ವರ್ಷದಲ್ಲಿ ನಿರ್ಣಯ ಸಾಕಾರ
ಮಂದಿರ ಭೂಮಿಪೂಜೆ ಕಾರ್ಯ ನವಭಾರತ ನಿರ್ವಣಕ್ಕೆ ಮುನ್ನುಡಿ ಬರೆದಿದೆ ಎಂದು ಆರ್​ಎಸ್​ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಹೇಳಿದ್ದಾರೆ. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ನಮ್ಮ ದೇಶಕ್ಕೆ ವಸುಧೈವ ಕುಟುಂಬಕಂ ಸಿದ್ಧಾಂತದಲ್ಲಿ ನಂಬಿಕೆಯಿದೆ. ವಿಶ್ವವೇ ಒಂದು ಕುಟುಂಬ. ಎಲ್ಲರನ್ನೂ ಒಳಗೊಳ್ಳುವ ಗುಣ ನಮ್ಮ ರಕ್ತದಲ್ಲೇ ಇದೆ. ಇಂದು ನವ ಭಾರತ ನಿರ್ವಣದ ಪ್ರಾರಂಭವಾಗಿದೆ. ಅದೆಷ್ಟೋ ಮಂದಿ ಮಂದಿರಕ್ಕಾಗಿ ತ್ಯಾಗ, ಬಲಿದಾನಗಳನ್ನು ಮಾಡಿದರು ಮತ್ತು ಅನೇಕರಿಗೆ ದೈಹಿಕವಾಗಿ ಇಲ್ಲಿ ಬರಲಾಗುತ್ತಿಲ್ಲ. ಎಲ್.ಕೆ. ಆಡ್ವಾಣಿಯವರು ತಮ್ಮ ಮನೆಯಿಂದಲೇ ಈ ಕಾರ್ಯಕ್ರಮ ನೋಡುತ್ತಿದ್ದಾರೆ. ಇಡೀ ದೇಶದಲ್ಲಿ ಸಂತಸ ರಾರಾಜಿಸುತ್ತಿದೆ. ಶತಮಾನಗಳ ಹೋರಾಟಕ್ಕೆ ಗೆಲುವು ಸಿಕ್ಕಿದೆ. ಮಂದಿರ ನಿರ್ವಣದ ಮೂಲಕ ಎಲ್ಲರನ್ನೂ ಕರೆದೊಯ್ಯುವ ಪ್ರಕ್ರಿಯೆಗೆ ಅಡಿಪಾಯ ಹಾಕಿದಂತಾಗಿದೆ. ಅಂದು ಒಂದು ನಿರ್ಣಯವನ್ನು ತೆಗೆದುಕೊಂಡಿದ್ದೆವು. ಆಗಿನ ಆರ್​ಎಸ್​ಎಸ್ ಮುಖ್ಯಸ್ಥ ಬಾಲಾಸಾಹೇಬ್ ದೇವರಸ್ ಅವರು, ನಾವು 20-30 ವರ್ಷಗಳ ಕಾಲ ಹೋರಾಡಬೇಕಾದೀತು. ಆಗ ಮಾತ್ರ ನಮ್ಮ ಕನಸು ನನಸಾದೀತು ಎಂದು ಹೇಳಿದ್ದಿಲ್ಲಿ ನೆನಪಾಗುತ್ತಿದೆ. ಅದರಂತೆ, ನಾವು 30 ವರ್ಷಗಳ ಕಾಲ ಹೋರಾಡಿದೆವು ಮತ್ತು 30ನೇ ವರ್ಷದಲ್ಲಿ ನಮ್ಮ ಅಂದಿನ ನಿರ್ಣಯ ಸಾಕಾರಗೊಳ್ಳುವ ಸಂತೋಷಕ್ಕೆ ಸಾಕ್ಷಿಯಾಗುತ್ತಿದ್ದೇವೆ ಎಂದು ಖುಷಿ ಹಂಚಿಕೊಂಡರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
