ರಾಘವ ಶರ್ಮ ನಿಡ್ಲೆ, ನವದೆಹಲಿ
ಮಹಾರಾಷ್ಟ್ರದಲ್ಲಿ ಕರೊನಾ ಸೋಂಕಿತ ವ್ಯಕ್ತಿಗಳ ಸಂಖ್ಯೆಯೇ ಬೆಚ್ಚಿ ಬೀಳಿಸುವಂತಿದೆ. ದೇಶದಲ್ಲಿ ಒಟ್ಟು 28196 ಸೋಂಕಿತರಿದ್ದರೆ, ಮಹಾರಾಷ್ಟ್ರವೊಂದರಲ್ಲೇ 8068 ಮಂದಿ ಕರೊನಾ ವೈರಾಣುಗೆ ತುತ್ತಾಗಿರುವುದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮಹಾಬಿಕ್ಕಟ್ಟಾಗಿ ಕಾಡುತ್ತಿದೆ. ಮುಂಬೈ, ಪುಣೆ, ಥಾಣೆ, ನಾಶಿಕ್ ನಗರಗಳಲ್ಲಿ ಅತಿ ಹೆಚ್ಚು ಕೇಸುಗಳು ದಾಖಲಾಗಿದ್ದು, ವಾಣಿಜ್ಯ ನಗರಿ ಮುಂಬೈನಲ್ಲಿ ಕೇಸುಗಳ ಸಂಖ್ಯೆ 5000 ಗಡಿ ದಾಟಿದೆ. ಮೇ 3ರ ಬಳಿಕ ಸರ್ಕಾರ ಲಾಕ್​ಡೌನ್ ಮುಂದುವರಿಸುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ತಮ್ಮ ಪ್ರಾಣ ಉಳಿಯಬೇಕೆಂದರೆ ಮುಂದಿನ ಒಂದು ತಿಂಗಳ ಮಟ್ಟಿಗೆ ನಾವು ಮನೆಯಿಂದ ಹೊರಬರದೆ, ದೈಹಿಕ ಅಂತರ ಕಾಯ್ದುಕೊಳ್ಳುವುದೇ ಸೂಕ್ತ ಎಂದು ನಗರದ ಸಾವಿರಾರು ನಿವಾಸಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಮೊದಲ ಕರೊನಾ ಕೇಸು ಬೆಳಕಿಗೆ ಬಂದಿದ್ದು ಮಾರ್ಚ್ 9ರಂದು. ದುಬೈನಿಂದ ಬಂದಿದ್ದ ಪುಣೆ ಮೂಲದ ದಂಪತಿಯಲ್ಲಿ ಸೋಂಕು ಕಂಡುಬಂದಿತ್ತು. ಅವರಿಬ್ಬರು ಮುಂಬೈಗೆ ವಾಪಸಾದ ಮೂರ್ನಾಲ್ಕು ದಿನಗಳಲ್ಲಿ 5 ಮಂದಿ ದಂಪತಿಯ ಸಂಪರ್ಕಕ್ಕೆ ಬಂದಿದ್ದರು. ಮಾರ್ಚ್ 11ರಂದು ಐವರಲ್ಲಿ ಇಬ್ಬರಿಗೆ ಕರೊನಾ ಖಚಿತವಾಗಿತ್ತು. ಇದಾದ ಬಳಿಕ ನಿತ್ಯವೂ ನೂರಾರು ಕೇಸುಗಳು ದಾಖಲಾದವು. ರಾಜ್ಯದ ಸುಮಾರು 400ಕ್ಕೂ ಹೆಚ್ಚು ಜಮಾತ್ ಸದಸ್ಯರಲ್ಲಿ ಸೋಂಕು ಕಂಡು ಬಂತು ಮತ್ತು ಅವರಲ್ಲಿ ಕೆಲವರು ಸೋಂಕು ಮುಕ್ತರಾಗಿದ್ದಾರೆ. ಲಾಕ್​ಡೌನ್ ನಿಂದಾಗಿ ರಾಜ್ಯಾದ್ಯಂತ ಐದೂವರೆ ಲಕ್ಷ ವಲಸೆ ಕಾರ್ವಿುಕರು ಸಿಲುಕಿಕೊಂಡಿದ್ದರು ಮತ್ತು ಅಂದಾಜು ನಾಲ್ಕೂವರೆ ಸಾವಿರ ನಿರಾಶ್ರಿತ ಕೇಂದ್ರಗಳಲ್ಲಿ ಈ ಕಾರ್ವಿುಕರನ್ನು ರಕ್ಷಿಸಲಾಗಿದೆ.
ಮರಣ ಪ್ರಮಾಣವೂ ಅಧಿಕ: ಸೋಂಕಿತರ ಸಂಖ್ಯೆ ಹೆಚ್ಚಿರುವುದಲ್ಲದೆ ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಕರೊನಾ ಸೋಂಕಿತರ ಸಾವಿನ ಪ್ರಮಾಣವೂ ಹೆಚ್ಚಿದೆ. ಮರಣ ಪ್ರಮಾಣದ ರಾಷ್ಟ್ರೀಯ ಸರಾಸರಿ 3.13 ಶೇ. ಆಗಿದ್ದರೆ ಮಹಾರಾಷ್ಟ್ರದಲ್ಲಿ ಇದು ಶೇ.4.24ರಷ್ಟಿದೆ. ಈವರೆಗೆ 872 ಮಂದಿ ಮೃತಪಟ್ಟಿದ್ದರೆ, 6184 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 20835 ಕೇಸುಗಳು ಈಗ ಸಕ್ರಿಯವಾಗಿರುವುದರಿಂದ ಮೇ 3ರ ನಂತರವೂ ರಾಜ್ಯದ ಬಹುಭಾಗಗಳಲ್ಲಿ ಲಾಕ್​ಡೌನ್ ಮುಂದುವರಿಸುವ ಅನಿವಾರ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈವರೆಗೆ ಒಟ್ಟು 1,16,345 ಗಂಟಲು ದ್ರವದ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿದ್ದು, 604 ಕಂಟೈನ್ ಮೆಂಟ್ ವಲಯಗಳನ್ನು ಗುರುತಿಸಲಾಗಿದೆ.
ಮಹಾರಾಷ್ಟ್ರ ಸಚಿವರಿಗೂ ಸೋಂಕು
ವಿವಾದದಿಂದ ಸದಾ ಸುದ್ದಿಯಲ್ಲಿರುತ್ತಿದ್ದ ಮಹಾರಾಷ್ಟ್ರ ಸರ್ಕಾರದ ಸಚಿವ, ಎನ್​ಸಿಪಿ ಮುಖಂಡ ಜಿತೇಂದ್ರ ಅಹ್ವಾದ್​ಗೂ ಕರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ಸಿಬ್ಬಂದಿಯೊಬ್ಬರ ಸಂಪರ್ಕದಿಂದಾಗಿ ಸಚಿವರಿಗೆ ಸೋಂಕು ಅಂಟಿಕೊಂಡಿತೆಂದು ಅಂದಾಜಿಸಲಾಗಿದೆ. ಕರೊನಾ ಪರೀಕ್ಷೆಗೊಳಪಡುವ ಮುನ್ನವೇ ತಮ್ಮ ಮನೆಯಲ್ಲಿ 15 ದಿನಗಳ ಕ್ವಾರಂಟೈನ್​ನಲ್ಲಿದ್ದ ಸಚಿವರು, ಖಾಸಗೀ ಆಸ್ಪತ್ರೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಆದರೆ, ಪರೀಕ್ಷೆಯಲ್ಲಿ ಅವರಿಗೆ ಸೋಂಕಿರುವುದು ದೃಢವಾಗಿತ್ತು. ಕರೊನಾ ಲಾಕ್​ಡೌನ್ ಸಂಬಂಧ ರ್ಚಚಿಸಲೆಂದು ಏಪ್ರಿಲ್ ಮೊದಲ ವಾರದಲ್ಲಿ ಸಚಿವರು ಮುಂಬ್ರಾ ಪೊಲೀಸ್ ಸ್ಟೇಷನ್​ನಲ್ಲಿ ಅಧಿಕಾರಿಯೊಬ್ಬರನ್ನು ಭೇಟಿ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಪೊಲೀಸ್ ಅಧಿಕಾರಿಗೆ ಸೋಂಕಿರುವುದು ಖಚಿತವಾಗಿತ್ತು. ದೆಹಲಿಯ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಈ ಪೊಲೀಸ್ ಅಧಿಕಾರಿ ಪಾಲ್ಗೊಂಡಿದ್ದರು. ಆದರೆ, ಜಮಾತ್ ಸದಸ್ಯರಿಂದಲೇ ಸೋಂಕು ಬಂತೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಲಾಕ್​ಡೌನ್ ಮುಂದುವರಿಕೆ?
ಆರ್ಥಿಕ ಚಟುವಟಿಕೆ ಉದ್ದೇಶಕ್ಕಾಗಿ ಲಾಕ್​ಡೌನ್ ಸಡಿಲಗೊಳಿಸಬೇಕು ಎಂಬ ಆಶಯ ಮಹಾರಾಷ್ಟ್ರ ಸರ್ಕಾರದಲ್ಲಿದ್ದರೂ ಕರೊನಾ ಪೀಡಿತರ ಸಂಖ್ಯೆಯೇ ಸವಾಲಾಗಿ ಕಾಡುತ್ತಿದೆ. ವೈದ್ಯರು, ರಕ್ಷಣಾ ಅಧಿಕಾರಿಗಳು, ಭದ್ರತಾ ಪಡೆ ತಜ್ಞರು, ಲಾಕ್​ಡೌನ್ ಮುಂದುವರಿಸಬೇಕೆಂದೇ ಸರ್ಕಾರಕ್ಕೆ ಸಲಹೆ ನೀಡುತ್ತಿದ್ದಾರೆ. ಆರಂಭದಿಂದಲೂ ಜನರು ಲಾಕ್ ಡೌನ್ ನಿಯಮಗಳನ್ನು ಶಿಸ್ತಿನಿಂದ ಪಾಲಿಸಲಿಲ್ಲ. ಟೋಲ್ ಬೂತ್​ಗಳಲ್ಲಿ ಈಗಲೂ ವಾಹನ ದಟ್ಟಣೆ ದೃಶ್ಯಗಳು ಕಂಡುಬರುತ್ತಿರುವುದು ಆತಂಕಕಾರಿ ಸಂಗತಿ. ವಾಣಿಜ್ಯ ನಗರಿ ಮುಂಬೈನಲ್ಲಿ ಬೇರೆ ರಾಜ್ಯಗಳು ಲಾಕ್​ಡೌನ್ ಘೊಷಿಸುವ ಒಂದು ತಿಂಗಳು ಮುನ್ನವೇ ಕರ್ಫ್ಯೂ ಮಾದರಿ ಕ್ರಮ ಜಾರಿ ಮಾಡಬೇಕಿತ್ತು. ಮುಂಬೈ ಅಂತಾರಾಷ್ಟ್ರೀಯ ಚಟುವಟಿಕೆಗಳ ಕೇಂದ್ರ. ಮಾರ್ಚ್ ಗೆ ಮುನ್ನವೇ ಇಲ್ಲಿ ವಿಮಾನಯಾನಕ್ಕೆ ನಿಷೇಧ ಹೇರಬೇಕಿತ್ತು. ಕರೊನಾಕ್ಕೆ ಸಂಬಂಧಿಸಿದಂತೆ ದುಬೈ, ಯುಎಇ ಅಪಾಯಕಾರಿ ರಾಷ್ಟ್ರಗಳೆಂದು ಗುರುತಿಸಲೇ ಇಲ್ಲ. ಅಲ್ಲಿಂದ ಬಂದ ಸಾವಿರಾರು ಮಂದಿ ಮುಂಬೈನ ಮೂಲೆ ಮೂಲೆ ಸೇರಿಕೊಂಡಿದ್ದರು. ಕೊಳೆಗೇರಿ ಪ್ರದೇಶ ಧಾರಾವಿಯಲ್ಲಿ ಕರೊನಾ ಸೋಂಕಿತರು ಹೆಚ್ಚಲು ಈ ಪ್ರಯಾಣಿಕರೊಂದಿಗಿನ ಸಂಪರ್ಕವೂ ಕಾರಣ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು ಹೇಳುತ್ತಾರೆ.
100ಕ್ಕಿಂತಲೂ ಹೆಚ್ಚು ಪೊಲೀಸರಿಗೆ ಕರೊನಾ
ರಾಜ್ಯದಲ್ಲಿ ಕರೊನಾ ನಿಯಂತ್ರಣಕ್ಕಾಗಿ ಕರ್ತವ್ಯದಲ್ಲಿದ್ದ ಸುಮಾರು 110 ಪೊಲೀಸರಿಗೆ ಕರೊನಾ ಸೋಂಕು ತಗುಲಿರುವುದು ಚಿಂತೆಗೀಡು ಮಾಡಿದೆ. ಇವರಲ್ಲಿ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ.
ಕರೊನಾ ಮಹಾಮಾರಿಗೆ ಕಲಬುರಗಿಯಲ್ಲಿ 5ನೇ ಬಲಿ: ರಾಜ್ಯದಲ್ಲಿ ಮೃತರ ಸಂಖ್ಯೆ 20ಕ್ಕೆ ಏರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − three =
Remember me
